ಹೋಬಳಿ ಮಟ್ಟದಲ್ಲಿ ತಾಲೂಕು ಮಟ್ಟದ ಸೌಲಭ್ಯ
Team Udayavani, Mar 22, 2018, 12:38 PM IST
ಉಳ್ಳಾಲ: ಮಂಗಳೂರು ತಾಲೂಕಿನ ಉಳ್ಳಾಲ ಹೋಬಳಿ ಮತ್ತು ಬಂಟ್ವಾಳ ತಾಲೂಕಿನ ಮುಡಿಪು ಹೋಬಳಿಯನ್ನು ಹೊಂದಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಕಳೆದ 12 ವರ್ಷಗಳ ಶಾಸಕ ಅವಧಿಯಲ್ಲಿ ಹೋಬಳಿ ಮಟ್ಟದಲ್ಲಿ ತಾಲೂಕು ಮಟ್ಟದ ಸೌಲಭ್ಯವನ್ನು ಕಲ್ಪಿಸಿದ ಸಂತೃಪ್ತಿ ಇದೆ. ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂ.ಗಳಿಗೂ ಅಧಿಕ ಹಣ ವಿನಿಯೋಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತೀ ಮನೆಗೆ 24 ಗಂಟೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ನನ್ನ ಪ್ರಥಮ ಆದ್ಯತೆ. ಇದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರ ಮನದ ಮಾತು.
49ರ ಹರೆಯದ ಖಾದರ್ 29 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದು, 12 ವರ್ಷ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಉಳ್ಳಾಲದ ಪ್ರಮುಖ ಸಮಸ್ಯೆಯಾಗಿದ್ದ ಕಡಲ್ಕೊರೆತಕ್ಕೆ ಎಡಿಬಿ ಯೋಜನೆಯಡಿ 280 ಕೋಟಿ ರೂ. ವೆಚ್ಚದ ಶಾಶ್ವತ ತಡೆಗೋಡೆ ನಿರ್ಮಾಣ, ಮುಕ್ಕಚ್ಚೇರಿಯಿಂದ ಸೋಮೇಶ್ವರದ ಉಚ್ಚಿಲ ವರೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಸಮುದ್ರ ತಟದಲ್ಲಿ ತಾತ್ಕಾಲಿಕ ರಕ್ಷಣಾ ಕಾರ್ಯಕ್ಕೂ ಅನುದಾನ ಬಿಡುಗಡೆಯಾಗಿದೆ. ಉಳ್ಳಾಲದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕೆ ಜೆಟ್ಟಿ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ನಗರ ಸೌಲಭ್ಯ
ಗ್ರಾಮೀಣ ಪ್ರದೇಶದ ಜನರು ಹಳ್ಳಿಗಳನ್ನು ಬಿಟ್ಟು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ನಗರದೊಂದಿಗೆ ಕ್ಷೇತ್ರದ ಹಳ್ಳಿಗಳನ್ನು ಜೋಡಣೆ ಮಾಡುವ ನಿಟ್ಟಿನಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದೇನೆ. ಉಳ್ಳಾಲ ಮುಖ್ಯರಸ್ತೆ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ 9 ಕೋಟಿ ರೂ., ದೇರಳಕಟ್ಟೆ -ಅಡ್ಕರೆ ಪಡ್ಪು -ಪರಂಡೆ ರಸ್ತೆಗೆ 5 ಕೋಟಿ ರೂ., ತಲಪಾಡಿ ಜಂಕ್ಷನ್‌ನಿಂದ ದುರ್ಗಾಪರಮೇಶ್ವರೀ ದೇವಸ್ಥಾನ ಸಂಪರ್ಕಕ್ಕೆ 3 ಕೋ.ರೂ., ಕೋಟೆಕಾರು, – ಉಕ್ಕುಡ ಪಾರೆ ರಸ್ತೆಗೆ 3 ಕೋ.ರೂ., ಮೇರೆಮಜಲು – ಪಕ್ಕಳ ಪಾದೆ ರಸ್ತೆಗೆ 1.5 ಕೋ.ರೂ., ಮುನ್ನೂರು ಜಂಕ್ಷನ್- ಹರೇಕಳ ನ್ಯೂ ಪಡ್ಪು ರಸ್ತೆಗೆ 5 ಕೋ.ರೂ., ಕೊಣಾಜೆ – ಹರೇಕಳ ರಸ್ತೆಗೆ 2 ಕೋ.ರೂ. ಒದಗಿಸಲಾಗಿದೆ. ಎಲ್ಲ ರಸ್ತೆಗಳ ವಿಸ್ತರಣೆಯೊಂದಿಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಅಡ್ಡರಸ್ತೆ, ಒಳರಸ್ತೆ ಅಭಿವೃದ್ಧಿ ನಡೆದಿದೆ.
