ಕಾರ್ಕಳದಿಂದ ಮೂಲ್ಕಿಗೆ ಮಗು ಕರೆದುಕೊಂಡು ಬರುತ್ತಾರೆ
Team Udayavani, Jan 29, 2018, 10:47 AM IST
ಮೂಲ್ಕಿ : ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಹೆತ್ತವರು ಸರಕಾರಿ ಕನ್ನಡ ಶಾಲೆ ಉಳಿಸಲೆಂದೇ 60 ಕಿ.ಮೀ.ಗೂ ಹೆಚ್ಚು ದೂರ ನಿತ್ಯವೂ ಪ್ರಯಾಣಿಸುತ್ತಿದ್ದಾರೆ! ಕನ್ನಡ ಶಾಲೆ ಬಗ್ಗೆ ಇಂತಹ ಕಾಳಜಿ ಹೊಂದಿದವರು ಅಪರೂಪವಾದರೂ ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಜಿ.ಪಂ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ.
ನಾಲ್ಕೇ ವಿದ್ಯಾರ್ಥಿಗಳು!
ಕಿಲ್ಪಾಡಿ ಶಾಲೆಯಲ್ಲಿ 1ರಿಂದ 5ರ ವರೆಗೆ ಶಿಕ್ಷಣ ನೀಡಲಾಗುತ್ತಿದ್ದು ಇಲ್ಲಿ 2ನೇ ತರಗತಿಯಲ್ಲಿ ಒಬ್ಬಳು, 3ನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿ, 5ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿನಿ ಸೇರಿ ಒಟ್ಟು ನಾಲ್ಕು ಮಂದಿ ಇದ್ದಾರೆ. ಮುಂದಿನ ವರ್ಷದಿಂದ 5ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗುತ್ತಾರೆ. ಆಗ ಉಳಿಯೋದು ಇಬ್ಬರೇ ವಿದ್ಯಾರ್ಥಿಗಳು!
ಕಾರ್ಕಳದಿಂದ ನಿತ್ಯ ಪ್ರಯಾಣ
ಕೆಲವು ತಿಂಗಳ ಹಿಂದೆ 2ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಪೋಷಕರ ವಾಸ್ತವ್ಯ ಕಾರ್ಕಳಕ್ಕೆ ಬದಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಶಾಲೆ ಬದಲಾಯಿಸಲು ವರ್ಗಾವಣೆ ಪತ್ರ ಕೇಳಿದಾಗ, ಶಿಕ್ಷಕರು ಆಕೆ ಶಾಲೆ ಬಿಟ್ಟರೆ ಶಾಲೆಯೇ ಮುಚ್ಚುವ ಬಗ್ಗೆ ಹೇಳಿದ್ದಾರೆ. ಇದರಿಂದ ನೊಂದ ಹೆತ್ತವರು, ಶಾಲೆ ಮುಚ್ಚಬಾರದೆಂದು ನಿರ್ಧರಿಸಿದ್ದಾರೆ. ಅನಂತರ ನಿತ್ಯವೂ ತಾಯಿ ಮತ್ತು ವಿದ್ಯಾರ್ಥಿನಿ ಕಾರ್ಕಳದಿಂದ ದಿನಕ್ಕೆ 70 ರೂ. ಖರ್ಚು ಮಾಡಿ 60 ಕಿ.ಮೀ.ಗೂ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಆದರೆ ಮುಂದಿನ ವರ್ಷ ಮತ್ತೆರಡು ವಿದ್ಯಾರ್ಥಿಗಳು ತೇರ್ಗಡೆ ಆಗುವುದರಿಂದ ಶಾಲೆಯ ಭವಿಷ್ಯ ಮಂಕಾಗಿದೆ. ಇನ್ನು, 4 ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ತಯಾರಿಸುವ ಮಹಿಳೆಯೋರ್ವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.
ಶಿಕ್ಷಕರ ಪ್ರಯತ್ನ
ಶಾಲೆ ಮುಚ್ಚಬಾರದೆಂದು ಶಿಕ್ಷಕರೂ ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸಲು ವಿನಂತಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಎಷ್ಟೇ ಸೌಲಭ್ಯ ಕಲ್ಪಿಸಿದರೂ ಶಾಲೆಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ ಎಂಬಂತಾಗಿದೆ.
ಇತ್ತೀಚೆಗಿನ ಗ್ರಾಮ ಸಭೆಯ ಮಾಹಿತಿಯಂತೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಈ ಶಾಲೆಯ ಕಟ್ಟಡ ಅಭಿವೃದ್ಧಿಗೆ ತಮ್ಮ ಅನುದಾನವನ್ನು ಕಾಯ್ದಿರಿಸಿದ್ದರು. ಕಟ್ಟಡದ ಛಾವಣಿಯನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಮತ್ತು ತಾ.ಪಂ. ಸದಸ್ಯ ಶರತ್ ಕುಬೆವೂರು ಮುಂದಾಗಿದ್ದರು.
ಶಾಲೆ ಉಳಿಯಬೇಕೆಂಬ ಆಸೆ
ನಾನು ಕಲಿತ ಶಾಲೆ ಉಳಿಯ ಬೇಕು ಎಂಬ ಆಸೆ ನನ್ನದು. ಸಮೀಪದ ಮಾನಂಪಾಡಿ ಶಾಲೆಯಂತೆ ಆಂಗ್ಲಮಾಧ್ಯಮ ವ್ಯವಸ್ಥೆಗೆ ಪ್ರಯತ್ನ ಮಾಡುತ್ತಿದ್ದೇವೆ. ಹಳೆ ವಿದ್ಯಾರ್ಥಿಗಳ ಸಭೆ ನಡೆಸಿ ಶಾಲೆ ಮುಚ್ಚದಂತೆ ತಡೆಯುವ ಪ್ರಯತ್ನ ಮಾಡುವೆ.
– ಶರತ್ ಕುಬೆವೂರು, ತಾ.ಪಂ.
ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿ
ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.