ಕೊಣಾಜೆ ಮಾದರಿ ಗ್ರಾಮಕ್ಕೆ ವಿದ್ಯಾರ್ಥಿಗಳ ಪಣ
Team Udayavani, Jan 4, 2018, 10:58 AM IST
ಉಳ್ಳಾಲ: ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದ ಮಂಗಳೂರಿನ ರಥಬೀದಿಯ ಡಾ|. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು
ಈಗ ಕೊಣಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಪ್ರಥಮ ಹಂತದ ಯೋಜನೆಯಾಗಿ ಮೂರು ವರ್ಷಗಳ ಕಾಲ ಎರಡು ವಾರ್ಡ್ ನ್ನು ದತ್ತು ತೆಗೆದುಕೊಂಡು ಕಾರ್ಯ ಆರಂಭಿಸಿದ್ದಾರೆ.
ಕಳೆದ ಅಗಸ್ಟ್ ತಿಂಗಳಿಂದ ಹಸಿರು ಸೇನೆ ರಾಜ್ಯ ರೈತ ಸಂಘದ ಮುಖ್ಯಸ್ಥರಾದ ಮನೋಹರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು 20 ವರ್ಷಗಳಿಂದ ಹಡಿಲು ಬಿದ್ದಿದ್ದ ಸುಮಾರು ಆರು ಎಕರೆ ಭೂಮಿಯಲ್ಲಿ ಭತ್ತದ ಕೃಷಿ ಆರಂಭಿಸಿದರು. ಸತತ ಐದು ತಿಂಗಳ ಕಾಲ ಪ್ರತೀ ವಾರ ವಿದ್ಯಾರ್ಥಿಗಳು ಗ್ರಾಮಕ್ಕೆ ಭೇಟಿ ನೀಡಿ ಭತ್ತದ ಕೃಷಿಯ ಪ್ರಾರಂಭದಿಂದ ಕೊಯ್ಲುವರೆಗಿನ ಕಾರ್ಯ ಮುಗಿಸಿದ್ದು, ಉತ್ತಮ ಫಸಲನ್ನು ಪಡೆದಿದ್ದಾರೆ.
ವಾರ್ಡ್ ಸರ್ವೆ
ಗ್ರಾಮದ ಎರಡು ವಾರ್ಡ್‌ನ ಎಲ್ಲ ಮನೆಗಳಿಗೆ ಭೇಟಿ ನೀಡಿ ಅವರ ಸಾಮಾಜಿಕ, ಆರ್ಥಿಕ ಮತ್ತು ಕೃಷಿಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ನಡೆಸಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್ ಹೆಬ್ಟಾರ್, ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಡಾ| ನವೀನ್ ಎನ್. ಕೊಣಾಜೆ, ಪ್ರೊ| ಜೆಫ್ರಿ ರಾಡ್ರಿಗಸ್, ಡಾ| ನಾಗವೇಣಿ ಮಂಚಿ ಅವರ ಮಾರ್ಗದರ್ಶನದಲ್ಲಿ 10 ವಿದ್ಯಾರ್ಥಿಗಳ ತಂಡದಂತೆ ಸುಮಾರು 150 ವಿದ್ಯಾರ್ಥಿಗಳು ಒಂದು ದಿನ ಸಂಪೂರ್ಣ ಸರ್ವೆ ಕಾರ್ಯ ಮುಗಿಸಿದ್ದು, ಪಂಚಾಯತ್ ಸಹಯೋಗದಲ್ಲಿ ವಾರ್ಡ್ ನ ಮಾಹಿತಿಯನ್ನು ಕ್ರೋಡೀಕರಿಸಿದ್ದಾರೆ.
ಸಂಘಟನೆಗಳ ಬಲ
ವಿದ್ಯಾರ್ಥಿಗಳ ಮಾದರಿ ಗ್ರಾಮದ ಪರಿಕಲ್ಪನೆಗೆ ಪೂರಕವಾಗಿ ಎರಡು ವಾರ್ಡ್ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮದ ಸಂಘ ಸಂಸ್ಥೆಗಳು, ದೈವಸ್ಥಾನ, ಮಸೀದಿ ಸಮಿತಿ, ಚರ್ಚ್ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿವೆ. ಕಳೆದ ಇದರೊಂದಿಗೆ ಕೊಣಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಶೌಕತ್ ಆಲಿ ಅವರ ಮಾರ್ಗದರ್ಶನದಲ್ಲಿ ಪಂಚಾಯತ್ ಆಡಳಿತ ಸಂಪೂರ್ಣ ಬೆಂಬಲ ನೀಡಿದೆ.
