ಮನದಾಳದ ಮಾತು ಬಹಿರಂಗಪಡಿಸಿದ ಕರಾವಳಿಯ ಕುವರ
ಕೋಸ್ಟಲ್‌ವುಡ್‌ನಲ್ಲಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಶೆಟ್ರಾ !
Team Udayavani, Nov 1, 2019, 4:41 AM IST
ಮಂಗಳೂರು: “ಮಸಣದ ಹಾದಿ’ ಎಂಬ ಕಿರುಚಿತ್ರ ಮುಖೇನ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಚಂದನವನದ ಬಹುಬೇಡಿಕೆಯ ಕರಾವಳಿ ಮೂಲದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಅನಂತರದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಸಾಲು ಸಾಲು ಹಿಟ್ ಚಿತ್ರದಲ್ಲಿ ನಟಿಸಿದ ರಕ್ಷಿತ್ ಅವರ ನಟನೆಯ “ಅವನೇ ಶ್ರೀಮನ್ನಾರಾಯಣ’ ಚಲನಚಿತ್ರಇನ್ನೇನು ಕೆಲವು ತಿಂಗಳಲ್ಲೇ ಬಿಡುಗಡೆಯಾಗಲಿದೆ. ತನ್ನ ಸ್ನೇಹಿತೆ ಯಜ್ಞಾ ಶೆಟ್ಟಿ ಅವರ ಮದುವೆ ಕಾರ್ಯದ ನಿಮಿತ್ತ ಮಂಗಳೂರಿಗೆ ಆಗಮಿಸಿದ ರಕ್ಷಿತ್ ಅವರು “ಉದಯವಾಣಿ ಸುದಿನ’ ಜತೆ ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದು ಹೀಗೆ…
ಅವನೇ ಶ್ರೀಮನ್ನಾರಾಯಣ ಚಲನಚಿತ್ರ ಬಿಡುಗಡೆಗೆ ಮೂರು ವರ್ಷ ಗ್ಯಾಪ್ ಆಯ್ತಲ್ಲಾ?
ಹೌದು… ಈ ಚಲನಚಿತ್ರದಲ್ಲಿ ನಾವು ಪ್ರಯೋಗಿಸಿದ ಪ್ರತಿಯೊಂದು ವಿಷಯವೂ ಹೊಸತು. ಪ್ರತೀ ಹಂತವೂ ತುಂಬಾ ಸಮಯ ತೆಗೆದುಕೊಂಡಿತು. ಅಷ್ಟು ಸಮಯ ತೆಗೆದುಕೊಂಡಿರುವುದರಿಂದ ಚಿತ್ರ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ. ಎಲ್ಲರೂ ಬೆರಗಾಗುವ ರೀತಿಯಲ್ಲಿ ಚಿತ್ರ ಮೂಡಿ ಬರಲಿದೆ ಎಂಬ ವಿಶ್ವಾಸ ನನಗಿದೆ.
ಅವನೇ ಶ್ರೀ ಮನ್ನಾರಾಯಣ ಚಿತ್ರದಲ್ಲಿ ವಿಶೇಷತೆ ಏನಿದೆ?
ಈ ಚಿತ್ರದಲ್ಲಿ ನನಗೆ ಪ್ರತಿಯೊಂದು ವಿಷಯವೂ ವಿಶೇಷ. ನಾನು ಕಿರುಚಿತ್ರ ನಿರ್ದೇಶನದ ಹಿನ್ನೆಲೆಯಿಂದ ಬಂದವನು. ಕಿರಿಕ್ ಪಾರ್ಟಿ ಚಲನಚಿತ್ರದವರೆಗೆ ಲೈವ್ ಲೊಕೆಶನ್‌ಗೆ ತೆರಳಿ ಚಿತ್ರೀಕರಣ ನಡೆಸುತ್ತಿದ್ದೆವು. ಈ ಚಿತ್ರಕ್ಕೆ ಕಥೆ ಬರೆಯುವ ವೇಳೆ ನಮ್ಮ ಯೋಚನೆಗೆ ತಕ್ಕಂತೆ ಹಲವಾರು ಲೊಕೇಶನ್‌ಗಳನ್ನು ಹುಡುಕಿದ್ದೆವು. ಆದರೆ ಸರಿಯಾದ ಲೊಕೇಶನ್ ಸಿಗದ ಕಾರಣ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸೆಟ್ ಹಾಕಿ ಚಿತ್ರೀಕರಣ ನಡೆಸಿದ್ದೇವೆ. ನನಗೆ ಇದೊಂದು ಹೊಸ ಅನುಭವ.
ಅಭಿಮಾನಿಗಳು ಏನು ನಿರೀಕ್ಷಿಸಬಹುದು ?
ಅವನೇ ಶ್ರೀ ಮನ್ನಾರಾಯಣ ಪಕ್ಕಾ ಕುಟುಂಬ ಸಮೇತ ನೋಡಬಹುದಾದ ಚಿತ್ರ. ಪ್ರೇಕ್ಷಕ ಚಿತ್ರಮಂದಿರದಲ್ಲಿ ಇರುವಷ್ಟು ಸಮಯ ಪಕ್ಕಾ ಮನೋರಂಜನೆ ನೀಡುತ್ತದೆ. ಹೆಚ್ಚಿನ ಮಾಹಿತಿ ಚಿತ್ರ ಬಿಡುಗಡೆಯ ಮೊದಲು ಹೆಳಲಾರೆ.
