ಕೆವಿಜಿ ವೃತ್ತ ರಸ್ತೆ ಗೆದ್ದಲು ಹಿಡಿದ ಗುದ್ದಲಿ ಪೂಜೆ!
Team Udayavani, Nov 8, 2018, 10:11 AM IST
ಸುಳ್ಯ : ನಗರದೊಳಗೆ ನೂರಾರು ವಾಹನ ಓಡಾಟ ನಡೆಸುವ ಕೆವಿಜಿ ವೃತ್ತದಲ್ಲಿ ರಸ್ತೆ ದುರಸ್ತಿ ಬೇಡಿಕೆ ಈಡೇರುವ ಲಕ್ಷಣ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಎರಡು ತಿಂಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರೂ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳ ಸಹಿತ ಸಾವಿರಾರು ಜನರು ತೆರಳುವ ಪ್ರಮುಖ ವೃತ್ತ ಇದಾಗಿದೆ. ಕಳೆದ ಹಲವು ಸಮಯಗಳಿಂದ ಇಲ್ಲಿನ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಬಗ್ಗೆ ನ.ಪಂ. ಸಾಮಾನ್ಯ ಸಭೆಗಳಲ್ಲಿ ತಾಸುಗಟ್ಟಲೆ ಚರ್ಚೆ ಆಗಿದ್ದರೂ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ.
5 ಲಕ್ಷ ರೂ. ಅನುದಾನ
ಅನುದಾನ ಕಾದಿರಿಸುವ ಬಗ್ಗೆ ನ.ಪಂ. ಸಭೆಗಳಲ್ಲಿ ಚರ್ಚೆ ನಡೆಯುತ್ತಿತ್ತು. ನ.ಪಂ. ಕೆಲ ಜನಪ್ರತಿನಿಧಿಗಳು ಶಾಸಕರಲ್ಲಿ ಅಭಿವೃದ್ಧಿಗೆ ಅನುದಾನ ಒದಗಿಸಲು ಮನವಿ ಮಾಡಿದ್ದರು. ಅದರಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯ ಅಡಿ 5 ಲಕ್ಷ ರೂ. ಅನುದಾನದಲ್ಲಿ ಸೆ. 8ರಂದು ಶಾಸಕ ಅಂಗಾರ ಅವರು ಗುದ್ದಲಿಪೂಜೆ ನೆರವೇರಿಸಿದ್ದರು. ಇದಾಗಿ ಎರಡು ತಿಂಗಳು ಕಳೆದರೂ, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ಹೊಂಡ-ಗುಂಡಿ ತುಂಬಿದ ರಸ್ತೆಯಲ್ಲಿಯೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನಗರದ ಹಲವು ವೃತ್ತಗಳಲ್ಲಿ ಕೆವಿಜಿ ವೃತ್ತ ಒಂದಾಗಿದೆ. ತಾಲೂಕು ಕಚೇರಿ, ತೋಟಗಾರಿಕಾ ಇಲಾಖೆ, ನ್ಯಾಯಾಲಯ ಸಹಿತ ಪ್ರಮುಖ ಜನಸಂಪರ್ಕ ಕಚೇರಿಗಳು ಇಲ್ಲಿವೆ. ಜನರ ಓಡಾಟಕ್ಕಾಗಿ ಹಲವು ರಿಕ್ಷಾಗಳು ಬಾಡಿಗೆಗಾಗಿ ವೃತ್ತದ ಬಳಿಯ ನಿಲ್ದಾಣದಲ್ಲಿ ನಿಲ್ಲುತ್ತಿವೆ. ದಿನಂಪ್ರತಿ ಸರಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಿಗೆ ಸಾವಿರಾರು ಮಂದಿ ಬರುತ್ತಾರೆ. ಇಷ್ಟಾದರೂ ತಾತ್ಕಾಲಿಕ ದುರಸ್ತಿಗೆ ಕಾಲ ಕೂಡಿ ಬಂದಿಲ್ಲ.
