ನೀತಿ ಸಂಹಿತೆಯಿಂದ ಕಾಡು ಹಂದಿಗಳಿಗೆ ಬಲ!
Team Udayavani, Mar 23, 2019, 5:30 AM IST
ಸುಬ್ರಹ್ಮಣ್ಯ : ಲೋಕಸಭಾ ಚುನಾವಣೆಯ ಕಾವು ಎಲ್ಲೆಡೆ ಕಂಡುಬರುತ್ತಿದೆ. ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪರವಾನಿಗೆ ಇರುವ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಎಲ್ಲರೂ ಡೆಪಾಸಿಟ್ ಮಾಡಬೇಕಾಗಿದೆ. ಇದರಿಂದಾಗಿ ಕಾಡಂಚಿನ ರೈತರು ಕಂಗಾಲಾಗಿದ್ದಾರೆ. ನೀತಿ ಸಂಹಿತೆಯ ನಿಯಮ ಕಾಡು ಹಂದಿಗಳಿಗಂತೂ ಬಲ ತಂದುಕೊಟ್ಟಿದೆ! ಹಂದಿಗಳ ಹಿಂಡು ಮನುಷ್ಯನ ಮೇಲೂ ದಾಳಿ ಮಾಡುತ್ತಿದೆ.
ಕಾಡು ಪ್ರಾಣಿಗಳು ಹತ್ತಿರ ಬರದಂತೆ ತಡೆಯಲು ಕೃಷಿಕರು ಕೋವಿಗಳನ್ನು ಬಳಸುತ್ತಾರೆ. ಈ ರಕ್ಷಣಾ ಕೋವಿಗಳನ್ನು ಈಗ ಠಾಣೆಯಲ್ಲಿ ಠೇವಣಿ ಇಡಲಾಗಿದೆ. ಹಾಗಾಗಿ ಯಾವುದೇ ಹೆದರಿಕೆ ಇಲ್ಲದೆ ಕಾಡು ಹಂದಿಗಳು ಕೃಷಿಕನ ಅಂಗಳಕ್ಕೆ ಬರುತ್ತಿವೆ. ವಾರದ ಹಿಂದೆ ಹರಿಹರ-ನಡುಗಲ್ಲು-ಸುಳ್ಯ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಉಮೇಶ್ ಕಜೊjàಡಿ ಅವರ ವಾಹನಕ್ಕೆ ಮಲ್ಲಾರ ಬಳಿ ಕಾಡು ಹಂದಿ ಹಿಂಡು ಅಡ್ಡ ಬಂದಿತ್ತು. ಈ ವೇಳೆ ನಡೆದ ಅವಘಡದಿಂದ ಅವರು ಮಾರಣಾಂತಿಕ ಗಾಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಖ್ಯ ರಸ್ತೆಯಲ್ಲೆ ಈ ಘಟನೆ ನಡೆದಿತ್ತು. ಅದಕ್ಕಿಂತ ಒಂದೆರಡು ದಿನಗಳ ಹಿಂದೆ ಕೂಡ ಇದೇ ಮಾರ್ಗದಲ್ಲಿ ನಾಲ್ಕೈದು ಮಂದಿ ವಾಹನದಲ್ಲಿ ತೆರಳುತ್ತಿದ್ದಾಗ ಇದೇ ರೀತಿ ಹಂದಿಗಳ ಹಿಂಡು ಅಡ್ಡ ಬಂದ ಪ್ರಕರಣವೂ ನಡೆದಿದೆ. ಕೆಲ ಪ್ರಕರಣಗಳು ಬೆಳಕಿಗೆ ಬಂದರೆ, ಹಲವು ಘಟನೆಗಳು ಬೆಳಕಿಗೆ ಬರುತ್ತಿಲ್ಲ.
ಸುಳ್ಯ ಮತ್ತು ಕಡಬ ತಾಲೂಕು ಗಡಿಭಾಗದ ಕೃಷಿ ಅವಲಂಬಿತ ಕಾಡಂಚಿನ ಗ್ರಾಮಗಳಾದ ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಐನಕಿದು, ಕಲ್ಮಕಾರು ದೇವಚಳ್ಳ, ಮಡಪ್ಪಾಡಿ, ಗುತ್ತಿಗಾರು, ಸುಬ್ರಹ್ಮಣ್ಯ, ಯೇನೆಕಲ್ಲು, ಕೈಕಂಬ ಮೊದಲಾದ ಕಡೆಗಳ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿವೆ. ಕಾಡಾನೆ, ಕಡವೆ, ಮಂಗಗಳ ಕಾಟದ ಹಿಂದೆಯೇ ಕಾಡು ಹಂದಿ ತೀವ್ರ ತರಹದ ತೊಂದರೆ ನೀಡುತ್ತಿದೆ.
ಹಂದಿ ಬೇಟೆಗೆ ಅನುಮತಿ ಇದೆ
ಮಾನವನ ಜೀವ ಮತ್ತು ಫಸಲು ನಾಶ ಪಡಿಸುವ ಕಾಡು ಹಂದಿ ಹತ್ಯೆಗೆ ಸರಕಾರದ ಅನುಮತಿ ನೀಡಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಯಾವುದೇ ಕಾಡು ಪ್ರಾಣಿಯು ಮನುಷ್ಯನ ಪ್ರಾಣ ಮತ್ತು ಸೊತ್ತಿಗೆ ಅಪಾಯಕಾರಿಯಾಗಿ ಕಂಡು ಬಂದರೆ ಅಂತಹ ಪ್ರಾಣಿಯ ಬೇಟೆಗೆ ಅವಕಾಶ ಕಲ್ಪಿಸಲಾಗಿದೆ.
