ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ನಿಫಾ ಕಟ್ಟೆಚ್ಚರ
Team Udayavani, May 22, 2018, 6:00 AM IST
ಮಂಗಳೂರು: ಮಾರಣಾಂತಿಕ ಹಾಗೂ ಅಪರೂಪದ ನಿಫಾ ವೈರಸ್ ಸೋಂಕು ರೋಗಕ್ಕೆ ಕೇರಳದಲ್ಲಿ ಕನಿಷ್ಠ ಒಂಬತ್ತು ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ಆತಂಕ ಮನೆ ಮಾಡಿದೆ. ಕೇರಳದಿಂದ ಹೆಚ್ಚಿನ ಮಂದಿ ಮಂಗಳೂರಿಗೆ ಚಿಕಿತ್ಸೆ ಮತ್ತಿತರ ಕಾರಣಗಳಿಗೆ ಬಂದು ಹೋಗುವುದರಿಂದ ನಿಫಾ ವೈರಸ್ ಇತ್ತ ಕಾಲಿಡದಂತೆ ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಇದುವರೆಗೆ ನಿಫಾ ವೈರಸ್ ಸೋಂಕು ಪ್ರಕರಣ ವರದಿಯಾಗಿಲ್ಲ.
ಬಾವಲಿ, ಹಂದಿಗಳಿಂದ ವೈರಸ್
ನಿಫಾ ವೈರಸ್ ಪ್ರಮುಖವಾಗಿ ಬಾವಲಿ, ಹಂದಿಗಳಿಂದ ಹರಡುತ್ತದೆ. ಇತರ ಸಾಕು ಪ್ರಾಣಿಗಳಿಂದಲೂ ಮನುಷ್ಯರಿಗೆ ತಗಲುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳಲ್ಲಿ ರೋಗಕಾರಕ ವೈರಸ್ ಇದೆಯೇ ಎಂದು ಪತ್ತೆ ಮಾಡಲು ಜಿಲ್ಲೆಯ ಎಲ್ಲ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಜತೆಗೆ ರೋಗ ಪೀಡಿತರ ಕೆಮ್ಮು, ಸೀನುಗಳಿಂದಲೂ ವೈರಸ್ ಪ್ರಸರಣ ಆಗುವ ಸಾಧ್ಯತೆ ಇರುವುದರಿಂದ ಅತೀ ಎಚ್ಚರಿಕೆ ಅವಶ್ಯ. ರೋಗ ಲಕ್ಷಣಗಳು ಪತ್ತೆಯಾದಲ್ಲಿ ರಕ್ತದ ಸ್ಯಾಂಪಲ್ ಅನ್ನು ಮಣಿಪಾಲ್ ಎಂಸಿಇಆರ್‌ಗೆ ಕಳುಹಿಸಿ ಪರೀಕ್ಷಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಬಿದ್ದ ಹಣ್ಣು ತಿನ್ನಬೇಡಿ
ಬಾವಲಿಗಳು ಕಚ್ಚಿ ಬಿದ್ದ ಹಣ್ಣುಗಳನ್ನು ಮನುಷ್ಯರು ತಿಂದಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಈಗ ಹಣ್ಣುಗಳ ಋತು ಆಗಿದ್ದು, ಮುನ್ನೆಚ್ಚರಿಕೆ ಯಾಗಿ ಮರದಿಂದ ಬಿದ್ದಿರುವ ಹಣ್ಣುಗಳನ್ನು ತಿನ್ನಬಾರದು. ಎಲ್ಲ ರೀತಿಯ ಹಣ್ಣುಗಳನ್ನು ಸ್ವತ್ಛವಾಗಿ ತೊಳೆದು ತಿನ್ನಬೇಕು.