ಇಂಟರ್‌ಲಾಕ್ ಅಳವಡಿಸಿದ್ದರು
ಡಾಮರು ಅಥವಾ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಬೇಕಾದ ವೃತ್ತ ಇದು. ಆದರೆ ಹಿಂದಿನ ಕಾಮಗಾರಿ ಸಂದರ್ಭದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿತ್ತು. ನಿತ್ಯ ಲಘು ಮತ್ತು ಘನ ವಾಹನಗಳು ಸಂಚರಿಸುವ ರಸ್ತೆ ಇದಾಗಿದ್ದು, ಇಲ್ಲಿ ಇಂಟರ್ ಲಾಕ್ ಕಾಮಗಾರಿ ಪ್ರಯೋಜನಕ್ಕೆ ಬರುವುದಿಲ್ಲ. ಇದು ಜನಸಾಮಾನ್ಯನಿಗೂ ಗೊತ್ತಾಗುವ ವಿಚಾರ. ನಗರಾಡಳಿತ ಅಧಿಕಾರಿಗಳ ಗಮನಕ್ಕೆ ಬಾರದೆ ಇಂಟರ್ ಲಾಕ್ ಅಳವಡಿಸಿದ್ದೆ ಅವ್ಯವಸ್ಥೆಗೆ ಕಾರಣ.
ಸಾರ್ವಜನಿಕರ ಆಕ್ರೋಶ
ಮಳೆಗಾಲದಲ್ಲಿ ಕೆಸರು ತುಂಬಿ ಆವಾಂತರ ಸೃಷ್ಟಿಸಿದ್ದ ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ಕೂಡ ನಡೆದಿತ್ತು. ಕಾಂಗ್ರೆಸ್ ಪಕ್ಷ, ರಿಕ್ಷಾ ಚಾಲಕ-ಮಾಲಕರು, ಸ್ಥಳೀಯ ವರ್ತಕರು ಮೊದಲಾದವರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು. ತಹಶೀಲ್ದಾರ್, ನ.ಪಂ. ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಇಷ್ಟಾದರೂ ನಗರಾಡಳಿತ ವೃತ್ತ ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿದೆ ಎನ್ನುವ ಆಕ್ರೋಶ ಕೂಡ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ನಮ್ಮ ಪಾಡು ಕೇಳುವವರು ಯಾರು?
ಇಲ್ಲಿ ನಿತ್ಯವೂ ದ್ವಿಚಕ್ರ ವಾಹನದ ಮೂಲಕ ಸಂಚರಿಸುತ್ತೇನೆ. ಹಲವು ಸಮಯಗಳಿಂದ ರಸ್ತೆ ದುರಸ್ತಿ ಬಗ್ಗೆ ಭರವಸೆಗಳು ಮಾತ್ರ ಕೇಳಿ ಬರುತ್ತಿದೆ. ಗುದ್ದಲಿ ಪೂಜೆ ಆಗಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ. ನಮ್ಮ ಪಾಡು ಕೇಳುವವರೇ ಇಲ್ಲದಂತಾಗಿದೆ.
– ಶಿವಪ್ರಸಾದ್ ಕೆ.,
ದ್ವಿಚಕ್ರ ವಾಹನ ಸವಾರ
ಮರಳು ಸಿಕ್ಕ ತತ್‌ಕ್ಷಣ ಆರಂಭ
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಲ್ಲಿಂದ ಅನುಮೋದನೆ ಸಿಕ್ಕಿದೆ. ಇನ್ನೂ ಎಸ್ಟಿಮೇಟ್ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಿ.ಪಂ. ಎಂಜಿನಿಯರ್ ಇದರ ಅನುಷ್ಠಾನದ ಜವಬ್ದಾರಿ ಹೊತ್ತಿದ್ದಾರೆ. ಮರಳು ಪೂರೈಕೆ ಆದ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು.
– ಹನುಮಂತರಾಯಪ್ಪ,
ಸುಳ್ಯ ಜಿ.ಪಂ. ಎಂಜಿನಿಯರ್
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.