ಪಾಣಾಜೆ ಗ್ರಾ.ಪಂ.: ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಒತ್ತಾಯ
Team Udayavani, Feb 23, 2017, 3:57 PM IST
ಪಾಣಾಜೆ : ಈ ವರ್ಷ ಪುತ್ತೂರು ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದೆ. ಹಾಗಾಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ತಾಲೂಕಿನಲ್ಲಿ ಕೊಳವೆ ಬಾವಿ ತೆರೆಯಲು ಅನುಮತಿ ನೀಡಬೇಕು. ಈ ಸಂಬಂಧ ಸರಕಾರಕ್ಕೆ ಬರೆಯಬೇಕೆಂದು ಪಾಣಾಜೆ ಗ್ರಾ.ಪಂ. ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು. ಪಾಣಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆ ಅಧ್ಯಕ್ಷ ನಾರಾಯಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಪಾಣಾಜೆ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್‌ನಲ್ಲಿ ಗುರುತಿನ ಚೀಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ನಾಗರತ್ನಾ ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥರು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಆಯಾ ಗ್ರಾಮ ಪಂಚಾಯತ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಪ್ರಸ್ತಾವಿಸಿದರು.
ಹೂಳೆತ್ತಲು ಅನುದಾನ ನೀಡಿ
ಕೆಲವು ಕೆರೆಗಳಲ್ಲಿ ಹೂಳು ತುಂಬಿದ ಕಾರಣ ನೀರಿನ ಪ್ರಮಾಣ ಕಡಿಮೆಯಾಗಿದೆ. ಸರಕಾರಿ ಕೆರೆಗಳ ಹೂಳೆತ್ತಲು ಅನುದಾನ ನೀಡುವಂತೆ ಖಾಸಗಿ ಕೆರೆಗಳ ಹೂಳೆತ್ತಲು ಸರಕಾರ ಅನುದಾನ ನೀಡಬೇಕು ಎಂದು ಗ್ರಾಮಸ್ಥರು ವಿಷಯ ಪ್ರಸ್ತಾವಿಸಿದರು.
ಎಲ್ಲ ಸೇವೆಗಳು ಸಿಗುವಂತಾಗಲಿ
ಜನರಿಗೆ ನೂರು ಯೋಜನೆಗಳ ಸೇವೆ ಒದಗಿಸಲು ಸರಕಾರ ಬಾಪೂಜಿ ಸೇವಾ ಕೇಂದ್ರವನ್ನು ಜಿಲ್ಲೆಯ 230 ಗ್ರಾಮ ಪಂಚಾಯತ್‌ಗಳಲ್ಲಿ ಆರಂಭಿಸಿದೆ. ಆದರೆ ಇದು ನಮ್ಮ ಪಂಚಾಯತ್‌ನಲ್ಲಿ ಸರಿಯಾಗಿ ಜಾರಿಯಲಿಲ್ಲ ಎಂದು ಅಬೂಬಕ್ಕರ್ ಹೇಳಿದರು. ಪಿಡಿಒ ಅವರು ಇದಕ್ಕೆ ಉತ್ತರಿಸಿ ನಮ್ಮಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಕೆಲವೇ ಸೇವೆಗಳು ದೊರೆಯುತ್ತಿವೆ. ನೂರು ಸೇವೆಗಳು ಒಂದೇ ಸೂರಿನಡಿ ಸಕಾಲಕ್ಕೆ ಸಿಗಲು ಸರಕಾರ ಸೇವಾ ಕೇಂದ್ರ ಆರಂಭಿಸಿದರೂ ಇಲ್ಲಿ ಮಾತ್ರ ಎಲ್ಲ ಸೇವೆಗಳು ಸಿಗದಿರಲು ನೆಟ್‌ವರ್ಕ್ ಸಮಸ್ಯೆಯೇ ಕಾರಣ ಎಂದು ತಿಳಿಸಿದರು.
