ಟೇಕಾಫ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದ ಎಂಜಿನ್‌ನಿಂದ ಹೊಗೆ
Team Udayavani, Mar 15, 2018, 8:00 AM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಬುಧವಾರ 31 ಪ್ರಯಾಣಿಕರನ್ನು ಹೊತ್ತು ಹೈದರಾಬಾದ್‌ಗೆ ಹೊರಟ ಸ್ಪೈಸ್ ಜೆಟ್ ವಿಮಾನವು ಟೇಕಾಫ್ ಗೆ ಸಿದ್ಧತೆ ನಡೆಸುತ್ತಿದ್ದಾಗ ಎಂಜಿನ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತತ್‌ಕ್ಷಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬೋರ್ಡಿಂಗ್ ಆಗಿ ರನ್‌ವೇಯಿಂದ ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ದೊಡ್ಡ ಮಟ್ಟದ ತಾಂತ್ರಿಕ ದೋಷ ಕಾಣಿಸಿಕೊಂಡು ಹಾರಾಟವನ್ನೇ ರದ್ದುಪಡಿಸಿ ಪ್ರಯಾಣಿಕರೆಲ್ಲರನ್ನು ಬಚಾವ್ ಮಾಡಿರುವುದು ಇತ್ತೀಚಿನ ತಿಂಗಳುಗಳಲ್ಲಿ ನಡೆದಿರುವ 3ನೇ ಪ್ರಕರಣ ಇದಾಗಿದೆ. ಎಂಜಿನ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಡಿಗೋ ಹಾಗೂ ಗೋಏರ್ ಕಂಪೆನಿಯ 65 ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ರೀತಿಯ ಘಟನೆ ನಡೆದಿರುವುದು ಗಮನಾರ್ಹ.
ನಿಗದಿಯಂತೆ ಬುಧವಾರ ಬೆಳಗ್ಗೆ ಸುಮಾರು 8.50ಕ್ಕೆ ಸ್ಪೈಸ್ ಜೆಟ್‌ನ ಬೊಂಬಾರ್ಡಿಯರ್ ವಿಮಾನ ಹೊರಡಬೇಕಿತ್ತು. ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿಸಿಕೊಂಡು ವಿಮಾನ ರನ್‌ವೇ ಕಡೆಗೆ ತೆರಳುವಷ್ಟರಲ್ಲಿ ಎಂಜಿನ್‌ನಿಂದ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ಹತ್ತಿಕೊಳ್ಳುವ ಭೀತಿ ಎದುರಾಯಿತು. ತತ್‌ಕ್ಷಣ ಪೈಲಟ್ ವಿಮಾನವನ್ನು ಅಲ್ಲೇ ನಿಲ್ಲಿಸಿ ತಾಂತ್ರಿಕ ದೋಷದ ಬಗ್ಗೆ ವಿಮಾನ ಸಂಚಾರ ನಿಯಂತ್ರಣ ಕೇಂದ್ರ (ಎಟಿಸಿ)ಕ್ಕೆ ತುರ್ತು ಮಾಹಿತಿ ರವಾನಿಸಿದರು. ತತ್‌ಕ್ಷಣಕ್ಕೆ ಅಗ್ನಿಶಾಮಕ ದಳ ಸೇರಿದಂತೆ ಎಲ್ಲ ತುರ್ತು ಕಾರ್ಯಾಚರಣೆ
ವಿಭಾಗದವರು ಸ್ಥಳಕ್ಕೆ ದೌಡಾಯಿಸಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂಜಿನ್‌ನಿಂದ ಹೊಗೆ ಬರುತ್ತಿರುವುದು ಪೈಲಟ್‌ನ ಗಮನಕ್ಕೆ ಬಾರದೇ ಹೋಗಿದ್ದರೆ, ವಿಮಾನವು ಕೆಲವೇ ಕ್ಷಣಗಳಲ್ಲಿ ಆಗಸಕ್ಕೆ ಹಾರಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಅಪಾಯವಿತ್ತು. ಪೈಲಟ್‌ನ ಸಮಯ ಪ್ರಜ್ಞೆ ಹಾಗೂ ವಿಮಾನ ನಿಲ್ದಾಣದ ತುರ್ತು ಕಾರ್ಯಾಚರಣೆ ವಿಭಾಗ ಸಿಬಂದಿಯ ಮುನ್ನೆಚ್ಚರಿಕೆಯಿಂದಾಗ ಎಲ್ಲ ಪ್ರಯಾಣಿಕರನ್ನು ಪಾರು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಉನ್ನತ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.
ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ಡ್ಯೂಟಿ ಆಫೀಸರ್ ಆಶಿಕ್‌ರಾಜ್ ಅವರು, ‘ತಾಂತ್ರಿಕ ದೋಷದಿಂದಾಗಿ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿರುವುದು ನಿಜ. ತಾಂತ್ರಿಕ ದೋಷ ಎಂದು ಪರಿಗಣಿಸಿ ವಿಮಾನದ ಹಾರಾಟವನ್ನೇ ರದ್ದುಪಡಿಸಲಾಗಿದೆ. 70ಕ್ಕೂ ಅಧಿಕ ಪ್ರಯಾಣಿಕರ ಸಾಮರ್ಥ್ಯದ ಸಣ್ಣ ವಿಮಾನವಾಗಿದ್ದರೂ ಕೇವಲ 31 ಮಂದಿ ಪ್ರಯಾಣಿಕರಷ್ಟೇ ಅದರಲ್ಲಿ ಇದ್ದರು. ಆದ್ದರಿಂದ ಹೊಗೆ ಕಾಣಿಸಿಕೊಂಡ ತತ್‌ಕ್ಷಣ ಎಲ್ಲರನ್ನು ಕೆಳಗಿಳಿಸಲು ಸಾಧ್ಯವಾಯಿತು. ಎಲ್ಲ ಪ್ರಯಾಣಿಕರನ್ನೂ ಬೇರೆ ವಿಮಾನಗಳಲ್ಲಿ ಹೈದರಾಬಾದ್‌ಗೆ ಕಳುಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿರುವ ಕಾರಣ, ಆ ವಿಮಾನದ ಹಾರಾಟವನ್ನು ಮುಂದುವರಿಸುವುದು ಸಾಧ್ಯವಿಲ್ಲ. ಹೊಸ ಎಂಜಿನ್ ತರಿಸಿಕೊಂಡ ಅನಂತರವಷ್ಟೇ ಹಾರಾಟವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ಈ ಘಟನೆಯನ್ನು ನಮ್ಮ ಸಂಸ್ಥೆಯು ತಾಂತ್ರಿಕವಾಗಿ ಗಂಭೀರ ಘಟನೆ ಎಂದು ಪರಿಗಣಿಸಿದೆ’ ಎಂದು ಅವರು ‘ಉದಯವಾಣಿ’ಗೆ ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್, ‘ತಾಂತ್ರಿಕ ದೋಷದಿಂದಾಗಿ ಸ್ಪೈಸ್ ಜೆಟ್‌ನ ಮಂಗಳೂರು – ಹೈದರಾಬಾದ್ ವಿಮಾನ ಬುಧವಾರ ಬೆಳಗ್ಗೆ ಹಾರಾಟವನ್ನು ರದ್ದುಪಡಿಸಿರುವ ಬಗ್ಗೆ ಕಂಪೆನಿ ಕಡೆಯಿಂದ ನಮಗೆ ವರದಿ ಬಂದಿದೆ. ಆ ವಿಮಾನದಲ್ಲಿ ತೆರಳಬೇಕಾಗಿದ್ದ ಎಲ್ಲ ಪ್ರಯಾಣಿಕರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ’ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇದು 3ನೇ ಘಟನೆ !
ಕಳೆದ ಐದು ತಿಂಗಳ ಅಂತರದಲ್ಲಿ ಈ ರೀತಿ ದೊಡ್ಡ ಮಟ್ಟದ ತಾಂತ್ರಿಕ ದೋಷದಿಂದಾಗಿ ರನ್‌ವೇ ತನಕ ಹೋಗಿ ಪ್ರಯಾಣಿಕರನ್ನು ತುರ್ತು ಕೆಳಗಿಳಿಸಿ ವಿಮಾನದ ಹಾರಾಟವನ್ನೇ ರದ್ದುಪಡಿಸಿದ 3ನೇ ಪ್ರಕರಣವಿದು. ಕಳೆದ ಡಿಸೆಂಬರ್‌ನಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತು ಮುಂಬಯಿಗೆ ಹಾರಲು ಸಿದ್ಧವಾಗಿದ್ದ ಜೆಟ್ ಏರ್‌ವೇಸ್‌ನ ವಿಮಾನ ಕೂಡ ತಾಂತ್ರಿಕ ದೋಷದಿಂದಾಗಿ ಹಾರಾಟವನ್ನೇ ರದ್ದುಪಡಿಸಿತ್ತು. ಅದಕ್ಕೂ ಮೊದಲು 2017ರ ಸೆ. 21ರಂದು 173 ಪ್ರಯಾಣಿಕರನ್ನು ಹೊತ್ತು ದೋಹಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ಟೇಕಾಫ್ ಆದ ಅರ್ಧಗಂಟೆಯಲ್ಲೇ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿದ ಅಪಾಯಕಾರಿ ಸನ್ನಿವೇಶ ಕೂಡ ನಡೆದಿತ್ತು. ಆ ಘಟನೆಯಲ್ಲಿ, ವಿಮಾನದಲ್ಲಿದ್ದ ಎಲ್ಲ 173 ಮಂದಿ ಪ್ರಯಾಣಿಕರು ಪವಾಡಸದೃಶ ಪ್ರಾಣಾಪಾಯದಿಂದ ಪಾರಾಗಿದ್ದರು.
– ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.