ಸಮಾಜ ಕಟ್ಟುವವರಿಗೆ ಬೆಂಬಲ ಕೊಡಿ: ವಿನಯ ಹೆಗ್ಡೆ
Team Udayavani, Aug 13, 2017, 7:25 AM IST
ಮೂಡಬಿದಿರೆ: ಅಭಿಪ್ರಾಯ ಹಂಚಿಕೊಳ್ಳಿ. ಆದರೆ ಸಮಾಜ ಒಡೆಯುವ ಯುದ್ದೋನ್ಮಾದ ಬೇಡ. ಸಮಾಜ ಎದ್ದೇಳಬೇಕು. ಸತ್ಯದ ಪರ ಹೋರಾಟ ಮಾಡುವವರಿಗೆ ಸಮಾಜ ಕಟ್ಟುವವರಿಗೆ ಬೆಂಬಲ ಕೊಡಿ. ಬಿದ್ದರೆ ಕೈ ಹಿಡಿದು ಮೇಲೆತ್ತಿ ತಿದ್ದಿ ಎಂದು ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹೇಳಿದರು. ಅವರು ಶನಿವಾರ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆದ ಡಾ| ಎಂ. ಮೋಹನ ಆಳ್ವ ಅವರ ಅಭಿಮಾನಿಗಳ ಬೃಹತ್ ಬೆಂಬಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಟ್ಟ ಬೆಳವಣಿಗೆ
ಈಗ ಸಮಾಜದಲ್ಲಿ ನಡೆಯುತ್ತಿರುವುದು ಕೆಟ್ಟ ಬೆಳವಣಿಗೆ. ಕೊಳಕು ರಾಜಕೀಯದಿಂದ ದೇಶ ಹಾಳಾಗುತ್ತಿದೆ. ಹಗಲು ಮಾಧ್ಯಮಗಳೆದುರು ಕಾವ್ಯಾಳ ಮನೆಗೆ ಸ್ಪರ್ಧೆಗೆ ಬಿದ್ದಂತೆ ಭೇಟಿ ನೀಡುವ ರಾಜಕಾರಣಿಗಳು ರಾತ್ರಿ ವೇಳೆ ಆಳ್ವ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಇಂತಹ ನೈತಿಕತೆಯಿಲ್ಲದ ರಾಜಕಾರಣಿಗಳನ್ನು ಹೇಗೆ ನಂಬುವುದು. 5 ಲಕ್ಷ ರೂ., 10 ಲಕ್ಷ ರೂ. ಪರಿಹಾರದ ಮಾತನಾಡುವ ರಾಜಕಾರಣಿಗಳೇ ಪ್ರಾಮಾಣಿಕವಾಗಿ ನೈಜ ಕಾಳಜಿಯಿಂದ ನೀವು ನಿಮ್ಮದೇ ಹಣ ಕೊಡುವಿರಾದರೆ ನಾನು ಅದರ ದುಪ್ಪಟ್ಟು ನೀಡಬಲ್ಲೆ. ಆದರೆ ಪ್ರಚಾರಕ್ಕಾಗಿ ತೆವಲಿನ ಹೇಳಿಕೆ ಕೊಡಬೇಡಿ. ಕಾವ್ಯಾಳ ಸಾವಿನಂತಹ ಘಟನೆ ನಡೆಯಬಾರದು ಎಂದರು.
ನಿಷ್ಪಕ್ಷ ತನಿಖೆ ನಡೆಯಲಿ: ಕಾವ್ಯಾ ಅಸಹಜ ಸಾವಿನ ತನಿಖೆ ಯನ್ನು ಸರಕಾರ ನಿಷ್ಪಕ್ಷ, ನಿರ್ದಾಕ್ಷಿಣ್ಯವಾಗಿ ನಡೆಸಲಿ. ಆದರೆ ಆ ತನಿಖೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗೆ ಕಿರುಕುಳ ಬೇಡ. ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಿ ಸೂತ್ರದನ್ವಯ ತನಿಖೆ ಬೇಕಿದ್ದರೆ ಪ್ರತ್ಯೇಕವಾಗಿ ನಡೆಯಲಿ. ಒಂದಕ್ಕೊಂದು ಥಳುಕು ಬೇಡ ಎಂದರು. ಯಾವ ಸರಕಾರಿ ಹಾಸ್ಟೆಲ್ ಆಳ್ವಾಸ್ ಹಾಸ್ಟೆಲ್‌ಗಿಂತ ಉತ್ತಮವಾಗಿದೆ ತೋರಿಸಿಕೊಡಿ ಎಂದು ಸವಾಲು ಹಾಕಿದರು.
