ವಿದ್ಯಾರ್ಥಿಗಳೇ, ಆತಂಕ ಬೇಡ; ಗೆಲ್ಲುವ ದಾರಿ ಹುಡುಕಿ
Team Udayavani, May 7, 2018, 10:06 AM IST
ಮಹಾನಗರ: 2 ವರ್ಷಗಳ ಹಿಂದೆ ಪ್ರೌಢಶಾಲೆಯೊಂದರಲ್ಲಿ ಕಲಿಕೆಯಲ್ಲಿ ಮುಂದಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಫೇಲಾಗಿದ್ದಳು. ಅಂತರ್ಜಾಲದಲ್ಲಿ ಫಲಿತಾಂಶದಲ್ಲಿ ಫೇಲ್ ಎಂದು ನಮೂದಾಗಿತ್ತು. ಆ ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಆಗ ಆಕೆ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದಳು.
ಈ ಬಾರಿ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಸೋಮವಾರ ಅಂತರ್ಜಾಲದಲ್ಲಿ ಪ್ರಕಟವಾಗಲಿದೆ. ಒಂದು ವೇಳೆ ಪರೀಕ್ಷಾ ಫಲಿತಾಂಶದಲ್ಲಿ ಅನುತ್ತೀರ್ಣ ಎಂದು ಕಂಡುಬಂದರೆ ಅದಕ್ಕೆ ವಿದ್ಯಾರ್ಥಿಗಳು ಎದೆಗುಂದುವ ಅಗತ್ಯವಿಲ್ಲ. ಏಕೆಂದರೆ ಫಲಿತಾಂಶದ ಪುನರ್ ಮೌಲ್ಯಮಾಪನದ ಒಂದು ಕಡೆಯಾದರೆ, ಜೀವನವೆಂಬ ಪರೀಕ್ಷೆಯನ್ನು ಗೆಲ್ಲುವುದಕ್ಕೆ ಬಹಳಷ್ಟು ಅವಕಾಶ, ದಾರಿಗಳಿವೆ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದಕ್ಕೆ ಕೊರಗಬೇಡಿ. ಏಕೆಂದರೆ ಜೀವನ ದಲ್ಲಿ ಸಾಧನೆ ಮಾಡಲು ವಿದ್ಯೆಯೊಂದೇ ಮುಖ್ಯವಲ್ಲ ಎನ್ನುವುದಕ್ಕೆ ನಮ್ಮ ಮುಂದೆ ಹಲವು ಯಶೋಗಾಥೆಗಳಿವೆ.
ಚಿತ್ರರಂಗದಲ್ಲಿ ಹೆಸರುಗಳಿಸಿರುವ ಡಾ| ರಾಜ್‌ಕುಮಾರ್ ಓದಿದ್ದು ಪ್ರೈಮರಿ, ಆದರೂ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದ್ದರು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ 8ನೇ ತರಗತಿ ಅನುತ್ತೀರ್ಣರು. ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರನ್ನು ಅವರ ಗುರುಗಳು ‘ಮೆಂಟಲೀ ಹ್ಯಾಂಡಿಕ್ಯಾಪ್ಡ್’ ಎಂದು ಬೈದರೂ ಅವರು ವಿಜ್ಞಾನಿಯಾಗಿ ಗುರುತಿಸಿಲ್ಲವೇ?
ಮಂಗಳೂರು ನಗರ ಸಹಿತ ರಾಜ್ಯಾದ್ಯಂತ ಮಾ. 23ರಿಂದ ಎ. 6ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆದಿತ್ತು.
ಪರೀಕ್ಷೆ ಬರೆದವರು
ಈ ಬಾರಿ ಜಿಲ್ಲೆಯಲ್ಲಿ ಪ್ರಥಮ ಭಾಷೆಗೆ ಒಟ್ಟು 30,201 ನೋಂದಣಿ ಮಾಡಿ ಕೊಂಡಿದ್ದು, 29,611 ಮಂದಿ ಹಾಜರಾಗಿ 590 ಮಂದಿ ಗೈರು ಹಾಜರಾಗಿದ್ದರು. ಗಣಿತ/ಸಮಾಜಶಾಸ್ತ್ರಕ್ಕೆ 32,084 ನೋಂದಣಿ, 31,328 ಹಾಜರಾತಿ, 756 ಗೈರು ಹಾಜರಿ, ದ್ವಿತೀಯ ಭಾಷೆ 30,982 ನೋಂದಣಿ, 30,316 ಹಾಜರಾತಿ, 666 ಗೈರು ಹಾಜರಿ, ವಿಜ್ಞಾನ 31,363 ನೋಂದಣಿ, 30,654 ಹಾಜರಾತಿ, 709 ಗೈರು ಹಾಜರಿ, ತೃತೀಯ ಭಾಷೆ 30,748 ನೋಂದಣಿ, 30,090 ಹಾಜರಾತಿ, 658 ಗೈರು ಹಾಜರಿ, ಸಮಾಜ ವಿಜ್ಞಾನ 31,037 ನೋಂದಣಿ, 30,357 ಹಾಜರಾತಿ, 662 ಮಂದಿ ಗೈರು ಹಾಜರಾಗಿದ್ದರು.
ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳನ್ನು ಇರಿಸುವ ಕೊಠಡಿಯಲ್ಲಿ ಸಿ.ಸಿ. ಕೆಮರಾ ಅಳವಡಿಸಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು
ಇಂದು ಅಂತರ್ಜಾಲದಲ್ಲಿ ಫಲಿತಾಂಶ ಲಭ್ಯ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶವು sslc.kar.nic.in ಮತ್ತು karresults.nic.in ಅಂತರ್ಜಾಲ ತಾಣದಲ್ಲಿ ಮೇ 7ರ ಮಧ್ಯಾಹ್ನ 1 ಗಂಟೆಯಿಂದ ಲಭ್ಯವಾಗಲಿದೆ. ಮೇ 8ರ ಬೆಳಗ್ಗೆ ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ಫಲಿತಾಂಶದ ಪೂರ್ಣ ವಿವರ ದೊರೆಯಲಿದೆ.
ಕಳೆದ ಬಾರಿ ಉಡುಪಿ ಫಸ್ಟ್, ದ.ಕ. ಸೆಕೆಂಡ್
ಕಳೆದ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ದ.ಕ. ಜಿಲ್ಲೆ ಶೇ.83.39 ಫಲಿತಾಂಶ ದಾಖಲಿಸುವ ಮೂಲಕ ಎರಡನೇ ಸ್ಥಾನ ಪಡೆದಿತ್ತು. ಟಾಪ್ ಮೂರು ಲಿಸ್ಟ್‌ನಲ್ಲಿಯೂ ದ.ಕ. ಜಿಲ್ಲೆಯ ವಿದ್ಯಾರ್ಥಿಗಳೇ ಇದ್ದದ್ದು ಹೆಗ್ಗಳಿಕೆ. ಕಳೆದ ಬಾರಿ ಜಿಲ್ಲೆಯ 53 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿತ್ತು.
ಫಲಿತಾಂಶವೇ ನಿರ್ಣಾಯಕವಲ್ಲ
.ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹೆಚ್ಚಿನ ಕಲಿಕಾ ಚಟುವಟಿಕೆಯತ್ತ ತೊಡಗಿ .
.ನಿಮ್ಮನ್ನು ಬೇರೊಬ್ಬರಿಗೆ ಹೋಲಿಸಬೇಡಿ.
.ಆತ್ಮಹತ್ಯೆಯ ಯೋಚನೆ ಮಾಡಬೇಡಿ.
.ಸಾಧಿಸುವಂತಹುದು ಬಹಳಷ್ಟಿದೆ. ಅನುತ್ತೀರ್ಣರಾದವರು ಮರುಪರೀಕ್ಷೆ ಬರೆದರೇ ಉತ್ತೀರ್ಣರಾಗಬಹುದು.
. ಅನುತ್ತೀರ್ಣಗೊಂಡ ವಿಷಯದ ಬಗ್ಗೆ ಪೂರ್ವ ತಯಾರಿ ಮಾಡಿ.
. ಅಧ್ಯಾಪಕರನ್ನು ಸಂಪರ್ಕಿಸಿ ಪಠ್ಯದ ವಿಚಾರವಾಗಿ ಸಲಹೆ ಪಡೆಯಿರಿ.
ಪಾಲಕರ ಕರ್ತವ್ಯವೂ ಮುಖ್ಯ
.ಮಕ್ಕಳು ಅನುತ್ತೀರ್ಣಗೊಂಡರೆ ಪೋಷಕರು ಮಕ್ಕಳಿಗೆ ಧೈರ್ಯ ಹೇಳಿ.
. ಮಕ್ಕಳನ್ನು ಬೇರೊಬ್ಬರಿ ಹೋಲಿಕೆ ಮಾಡಿ ದಡ್ಡರೆಂದು ಹೀಯಾಳಿಸಬೇಡಿ.
. ಮಕ್ಕಳ ಮೇಲೆ ಒತ್ತಡ ಹೇರದಿರಿ.
. ಮುಂದಿನ ಶಿಕ್ಷಣದ ವಿಷಯದ ಆಯ್ಕೆಯಲ್ಲಿ ಮಕ್ಕಳ ಮಾತು ಕೂಡ ಕೇಳಿ.
.ಫಲಿತಾಂಶದಿಂದ ಮಗುವಿನ ಸಾಮರ್ಥ್ಯ ನಿರ್ಧರಿಸಬೇಡಿ.
ಪರೀಕ್ಷಾ ಫಲಿತಾಂಶ ಜೀವನದ ಮಹತ್ವದ ಸಂಗತಿಯಲ್ಲ. ಅನುತ್ತೀರ್ಣರಾದರೆ ಅದು ಕೂಡ ಬದುಕಿನ ಒಂದು ಕಲಿಕೆಯೆಂದು ಯೋಚಿಸಬೇಕು. ಹೆತ್ತವರು ಕೂಡ ಪರೀಕ್ಷೆಯ ಬಗ್ಗೆ, ಫಲಿತಾಂಶದ ವಿಚಾರವಾಗಿ ಮಗುವಿನ ಸಾಮರ್ಥ್ಯವನ್ನು ನಿರ್ಧರಿಸಬೇಡಿ. ಒಂದು ವೇಳೆ ವಿದ್ಯಾರ್ಥಿ ಅನುತ್ತೀರ್ಣರಾದರೆ ಆ ಸಮಯದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು.
– ಡಾ| ರಮೀಳಾ ಶೇಖರ್,
ಮಾನಸಿಕ ತಜ್ಞರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.