ನಿರ್ದೇಶನ, ನಟನೆಯಲ್ಲಿ ನಿಮ್ಮ ಮೊದಲ ಆಯ್ಕೆ ?
ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಟ ಆಗಬೇಕೆಂಬ ಆಸೆಯಿಂದ. ಕಿರುಚಿತ್ರ ಮಾಡುವ ವೇಳೆ ಬರವಣಿಗೆ, ನಿರ್ದೇಶನದ ಅನಿವಾರ್ಯ ಬಂತು. ಸದ್ಯ ಬರವಣಿಗೆ, ನಿರ್ದೇಶನ, ನಟನೆ, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೇ ಕಾರಣಕ್ಕೆ ನಿರ್ದೇಶನ ಮತ್ತು ನಟನೆ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತೇನೆ.
ತುಳು ಚಲನಚಿತ್ರ ನೋಡುತ್ತೀರಾ? ನಟಿಸೋ ಆಸೆ ಇದೆಯಾ ?
ಸಮಯ ಸಿಗುವಾಗಲೆಲ್ಲ ತುಳು ಚಿತ್ರ ನೋಡುತ್ತೇನೆ. ತುಳು ಚಲನಚಿತ್ರದಲ್ಲಿ ನಟಿಸುವ ಆಸೆ ಸದ್ಯಕ್ಕಿಲ್ಲ. ಆದರೆ, ತುಳು ಚಲನಚಿತ್ರ ನಿರ್ದೇಶನ ಮಾಡಬೇಕು ಎಂಬ ಯೋಚನೆ ಇದೆ. ಕರಾವಳಿ ಭಾಗಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ತುಳು ಚಲನಚಿತ್ರ ನಿರ್ದೇಶನ ಮಾಡುತ್ತೇನೆ. ಇತರ ಭಾಷಿಗರು ಕೂಡ ಬೆರಗಾಗುವ ರೀತಿ ಆನೆಮಾ ಮೂಡಿಬರಲಿದೆ. ಆ ರೀತಿಯಲ್ಲಿ ಚಿತ್ರ ನಿರ್ದೇಶನ ಮಾಡುತ್ತೇನೆ.
ಕರಾವಳಿ ಅಂದಾಕ್ಷಣ ಏನು ನೆನಪಿಗೆ ಬರುತ್ತದೆ?
ಮನುಷ್ಯನ ಭವಿಷ್ಯ ನಿರ್ಧಾರ ವಾಗುವುದು ಆತನ ಮೊದಲ 20 ವರ್ಷಗಳಲ್ಲಿ. ಬಳಿಕ ಅದೇ ಗುಣ ಆತನಲ್ಲಿ ಮುಂದುವರಿಯುತ್ತದೆ. ನಾನು 20 ವರ್ಷ ಕರಾವಳಿ ಭಾಗದಲ್ಲಿ ಕಳೆದಿರುವುದು. ಅದೇ ಕಾರಣಕ್ಕೆ ಇಲ್ಲಿನ ಮಣ್ಣಿನ ಗುಣ ನನ್ನಲ್ಲಿ ತುಂಬಿಕೊಂಡಿದೆ. ಕರಾವಳಿ ಬಗ್ಗೆ ನನಗಿರುವ ನೆನಪುಗಳ ಹೂರಣವನ್ನು “ಉಳಿದವರು ಕಂಡಂತೆ’ ಚಲನಚಿತ್ರದ ಮುಖೇನ ತೋರಿಸಿದ್ದೇನೆ.
ಫ್ಯೂಚರ್ ಪ್ಲಾನ್?
ಸದ್ಯ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಗೆ ಬಾಕಿ ಇದೆ. 777 ಚಾರ್ಲಿ ಚಿತ್ರದ ಶೇ.40ರಷ್ಟು ಚಿತ್ರೀಕರಣ ಬಾಕಿ ಇದ್ದು, ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ. ಬಳಿಕ ಪುಣ್ಯಕೋಟಿ, ರಿಚ್ಚಿ ಚಲನಚಿತ್ರದ ಚಿತ್ರೀಕರಣ ಶುರುವಾಗುತ್ತದೆ.
ರಕ್ಷಿತ್ ಅವರ ಮದುವೆ?
ಸಮಯ ಬಂದಾಗ, ಕಾಲ ಕೂಡಿ ಬಂದಾಗ ಮದುವೆಯಾಗುತ್ತದೆ. ನಾನು ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಏನು ಆಗಬೇಕು ಎಂದು ದೇವರು ಬರೆದಿರುತ್ತಾರೋ, ಅದು ಆಗೇ ಆಗುತ್ತೆ. ಭವಿಷ್ಯದಲ್ಲಿ ಒಪ್ಪಿಕೊಂಡ ಅನೇಕ ಚಲನಚಿತ್ರಗಳಿವೆ. ಆ ಕೆಲಸದ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತೇನೆ.
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.