‘ಪಾನಮುಕ್ತರು ಭಾಗ್ಯವಂತರು’
Team Udayavani, Oct 13, 2017, 2:41 PM IST
ಬೆಳ್ತಂಗಡಿ : ವ್ಯಸನಕ್ಕೆ ಜಾತಿಯಿಲ್ಲ. ಪಾನಮುಕ್ತರು ಭಾಗ್ಯವಂತರು. ನೇತ್ರಾವತಿ ಸ್ನಾನದಿಂದ ದೇಹ ಶುದ್ಧಿಗೊಂಡರೆ ದೇವರ ದರ್ಶನದಿಂದ ಅಂತರಂಗ ಶುದ್ಧಿಯಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತರ ದೃಢ ಸಂಕಲ್ಪದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರಿಂದ ಬಂದ ಕರೆ
ಒಳ್ಳೆಯ ಬದುಕು, ಜೀವನ, ಕೆಲಸ, ಮನೆ, ಮಡದಿ, ಮಕ್ಕಳು, ಸಂಸ್ಕಾರ, ಸಂಸ್ಕೃತಿ ಎಲ್ಲವನ್ನೂ ಕುಡಿತವೆಂಬ ತಿಮಿಂಗಿಲ ನುಂಗಿದಂತೆ. ಸರ್ವಸ್ವ ಕಳೆದುಕೊಂಡ ನಿಮಗೆ ಭರವಸೆ ತುಂಬುವ ಕೆಲಸ ಮಾಡುವ ಪ್ರಯತ್ನ ಇಂತಹ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ. ಅಮಲಿನ ಭ್ರಮೆಯಲ್ಲಿ ಬರುವ ವಿಕಾರ, ವಿಕೃತಿ, ವಿಶೇಷ ಹುಚ್ಚು ಧೈರ್ಯ ನಮ್ಮನ್ನು ಕಾಪಾಡುವುದಿಲ್ಲ. ದೇವರು ನಮಗೆ ನೀಡಿದ ಇದೇ ಜೀವನದಲ್ಲಿ ಸುಖ ಅನುಭವಿಸಲು ದೇವರಿಂದ ಬಂದ ಕರೆಯೇ ಮದ್ಯವರ್ಜನ ಶಿಬಿರ ಆಗಿದೆ ಎಂದು ಅವರು ಹೇಳಿದರು.
ಶಿಬಿರದ ಬಳಿಕ ಉತ್ತಮ ಜೀವನ ನಿರ್ವಹಣೆಗಾಗಿ ಮಾಸಿಕ ಸಭೆ, ಶತದಿನೋತ್ಸವ, ಅಭಿನಂದನ ಕಾರ್ಯಕ್ರಮ, ಪ್ರಮಾಣಪತ್ರ ವಿತರಣೆ, ಸಾಧಕರ ಸಮ್ಮಾನ, ಪ್ರೇರಕರ ತರಬೇತಿ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮಗದೊಮ್ಮೆ ಕುಡಿತಕ್ಕೆ ಬಲಿ ಬೀಳದಂತೆ ನೋಡಿಕೊಳ್ಳುವ ವ್ಯವಸ್ಥೆಯಿದೆ. ಹೀಗೆ ಬೈಲಹೊಂಗಲ, ಕುಮಟಾ, ಶ್ರೀನಿವಾಸಪುರ, ಮದ್ದೂರು, ಅರಕಲಗೂಡು, ರಾಮನಗರ, ಅರಸಿಕೆರೆ, ಬಾಗಲಕೋಟೆ, ಕೋಲಾರ, ಚನ್ನಪಟ್ಟಣ, ಶಿವಮೊಗ್ಗ ಕಡೆಯಿಂದ ಶಿಬಿರದಲ್ಲಿ ಭಾಗವಹಿಸಿದ ಒಟ್ಟು 872 ಶಿಬಿರಾರ್ಥಿಗಳು ದೇವರ ದರ್ಶನ ಪಡೆದು ಶತದಿನೋತ್ಸವ ಕಾರ್ಯಕ್ರಮದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾಹಿತಿ ಪಡೆದರು. ಪಾನಮುಕ್ತರಿಗೆ ಬ್ಯಾಡ್ಜ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಮೇಲ್ವಿಚಾರಕರು, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿಗಳಾದ ಮನೋಹರ್, ನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
150 ಶಿಬಿರ, 10,000 ಮಂದಿಗೆ ಸಲಹೆ, ಚಿಕಿತ್ಸೆ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರಗಳು ನಿರಂತರ ನಡೆಯುತ್ತಿವೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಸಂಯೋಜನೆ ಮಾಡುವುದರ ಮೂಲಕ ದುಶ್ಚಟಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕವಾಗಿ 150 ಶಿಬಿರಗಳನ್ನು ನಡೆಸಿ 10,000 ಮಂದಿಗೆ ಸಲಹೆ, ಚಿಕಿತ್ಸೆ ನೀಡಲಾಗುತ್ತಿದೆ.
ವ್ಯಸನ ಬಾಧಿತರ ರಕ್ಷಣೆಯಾಗಲಿ
ಉತ್ತಮ ಸಾಧನೆಯೊಂದಿಗೆ ತಮ್ಮ ಹಾಗೆಯೇ ವ್ಯಸನಕ್ಕೆ ಬಾಧಿತರಾಗಿರುವ ಕುಟುಂಬಗಳ ರಕ್ಷಣೆಯ ಕೆಲಸ ಆಗಬೇಕಾಗಿದೆ. ತಾವು ಉತ್ತಮರೆನಿಸಿಕೊಂಡು ಇತರ 25 ಮಂದಿಯನ್ನು ಶಿಬಿರಕ್ಕೆ ಸೇರಿಸಿದರೆ ‘ಜಾಗೃತಿ ಮಿತ್ರ’, 50 ಮಂದಿಯನ್ನು ಸೇರಿಸಿದರೆ ‘ಜಾಗೃತಿ ಅಣ್ಣ ‘ ಎನ್ನುವ ಬಿರುದು ನೀಡಿ ಗೌರವಿಸಲಾಗುವುದು.
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.