ಗುಳೆ ಬಂದು ನದಿ ಮೀನು ಶಿಕಾರಿ:ವಿಷ ಸುರಿದು ಮೀನು ಬೇಟೆ ಶಂಕೆ
Team Udayavani, Dec 6, 2018, 10:17 AM IST
ಸುಳ್ಯ: ಬೇಸಗೆಯಲ್ಲಿ ನದಿ ನೀರಿಗೆ ವಿಷ ಬೆರೆಸಿ ಜಲಚರ ಬೇಟೆಯಾಡುವ ದಂಧೆ ಆರಂಭಗೊಂಡಿದ್ದು, ಜಲ, ನೆಲ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ.
ಪಯಸ್ವಿನಿ, ಕುಮಾರಧಾರೆ, ನೇತ್ರಾವತಿ ನದಿಗಳಲ್ಲಿ ಪ್ರತಿ ವರ್ಷ ಈ ಅಕ್ರಮ ಬೇಟೆ ನಡೆಯುತ್ತದೆ. ಈ ಬಾರಿಯೂ ಆರಂಭವಾಗಿರುವ ಮಾಹಿತಿಯಿದೆ. ಕೆಲವು ದಿನಗಳಿಂದ ಸುಳ್ಯ, ಪುತ್ತೂರು ತಾಲೂಕಿನ ಜನಸಂದಣಿ ಪ್ರದೇಶಗಳಲ್ಲಿ ಉತ್ತರ ಕರ್ನಾಟಕ ಮೂಲದ ಮಹಿಳೆಯರು ಬುಟ್ಟಿಯಲ್ಲಿ ನದಿ ಮೀನು ಇರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಪಯಸ್ವಿನಿ, ಕುಮಾರಧಾರೆ ನದಿಯಿಂದ ಬೇಟೆಯಾಡಿ ತಂದ ಮೀನಿದು ಎಂದು ಹೇಳುತ್ತಾರೆ. ಬೆಳ್ಳಂಬೆಳಗ್ಗೆ ಮಾರಾಟ ಅಕ್ರಮ ಬೇಟೆಯನ್ನು ದೃಢೀಕರಿಸುತ್ತಿದೆ.
ಗುಳೆ ಬರುತ್ತಾರೆ!
ಮುಖ್ಯ ನದಿಗಳಲ್ಲಿ ನೀರಿನ ಮಟ್ಟ ಇಳಿಯುತ್ತಿದ್ದಂತೆ ಇವರು ಕುಟುಂಬ ಸಹಿತ ಬಂದು ನದಿ ತಟದಲ್ಲಿ ಟೆಂಟ್ ಕಟ್ಟಿ ವಾಸಿಸಲು ಆರಂಭಿಸುತ್ತಾರೆ. ರಸ್ತೆ ಅಥವಾ ಕಟ್ಟಡ ಕೆಲಸಕ್ಕೆ ಬಂದವರು ಎಂದು ಹೆಚ್ಚಿನವರು ಭಾವಿಸಿದರೂ ನಿಜ ಬೇರೆಯೇ. ಹಗಲು ಬೇರೆ ಕೆಲಸಕ್ಕೆ ತೆರಳಿ, ರಾತ್ರಿ ಮೀನು ಬೇಟೆಗೆ ಇಳಿಯುತ್ತಾರೆ. ಬೆಳಗ್ಗೆ ಮಾರಾಟ ಮಾಡುತ್ತಾರೆ. 1ರಿಂದ 2 ತಿಂಗಳ ಕಾಲ ದಂಧೆ ನಡೆಯುತ್ತದೆ. ವಾಸಸ್ಥಾನವನ್ನು ಬದಲಾಯಿಸುತ್ತಿರುತ್ತಾರೆ.
ವಿಷ ಸುರಿದು ಬೇಟೆ?
ಬಲೆ ಇತ್ಯಾದಿ ಬಳಸಿ ಬೇಟೆ ಮಾಡುವುದಾಗಿ ತೋರಿಸಿಕೊಂಡರೂ ವಾಸ್ತವ ಬೇರೆ. ಹಗಲು ನದಿಯಲ್ಲಿ ಎಲ್ಲಿ ಆಳವಿದೆ ಎಂದು ಅಂದಾಜು ಮಾಡಿಕೊಂಡು ರಾತ್ರಿ ವಿಷ ಹಾಕುತ್ತಾರೆ. ಸತ್ತು ತೇಲುವ ಮೀನು ಹಿಡಿದು ತರುತ್ತಾರೆ. ಹರಿಯುವ ನೀರಿನೊಂದಿಗೆ ವಿಷ ಕೆಳಮುಖವಾಗಿ ಸಾಗುವುದರಿಂದ ಸುಲಭವಾಗಿ ದುಷ್ಕೃತ್ಯ ಗಮನಕ್ಕೆ ಬರುವುದಿಲ್ಲ.