ನಿರ್ದಿಷ್ಟ ಔಷಧ ಇಲ್ಲ
ಸಾಕುಪ್ರಾಣಿಗಳ ಮೂಲಕ ಹರಡುವ ಈ ರೋಗಕ್ಕೆ ಇಲ್ಲಿವರೆಗೆ ನಿರ್ದಿಷ್ಟ ಔಷಧ ಇಲ್ಲ, ಲಸಿಕೆಯೂ ಇಲ್ಲ. ಸದ್ಯಕ್ಕೆ ಎಚ್1ಎನ್1ನಂತಹ ಸಾಂಕ್ರಾಮಿಕ ರೋಗಗಳಿಗೆ ಕೊಡುವ ಆ್ಯಂಟಿ ವೈರಸ್ ಔಷಧಿಯನ್ನೇ ಇದಕ್ಕೂ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
ಡಾ| ರಾಜೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಸಭೆ
ಉಡುಪಿ ಜಿಲ್ಲೆಯಲ್ಲಿ ನಿಫಾ ಜ್ವರ ಕಂಡುಬಂದಿಲ್ಲವಾದರೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಎಚ್ಚರಿಕೆಯಿಂದ ಇರುವಂತೆ ಸರಕಾರದಿಂದ ಸೂಚನೆ ಬಂದಿದೆ. ಮೇ 22ರಂದು ಆರೋಗ್ಯ ಇಲಾಖೆಯ ಸಭೆ ನಡೆಯ ಲಿದ್ದು ಈ ಜ್ವರದ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.
ಕೇರಳಕ್ಕೆ ಕೇಂದ್ರ ತಜ್ಞರ ತಂಡ
ಕಾಸರಗೋಡು: ರಾಜ್ಯದಲ್ಲಿ ಮಾರಕವಾದ “ನಿಫಾ’ ವೈರಸ್ ಸೋಂಕು ಹರಡತೊಡಗಿದ್ದು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಒಟ್ಟು 9 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯ ಸರಕಾರ ಕಟ್ಟೆಚ್ಚರ ಘೋಷಿಸಿದ್ದು, ಅದರ ಮನವಿ ಮೇರೆಗೆ ಕೇಂದ್ರದ ತಜ್ಞರ ತಂಡ ಕಲ್ಲಿಕೋಟೆಗೆ ಆಗಮಿಸಿದ್ದು ವೈರಸ್ ಹುಟ್ಟಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದೆ.
ಕಲ್ಲಿಕೋಟೆ ಜಿಲ್ಲೆಯ ಪೆರುಂಬಾದ ಒಂದೇ ಕುಟುಂಬದ ಮೊಹಮ್ಮದ್ ಸಾದಿಕ್ (26), ಮೊಹಮ್ಮದ್ ಸಾಲಿಯಾ (28), ಮರಿಯಮ್ಮ (50) ಸಾವಿಗೀಡಾಗಿದ್ದಾರೆ. ತಿರುಂಬಾಟಿಯ ಇಸ್ಮಾಯಿಲ್ (50) ಸಿಂಧು (36), ಪೊನ್ಮಲದ ಮೊಹಮ್ಮದ್ ಶಿಬಿಲಿ (14), ಕಲ್ಲಿಕೋಟೆ ಕಿಳತ್ತೂರಿನ ವೇಲಾಯುಧನ್ (48), ಪೆರುಂಬಾದಲಿನಿ (31) ಸಾವಿಗೀಡಾದರು. ರೋಗಿಗಳ ಆರೈಕೆ ಮಾಡಿದ ಕಲ್ಲಿಕೋಟೆ ಚೀಲತ್ತೂರಿನ ಬಾಬು ಸೆಬಾಸ್ಟಿನ್ ಅವರ ಪತ್ನಿ ಹೆಡ್ ನರ್ಸ್ ಟಿಸಿ ಜಾರ್ಜ್ (50) ಕೂಡ ಮೃತಪಟ್ಟಿದ್ದಾರೆ.