ಇಂಗುಗುಂಡಿ ರಚನೆ
ಜಲ ಸಂರಕ್ಷಣೆಯ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಿಫಾಯಿಯಾ ಜುಮಾ ಮಸೀದಿ ಜಾಗದಲ್ಲಿ ಇಂಗುಗುಂಡಿ ರಚನೆ ನಡೆಸಿದರೆ ಕೊಪ್ಪಳ ಕಲ್ಲುರ್ಟಿ ದೈವಸ್ಥಾನ ಬಳಿ ಸುಮಾರು 150ಕ್ಕೂ ಹೆಚ್ಚು ಫಲನೀಡುವ ಸಸಿಗಳನ್ನು ನೆಟ್ಟು ಸಾಮಾಜಿಕ ಅರಣ್ಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದರೊಂದಿಗೆ ಕೆರೆ, ಮದಗಗಳ ಪುನರುಜ್ಜೀವನ ಸೇರಿದಂತೆ ಕಾಲು ದಾರಿ ರಿಪೇರಿ ಕಾರ್ಯವನ್ನು ನಡೆಸಲಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಸ್ವಸಹಾಯ ಸಂಘ
ಗ್ರಾಮ ಬಲವರ್ಧನೆಯ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ಸಂಸ್ಥೆಗಳು ಸಹಯೋಗ ನೀಡಲಿದೆ. ಜನಶಿಕ್ಷಣ ಟ್ರಸ್ಟ್‌ನ ಮುಖ್ಯಸ್ಥರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಮಾರ್ಗದರ್ಶನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ನೆಲ ಜಲ ಸಂರಕ್ಷಣೆ, ಸೌರಶಕ್ತಿ ಅಭಿಯಾನ ಹಾಗೂ ಪ್ರಾಕೃತಿಕ ಇಂಧನಗಳ ಸದ್ಬಳಕೆಯ ನಿಟ್ಟಿನಲ್ಲಿ
ಕಾರ್ಯ ಆರಂಭಿಸಿದ್ದು, ಮನೆ, ಮನೆಗೆ ಭೇಟಿ ನೀಡಿ ಜಾಗೃತಿ ಅಭಿಯಾನದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸ್ವಸಹಾಯ ಸಂಘದ ಮಾದರಿಯಲ್ಲಿ ಸಮಿತಿ ರಚಿಸಿ ಅವರಿಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಸಾವಯವ ಕೃಷಿ ಮಾಹಿತಿ
ವಾರ್ಡ್‌ನ ಮನೆಗಳಲ್ಲಿ ಪೈಪ್ ಕಾಂಪೋಸ್ಟ್, ಎರೆಹುಳ ಗೊಬ್ಬರ, ಸಾವಯವ ಕೃಷಿ ಪ್ರಾರಂಭಿಸುವ ನಿಟ್ಟಿನಲ್ಲಿ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ವಿಜಯ ಬ್ಯಾಂಕ್ ಕೊಣಾಜೆ ವಿದ್ಯಾರ್ಥಿಗಳಿಗೆ ಸಹಯೋಗ ನೀಡಲಿದ್ದು, ಈಗಾಗಲೇ ಪೈಲೆಟ್ ಯೋಜನೆಯಂತೆ ಪ್ರಾತ್ಯಕ್ಷಿತೆಯನ್ನು ಪ್ರಗತಿಪರ ಕೃಷಿಕರು ಮತ್ತು ಕೃಷಿ ವಿಜ್ಞಾನಿಗಳು ನೀಡಿದ್ದಾರೆ. ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಮತ್ತು ಅಚ್ಯುತ ಗಟ್ಟಿ ಅವರ ಮಾರ್ಗದರ್ಶನದಲ್ಲಿ ಪೈಪ್ ಕಾಂಪೋಸ್ಟ್‌ಗೆ ಬೇಕಾದ ಸಲಕರಣೆಗಳನ್ನು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನೀಡಲಿದೆ.
ಮಾದರಿ ಗ್ರಾಮ ನಿರ್ಮಾಣ
ಐದು ತಿಂಗಳಿನಿಂದ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳು ಕೊಣಾಜೆ ಗ್ರಾಮದಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಮೂಲಕ ನಿರಂತರವಾಗಿ ಕಾರ್ಯ ಆರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಬೆಂಬಲವನ್ನು ಕೊಣಾಜೆ ಗ್ರಾಮ ಪಂಚಾಯತ್ ನೀಡಲು ಸಿದ್ಧವಿದೆ. ಮಾದರಿ ಗ್ರಾಮ ನಿರ್ಮಾಣದ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸಿದರೆ ಖಂಡಿತವಾಗಿ ಯಶಸ್ಸು ದೊರೆಯುತ್ತದೆ.
– ಶೌಕತ್ ಆಲಿ
ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್
ಮಾರ್ಗದರ್ಶನ ಅಗತ್ಯ
ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮಾದರಿ ಕಾರ್ಯಕ್ರಮದ ಮೂಲಕ ನಿಜವಾದ ಜೀವನ ಶಿಕ್ಷಣವನ್ನು ಇಲ್ಲಿ ಪಡೆಯುತ್ತಿದ್ದಾರೆ. ಸುಮಾರು 150 ವಿದ್ಯಾರ್ಥಿಗಳು ಸ್ವತಃ ಅಡುಗೆ ತಯಾರಿಸಿಕೊಂಡು, ಸಮಾಜದ ಜನರೊಂದಿಗೆ ಉತ್ತಮ ರೀತಿಯಲ್ಲಿ ಬೆರೆತುಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇಂತಹ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಮಾದರಿ ಗ್ರಾಮ ನಿರ್ಮಾಣ ಸಾಧ್ಯ.
– ಶೀನ ಶೆಟ್ಟಿ,
ಮುಖ್ಯಸ್ಥರು, ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್
ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.