ಸುಬ್ರಹ್ಮಣ್ಯದಲ್ಲಿ ಸದ್ದು ಮಾಡುತ್ತಿದೆ ಮಾದಕ ದ್ರವ್ಯ ವ್ಯಸನ
ಸಾಮಾಜಿಕ ಜಾಲತಾಣಗಳಲ್ಲಿ ನಿಯಂತ್ರಣಕ್ಕೆ ಒತ್ತಾಯ: ಚಿವುಟದಿದ್ದರೆ ಕಾದಿದೆ ಅಪಾಯ
Team Udayavani, Sep 16, 2019, 5:09 AM IST
ಸಾಂದರ್ಭಿಕ ಚಿತ್ರ
ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಇತ್ತೀಚೆಗೆ ಮಾದಕ ದ್ರವ್ಯ ವ್ಯಸನ ವ್ಯಾಪಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಕ್ರಮಕ್ಕೆ ಒತ್ತಾಯಗಳು ವ್ಯಕ್ತಗೊಳ್ಳುತ್ತಿವೆ.
ಸುಬ್ರಹ್ಮಣ್ಯದಲ್ಲಿ ಈ ಹಿಂದಿನಿಂದಲೂ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ಆಗುತ್ತಿರುವ ಕುರಿತು ಸುದ್ದಿಯಾಗಿತ್ತು. ಹೊರಗಿನ ವ್ಯಕ್ತಿಗಳ ಜತೆಗೆ ಸ್ಥಳೀಯ ಕೆಲವು ಯುವಕರೂ ವ್ಯಸನಕ್ಕೆ ಬಲಿಯಾಗಿರುವ ಕುರಿತು ಸಂದೇಹಗಳಿವೆ. ನಶೆಯಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ, ರಾತ್ರಿ ಹೊತ್ತಿನಲ್ಲಿ ಹೊಡೆದಾಟ ಇತ್ಯಾದಿ ಕೃತ್ಯಗಳು ನಡೆಯುತ್ತಿವೆ.
ಸೆ. 23ರಂದು ರಾತ್ರಿ ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಯುವಕರ ಮಧ್ಯೆ ಹೊಡೆದಾಟ ನಡೆದಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಯುವಕರು ಬಾಯಿಗೆ ಬಂದಂತೆ ಬೈದಿದ್ದರು. ಅಮಲಿನಲ್ಲಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ಡ್ರಿಂಕ್ ಅಂಡ್ ಡ್ರೈವ್ ಕೇಸು ಹಾಕಿ ಬಿಟ್ಟಿದ್ದರು. ಆದರೆ, ಯುವಕರು ಗಾಂಜಾ ಸೇವೆನೆ ಮಾಡಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಮೊದಲು ಒಂದು ಸಲ ನಗರದಲ್ಲಿ ಪೊಲೀಸರು ಮಾದಕ ವಸ್ತುಗಳ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಕಾಲಕ್ರಮೇಣ ಪೊಲೀಸರ ನಿಲುವು ಸಡಿಲಗೊಂಡು ಮಾದಕ ವಸ್ತುಗಳ ಸಾಗಾಟ, ಮಾರಾಟ ಹಾಗೂ ಸೇವನೆ ಹೆಚ್ಚಲು ಕಾರಣವಾಯಿತು. ವ್ಯಸನಿಗಳ ಸಂಖ್ಯೆಯೂ ವೃದ್ಧಿಸಿದೆ. ಮಾದಕ ವಸ್ತುಗಳು ಅತ್ಯಂತ ಸುಲಭವಾಗಿ ಕೈಸೇರುತ್ತಿದ್ದು, ಒಮ್ಮೆ ಅದರ ನಶೆ ಹತ್ತಿಸಿಕೊಂಡ ಯುವಕರು, ಬಳಿಕ ಅದರಿಂದ ಹೊರಬರದೆ ತೊಳಲಾಡುತ್ತಿದ್ದಾರೆ.
