ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಒಪ್ಪುವಂಥದ್ದಲ್ಲ’
Team Udayavani, Oct 14, 2018, 10:40 AM IST
ಸುಳ್ಯ: ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಅ. 16ರಂದು ನಡೆಯಲಿರುವ
ಪ್ರಥಮ ತಾ| ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಳಂಜ ತಂಟೆಪ್ಪಾಡಿ ನಿವಾಸಿ ವಸಂತ ಶೆಟ್ಟಿ ಬೆಳ್ಳಾರೆ ಹೊರನಾಡು ಕನ್ನಡಿಗರಾಗಿ, ತುಳು ಸಂಘಟಕರಾಗಿ
ಕನ್ನಡದ ಜತೆಗೆ ತುಳು ಭಾಷೆ ಕಂಪನ್ನು ದಿಲ್ಲಿಯಲ್ಲಿಯೂ ಪಸರಿಸಿದವರು. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
ತುಳು ಪ್ರತ್ಯೇಕ ರಾಜ್ಯದ ಹೋರಾಟ ಪ್ರಸ್ತುತವೇ?
ಖಂಡಿತಾ ಅಪ್ರಸ್ತುತ. ತುಳು ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆಯನ್ನು ನಾನೊಬ್ಬ ಸಂಘಟಕನಾಗಿ ವಿರೋಧಿಸುತ್ತೇನೆ. ಕರ್ನಾಟಕ ಒಂದು ಅಖಂಡ ರಾಜ್ಯವಾಗಿರಬೇಕು. ಭಾಷೆ, ಅಧಿಕಾರ ಇತರ ವಿಚಾರಗಳಲ್ಲಿ ಈಗ ತುಳುವರಿಗೆ ಅವಕಾಶ ಸಿಗುತ್ತಿದೆ. ನಮ್ಮ ಬೇಡಿಕೆ ಇರುವುದು ಸರಕಾರಗಳು ತುಳುವಿಗೆ ಸರಿಯಾದ ಸ್ಥಾನಮಾನ ಕೊಡಬೇಕು ಎನ್ನುವುದು.
ಬೇರೆ-ಬೇರೆ ಭಾಷೆಗಳಿಗೆ ಬೇರೆ ರಾಜ್ಯಗಳು ಉದಯವಾದ ಸಂದರ್ಭ ತುಳು ರಾಜ್ಯ ಬೇಕು ಎಂಬ ಬೇಡಿಕೆ ಇಟ್ಟಿದ್ದರೆ ಅದು ಅರ್ಥಪೂರ್ಣ ಎನಿಸುತಿತ್ತು. ಆಗ ಅವಕಾಶ ಇತ್ತು. ಈ ಕಾಲಘಟ್ಟದಲ್ಲಿ ತುಳು ಸಂಘಟಕರು, ವಿದ್ವಾಂಸರು ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳಿದ್ದನ್ನು ನಾನು ಗಮನಿಸಿಲ್ಲ. ಪ್ರತಿಯೊಬ್ಬ ತುಳುಭಾಷಿಕ, ಸಂಘಟಕ, ವಿದ್ವಾಂಸ, ಕನ್ನಡ ವಿದ್ವಾಂಸನೂ ಹೌದು. ಕನ್ನಡ ಪ್ರೇಮಿಯು ಹೌದು. ಈಗಿನ ಬೇಡಿಕೆ ರಾಜಕೀಯ ಪ್ರೇರಿತವಷ್ಟೆ.
ಡಿಜಿಟಲ್ ತಂತ್ರಜ್ಞಾನದಲ್ಲಿ ತುಳು ?
ತುಳು ಭಾಷೆಯನ್ನು ಪ್ರಚಾರ ಮಾಡುವಲ್ಲಿ ಡಿಜಿಟಲ್ ತಂತ್ರಜ್ಞಾನ ಕೂಡ ಅತ್ಯಂತ ಹೆಚ್ಚು ಪರಿಣಾಮಕಾರಿ ಆಗಿ ಕೆಲಸ ಮಾಡುತ್ತಿದೆ. ಹೊರ ರಾಜ್ಯ ಅಥವಾ ವಿದೇಶ ರಾಷ್ಟ್ರದಲ್ಲಿ ಕೂಡ ತುಳುವಿನ ಬಗ್ಗೆ ಅರಿತುಕೊಳ್ಳಲು, ಇಲ್ಲಿನ ವೈಶಿಷ್ಟಗಳನ್ನು ಹಂಚಿಕೊಳ್ಳಲು ಸಹಕಾರಿ ಆಗಿದೆ.