ವಿವರಣೆ ಬೇಡ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ನಂಬುವವರಿಗೆ ವಿವರಣೆ ಬೇಡ. ನಂಬದ
ವರಿಗೆ ಎಷ್ಟು ವಿವರಣೆ ಕೊಟ್ಟರೂ ಪ್ರಯೋಜನಶೂನ್ಯ. ಸದಾ ಮಕ್ಕಳ ಒಳಿತು, ಶ್ರೇಯಸ್ಸು ಆಶಿಸುವ ಡಾ| ಆಳ್ವರ ಕುರಿತು ಮಾತನಾಡುವ ನೈತಿಕ ಚಾರಿತ್ರ ಯಾರಿಗೂ ಇಲ್ಲ ಎಂದರು.
ವ್ಯಕ್ತಿತ್ವವೇ ಬೆಂಬಲ: ಸಾಹಿತಿ ವೈದೇಹಿ ಮಾತನಾಡಿ, ಆಳ್ವರಿಗೆ ಯಾರ ಬೆಂಬಲವೂ ಬೇಡ. ಅವರ ವ್ಯಕ್ತಿತ್ವವೇ ಅವರಿಗೆ ಬೆಂಬಲ. ಸಭೆ ಸೇರಿದ್ದು ಇದು ಕೇವಲ ಆಳ್ವರಿಗಾದ ನೋವಲ್ಲ, ನಮಗೆಲ್ಲರಿಗೂ ನೋವಾಗಿದೆ ಎಂದು ಅಭಿವ್ಯಕ್ತಿಗೊಳಿಸಲು ಎಂದರು.ಯೇನಪೊಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೇನಪೊಯ ಅಬ್ದುಲ್ಲ ಕುಂಞಿ, ತನಿಖೆ ನಡೆದು ಸತ್ಯ ಹೊರಬರಲಿ. ಅಲ್ಲಿವರೆಗೆ ಆಳ್ವರ ಆತ್ಮಸ್ಥೈರ್ಯ ಕುಂದಿಸುವುದು ಬೇಡ ಎಂದರು. ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ, ತನಿಖೆಗಳು ಕಾನೂನು ಪ್ರಕಾರವೇ ನಡೆಯಬೇಕು ವಿನಾ ಇಷ್ಟಬಂದಂತೆ ಏಕವ್ಯಕ್ತಿ ಕೇಂದ್ರಿತ, ಸಂಘಟನೆ ಕೇಂದ್ರಿತವಾಗಿ ನಡೆಯುವುದು ಈ ನೆಲದ ಕಾನೂನಿಗೆ ವಿರುದ್ಧ ಎಂದರು.
ಮೂಲ್ಕಿ ದೇವಾಲಯದ ಧರ್ಮಗುರು ಫಾ| ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಉತ್ಪ್ರೇಕ್ಷಿತ ಕಪೋಲಕಲ್ಪಿತ ಸತ್ಯಕ್ಕೆ ದೂರವಾದ ಸುದ್ದಿಗಳು ಬಹಳಬೇಗ ಹರಡುತ್ತವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನಿರಪರಾಧಿಗೆ ಹಿಂಸೆ ಬೇಡ. ಸೂರ್ಯನಿಗೂ ಚಂದ್ರನಿಗೂ ಗ್ರಹಣ ಬರುತ್ತದೆ. ಆದರೆ ಗ್ರಹಣಕ್ಕೆ ಮೋಕ್ಷ ಇದ್ದಂತೆ ಆಳ್ವರೂ ನಿಷ್ಕಳಂಕರಾಗಲಿದ್ದಾರೆ ಎಂದರು.
ಮಾಜಿ ಸೈನಿಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಬ್ರಿ| ಐ.ಎನ್. ರೈ, ಮಕ್ಕಳಲ್ಲಿ ಸ್ವಾಭಿಮಾನ, ಆತ್ಮಗೌರವ, ದೇಶಭಕ್ತಿ ಬೆಳೆಸಿದ ಆಳ್ವರು ಅತಿಹೆಚ್ಚು ಮಂದಿಗೆ ಸೈನ್ಯಕ್ಕೆ ಸೇರ್ಪಡೆಯಾಗಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. 14,000 ಸೇನಾಕಾಂಕ್ಷಿಗಳಿಗೆ 1 ವಾರ ಉಚಿತ ಊಟ, ವಸತಿ, ತರಬೇತಿ ನೀಡಿದ್ದಾರೆ ಎಂದರು.
ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರು ಬಿಲ್ಲವರು ಎಲ್ಲರೂ ಒಂದೇ ಸಮಾಜದವರು. ಸಾಮಾಜಿಕ ಜಾಲತಾಣದ ಹೊತ್ತು ಕಳೆಯುವವರ ಸಂದೇಶಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಪೂಜಾರಿ, ಆಳ್ವರು ಎಂದೂ ಜಾತಿವಾದ ಮಾಡಿಲ್ಲ. ಅಂತೆಯೇ ತರಬೇತುದಾರ ಪ್ರವೀಣ್ ಕೂಡ ಉತ್ತಮ ತರಬೇತುದಾರ. ವಿಷಯದ ಮಾಹಿತಿಯಿಲ್ಲದೇ ಚಾರಿತ್ರವಧೆ ಮಾಡಬೇಡಿ ಎಂದರು.
ಸಾಂಸ್ಕೃತಿಕ ರಾಯಭಾರಿ
ಆಳ್ವಾಸ್ ಹಳೆ ವಿದ್ಯಾರ್ಥಿಗಳ ಪೋಷಕ ಗಣೇಶ್ ಕುಂದಾಪುರ, ನನ್ನ ಮಗಳಾದ ಸ್ನೇಹಾ ಕೊರಗ ಸಮುದಾಯದ ಮೊತ್ತಮೊದಲ ವ್ಯಕ್ತಿ ಎಂಬಿಬಿಎಸ್ ಮಾಡಲು, ಎರಡನೇ ಮಗಳು ಸಾಕ್ಷಿ ಪುಣೆ ಐಐಟಿಯಲ್ಲಿ ಸೀಟು ಪಡೆದ ಮೊತ್ತ ಮೊದಲ ಕೊರಗ ಸಮುದಾಯದ ವ್ಯಕ್ತಿಯಾಗಲು ಕಾರಣ ಡಾ| ಆಳ್ವರು. ಅಸ್ಪೃಶ್ಯತೆಗೆ ಒಳಗಾಗಿದ್ದ ನಮ್ಮ ಸಮುದಾಯದ ಡೋಲನ್ನು ಹೆಗಲಿಗೆ ಹಾಕಿ ಬಡಿದು ಕಲಾ ಮಾನ್ಯತೆ ಕೊಟ್ಟ ಸಾಂಸ್ಕೃತಿಕ ರಾಯಭಾರಿ ಅವರು ಎಂದರು .
ಸ್ವಾಗತಿಸಿ, ಪ್ರಸ್ತಾವನೆಗೈದ ಮಾಜಿ ಸಚಿವ ಅಮರನಾಥ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಜತೆ ನನ್ನನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಬಹಿರಂಗ ಸವಾಲು ಹಾಕಿದ ಶುದ್ಧಾತ್ಮ ಡಾ| ಮೋಹನ ಆಳ್ವರು. ಅವರ ತೇಜೋವಧೆಗೆ ಷಡ್ಯಂತ್ರ ನಡೆದಿದೆ. ನ್ಯಾಯತೀರ್ಮಾನದ ಅಧಿಕಾರ ಮಾಧ್ಯಮಗಳಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಕಲಾವಿದ ಕಾಸರಗೋಡು ಚಿನ್ನಾ, ಮೂಡಬಿದಿರೆಯ ಉದ್ಯಮಿ ನಾರಾಯಣ ಪಿ.ಎಂ., ಶಾರದಾ ವಿದ್ಯಾ ಸಂಸ್ಥೆಗಳ ಸಂಚಾಲಕ ಪ್ರೊ| ಎಂ.ಬಿ. ಪುರಾಣಿಕ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬೆಂಗಳೂರಿನ ಜೈನ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಯರಾಮ ಶೆಟ್ಟಿ, ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸುಂದರ ಜಿ. ಆಚಾರ್ಯ, ಎಡಪದವು ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಮೂಡಬಿದಿರೆ ಅರಮನೆಯ ಕುಲದೀಪ ಎಂ., ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಕುಕ್ಕುಂದೂರು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ, ಮೊಗವೀರ ಮುಖಂಡ ಯಶವಂತ ಮೆಂಡನ್, ಆಳ್ವಾಸ್ ಕ್ಷೇಮಪಾಲನಾಧಿಕಾರಿ ಸಬಿತಾ ಮೋನಿಸ್, ಅಂಧ ಹಳೆವಿದ್ಯಾರ್ಥಿ ಅನಿರುದ್ಧ ಉಪಸ್ಥಿತರಿದ್ದರು.
ದಿವಾಕರ ಶೆಟ್ಟಿ ತೋಡಾರು ನಿರ್ಣಯ ಮಂಡಿಸಿದರು. ಸಂಘಟಕ ಕದ್ರಿ ನವನೀತ ಶೆಟ್ಟಿ ನಿರ್ವಹಿಸಿದರು. ಕೃಷಿಕ ಸಮಾಜ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ವಂದಿಸಿದರು.
