ಪಠ್ಯಪುಸ್ತಕ ಮುದ್ರಣ ಬೆಲೆ; ಪಾವತಿಸಿದ ಬೆಲೆಯಲ್ಲಿ ವ್ಯತ್ಯಾಸ
ಅನುದಾನ ರಹಿತ ಶಾಲೆಗಳ ಮೇಲೆ ಸಂಶಯ?
Team Udayavani, Jun 1, 2019, 10:09 AM IST
ಉಪ್ಪಿನಂಗಡಿ: ಶಾಲೆಗಳು ಆರಂಭವಾಗಿದ್ದು, ಪಠ್ಯಪುಸ್ತಕಗಳೂ ಸರಬರಾಜಾಗಿವೆ. ಆದರೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸರಬರಾಜಾದ ಪುಸ್ತಕದಲ್ಲಿರುವ ಮುದ್ರಣ ಬೆಲೆಗೂ ಕರ್ನಾಟಕ ಪಠ್ಯಪುಸ್ತಕ ಸಂಘದವರು ಅನುದಾನರಹಿತ ಖಾಸಗಿ ಶಾಲೆಗಳಿಂದ ಪಡೆದುಕೊಂಡಿರುವ ಬೆಲೆಗೂ ಸಾಕಷ್ಟು ವ್ಯತ್ಯಾಸ ಇದೆ. ಇದರಿಂದ ಪೋಷಕರ ಸಂಶಯದ ಕೆಂಗಣ್ಣಿಗೆ ಗುರಿಯಾಗುವ ಸ್ಥಿತಿ ಈ ಶಾಲೆಗಳದ್ದು.
ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸರಕಾರದಿಂದ ಪಠ್ಯ ಪುಸ್ತಕಗಳು ಉಚಿತವಾಗಿ ಸರಬರಾಜಾ ಗುತ್ತದೆ. ಆದರೆ ಅನುದಾನ ರಹಿತ ಖಾಸಗಿ ಶಾಲೆಗಳು ಪುಸ್ತಕಗಳನ್ನು ಹಣ ತೆತ್ತು ಪಡೆದುಕೊಳ್ಳಬೇಕು. ಎಷ್ಟು ಪುಸ್ತಕಗಳು ಬೇಕು ಎಂಬುದು ಶಾಲಾ ರಂಭದ ಮೊದಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಇಂಡೆಂಟ್ ಸಲ್ಲಿಸಬೇಕು ಮತ್ತು ಮುಂಚಿತವಾಗಿ ಬೆಂಗಳೂರಿನಲ್ಲಿರುವ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಡಿಡಿ ರೂಪದಲ್ಲಿ ಹಣ ಪಾವತಿಸಬೇಕು.
ಈ ವರ್ಷದಿಂದ ದರ ಏರಿಕೆ ಮಾಡಿದ್ದು, ಇದಕ್ಕೆ ಅನುಗುಣವಾಗಿ ಅನುದಾನ ರಹಿತ ಶಾಲೆ ಗಳಿಂದ ಪಠ್ಯಪುಸ್ತಕ ಸಂಘವು ಹಣ ಪಡೆದುಕೊಂಡಿದೆ. ಆದರೆ ವಿತರಿಸಿದ ಪಠ್ಯ ಪುಸ್ತಕಗಳಲ್ಲಿ ಮುದ್ರಿತವಾಗಿರುವ ದರ ಕಡಿಮೆ ಇದೆ.
ಉದಾಹರಣೆಗೆ, ಐದನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ಶಾಲೆಗಳು 55 ರೂ. ಪಾವತಿಸಿದ್ದರೆ ಮುದ್ರಣ ಬೆಲೆ 37 ರೂ. ಆಗಿದೆ. ಅಂದರೆ 18 ರೂ. ವ್ಯತ್ಯಾಸ. ಅದೇ ತರಗತಿಯ ಇಂಗ್ಲಿಷ್ ಪುಸ್ತಕಕ್ಕೆ 55 ರೂ. ಪಾವತಿಸಿದ್ದರೆ, ಮುದ್ರಣ ಬೆಲೆ 28 ರೂ., ಗಣಿತ (ಪ್ರಥಮ)ಕ್ಕೆ 55 ರೂ.; ಮುದ್ರಣ ಬೆಲೆ 24 ರೂ., ಗಣಿತ (ದ್ವಿತೀಯ)ಕ್ಕೆ 55 ರೂ.; ಮುದ್ರಣ ಬೆಲೆ 25 ರೂ., ಪರಿಸರ ಅಧ್ಯಯನಕ್ಕೆ 55 ರೂ; ಮುದ್ರಣ ಬೆಲೆ 67 ರೂ. ಇವೆ. ಒಂದನೆಯಿಂದ ಹತ್ತನೇ ತರಗತಿಯ ವರೆಗೆ ಹಲವು ವಿಷಯಗಳ ಪಠ್ಯಪುಸ್ತಕಗಳಲ್ಲಿ ಇಂತಹುದೇ ವ್ಯತ್ಯಾಸವಿದೆ.
