ಸುಳ್ಯ: ಸೌಕರ್ಯ ವಂಚಿತ ಪುಷ್ಪಗಿರಿ ತಪ್ಪಲಿನ ಗ್ರಾಮಗಳೀಗ ಅನಾಥ
Team Udayavani, May 17, 2018, 1:02 PM IST
ಸುಬ್ರಹ್ಮಣ್ಯ: ಮೊಬೈಲ್ ಸಿಗ್ನಲ್ ದೊರೆಯದ ದಟ್ಟಾರಣ್ಯ. ಒಂದು ಸೈಕಲ್ ಕೂಡ ಸಾಗಲು ಕಷ್ಟವಿರುವ ಹದ ಗೆಟ್ಟ ಸಂಪರ್ಕ ರಸ್ತೆ, ವರ್ಷಗಳೇ ಕಳೆದರೂ ಈಡೇರದ ಸೇತುವೆ ಕನಸು. ಮನೆ ಅಂಗಳಕ್ಕೂ ಕಾಲಿಡುವ ಕಾಡು ಪ್ರಾಣಿಗಳು! ಇದು ಸುಳ್ಯ ತಾಲೂಕಿನ ಕಟ್ಟಕಡೆಯ ಕುಗ್ರಾಮ ಕಲ್ಮಕಾರು-ಕೊಲ್ಲಮೊಗ್ರು ಈ ಎರಡು ಅವಳಿ ಕಂದಾಯ ಗ್ರಾಮಗಳಲ್ಲಿನ ದುಸ್ತಿತಿ. ಮೂಲಸೌಕರ್ಯವಿಲ್ಲದ ಊರಿನಲ್ಲಿ ಶತಮಾನಗಳಿಂದಲೂ ಇಲ್ಲಿನ ಜನರ ಬದುಕು ಮುದುಡುತ್ತಿದೆ.
ದ.ಕ. ಕೊಡಗು ಗಡಿಭಾಗದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಸುಳ್ಯ ತಾಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿದೆ ಈ ಪ್ರದೇಶ. ಈ ಎರಡು ಕಂದಾಯ ಊರುಗಳು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಸೇತುವೆ, ರಸ್ತೆ, ಕಾಲನಿಗಳ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳನ್ನು ಹೊಂದುವಲ್ಲಿ ಹಿಂದೆ ಬಿದ್ದಿದೆ.
ಅವಳಿ ಗ್ರಾಮಗಳಲ್ಲಿ 466ರಕ್ಕೂ ಅಧಿಕ ಮನೆಗಳಿದ್ದು 3,008 ಜನಸಂಖ್ಯೆಯಿದೆ. ಇವರೆಲ್ಲರದು ಕೃಷಿ ಕಸುಬು. ಅಡಿಕೆ ಇಲ್ಲಿಯ ಪ್ರಮುಖ ಬೆಳೆ. ಹತ್ತಾರು ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲಿಯವರು. ಆದರೆ ಅರಣ್ಯ ಸಂರಕ್ಷಣೆಯಲ್ಲಿ ಬರುವ ಸೂಕ್ಷ್ಮ ವಲಯ ಕಾಯ್ದೆ, ಕಾಡು ಪ್ರಾಣಿಗಳ ಹಾವಳಿ ಒಂದೆಡೆ ಕಂಗೆಡಿಸಿದ್ದರೆ ಸಂಪರ್ಕ ರಸ್ತೆಗಳು, ಸೇತುವೆಗಳು ಸುಸೂತ್ರವಾಗಿಲ್ಲದೆ ಇರುವುದು ಇಲ್ಲಿನ ನಿತ್ಯದ ಗೋಳಾಗಿ ಹೋಗಿದೆ. ಹತ್ತೂರೊಟ್ಟಿಗೆ ಹನ್ನೊಂದರಂತೆ ಸಮಸ್ಯೆ ಸಹಿಸಿಕೊಂಡು ಬದುಕುತ್ತಿದ್ದೇವೆ ಎನ್ನುವ ಇಲ್ಲಿಯವರಿಗೆ ದುಸ್ತರ ಬದುಕಿನಿಂದ ಕಾಲ್ನಡಿಗೆ ಅಭ್ಯಾಸವಾಗಿಬಿಟ್ಟಿದೆ.