ಪ.ಪೂ. ಕಾಲೇಜು ಸ್ಥಾಪಿಸಬೇಕು
ಪಾಣಾಜೆಯಿಂದ ಪದವಿಪೂರ್ವ ಶಿಕ್ಷಣಕ್ಕೆ ಬೇರೆ ಪ್ರದೇಶಕ್ಕೆ ಹೋಗಬೇಕಾಗಿದೆ. ಆದುದರಿಂದ ಇಲ್ಲಿ ಕಾಲೇಜು ಆರಂಭಿಸಲು ಸರಕಾರ ಕ್ರಮ ಕೈಗೋಳ್ಳಬೇಕು. ಇಲ್ಲಿನ ಅನುದಾನಿತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ನೂರು ವರ್ಷ ದಾಟಿದ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿ, ಆಟದ ಮೈದಾನದ ವ್ಯವಸ್ಥೆ, ಸ್ಟೇಡಿಯಂ ನಿರ್ಮಾಣ, ಕಂಪ್ಯೂಟರ್ ಶಿಕ್ಷಣ ಮೊದಲಾದ ಮೂಲ ಸೌಕರ್ಯ ಒದಗಿಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಸಿಟಿ ಬಸ್ ವ್ಯವಸ್ಥೆ ಬೇಕು
ಪುತ್ತೂರಿಂದ ಆರ್ಲಪದವುವಿಗೆ ಧೂಮಡ್ಕ, ಒಡ್ಯ, ಕಲ್ಲಪದವು, ನೀರಮೂಲೆ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕು. ಪುತ್ತೂರು ಆರ್ಲಪದವು ಮಾರ್ಗವಾಗಿ ಕಾಸರಗೋಡಿಗೆ ಬರುತ್ತಿದ್ದ ಸರಕಾರಿ ಬಸ್ ಈಗ ಸ್ಥಗಿತಗೊಂಡಿದೆ. ಅದನ್ನು ಪುನರಾಂಭಿಸಬೇಕು. ಕಡಂದೇಲು ಗಿಳಿಯಾಲು ಜಾಂಬ್ರಿ ಗುಹೆ ರಸ್ತೆ ಅಭಿವೃದ್ಧಿಪಡಿಸಬೇಕು. ಜಾತ್ರೆ ಸಮಯದಲ್ಲಿ ಬಂಡಾರ ಹೋಗುವ ಕೊಂಡೆಪ್ಪಾಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಗ್ರಾಮಸ್ಥರು ವಿಷಯ ಪ್ರಸ್ತಾಪಿಸಿದರು.
ಪಿಡಿಒ ಖಾಯಂಗೊಳಿಸಿ
ಪ್ರಸ್ತುತ ಪಿಡಿಒ ಅವರು ಪ್ರಭಾರ ನೆಲೆಯಲ್ಲಿ ಕೆಲಸಮಾಡುತ್ತಿದ್ದಾರೆ. ಅವರನ್ನು ನಾವು ಇಲ್ಲಿಯೇ ಉಳಿಸಿ ಕೊಳ್ಳಬೇಕಾಗಿದೆ. ಆದುದರಿಂದ ಅವರನ್ನು ಖಾಯಂ ಗೊಳಿಸುವಂತೆ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಸಾಲ ಮನ್ನಾ ಮಾಡಿ
ಬೆಳೆ ನಷ್ಟ ಮತ್ತು ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ಆದುದರಿಂದ ಮುಂದಿನ ಬಜೆಟ್‌ನಲ್ಲಿ ರೈತರ ಸಾಲವನ್ನು ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರಾದ ರವೀಂದ್ರ ಭಂಡಾರಿ ಬೈಂಕ್ರೋಡು ಹಾಗೂ ಬಾಬು ರೈ ಕೋಟೆ ಮತ್ತಿತರರು ಒತ್ತಾಯಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜತ್ತಪ್ಪ ಗೌಡ, ಪಶು ವೈದ್ಯಕೀಯ ಇಲಾಖೆಯ ವೈದ್ಯಧಿಕಾರಿ ಡಾ| ಪುಷ್ಪರಾಜ್, ಅರಣ್ಯ ಇಲಾಖೆಯಿಂದ ನಾರಾಯಣ, ಪಂಚಾಯತ್ ರಾಜ್ ಇಲಾಖೆಯಿಂದ ಎಂಜಿನಿಯರ್ ಸಂದೀಪ್, ತೋಟಗಾರಿಕೆ ಇಲಾಖೆಯ ಹೊಳೆಬಸಪ್ಪ ಕುಂಬಾರ, ಸಂಪ್ಯ ಠಾಣೆಯ ಕುಮಾರ ಸ್ವಾಮಿ, ಪಾಣಾಜೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ನಮಿತಾ ನಾಯಕ್, ಮೆಸ್ಕಾಂ ಬೆಟ್ಟಂಪಾಡಿಯ ಉಪಕೇಂದ್ರದ ಸ್ವರ್ಣಲತಾ ಮಾಹಿತಿ ನೀಡಿದರು.
ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ನವೀನ್ ಭಂಡಾರಿ, ಸಭೆಯ ನೋಡಲ್ ಅಧಿಕಾರಿಯಾಗಿದ್ದರು.
ಬಸವ ವಸತಿ ಯೋಜನೆಯಲ್ಲಿ ಮಂಜೂರಾದ 21 ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ವಿತರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಶಾಹುಲ್ ಹಮೀದ್, ಜಗನ್ಮೋಹನ್ ರೈ, ಜಯಂತ್ ಕುಮಾರ್, ಮೈಮುನಾತುಲ್ ಮೆಹ್ರಾ, ರತ್ನಾ ಕುಮಾರಿ, ಯಶೋದಾ ಉಪಸ್ಥಿತರಿದ್ದರು.
ಪಿಡಿಒ ಸುರೇಂದ್ರ ರೈ ಸ್ವಾಗತಿಸಿ, ವರದಿ ಮಂಡಿಸಿ ವಂದಿಸಿದರು. ಸಿಬಂದಿ ವಿಶ್ವನಾಥ ನಾಯ್ಕ, ಅರುಣ್ ಕುಮಾರ್, ಸೌಮ್ಯಾ, ರೂಪಾಶ್ರೀ ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.