ಸುದಿನ ಫಲಶ್ರುತಿ : ಉಪ್ಪಿನಂಗಡಿ ನಾಡಕಚೇರಿ ಸ್ಥಳಾಂತರ ಶೀಘ್ರ
Team Udayavani, Jun 13, 2018, 2:50 AM IST
ಉಪ್ಪಿನಂಗಡಿ: ಹೋಬಳಿ ಮಟ್ಟದ ನಾಡಕಚೇರಿಯ ಸ್ಥಿತಿಗತಿಗಳ ಕುರಿತು ಪುತ್ತೂರು ತಾಲೂಕು ದಂಡಾಧಿಕಾರಿ ಅನಂತಶಂಕರ ಅವರು ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಚೇರಿಯ ಸ್ಥಳಾಂತರಕ್ಕೆ ಸೂಕ್ತ ಕಟ್ಟಡಕ್ಕಾಗಿ ಹುಡುಕಾಟ ನಡೆಸಿದ್ದಾರೆ. ನಾಡಕಚೇರಿಯ ದುಸ್ಥಿತಿ ಕುರಿತು ‘ಉದಯವಾಣಿ – ಸುದಿನ’ ಜೂ. 6ರಂದು ವಿಶೇಷ ವರದಿ ಪ್ರಕಟಿಸಿತ್ತು. ಕಟ್ಟಡ ಕುಸಿದರೆ ಲಕ್ಷಾಂತರ ರೂ. ಮೌಲ್ಯದ ಸರಕಾರಿ ಸೊತ್ತುಗಳಾದ ಕಂಪ್ಯೂಟರ್, ಸೋಲಾರ್ ಉಪಕರಣಗಳಿಗೆ ಹಾಗೂ ದಾಖಲೆ ಪತ್ರಗಳಿಗೆ ಹಾನಿ ಸಂಭವಿಸುವ ಅಪಾಯವಿದೆ ಎಂಬುದನ್ನು ತಹಶೀಲ್ದಾರ್ ಗಮನಿಸಿದರು. ಸ್ಥಳಕ್ಕೆ ಪ್ರಭಾರ ಕಂದಾಯ ನಿರೀಕ್ಷಕ ರಮಾನಂದ ಚಕ್ಕಡಿ ಹಾಗೂ ಗ್ರಾಮಕರಣಿಕ ಚಂದ್ರ ನಾಯ್ಕ ಅವರನ್ನು ಕರೆಸಿ, ಬೇರೆ ಕಟ್ಟಡದಲ್ಲಿ ಕಚೇರಿಗಾಗಿ ಹುಡುಕಾಟ ನಡೆಸುವಂತೆ ಆದೇಶಿಸಿದ್ದಾರೆ.
ಕಂದಾಯ ನಿರೀಕ್ಷಕರು, ಪಂಚಾಯತ್ ಕಟ್ಟಡ ವಿಸ್ತಾರವಾಗಿದ್ದು, ಈ ಹಿಂದೆಯೂ ನಾಡ ಕಚೇರಿಗೆ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಮನವರಿಕೆ ಮಾಡಿದರು. ಅದನ್ನೇ ಆಯ್ಕೆ ಮಾಡಿಕೊಳ್ಳಲು ತಾಲೂಕು ದಂಡಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಗ್ರಾ.ಪಂ. ಆಡಳಿತದೊಂದಿಗೆ ತಮ್ಮ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ, ತತ್ ಕ್ಷಣವೇ ಸ್ಥಳಾಂತರ ವಿಚಾರ ಬಗೆಹರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ತಾಲೂಕು ದಂಡಾಧಿಕಾರಿಗಳು ನೆರೆಪೀಡಿತ ಪ್ರದೇಶವೆಂದು ತಿಳಿದು ದಿನದ 24×7 ಸೇವೆಯಡಿ ಕಂಟ್ರೋಲ್ ರೂಮ್ ನ ರಾತ್ರಿ ಪಾಳಿಗೆ ಒಬ್ಬ ಗ್ರಾಮ ಸಹಾಯಕ ಹಾಗೂ ಗ್ರಾಮ ಕರಣಿಕರನ್ನು ಸರದಿಯಂತೆ ಕರ್ತವ್ಯಕ್ಕೆ ನೇಮಿಸುವಂತೆ ಸೂಚಿಸಿದರು ರಾತ್ರಿ ಏಳು ಗಂಟೆ ಸುಮಾರಿಗೆ ಬಂದ ಸಿಬಂದಿ, ನಾಡ ಕಚೇರಿಯ ದುಸ್ಥಿತಿ ಗಮನಿಸಿ, ಇಲ್ಲಿ ಕರ್ತವ್ಯ ನಿಭಾಯಿಸುವುದು ಹೇಗೆ ಎಂದು ಪ್ರಶ್ನಿಸಿದರು. ಬಳಿಕ ನೂತನ ಗ್ರಾಮ ಕರಣಿಕರ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಸೇವಾ ಕೇಂದ್ರ ತೆರೆದು ಸ್ಥಳಾಂತರಿಸುವ ಮೂಲಕ, ಸಿಬಂದಿಯಲ್ಲಿ ಧೈರ್ಯ ತುಂಬಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.