ಬಸ್ ಸಂಚಾರ ಇಲ್ಲ
ತೀರಾ ಹದೆಗೆಟ್ಟ ಈ ಊರಿಗೆ ಸರಕಾರಿ ಬಸ್ಸುಗಳು ಬರಲು ಒಪ್ಪುವುದಿಲ್ಲ, ದಿನಕ್ಕೆ ಒಂದೆರಡು ಬಸ್ಸುಗಳು ಬರುತ್ತವೆ. ಉಳಿದಂತೆ ಎಲ್ಲರು ಖಾಸಗಿ ವಾಹನಗಳನ್ನೆ ಅವಲಂಬಿ ಸಿಕೊಂಡಿದ್ದಾರೆ. ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಸೇತುವೆಗಳಿಲ್ಲದೆ ಮಳೆಗಾಲದಲ್ಲಿ ಸಂಕಷ್ಟ ಪಡುತ್ತಿರುತ್ತಾರೆ. ಮಕ್ಕಳು, ಇಳಿ ವಯಸ್ಸಿನವರು, ಮಹಿಳೆಯರು ಜೀವ ಅಭದ್ರತೆಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ಊರಿನ ಮಂದಿ ತಮ್ಮೂರಿಗೆ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್‌ಗೆ ಸೇರಿದ ಕಡಮಕಲ್ಲು ಎಂಬಲ್ಲಿ ಸುಮಾರು 200 ಕುಟುಂಬಗಳು ವಾಸಿಸುತ್ತಿವೆ. ಪಡಿತರ ಸಹಿತ ಇನ್ನಿತರ ಮೂಲ ಸವಲತ್ತುಗಳಿಗೆ ಈ ಕುಟುಂಬಗಳ ಸದಸ್ಯರು ಗಾಳಿಬೀಡಿಗೆ ತೆರಳಬೇಕು. ಅದಕ್ಕಾಗಿ ಕಡಮಕಲ್ಲಿನಿಂದ ನೇರ ದಾರಿಯಿಲ್ಲ. 40 ಕಿ.ಮೀ ಬದಲಿಗೆ ಸುಳ್ಯ ನಗರ ಮೂಲಕ 140 ಕಿ.ಮೀ ದೂರ ಸುತ್ತಿ ತೆರಳಬೇಕು. ಬಳಸಿ ಸಾಗುವ ವೇಳೆ ಸಮಯ ಹಾಗೂ ಹಣ ವ್ಯರ್ಥ. ಮಡಿಕೇರಿ- ಗಾಳಿಬೀಡು- ಕಡಮಕಲ್ಲು- ಸುಬ್ರಹ್ಮಣ್ಯ ಈ ಕಚ್ಚಾ ರಸ್ತೆ ಅಭಿವೃದ್ಧಿ ಆದಲ್ಲಿ ಎರಡು ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಇದಕ್ಕೆ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಬೇಕು.
ಕಷ್ಟದ ಜೀವನ
ಈ ಭಾಗದಲ್ಲಿ ಬಹುತೇಕ ದಿನಗಳಲ್ಲಿ ಮೊಬೈಲ್ ಸಂಪರ್ಕ ಸೇವೆ ಇರುವುದಿಲ್ಲ. ವಿದ್ಯುತ್ ಸರಬರಾಜು ಇರುವುದಿಲ್ಲ. ಪ್ರತಿನಿತ್ಯ ಕಾಡು ಪ್ರಾಣಿಗಳು ಕೃಷಿ ತೋಟಗಳಿಗೆ ಧಾವಿಸಿ ಬಂದು ಕೃಷಿ ಫಸಲು ನಾಶ ಪಡಿಸುತ್ತಿದೆ.
ಕೃಷಿಗೆ ರೋಗಬಾಧೆ
ಕೃಷಿಕರು ಕೃಷಿ ನಡೆಸಲು ಸಾಧ್ಯವಾಗದೆ ಸ್ಥಿತಿ ಒಂದೆಡೆಯಾದರೆ ಮತ್ತೂಂದು ಕಡೆ ಬೆಳೆಗಳಿಗೆ ಬಾಧಿಸುವ ವಿವಿಧ ರೋಗಗಳು, ಅಡಿಕೆಗೆ ಹಸಿರು ಕೊಳೆ ರೋಗ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇಲ್ಲಿ ಜೀವನ ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಮಕ್ಕಳ ಕೊರತೆ
ಕಡಮಕಲ್ಲು ಎಂಬಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರಕಾರಿ ಶಾಲೆ ಕಾರ್ಯಚರಿಸುತ್ತಿತ್ತು. ಇದು ಕಡಮಕಲ್ಲು ಭಾಗದ ಜನತೆಗೆ ಉಪಯುಕ್ತವಾಗಿತ್ತು. ಮೂಲಸೌಕರ್ಯವಿಲ್ಲದೆ ಇರುವ ಈ ಶಾಲೆ ಈಗ ಪಾಳು ಬಿದ್ದಿದೆ. ಹಳೆ ಕಟ್ಟಡ ಕೆಡವದೆ ಉಳಿಸಿಕೊಳ್ಳಲಾಗಿದೆ. ಪಕ್ಕದ ಹೊಸ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಇಲ್ಲಿರುವ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿದೆ. ಇಲ್ಲಿ ವಾಸವಿರುವ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳನ್ನು ಇತರೆಡೆಗಳ ಶಾಲೆಗೆ ಸೇರಿಸಿರುವ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳ ಕೊರತೆ ಕಂಡುಬಂದಿದೆ.
ಒಟ್ಟಾರೆ ಬದುಕು
ವಿದ್ಯುತ್ ಯಾವತ್ತೂ ಇರುವುದಿಲ್ಲ. ಸಣ್ಣ ಗುಡುಗು ಆದರೂ ಮೊಬೈಲ್ ನೆಟ್‌ವರ್ಕ್ ಹೋಗುತ್ತದೆ. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ತತ್ ಕ್ಷಣಕ್ಕೆ ಏನೂ ಮಾಡಲಾಗುತ್ತಿಲ್ಲ. ಒಟ್ಟಾರೆ ನಮ್ಮದೊಂದು ಬದುಕು ಅಷ್ಟೆ.
– ತೇಜಾವತಿ ಕಲ್ಮಕಾರು ಗ್ರಹಿಣಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.