ಎಲ್ಲ ವೈದ್ಯರಿಗೂ ಸೂಚನೆ
ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಫಾ ಚಿಕಿತ್ಸೆಗೆ ಈವರೆಗೆ ರೋಗಿಗಳು ದಾಖಲಾಗಿಲ್ಲ. ಆದಾಗ್ಯೂ ನಮ್ಮ ಎಲ್ಲ ವೈದ್ಯರಿಗೆ ಈ ಸಂಬಂಧ ಸೂಚನೆ ನೀಡ ಲಾಗಿದೆ. ರೋಗಿಗಳು ಬಂದಲ್ಲಿ ಅವರನ್ನು ಪ್ರತ್ಯೇಕ ನಿಗಾ ಕೊಠಡಿ ಯಲ್ಲಿರಿಸಿ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗುವುದು. ನಿಫಾ ಬಾಧಿತ ರೋಗಿಗಳು ಅಲ್ಲಲ್ಲಿ ಕಫ, ಎಂಜಲು ಉಗುಳು ವುದು, ಸೇವಿಸಿದ ನೀರು, ಆಹಾರವನ್ನು ಇನ್ನೊಬ್ಬ ರಿಗೆ ನೀಡದಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಹೊರಗಿ ನಿಂದ ತಂದ ಹಣ್ಣುಗಳನ್ನು ತೆಗೆದುಕೊಳ್ಳದಂತೆ ಜಾಗ್ರತೆ ವಹಿಸ ಲಾಗುವುದು ಎಂದು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.
ನಿಫಾ ವೈರಸ್ ಕಾಯಿಲೆ
ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.
ಲಸಿಕೆ ಇಲ್ಲ. ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ. ತೀವ್ರ ನಿಗಾ ಘಟಕದಲ್ಲಿ ಲಕ್ಷಣಾಧಾರಿತ ಚಿಕಿತ್ಸೆ ಮಾತ್ರ ಒದಗಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಟಾಪ್ ಟೆನ್ “ತೀವ್ರ ಅಪಾಯದ ಸೋಂಕು ರೋಗ’ ಯಾದಿಯಲ್ಲಿ ನಿಫಾ ಸೋಂಕು ಒಂದು.
ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದಂತೆ ನಿಫಾ ಸೋಂಕಿನಿಂದ ಮರಣ ಸಾಧ್ಯತೆ ಶೇ. 70.
ಹಣ್ಣು ತಿನ್ನುವ ಬಾವಲಿಗಳು ಈ ವೈರಸ್ ಹರಡುತ್ತವೆ. ಇತರ ಪ್ರಾಣಿಗಳಿಂದಲೂ ಸಾಧ್ಯ.
1999ರಲ್ಲಿ ಮಲೇಶ್ಯಾ, ಸಿಂಗಾಪುರಗಳಲ್ಲಿ ಮೊದಲಿಗೆ ಪತ್ತೆ.
ಭಾರತದಲ್ಲಿ ನಿಫಾ ಸೋಂಕು
2001ರ ಜನವರಿ-ಫೆಬ್ರವರಿ: ಪ. ಬಂಗಾಲದ ಸಿಲಿಗುರಿ
66 ಪ್ರಕರಣ- 45 ಸಾವು; ಮರಣ ಪ್ರಮಾಣ 68%
2007ರ ಎಪ್ರಿಲ್ ಪ. ಬಂಗಾಲದ ನಾಡಿಯಾ
5 ಪ್ರಕರಣ- 5 ಸಾವು; ಮರಣ ಪ್ರಮಾಣ 100%
ತೀವ್ರ ನಿಗಾ
ದ.ಕ. ಜಿಲ್ಲೆಯಲ್ಲಿ ಇದುವರೆಗೆ ನಿಫಾ ಪ್ರಕರಣ ವರದಿಯಾಗಿಲ್ಲ. ಆದರೂ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜನ ಬಿದ್ದ ಹಣ್ಣು ತಿನ್ನುವುದು, ಸಾಕುಪ್ರಾಣಿಗಳ ಒಡನಾಟದಿಂದ ದೂರವಿರಬೇಕು.
-ಡಾ| ರಾಮಕೃಷ್ಣ ರಾವ್ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.