ಹಂದಿಗೆ ಗುಂಡು ಹಾರಿಸಿದ ಬಳಿಕ ಸಂಬಂಧಿಸಿದ ಫಾರೆಸ್ಟರ್ ಅಥವಾ ಮೇಲಿನ ಹಂತದ ಅಧಿಕಾರಿಗಳು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲೆ ಮಹಜರು ನಡೆಸಬೇಕು. ಸತ್ತ ಹಂದಿಯ ಮಾಂಸವನ್ನು ತಿನ್ನುವಂತಿಲ್ಲ ಮತ್ತು ಇತರೆ ಉದ್ದೇಶಕ್ಕೂ ಬಳಸುವಂತಿಲ್ಲ. ಹಂದಿಯ ಶವವನ್ನು 3 ಅಡಿ ಆಳದಲ್ಲಿ ಹೂತು ಹಾಕಬೇಕು ಅಥವಾ ಸುಟ್ಟು ಹಾಕಬೇಕು ಎನ್ನುವ ನಿಯಮವಿದೆ.
ಬೆಳೆಗಳೆಲ್ಲ ನಾಶ
ಕಾಡು ಹಂದಿಗಳು ಬೆಳೆಗಳನ್ನು ನಾಶ ಪಡಿಸುತ್ತಿವೆ. ತೋಟದಲ್ಲಿ ಬೆಳೆದಿರುವ ಸಣ್ಣ ಬಾಳೆಗಿಡಗಳನ್ನು ಬುಡಸಮೇತ ಕಿತ್ತು ಹಾಕುತ್ತಿವೆ. ವಿವಿಧ ರೀತಿಯ ಕೃಷಿ ಮತ್ತು ತೋಟದಲ್ಲಿ ಬಿದ್ದಿರುವ ತೆಂಗಿನ ಕಾಯಿಗಳನ್ನು ಹಂದಿಗಳು ಸುಲಿದು ತಿನ್ನುತ್ತಿವೆ. ಸಂಜೆ ವೇಳೆಗೆ ಕಾಡು ಹಂದಿಗಳು ಸಮೀ ಪದ ಕಾಡು ಗುಡ್ಡದಿಂದ ಕೃಷಿ ತೋಟಗಳಿಗೆ ನುಗ್ಗಿ ರಾತ್ರಿಯಿಡಿ ಕೃಷಿ ಧ್ವಂಸಗೊಳಿಸುತ್ತವೆ. ಅವುಗಳನ್ನು ಓಡಿಸುವ ವೇಳೆ ಕೆಲವೊಮ್ಮೆ ಮನುಷ್ಯನ ಮೇಲೆ ಆಕ್ರಮಣಕ್ಕೂ ಅವುಗಳು ಮುಂದಾಗುತ್ತವೆ.
ಹಿಂಡೇ ರಸ್ತೆಗೆ ಬಂತು
ಡಾಮರು ರಸ್ತೆಯ ಮೇಲೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದೆ. ಈ ವೇಳೆ ಏಕಾಏಕಿ ಐದಾರು ಹಂದಿಗಳ ಹಿಂಡು ಕಾಡಿನಿಂದ ರಸ್ತೆಗೆ ನುಗ್ಗಿತು. ಬ್ರೇಕ್ ಹಾಕುವಷ್ಟರಲ್ಲಿ ಅವುಗಳು ಬೈಕಿಗೆ ಢಿಕ್ಕಿ ಹೊಡೆದವು. ಬೈಕ್ ಸಮೇತ ನಾನು ಬಿದ್ದೆ. ರಸ್ತೆಗೆ ಎಸೆಯಲ್ಪಟ್ಟೆ. ನನ್ನ ಕಾಲಿಗೆ ಗಾಯಗಳಾಯಿತು.
– ಉಮೇಶ್ ಕಜ್ಜೋಡಿ
ದಾಳಿಗೆ ಒಳಗಾದವರು
ದೃಢಪಟ್ಟಲ್ಲಿ ಪರಿಹಾರ
ಕಾಡು ಹಂದಿಯಿಂದ ಮಾರಣಾಂತಿಕೆ ಹಲ್ಲೆಗೊಳಗಾಗಿ ಗಾಯಗೊಂಡ ಬಗ್ಗೆ ಪೊಲೀಸ್ ದೂರು, ವೈದ್ಯರ ದೃಢೀಕರಣ ಮೊದಲಾದ ದಾಖಲೆಗಳನ್ನು ಪರಿಶೀಲಿಸಿ ಹಂದಿಯಿಂದಲೇ ಮಾರಣಾಂತಿಕ ಹಲ್ಲೆ ಆಗಿರುವುದರ ಕುರಿತು ದೃಢ ಪಟ್ಟಲ್ಲಿ ಪರಿಹಾರ ನೀಡಲು ಅವಕಾಶವಿದೆ.
– ತ್ಯಾಗರಾಜ್ ಆರ್‌ಎಫ್ಒ,
ಸುಬ್ರಹ್ಮಣ್ಯ ಅರಣ್ಯ ವಿಭಾಗ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.