ಉಳ್ಳಾಲದಲ್ಲಿ ಮಾದರಿ ಆಸ್ಪತ್ರೆ
ಉಳ್ಳಾಲದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದ್ದು, ಅಲೋಪತಿ, ಆಯುಷ್‌ನ ಎಲ್ಲ ವಿಭಾಗಗಳು ಇರಲಿವೆ. ನಾಟೆಕಲ್ ಹೆಲ್ತ್ ಸೆಂಟರ್ ಅಭಿವೃದ್ಧಿ, ಅಂಬ್ಲಿಮೊಗರು, ಕುರ್ನಾಡು ಪಿಎಚ್ ಸಿಗಳ ಅಭಿವೃದ್ಧಿ ಮೇರೆಮಜಲು, ಬೋಳಿಯಾರ್ ನಲ್ಲಿ ಎಎನ್‌ಎಂ ಸೆಂಟರ್, ಹರೇಕಳ, ಕೋಟೆಕಾರಿನಲ್ಲಿ ಪಶು ಚಿಕಿತ್ಸಾ ಕೇಂದ್ರ ಅಭಿವೃದ್ಧಿ ಪಡಿಸಲಾಗಿದೆ.
ಶಿಕ್ಷಣಕ್ಕೆ ಒತ್ತು
ಮುಡಿಪುವಿನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮೂಲಕ ಕ್ಷೇತ್ರದ ಪ್ರಥಮ ಸರಕಾರಿ ಕಾಲೇಜು ಪ್ರಾರಂಭದ ಹೆಗ್ಗಳಿಕೆ, ಕುಂಪಲ ಮತ್ತು ಆಂಬ್ಲಿಮೊಗರುವಿನಲ್ಲಿ ಪ್ರೌಢ ಶಾಲೆ, ಮಂಜನಾಡಿ, ನಾಟೆಕಲ್‌ನಲ್ಲಿ ಅಲ್ಪಸಂಖ್ಯಾಕ ಹುಡುಗಿಯರ ಶಾಲೆ, ಪದವಿಪೂರ್ವ ಕಾಲೇಜು, ವಸತಿಗೃಹ, ಹುಡುಗರಆಂಗ್ಲ ಮಾಧ್ಯಮ ಶಾಲೆಗೆ ತಲಾ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಕ್ಷೇತ್ರದಲ್ಲಿ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಹರೇಕಳ ಗ್ರಾಮದ ಪಾವೂರು ಕಡವಿನಿಂದ ಅಡ್ಯಾರ್ ವರೆಗೆ ಡ್ಯಾಂ ರಚನೆಯೊಂದಿಗೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ 174 ಕೋ.ರೂ. ಯೋಜನೆ ಸಂಪುಟದಲ್ಲಿ ಅನುಮೋದನೆಗೊಂಡಿದೆ. ಈ ಯೋಜನೆಯಲ್ಲಿ 6 ಟಿಎಂಸಿ ನೀರು ಸಂಗ್ರಹದ ಗುರಿ ಇದ್ದು, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ನಿರಂತರ ನೀರು ಪೂರೈಕೆಯಾಗಲಿದೆ.
ಆರೋಗ್ಯ ಸಚಿವನಾಗಿದ್ದಾಗ ಹರೀಶ್ ಸಾಂತ್ವನ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ರಾಷ್ಟ್ರ ಪ್ರಶಸ್ತಿಗೂ ಪಾತ್ರನಾಗಿದ್ದೆ. ಆಹಾರ ಮತ್ತು ನಾಗರಿಕ ಪೂರೈಕೆ ಜವಾಬ್ದಾರಿ ಕೊಟ್ಟಾಗಲೂ ಪಡಿತರ ಚೀಟಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಸಿಗುವ ಕಾರ್ಯ, ಸೋರಿಕೆ ತಡೆ ಯಶಸ್ವಿಯಾಗಿ ಮಾಡಿದ್ದು, ಇಲ್ಲಿಯೂ ಅತ್ಯುತ್ತಮ ಅನುಷ್ಠಾನಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ ಎಂಬ ಸಂತಸವನ್ನು ಖಾದರ್ ವ್ಯಕ್ತಪಡಿಸುತ್ತಾರೆ.