ಮಾಧ್ಯಮಗಳು ಟಿ.ಆರ್.ಪಿ. ಆಸೆಗೆ ಜನರ ಮನಸಲ್ಲಿ ವಿಷಬೀಜ ಬಿತ್ತಬಾರದು.
ವೈದೇಹಿ
ಸಾಂಸ್ಕೃತಿಕ ರಾಯಭಾರಿ ಆಳ್ವರಿಗೆ ಮೊಗವೀರರ ಬೆಂಬಲ ಇದೆ.
ಯಶವಂತ ಮೆಂಡನ್
26,000 ಮಕ್ಕಳಿರುವ ಭಾರತದ ಏಕೈಕ ಕ್ಯಾಂಪಸ್ ಆಳ್ವಾಸ್ ಕಾಲೇಜು ಕ್ಯಾಂಪಸ್. ಶೈಕ್ಷಣಿಕವಾಗಿ 2,494, ಕ್ರೀಡಾ ಸಾಧನೆಗಾಗಿ 830, ಸಾಂಸ್ಕೃತಿಕವಾಗಿ 439, ಇತರ ಸಾಧನೆಗಾಗಿ 276 ಎಂದು ಒಟ್ಟು 4,042 ಮಕ್ಕಳನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ, ವಸತಿ, ಅನ್ನಾಹಾರ ನೀಡಲಾಗುತ್ತಿದೆ.
ಅಮರನಾಥ ಶೆಟ್ಟಿ
27 ವರ್ಷಗಳ ಇತಿಹಾಸದಲ್ಲಿ ಕರ್ನಾಟಕಕ್ಕೆ ಐಎಎಸ್‌ನಲ್ಲಿ ಪ್ರಥಮ ರ್‍ಯಾಂಕ್ ಬಂದುದಿಲ್ಲ. ಆಳ್ವಾಸ್‌ನ
ಹಳೆ ವಿದ್ಯಾರ್ಥಿನಿ ನಂದಿನಿ ಮೂಲಕ ದೊರೆಯಿತು. ಸಾಧಕರಿಗೆ ಯಶಸ್ಸೇ ದೊಡ್ಡ ಶತ್ರು.
ಸುಧಾಕರ ಶೆಟ್ಟಿ
ಕಾವ್ಯಾ ವಸತಿ ನಿಲಯದಲ್ಲಿ ಇದ್ದದ್ದು 1 ತಿಂಗಳು. ಇಂದು ಕಾವ್ಯಾ ನಮ್ಮೊಂದಿಗಿಲ್ಲ. ಆದರೆ ನಾವೆಲ್ಲ
ಕಾವ್ಯಾಳೊಂದಿಗಿದ್ದೇವೆ.
ನವನೀತ್ ಶೆಟ್ಟಿ
ಅನೇಕ ವರ್ಷಗಳ ಹಿಂದೆ ತಾಯಿಯ ಔಧ್ವìದೈಹಿಕ ವಿಧಿಗಾಗಿ ಗೋಕರ್ಣಕ್ಕೆ ತೆರಳಿದ್ದಾಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ. ನಾನೂ ಸಹಿತ 16ರಿಂದ 18ನೇ ವಯಸ್ಸಿನ ಮಕ್ಕಳ ಹೆತ್ತವರು ಆ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಅರಿಯುವಲ್ಲಿ ಎಡವುತ್ತಾರೆ.
ಪ್ರೊ| ಎಂ.ಬಿ. ಪುರಾಣಿಕ್
ಅನೇಕ ವರ್ಷಗಳ ಹಿಂದೆ ಬೆಂಗಳೂರಿಗೆ ಕ್ರೀಡಾ ತರಬೇತಿದಾರರನ್ನು ಕರೆತರಲು ನಾನು ಮತ್ತು ಆಳ್ವರು ಹೋಗಿದ್ದಾಗ ಯಲಹಂಕ ಸಮೀಪ ಬಸ್ ಹಾಳಾಯಿತು. ಪ್ರಯಾಣ ಮುಂದುವರಿಕೆ ಕಷ್ಟವಾದಾಗ ಬಸ್ ನಿಲ್ದಾಣದಲ್ಲಿ ದಿನಪತ್ರಿಕೆಗಳನ್ನು ತಂದು ಹಾಸಿ ಮಲಗಿ ಮರುದಿನ ಪ್ರಯಾಣ ಮುಂದುವರಿಸಿದ ಮಕ್ಕಳ ಮೇಲಿನ ಕಾಳಜಿಯ ವ್ಯಕ್ತಿ ಆಳ್ವರು.
ಫಾ| ಗೋಮ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.