ಮಣ್ಣಲ್ಲಿ ಮಣ್ಣಾದ ಫಾಝಿಲ್: ಅಂತಿಮ ದರ್ಶನಕ್ಕೆ ಜನಸಾಗರ; ಪೊಲೀಸ್ ಬಿಗಿ ಭದ್ರತೆ
Team Udayavani, Jul 29, 2022, 11:01 AM IST
ಸುರತ್ಕಲ್/ಮಂಗಳೂರು: ಸುರತ್ಕಲ್ ಸಮೀಪದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಗುರುವಾರ ರಾತ್ರಿ ಕೊಲೆಯಾದ ಮಂಗಳಪೇಟೆಯ ನಿವಾಸಿ ಫಾಝಿಲ್ ನ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ ಮಂಗಳಪೇಟೆ ಜುಮ್ಮಾ ಮಸೀದಿಯಲ್ಲಿ ನಡೆದಿದೆ. ಸಾವಿವಾರು ಜನರ ನಡುವ ಫಾಝಿಲ್ ಮೃತದೇಹವನ್ನು ಮೆರವಣಿಗೆಯಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿತು. ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಹಾಸನದ ಎಸ್ ಪಿ ಹರಿರಾಂ ಶಂಕರ್ ಭದ್ರತೆಯ ಉಸ್ತುವಾರಿ ವಹಿಸಿದ್ದರು.
ಏನೇನು ನಡೆಯಿತು: ಮುಂಜಾನೆ ಏಳು ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ಫಾಝಿಲ್ ಮೃತದೇಹವನ್ನು ಚೊಕ್ಕಬೆಟ್ಟು ಕಾಟಿಪಳ್ಳ ಮಾರ್ಗವಾಗಿ ಮನೆಗೆ ತರಲಾಯಿತು. ಚೊಕ್ಕಬೆಟ್ಟು- ಕಾಟಿಪಳ್ಳ – ಗಣೇಶಪುರದವರೆಗೆ ಆಂಬುಲೆನ್ಸ್ ಮೂಲಕ ಮೆರವಣಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಯಿತು. ಸಾವಿರಾರು ಸಮುದಾಯ ಬಾಂಧವರಿಂದ ಅಂತಿಮ ದರ್ಶನದ ಬಳಿಕ ಕಬರಿಸ್ತಾನಕ್ಕೆ ಮೃತದೇಹ ತರಲಾಯಿತು. ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ಫಾಝಿಲ್ ದಫನ ಕಾರ್ಯ ನೆರವೇರಿತು. ಸುರತ್ಕಲ್ ಎಂಅರ್‌ಪಿಎಲ್ ರಸ್ತೆಯ ಮಂಗಳಪೇಟೆಯಲ್ಲಿ ಫಾಝಿಲ್ ಮನೆ ಸಮೀಪದ ಮುಹಿಯುದ್ದೀನ್ ಜುಮಾ ಮಸೀದಿಯ ದಪನಭೂಮಿಯಲ್ಲಿ ಅಂತ್ಯಕ್ರಿಯೆ ಪೂರ್ಣವಾಯಿತು. ತನ್ನ ಜನ್ಮದಿನದಂದೇ ಫಾಝಿಲ್ ಮಣ್ಣಲ್ಲಿ ಮಣ್ಣಾದರು.
ಫಾಝಿಲ್ ಮನೆಗೆ ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಮೊಯಿದ್ದೀನ್ ಬಾವ, ಐವನ್ ಡಿಸೋಜಾ ಭೇಟಿ ನೀಡಿ ಕುಟುಂಭಿಕರಿಗೆ ಸಾಂತ್ವನ ಹೇಳಿದರು.
ಶುಕ್ರವಾರದ ಪ್ರಾರ್ಥನೆ ಇರುವುದರಿಂದ ಸುರತ್ಕಲ್ ಪಣಂಬೂರು, ಮೂಲ್ಕಿ ಪ್ರದೇಶದಲ್ಲಿ ಸೆಕ್ಷನ್ ಜಾರಿಯಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಲಾಗಿದೆ. ಪ್ರಮುಖ ಸ್ಥಳದಲ್ಲಿ ಪೊಲೀಸರು ನಾಕಾಬಂದಿ ನಡೆಸಿದ್ದಾರೆ. ಔಷಧ, ಹಾಲು ಅಂಗಡಿ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ.
ಶಾಸಕ ಯು.ಟಿ. ಖಾದರ್ ಮಾತನಾಡಿ, ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದರು. ಅಲ್ಲದೆ ಪರಿಹಾರ ವಿತರಣೆಯಲ್ಲಿ ಸರಕಾರ ತಾರತಮ್ಯ ತೋರಬಾರದು ಎಂದು ಒತ್ತಾಯಿಸಿದರು.
ಹಲವರು ವಶಕ್ಕೆ: ನಿನ್ನೆ ರಾತ್ರಿಯಿಂದ ಸುಮಾರು 12 ಜನರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರು ಫಾಝಿಲ್ ಹತ್ಯೆಗೆ ಸಂಬಂಧಿಸಿದವರೆಂದಲ್ಲ. ನಿನ್ನೆ ರಾತ್ರಿಯಿಂದ ನಿಷೇಧಾಜ್ಞೆ ನಡುವೆ ಅನುಮಾನಾಸ್ಪದವಾಗಿ ಓಡಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಬಸ್ ಓಡಾಟ ಎಂದಿನಂತೆ: ಫಾಝಿಲ್ ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಬಸ್ ಗಳ ಓಡಾಟ ಎಂದಿನಂತೆ ಇದೆ. ನಗರದಲ್ಲಿ ಎಂದಿನಂತೆ ವಾಹನ ಸಂಚಾರವಿದೆ. ಸಿಟಿ ವ್ಯಾಪ್ತಿಯಲ್ಲಿ ಶಾಲೆ ಕಾಲೇಜು ತೆರೆದಿದೆ. ಬಹುತೇಕ ಅಂಗಡಿಯೂ ತೆರೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.