ಖಾಸಗಿ ಶಾಲೆಗಳಿಗೆ ತಲೆನೋವು
ಅನುದಾನರಹಿತ ಶಾಲೆಗಳು ಪುಸ್ತಕಗಳಿಗೆ ಹಣವನ್ನು ಮಕ್ಕಳಿಂದ ಪಡೆದುಕೊಳ್ಳಬೇಕು. ಇಲ್ಲಿ ಶಾಲೆಗಳು ಒಂದೊಂದು ಪುಸ್ತಕಕ್ಕೆ ಪಾವತಿಸಿದ ಹಣಕ್ಕೂ ಮುದ್ರಿತ ಬೆಲೆಗೂ ವ್ಯತ್ಯಾಸವಿದ್ದು, ಮುದ್ರಣ ಬೆಲೆಗಿಂತ ಹೆಚ್ಚು ಪೋಷಕರು ಒಪ್ಪುತ್ತಿಲ್ಲ. ಜತೆಗೆ ಸಂಶಯದಿಂದ ನೋಡುವಂತಾಗಿದೆ.
ಈ ಬಾರಿ ಪಠ್ಯ ಪುಸ್ತಕಗಳ ಬೆಲೆ ಹೆಚ್ಚಳ ಮಾಡಲಾಗಿದ್ದು, ಆದ್ದರಿಂದ ಪುಸ್ತಕ ಸರಬರಾಜು ಮಾಡುವಾಗ ಹೊಸ ಬೆಲೆಯ ಸ್ಟಿಕ್ಕರ್ ಅಂಟಿಸಿ, ಅದಕ್ಕೆ ಸೀಲ್ ಹಾಕಿ ಕೊಡಲು ವೀಡಿಯೋ ಕಾನ್ಫರೆನ್ಸ್‌ನಲ್ಲಿ ನಮಗೆ ಸೂಚನೆ ಬಂದಿತ್ತು. ನಮ್ಮ ಹಂತದಲ್ಲಿ ಆ ಕೆಲಸ ಆಗಬೇಕಿತ್ತು. ಆದರೆ ನಮ್ಮ ವ್ಯಾಪ್ತಿಯೊಳಗೆ ಸಾವಿರಾರು ಪುಸ್ತಕಗಳ ಬೇಡಿಕೆಯಿದ್ದು, ಅದೆಲ್ಲ ಬಂದ ಬಳಿಕ ಎಲ್ಲ ಪುಸ್ತಕಗಳಿಗೆ ಸ್ಟಿಕ್ಕರ್ ಅಂಟಿಸಿ, ಸೀಲ್ ಹಾಕಿ ಪೂರೈಸುವಾಗ ವಿಳಂಬವಾಗುವ ಸಾಧ್ಯತೆ ಇತ್ತು. ಶೀಘ್ರವಾಗಿ ಶಾಲೆಗಳಿಗೆ ಪುಸ್ತಕ ಪೂರೈಕೆಯಾಗಬೇಕೆಂಬ ಉದ್ದೇಶದಿಂದ ಕೆಲವು ಕಡೆ ಹೊಸ ದರಪಟ್ಟಿಯನ್ನು ಅಂಟಿಸದೆ ಹಾಗೆಯೇ ಕೊಡಲಾಗಿದೆ.
– ಸುಕನ್ಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು
ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ನಾವು ಪಾವತಿಸಿದ್ದು ಮತ್ತು ಸರಬರಾಜಾಗಿರುವ ಪುಸ್ತಕಗಳ ಮುದ್ರಣ ಬೆಲೆಯಲ್ಲಿ ಭಾರೀ ವ್ಯತ್ಯಾಸ ಇದೆ. ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕಗಳ ಬೆಲೆ ಏರಿಕೆಯಾಗಿದ್ದು, ಆ ಪ್ರಕಾರ ಬೆಲೆ ವಸೂಲು ಮಾಡಲಾಗಿತ್ತು. ಕಡಿಮೆ ಮುದ್ರಣ ದರ ಇರುವ ಪುಸ್ತಕಗಳನ್ನು ನಾವು ವಿದ್ಯಾರ್ಥಿಗಳಿಗೆ ಕೊಟ್ಟು ಅವರಿಂದ ನಾವು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಪಾವತಿಸಿದ ಹಣವನ್ನು ಪಡೆಯಬೇಕಿದ್ದು, ಅನಗತ್ಯವಾಗಿ ಸಂಶಯಕ್ಕೆ ಸಿಲುಕುವಂತಾಗಿದೆ. ಇಲಾಖೆಗಳ ಈ ಎಡವಟ್ಟಿನಿಂದಾಗಿ ಅನುದಾನ ರಹಿತ ಶಾಲೆಗಳವರು ವಿನಾಕಾರಣ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗಿದೆ.
– ಯು.ಜಿ. ರಾಧಾ ಸಂಚಾಲಕರು, ಶ್ರೀರಾಮ ಶಾಲೆ, ನಟ್ಟಿಬೈಲ್, ಉಪ್ಪಿನಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.