ಯುವಜನತೆಯನ್ನು ರಕ್ಷಿಸಿ
ಮಾದಕ ವಸ್ತುಗಳ ಜಾಲ ನಗರದಲ್ಲಿ ಇಷ್ಟು ತೀವ್ರವಾಗಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸಂಘಟನೆಗಳೂ ಸೊಲ್ಲೆತ್ತಿಲ್ಲ. ಮಾದಕ ವಸ್ತುಗಳ ದಾಸರಾಗುತ್ತಿರುವ ಯುವಕರನ್ನು ರಕ್ಷಿಸಬೇಕಾದ ಹೊಣೆ ಹೆತ್ತವರು, ಪೊಲೀಸರು ಹಾಗೂ ನಾಗರಿಕರ ಮೇಲಿದೆ. ಪೊಲೀಸರು ಎಚ್ಚೆತ್ತುಕೊಂಡು ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಸಹಸ್ರಾರು ಮಕ್ಕಳು ಕಲಿಯುತ್ತಿದ್ದಾರೆ. ಅನ್ಯ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕಪ್ಪು ಹಾಗೂ ಬಿಳಿ – ಈ ಎರಡೂ ಬಗೆಯ ಗಾಂಜಾ ಯುವಕರ ಕೈಗೆ ಸುಲಭವಾಗಿ ಎಟಕುತ್ತಿದೆ. ಕಾಲೇಜು, ಹೈಸ್ಕೂಲ್ ಹಂತದ ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕಿದೆ. ಹಳ್ಳಿ ಪ್ರದೇಶಕ್ಕೆ ವಿಸ್ತರಿಸದಂತೆ ತಡೆಯಬೇಕಿದೆ. ಯುವ ಸಮುದಾಯದ ದಾರಿತಪ್ಪಿಸುವ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮಗಳು ಜಾರಿಯಾಗಬೇಕಿದೆ.
ವಾರಾಂತ್ಯದಲ್ಲಿ ಜಾಸ್ತಿ
ಮಾಹಿತಿ ಪ್ರಕಾರ ನಗರಕ್ಕೆ ಕೇರಳ, ಮಡಿಕೇರಿ ಭಾಗದಿಂದ ಪುತ್ತೂರು ಮತ್ತು ಸುಳ್ಯದ ಮೂಲಕ ಮಾದಕ ವಸ್ತುಗಳ ಸರಬರಾಜು ಆಗುತ್ತಿದೆ. ಲೈನ್ ಸೇಲ್ ವಾಹನಗಳ ಮೂಲಕ ಇಲ್ಲಿಗೆ ತಲುಪಿಸಲಾಗುತ್ತಿದೆ ಎನ್ನಲಾಗುತ್ತಿದೆ. ಪಾರ್ಕಿಂಗ್ ಸ್ಥಳ, ಬಿಸಿಲೆ ಘಾಟ್ ರಸ್ತೆಯ ಪಾಳು ಬಿದ್ದ ಕಟ್ಟಡ, ನಿರ್ಜನ ಜನವಸತಿ ಪ್ರದೇಶ ಚಟುವಟಿಕೆಯ ಕೇಂದ್ರಗಳು. ವಾರಾಂತ್ಯದಲ್ಲಿ ಮೋಜು- ಮಸ್ತಿ ಜಾಸ್ತಿ ಇರುತ್ತದೆ. ಇವುಗಳ ವಿತರಣೆಯೇ ಕೆಲವರಿಗೆ ಕಸುಬಾಗಿದೆ.
ತನಿಖೆ ನಡೆಸುತ್ತೇವೆ
ಮಾದಕ ದ್ರವ್ಯ ವ್ಯಸನ ಚಟುವಟಿಕೆ ಕಾನೂನು ಬಾಹಿರ. ಕುಕ್ಕೆ ಪರಿಸರದಲ್ಲಿ ಚಟುವಟಿಕೆ ನಡೆಸುತ್ತಿರುವ ಅನುಮಾನದ ಕುರಿತು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತೇವೆ. ಚಟುವಟಿಕೆ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲಿ ತನಿಖೆಗೆ ಆನುಕೂಲ. ಜಾಗೃತಿಯೂ ಅಗತ್ಯ.
– ದಿನಕರ ಶೆಟ್ಟಿ, ಡಿವೈಎಸ್ಪಿ, ಪುತ್ತೂರು
ಜಾಗೃತಿ ಕಾರ್ಯ ಕೈಗೊಳ್ಳುತ್ತೇವೆ
ನಗರದಲ್ಲಿ ಡ್ರಗ್ಸ್, ಗಾಂಜಾ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಆಗುತ್ತಿರುವ ಕುರಿತು ಮಾಹಿತಿ ಇದೆ. ನಮ್ಮ ಸಂಘಟನೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಇನ್ನೂ ಕಡಿವಾಣ ಬಿದ್ದಿಲ್ಲ. ಮತ್ತೆ ಜಾಗೃತಿ ನಡೆಸುತ್ತೇವೆ.
– ರಕ್ಷಿತ್ ಪರಮಲೆ, ಎಬಿವಿಪಿ ವಿದ್ಯಾರ್ಥಿ ಮುಖಂಡ, ಸುಬ್ರಹ್ಮಣ್ಯ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.