ತುಳುವಿಗೆ ಅಕಾಡೆಮಿಕ್ ಕಲಿಕೆಯ ಮಾನ್ಯತೆ ಸಿಕ್ಕಿದೆ? ನಿಮ್ಮ ಅಭಿಪ್ರಾಯ?
ಅಕಾಡೆಮಿಕ್ ಮಾನ್ಯತೆ ಸಿಕ್ಕಿದ್ದು ತುಂಬಾ ಸಂತಸದ ವಿಚಾರ. ಆದರೆ ಇದು ಎಂದೋ ಸಿಗಬೇಕಿತ್ತು. ಈಗ ಸಿಕ್ಕಿದೆ. ತುಳು ಭಾಷೆಯ ಬೆಳವಣಿಗೆಗೆ ಇದು ಸಹಕಾರಿ. ತುಳು ಸಮೃದ್ಧಿಗೊಳಿಸಲು ಇದು ಮತ್ತಷ್ಟು ಕಾರಣವಾಗಲಿದೆ.
ಕಲಿಕೆ, ಭಾಷಾ ಅರಿವು, ಸಂರಕ್ಷಣೆಗೆ ಏನು ಮಾಡಬೇಕು?
ತುಳು ಅಕಾಡೆಮಿ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿತ್ತು. ಪ್ರಾಥಮಿಕ, ಪ್ರೌಢಶಾಲೆ, ಪದವಿ ವಿಭಾಗದಲ್ಲಿ ಪಠ್ಯವಾಗಿಯು ಬಂದಿದೆ. ಇದು ಕಲಿಕೆ, ಭಾಷಾ ಅರಿವಿನ ದೃಷ್ಟಿಯಿಂದ ಮಹತ್ವದ ಸಂಗತಿ. ಮುಖ್ಯವಾಗಿ ಅಕಾಡೆಮಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ತುಳುವಿನ ಬಗ್ಗೆ ಅಭಿಮಾನ ಇರುವವರು ಈ ನಿಟ್ಟಿನಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು. ತುಳು ಭಾಷೆಯ ಕಲಿಕೆಯಿಂದ ಆಗುವ ಪ್ರಯೋಜನದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಬೇಕು.
ವೃತ್ತಿ ಸಂಬಂಧಿ ಶಿಕ್ಷಣವಾಗಿ ಪೂರಕ ಅಲ್ಲ ಎಂಬ ಅಭಿಪ್ರಾಯಗಳು ಇವೆಯಲ್ಲಾ?
ಒಂದು ಭಾಷೆಯಿಂದಲೇ ಉದ್ಯೋಗಕ್ಕೆ ಸಮಸ್ಯೆ ಆಗುತ್ತದೆ ಅನ್ನುವುದು ಒಪ್ಪಲು ಸಾಧ್ಯವಿಲ್ಲ. ಆಂಗ್ಲ ಭಾಷಾ ಸಂಸ್ಥೆಗಳ ಬೆಳವಣಿಗೆ ಮಧ್ಯೆ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮಾಡುವರ ಪರಿಸ್ಥಿತಿ ಏನು ಎಂಬ ಆತಂಕ ಇತ್ತು. ಆದರೆ ಸರಕಾರ ಕನ್ನಡ ಮಾಧ್ಯಮದ ಮೇಲಸ್ತರಕ್ಕೆ ಪ್ರಯತ್ನ ಮಾಡಿ ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡುತ್ತಿದೆ. ತುಳು ಭಾಷಾ ಜಿಲ್ಲೆಗಳಲ್ಲಿ ನೇಮಕಾತಿ ಸಂದರ್ಭ ತುಳು ಭಾಷೆಗೆ ಇಂತಿಷ್ಟು ಪ್ರಾಧ್ಯಾನತೆ ಒದಗಿಸಲು ಕೇಳಬಹುದು. ಅಕಾಡೆಮಿ ಈ ನಿಟ್ಟಿನಲ್ಲಿ ಗಟ್ಟಿಯಾಗಿ ಕೆಲಸ ಮಾಡಬೇಕಿದೆ.
