ಮಿನುಗುವ ಸರಗಳೊಂದಿಗೆ ಬದುಕಿನ ಬಣ್ಣದ ಯಾನ
Team Udayavani, Nov 17, 2017, 5:14 PM IST
ಬೆಳ್ತಂಗಡಿ: ಲಕ್ಷದೀಪಗಳ ಅಲಂಕಾರದ ನಡುವೆ ಸಾವಿರ ಬಣ್ಣದ ಸರಗಳ ಸಿಂಗಾರ. ಮಿಣ ಮಿಣ ಮಿನುಗುವ ಸರಮಾಲೆ, ಕಾಲ್ಗೆಜ್ಜೆಗಳ ಸಾಲು ಸಾಲು ರಾಶಿಯಲ್ಲಿ ಕನಸು ಹೊತ್ತ ಕಣ್ಣುಗಳು. ಹರಡಿದ ಹರಳುಗಳ ಆಧಾರದಲ್ಲಿ ಬದುಕು ಕಟ್ಟಿಕೊಳ್ಳುವ ಹಂಬಲ, ನಿಶ್ಚಿತ ಆದಾಯವಿಲ್ಲದ ಎದುರಾಗೋ ಕಷ್ಟಗಳ ನಡುವೆಯೇ ಉತ್ಸಾಹ ಬತ್ತಿಸಿಕೊಳ್ಳದೇ ಮುನ್ನಡೆಯುವ ಅಪೇಕ್ಷೆ.
ದ್ವಾರದ ಬದಿಯಲ್ಲೇ ಜಾಗ
ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ದೂರದ ತಮಿಳುನಾಡಿನಿಂದ ಧರ್ಮಸ್ಥಳಕ್ಕೆ ಬಂದು ಬಣ್ಣದ ಸರಗಳ ಮಾರಾಟಕ್ಕಿಳಿದ ಅರುಣ್ ಕುಮಾರ್ ಬದುಕಿನ ಯಾನದ ವಿವರಗಳಿವು. ತನ್ನ ಬದುಕಿನ ಕತೆಯ ಎಳೆ ಬಿಚ್ಚಿಟ್ಟಾಗ ತಿಳಿದದ್ದು, 40 ತರಹದ ಸರಗಳ ಹಿಂದೆ ಕಳೆದು ಹೋದ 30 ವರ್ಷಗಳ ಜೀವನ. ತಮಿಳುನಾಡಿನ ಅರುಣ್ ಮತ್ತು ಪತ್ನಿ ನಂದಿನಿ ತಮ್ಮ 5 ವರ್ಷದ ಮಗುವಿನೊಂದಿಗೆ ಲಕ್ಷದೀಪೋತ್ಸವಕ್ಕೆ ಬಂದದ್ದು ಈ ಬಣ್ಣ ಬಣ್ಣದ ಸರಗಳ ಸಾಲಿನಲ್ಲಿ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ. ದ್ವಾರದ ಬದಿಯಲ್ಲೇ ಜಾಗ ಹಿಡಿದು, ಸರ, ಕಾಲ್ಗೆಜ್ಜೆಗಳ ಎಳೆಗಳನ್ನು ಜೋಡಿಸುತ್ತಾ, ದಣಿವಾರಿಸಿಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡ ದಂಪತಿ ಲಕ್ಷದೀಪೋತ್ಸವಕ್ಕೆಂದು ಆರು ತಿಂಗಳಿನಿಂದ ತಯಾರಿ ನಡೆಸಿದ್ದಾರೆ.
ಬಂಡವಾಳ ವಾಪಸಾತಿಯ ಹಂಬಲ
ತಮಿಳುನಾಡಿನಿಂದ ದೆಹಲಿಗೆ ತೆರಳಿ, ತಾವು ಕೂಡಿಟ್ಟ ಕಾಸು, ಸಾಲ ಮಾಡಿದ ಹಣವೆಲ್ಲಾ ಸೇರಿಸಿ ಒಂದು ಲ.ರೂ.ಗೆ ಹೊಳೆಯುವ ಮಣಿಗಳನ್ನು ಖರೀದಿ ಮಾಡಿ ತರುವ ಇವರು ಅದನ್ನು ಪೋಣಿಸಿ, ಮಾಲೆ, ಗೆಜ್ಜೆಗಳಾಗಿ ರೂಪಿಸಿ 6 ತಿಂಗಳ ಕಾಲ ಕಷ್ಟ ಪಡುವ ಇವರ ಜೀವನ ತಾವು ಹೂಡಿದ ಬಂಡವಾಳ ವಾಪಾಸು ಸಿಗಲಿ ಎಂಬ ಹಂಬಲದಲ್ಲಿದ್ದಾರೆ. ಉತ್ತಮ ಗುಣಮಟ್ಟದ ಹರಳುಗಳನ್ನ ಹುಡುಕಿ ತಂದು, ಅದಕ್ಕೊಂದು ರೂಪ ಕೊಟ್ಟು ಮಾರಾಟಕ್ಕಿಡುವ ಸರಕು ಹಾಳಾಗುವುದಿಲ್ಲ ಎಂದು ಮಾತುಕೊಡುತ್ತಾರೆ.
ಇವರಂತೆ ಇನ್ನೂ 40 ಕುಟುಂಬದವರು ದಾರಿಯ ಉದ್ದಕ್ಕೂ ಫಳಫಳ ಹೊಳೆಯುವ ಸರಗಳ ರಾಶಿ ಹರಡಿಕೊಂಡು ಕುಳಿತಿ
ದ್ದಾರೆ. ಮಕ್ಕಳು, ಹಿರಿಯರು ಸೇರಿ ಕುಟುಂಬಸಮೇತ ಧರ್ಮಸ್ಥಳಕ್ಕೆ ಬಂದಿಳಿದ ಇವರು, ದೀಪೋತ್ಸವ ಕಳೆದರೆ ಮತ್ತೆ
ಕಾಣಸಿಗುವುದು ಶಿವರಾತ್ರಿಗೆ.
ಕೆಲವೊಮ್ಮೆ ಒಂದೇ ದಿನ ಎರಡರಿಂದ ಮೂರು ಸಾವಿರ ದುಡಿದರೆ, ಮತ್ತೂಮ್ಮೆ ಏನೂ ಮಾರಾಟವಾಗದೆ ಅಂಗಡಿ ಮುಚ್ಚುವ ದಿನಗಳೂ ಇರುತ್ತವೆ. ದೀಪೋತ್ಸವದಲ್ಲಿ ದಿನಕ್ಕೆ ಸಾವಿರ ರೂಪಾಯಿ ಸಂಪಾದನೆಯಾದರೆ ದಿನವೊಂದಕ್ಕೆ ರೂಮ್ ಬಾಡಿಗೆ 500 ರೂ. ಹಾಗಾಗಿ ಅಂಗಡಿ ಮುಚ್ಚಿ, ಅಲ್ಲೇ ಮಲಗುತ್ತೇವೆ.
ಅರುಣ್ ಕುಮಾರ್,
ಸರ ಮಾರಾಟಗಾರ
ಚೋಂದಮ್ಮ ಎ.ಜೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.