ಆರೋಗ್ಯಕ್ಕೆ ಕಂಟಕ
ವಿಷ ಉಪಯೋಗಿಸಿ ಬೇಟೆಯಾಡಿದ ಮೀನು ತಿನ್ನುವುದರಿಂದ ವಿಷ ಮಿಶ್ರಿತ ನೀರನ್ನು ಬಳಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಂಥ ನದಿ ನೀರನ್ನು ಸೇವಿಸಿದ ದನ, ಕಾಡು ಪ್ರಾಣಿಗಳು ಅಸುನೀಗಿದ ಉದಾಹರಣೆಗಳಿವೆ.
ಸ್ಥಳೀಯಾಡಳಿತಗಳ ಜವಾಬ್ದಾರಿ
ವಿಷ ಬೆರೆಸಿ ಮೀನು ಬೇಟೆ ವಿರುದ್ಧ ಸ್ಥಳೀಯಾಡಳಿತಗಳು ಎಚ್ಚರಿಕೆ ವಹಿಸಬೇಕಿದೆ. ಎರಡು ವರ್ಷಗಳ ಹಿಂದೆ ಸುಳ್ಯ ನ.ಪಂ. ವ್ಯಾಪ್ತಿಯ ಪಯಸ್ವಿನಿ ನದಿಯಲ್ಲಿ ಉತ್ತರ ಕರ್ನಾಟಕದ 75ಕ್ಕೂ ಅಧಿಕ ಮಂದಿ ಮೀನು ಬೇಟೆಗೆಂದು ಟೆಂಟ್ ಹಾಕಿದ್ದರು. ಅಂದಿನ ಆಡಳಿತ ಪೊಲೀಸರ ಸಹಕಾರದಿಂದ ಅವರನ್ನು ತೆರವುಗೊಳಿಸಿತ್ತು. ಬಳಿಕ ಅರಂಬೂರು ಸುತ್ತಮುತ್ತ ಮೀನು ಬೇಟೆ ವರದಿಯಾಗಿತ್ತು.
ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುಳ್ಯದ ಸ್ವತ್ಛತೆಯ ಬಗ್ಗೆ ನಿಗಾ ಇರಿಸಿದೆ. ಕೆಲವು ವರ್ಷಗಳ ಹಿಂದೆ ಕಲುಷಿತ ನೀರಿನ ಬಳಕೆಯಿಂದ ಪಟ್ಟಣದಲ್ಲಿ ಕಾಮಾಲೆ, ಮಲೇರಿಯಾ ವರದಿಯಾಗಿತ್ತು. ಪಯಸ್ವಿನಿಯ ಒಡಲು ಮಲಿನಗೊಂಡದ್ದು ಇದಕ್ಕೆ ಕಾರಣವಾಗಿತ್ತು. ಆರೋಗ್ಯ ಇಲಾಖೆ, ಸ್ಥಳೀಯಾಡಳಿತಗಳು ಸ್ವಚ್ಛತೆಗೆ ಒತ್ತು ಕೊಟ್ಟ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.
ಒಪ್ಪಿಗೆ ಕೊಟ್ಟವರು ಯಾರು?
ಸಣ್ಣ ಪುಟ್ಟ ತೋಡುಗಳಲ್ಲಿ ಮೀನು ಹಿಡಿಯುವ ಮಾಹಿತಿ ಸಿಕ್ಕರೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಜಲಚರ ಬೇಟೆಗೆ ಕಾನೂನಿನಲ್ಲೂ ಅವಕಾಶ ಇಲ್ಲ. ಆದರೆ ಹೊರ ಜಿಲ್ಲೆಗಳಿಂದ ಬಂದು ಮೀನು ಬೇಟೆ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಸ್ವತಃ ಮಾರಾಟಗಾರರೇ ಇಂಥ ನದಿಯ ಮೀನು ಎಂದು ಬಹಿರಂಗವಾಗಿ ಹೇಳುತ್ತಾರೆ ಎನ್ನುವುದು ಸ್ಥಳೀಯರ ಹೇಳಿಕೆ.
ಅವಕಾಶ ಇಲ್ಲ
ನದಿಗಳಲ್ಲಿ ಸಿಡಿಮದ್ದು, ವಿಷ ಇತ್ಯಾದಿ ಬಳಸಿ ಮೀನು ಅಥವಾ ಇತರ ಜಲಚರ ಬೇಟೆಗೆ ಅವಕಾಶ ಇಲ್ಲ. ಇಂತಹ ಪ್ರಕರಣ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಾರಿಯೂ ನದಿ ಸುತ್ತಮುತ್ತ ನಿಗಾ ಇರಿಸಲಾಗುವುದು.
-ಮತ್ತಡಿ ಮುಖ್ಯಾಧಿಕಾರಿ, ನಗರ ಪಂಚಾಯತ್ ಸುಳ್ಯ
ಆರೋಗ್ಯಕ್ಕೆ ಹಾನಿ
ವಿಷಪೂರಿತ ಮೀನು ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಲುಷಿತ ನೀರು ಬಳಕೆಯಿಂದ ವಾಂತಿ ಬೇಧಿ, ಜಾಂಡೀಸ್ ಬರುವ ಸಾಧ್ಯತೆ ಇದೆ.
-ಡಾ| ಸುಬ್ರಹ್ಮಣ್ಯ
ಆರೋಗ್ಯಾಧಿಕಾರಿ, ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.