ಜನಸೇವೆಯೇ ಧರ್ಮ
ನನ್ನ ಬಳಿ ಸಹಾಯ ಯಾಚಿಸಿ ಯಾರು ಬರುತ್ತಾರೋ ಅವರ ಬಳಿ ನಿಮ್ಮ ಜಾತಿ ಯಾವುದು, ಧರ್ಮ ಯಾವುದು ಎಂದು ಕೇಳಿಲ್ಲ. ನಿಮ್ಮ ಕಷ್ಟ ಏನು, ನಿಮಗೆ ಏನು ಕೆಲಸ ಆಗಬೇಕು ಎಂದು ಕೇಳಿದ್ದೇನೆ; ಪರಿಹರಿಸಲು ಸಾಧ್ಯವಿದ್ದರೆ ಖಂಡಿತ ಪರಿಹರಿಸುವೆ ಎಂಬ ಭರವಸೆ ನೀಡಿದ್ದೇನೆ. ಅದರ ಹೊರತು ಯಾರನ್ನು ಸತಾಯಿಸಿಲ್ಲ. ರಾಜಕೀಯದಲ್ಲಿ ಆರೋಪಗಳು ಸಹಜ. ದ್ವೇಷ ರಾಜಕೀಯ ಮಾಡದೆ ಅದನ್ನು ರಾಜಕೀಯ ಸ್ಫೂರ್ತಿಯಾಗಿ ತೆಗೆದುಕೊಂಡು ಮುನ್ನಡೆಯುವ ಕಾರ್ಯ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ 11,000 ಕುಟುಂಬಗಳಿಗೆ ಹಕ್ಕುಪತ್ರ, ಸ್ಥಳದಲ್ಲೇ ಪಡಿತರಚೀಟಿ ವಿತರಿಸುವ ಕಾರ್ಯ ಮಾಡಿದ್ದೇನೆ.
ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ ಇರುವ ಏಕೈಕ ಕ್ಷೇತ್ರ
ಉಳ್ಳಾಲದಲ್ಲಿ ನಗರ ಪಂಚಾಯತ್ ನಗರಸಭೆಯಾಗಿ ಮೇಲ್ದರ್ಜೆಗೆ, ಕೋಟೆಕಾರು ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿ ಅಭಿವೃದ್ದಿಗೆ ಬೇಕಾದ ಅನುದಾನಗಳು ಬಿಡುಗಡೆಯಾಗಿವೆ. ಇದೀಗ ರಾಜ್ಯದ ಅತೀ ದೊಡ್ಡ ಗ್ರಾಮವಾಗಿರುವ ಸೋಮೇಶ್ವರವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಎಲ್ಲಾ ಆಡಳಿತಾತ್ಮಕ ಕಾರ್ಯಗಳು ಮುಗಿದಿದ್ದು, ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ ಇರುವ ರಾಜ್ಯದ ಏಕೈಕ ಕ್ಷೇತ್ರ ಅದು ಮಂಗಳೂರು ವಿದಾನ ಸಭಾ ಕ್ಷೇತ್ರ ಎನ್ನುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಯು.ಟಿ. ಖಾದರ್.
ಯಾತ್ರಾ ಪ್ರವಾಸೋದ್ಯಮಕ್ಕೆ ಒತ್ತು
ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಮುದ್ರ ತೀರದೊಂದಿಗೆ ಯಾತ್ರಾ ಕ್ಷೇತ್ರವನ್ನು ಹೊಂದಿರುವ ಉಳ್ಳಾಲದಲ್ಲಿ ಯಾತ್ರಿ ನಿವಾಸಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಮುಡಿಪು ಚರ್ಚ್‌ನಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾರ್ಯ ಮುಗಿದಿದ್ದು, ಸೋಮೇಶ್ವರ ಸೋಮನಾಥ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಯಾತ್ರಿ ನಿವಾಸಕ್ಕೆ ಅನುದಾನ ನೀಡಲಾಗಿದೆ.
ಇದರೊಂದಿಗೆ ಎಲ್ಲ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ, ಜಾತಿ, ಸಮುದಾಯದ ಸಂಘಗಳಿಗೆ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ತೊಕ್ಕೊಟ್ಟು ಕೇಂದ್ರ ಸ್ಥಾನದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಾಣವಾಗಲಿದೆ ಎನ್ನುತ್ತಾರೆ ಖಾದರ್ ಅವರು.
ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.