ಆಸ್ಪತ್ರೆಗಳಲ್ಲಿ ತಂತ್ರಜ್ಞರು,ಫಾರ್ಮಸಿಸ್ಟ್ ಗಳ ಕೊರತೆ
ಹೊಸ ಟೆಂಡರ್‌ಗೆ ನೀತಿಸಂಹಿತೆ ಅಡ್ಡಿ
Team Udayavani, Apr 11, 2019, 6:06 AM IST
ಸಾಂದರ್ಭಿಕ ಚಿತ್ರ.
ಸುಬ್ರಹ್ಮಣ್ಯ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಿರಿಯ ಪ್ರಯೋಗಾಲಯ ತಂತ್ರಜ್ಞರು, ಫಾರ್ಮಸಿಸ್ಟ್ ಸಿಬಂದಿಯ ಸೇವೆಯನ್ನು ಎ. 1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪರಿಣಾಮವಾಗಿ ಸರಕಾರಿ ಆಸ್ಪತ್ರೆಗಳ “ಇಲ್ಲ’ಗಳ ಯಾದಿಯಲ್ಲಿ ಇವೆರಡು ಸೇರ್ಪಡೆಯಾಗಿದ್ದು, ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಆದೇಶದಂತೆ ಈ ಎರಡು ವಿಭಾಗಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿ ಎ. 1ರಿಂದ ಕೆಲಸ ಸ್ಥಗಿತಗೊಳಿಸಿದ್ದಾರೆ. ಹಾಲಿ ಇರುವ ಸಿಬಂದಿಯ ಗುತ್ತಿಗೆ ಅವಧಿ ಮಾ. 31ಕ್ಕೆ ಮುಗಿದಿದೆ. ಹೊಸದಾಗಿ ಸಿಬಂದಿ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಲು ಟೆಂಡರ್ ಕರೆಯುವುದಕ್ಕೆ ಚುನಾವಣ ನೀತಿ ಸಂಹಿತೆ ಅಡ್ಡಿಯಾಗಿದೆ.
ಕೆಲವೇ ಆಸ್ಪತ್ರೆಗಳಲ್ಲಿ ಖಾಯಂ ಕಿರಿಯ ಪ್ರಯೋಗಾಲಯ ತಂತ್ರಜ್ಞರು, ಫಾರ್ಮಸಿಸ್ಟ್‌ಗಳು ಇದ್ದು, ಉಳಿದೆಲ್ಲ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾದಿಯರು, ಡಿ ಗ್ರೂಪ್ ನೌಕರರು, ಕಿರಿಯ ಪ್ರಯೋಗ ತಂತ್ರಜ್ಞರು ಮತ್ತು ಫಾರ್ಮಸಿಸ್ಟ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.
ರೋಗಿಗಳಿಗೆ ತೊಂದರೆ
ಕಿರಿಯ ಪ್ರಯೋಗಾಲಯ ತಂತ್ರಜ್ಞರು ಮತ್ತು ಫಾರ್ಮಸಿಸ್ಟ್ ಗಳ ಸೇವೆ ದೊರಕದೆ ರಕ್ತ ಪರೀಕ್ಷೆ, ತಪಾಸಣೆಗಳಿಗೆ ಅಡ್ಡಿಯಾಗಿದ್ದು, ರೋಗಿಗಳು ಖಾಸಗಿ ಪ್ರಯೋಗಾ ಲಯಗಳು, ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ತೀರಾ ಅನನುಕೂಲವಾಗಿದೆ.
ದ.ಕ. ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ 26 ಮಂದಿ ಹೊರಗುತ್ತಿಗೆ ಕಿರಿಯ ಪ್ರಯೋಗ ತಂತ್ರಜ್ಞರು ಸೇವೆಯಲ್ಲಿದ್ದರು. 10 ಹುದ್ದೆಗಳು ಭರ್ತಿಗೆ ಬಾಕಿ ಇವೆ. ಫಾರ್ಮಸಿಸ್ಟ್ 38 ಹುದ್ದೆಗಳು ಭರ್ತಿಯಾಗಬೇಕಿದ್ದು, 10 ಮಂದಿ ಕರ್ತವ್ಯದಲ್ಲಿದ್ದರು.
ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಹೊಸ ಟೆಂಡರು ಪ್ರಕ್ರಿಯೆ ಆಗದು. ನೀತಿ ಸಂಹಿತೆ ಇದ್ದಾಗಲೂ ಸಿಬಂದಿಯ ಸೇವೆಯನ್ನು ಮುಂದುವರಿಸಬಹುದು. ಆದರೆ ಸರಕಾರದಿಂದ ಬಜೆಟ್‌ಗೆ ಸಂಬಂಧಿಸಿ ಬಂದಿರುವ ಒಂದು ಆದೇಶ ಮುಂದುವರಿಕೆಗೆ ಅಡ್ಡಿಯಾಗಿದೆ.
– ಉದಯ, ಸಹಾಯಕ ಆಡಳಿತಾಧಿಕಾರಿ, ದ.ಕ.ಜಿಲ್ಲಾ ಆರೋಗ್ಯ ಇಲಾಖೆ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.