ಕನ್ನಡ ಮತ್ತು ತುಳು ಸಮ್ಮೇಳನಾಧ್ಯಕ್ಷತೆ ಗೌರವ ಸಿಕ್ಕಿದ ಕುರಿತು ಹೇಳಿ?
ದಿಲ್ಲಿಯಲ್ಲಿ ಇದ್ದುಕೊಂಡು ತುಳು ಭಾಷೆಯನ್ನು ಎಂಟನೆ ಪರಿಚ್ಛೇಧಕ್ಕೆ ಸೇರಿಸಬೇಕೆಂದು ಮಾಡಿದ ನಿರಂತರ ಹೋರಾಟ, ಸಂಘಟನೆ, ಕಳೆದ 35 ವರ್ಷದ ಸಾಂಸ್ಕೃತಿಕ ಬದುಕಿನಲ್ಲಿ ಕನ್ನಡ ಭಾಷೆಯ ಜತೆಗೆ ತುಳು ಭಾಷೆಯನ್ನು ರಾಜಧಾನಿಗೆ ಕೊಂಡೊಯ್ಯಲು, ಸರಕಾರಕ್ಕೆ ಮುಟ್ಟಿಸಲು ಅಥವಾ ತುಳು ಅಕಾಡೆಮಿಯಲ್ಲಿರುವಾಗ ಮಾಡಿದ ಕೆಲಸಕ್ಕೆ ಈ ಗೌರವ ಸಿಕ್ಕಿದೆ ಎಂದು ಭಾವಿಸಿದ್ದೇನೆ.
8ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆ ಬೇಡಿಕೆ ಏಕೆ ಈಡೇರುತ್ತಿಲ್ಲ?
ಇದು ಪ್ರಯತ್ನವಾಗಿಯೇ ಉಳಿದಿದೆ. ಮುಂದಡಿ ಇಡಬೇಕಿದ್ದ ಹೆಜ್ಜೆ ಹಿಂದಕ್ಕೆ ಬರುವ ಸ್ಥಿತಿ ಉಂಟಾಗಿದೆ. ತುಳು ಸಂಘಟಕರು, ವಿದ್ವಾಂಸರು ಪ್ರಯತ್ನ ಮಾಡಿದ್ದರೂ, ಎಲ್ಲಿಯ ತನಕ ಕರ್ನಾಟಕದ ರಾಜಕಾರಣಿಗಳು ಒಮ್ಮತ್ತವಾಗಿ ಪ್ರಯತ್ನ ಮಾಡುವುದಿಲ್ಲವೊ ಅಲ್ಲಿಯ ತನಕ ಪ್ರಯತ್ನದಲ್ಲಿ ಯಶಸ್ಸು ಸಿಗಲಾರದು. ಇಲ್ಲಿನ ಮುಖ್ಯ ಸಮಸ್ಯೆ ಅಂದರೆ ಹಿಂದೆ ಎರಡು ಭಾಷೆಗಳು ಮಾತ್ರ ಪರಿಚ್ಛೇಧಕ್ಕೆ ಸೇರುವ ಪಟ್ಟಿಯಲ್ಲಿತ್ತು. ಈಗ ಸುಮಾರು 39 ಭಾಷೆಗಳು ಅದಕ್ಕಾಗಿ ಕಾಯುತ್ತಿದೆ. ತುಳುವಿಗೆ ಅರ್ಹತೆ ಇದ್ದರೂ, ಒಂದು ಭಾಷೆ ಸೇರ್ಪಡೆಗೊಳಿಸಿದರೆ ಉಳಿದವು ತಗಾದೆ ಎತ್ತುವ ಸಾಧ್ಯತೆ ಇದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.