ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ನಾವೂರು ಗಂಗಾಧರ ಶೆಟ್ಟಿ ನಿಧನ
Team Udayavani, Aug 1, 2017, 3:10 PM IST
ಬಂಟ್ವಾಳ/ ಬೆಳ್ತಂಗಡಿ: ಬಪ್ಪನಾಡು ಮೇಳದ ಯಕ್ಷಗಾನ ಕಲಾವಿದ ಬೆಳ್ತಂಗಡಿಯ ನಾವೂರು ನಿವಾಸಿ ಗಂಗಾಧರ ಶೆಟ್ಟಿ (48) ಅವರು ಜು. 31ರಂದು ಅಪರಾಹ್ನ ವಾಮದಪದವು ಬಸ್ತಿಕೋಡಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ಘಟನೆ ವಿವರ
ಗಂಗಾಧರ ಶೆಟ್ಟಿ ಅವರು ಮಳೆಗಾಲದಲ್ಲಿ ವಾಮದಪದವು, ಬಸ್ತಿಕೋಡಿ ಪರಿಸರದಲ್ಲಿ ಚಿಕ್ಕಮೇಳವನ್ನು ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ನಡೆಯಬೇಕಿದ್ದ ಚಿಕ್ಕಮೇಳದ ಯಕ್ಷಗಾನ ಪ್ರದರ್ಶನ ಕುರಿತು ಉಳಿದ ಕಲಾವಿದರು ಊರಿನಲ್ಲಿ ಮಾಹಿತಿ ನೀಡಲು ಹೋಗಿದ್ದಾಗ ಗಂಗಾಧರ ಅವರು ವಿಶ್ರಾಂತಿಯಲ್ಲಿದ್ದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವರ ವಾಹನ ಚಾಲಕ ಪ್ರವೀಣ್ ಶೆಟ್ಟಿ ಬಂದಾಗ ಬಾಗಿಲು ತೆರೆದಿಟ್ಟಿದ್ದು, ಶೆಟ್ಟರನ್ನು ಕರೆದಾಗ ಉತ್ತರ ಬಾರದ ಹಿನ್ನೆಲೆಯಲ್ಲಿ ಬಚ್ಚಲು ಮನೆಗೆ ಬಂದಿದ್ದಾಗ ಅಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ, ಟೂತ್‌ಪೇಸ್ಟ್ ಹಾಕಿದ್ದ ಬ್ರೆಶ್ ಕೂಡ ಸನಿಹದಲ್ಲಿತ್ತು ಎಂದಿದ್ದಾರೆ. ಅದಾಗಲೇ ಅವರ ಮೈ ತಣ್ಣಗಾಗಿತ್ತು. ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ಬಳಿಕ ಆಸ್ಪತ್ರೆಗೆ ಸಾಗಿಸಿದ್ದಾಗಿ ತಿಳಿಸಿದ್ದಾರೆ. ಸಹಕಲಾವಿದರಾದ ಲಕ್ಷ್ಮಣ್ ತಳಕಲ, ರಾಜೇಶ್ ಶೆಟ್ಟಿ ಮಾಲ, ಪವನ್ ಧರ್ಮಸ್ಥಳ, ಮೋಹನ ಶಿಶಿಲ ಜತೆಗಿದ್ದರು.
ಸುದ್ದಿ ತಿಳಿದಾಗ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ, ಬಪ್ಪನಾಡು ಮೇಳದ ಸಂಚಾಲಕ ಸತ್ಯಪಾಲ್ ರೈ, ಯಜಮಾನ ವಿನೋದ್ ಬಜ್ಪೆ, ಕಲಾವಿದರಾದ ದಿನೇಶ್ ಕೋಡಪದವು, ದಿವಾಕರ ದಾಸ್, ಮನೋಹರ ಬಂಟ್ವಾಳ, ಕರುಣಾಕರ ಶೆಟ್ಟಿಗಾರ್, ಜಗದೀಶ ನಲ್ಕ, ವಿಶ್ವನಾಥ, ಸುರೇಶ ಹೆಗ್ಡೆ ಬಂಗಾಡಿ, ಗುಡ್ಡಪ್ಪ ಸುವರ್ಣ, ಅರಳ ಸುರೇಶ, ಧರ್ಮಸ್ಥಳ ಚಂದ್ರಶೇಖರ, ಸಂತೋಷ್ ಬೋಳಾರ್ ಆಸ್ಪತ್ರೆಗೆ ಧಾವಿಸಿದರು.
ತುಳು ಪ್ರಸಂಗಗಳ ಖ್ಯಾತಿ
ಬಪ್ಪನಾಡು ಮೇಳದಲ್ಲಿ ಭರ್ಜರಿ ಪ್ರದರ್ಶನ ಕಂಡ ಬನತ್ತ ಬಬ್ಬರ್ಯ, ಬನತ್ತ ಬಂಗಾರ್ ಸಹಿತ ತುಳು ಪ್ರಸಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿದವರ ಪೈಕಿ ಒಬ್ಬರಾದ ಅವರು ಶಾಶ್ವತ ರಂಗದ ಮರೆಗೆ ಸರಿದಿದ್ದಾರೆ.
ನೂತನ ಮನೆ
ಅನಿರೀಕ್ಷಿತವಾಗಿ ಎರಗಿದ ಆಘಾತದಿಂದ ಅವರ ಕುಟುಂಬ ಕಂಗಾಲಾಗಿದೆ. ಬೆಳ್ತಂಗಡಿಯಿಂದ ಕಿಲ್ಲೂರಿಗೆ ಹೋಗುವ ರಸ್ತೆಯಲ್ಲಿ ಸಿಗುವ ನಾವೂರಿನ ಗಂಗಾಧರ ಶೆಟ್ಟರ ಮನೆಗೆ ಸೋಮವಾರ ಸಂಜೆ ಉದಯವಾಣಿ ಪ್ರತಿನಿಧಿ ತೆರಳಿದಾಗ ಭಾಗಶಃ ಪೂರ್ತಿಯಾದ ಅವರ ಕನಸಿನ ಮನೆಯಲ್ಲಿ ನೀರವ ಮೌನ. ಪತ್ನಿ ಯಶೋದಾ ಶೆಟ್ಟಿ ಅವರು ಆಸ್ಪತ್ರೆಗೆ ತೆರಳಿದ್ದರೆ ಪುತ್ರಿ, ಇಲ್ಲಿನ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಶ್ರೀರಕ್ಷಾ ಹಾಗೂ ಗಂಗಾಧರ ಶೆಟ್ಟರ ತಾಯಿ ಲಕ್ಷ್ಮೀ ಶೆಡ್ತಿ ಅವರ ಕಣ್ಣಾಲಿಗಳಲ್ಲಿ ನೀರು ಬಸಿದು ಮೌನದ ಕಟ್ಟೆಯೊಡೆದಿತ್ತು.
ಸುಣ್ಣ ಬಳಿದ ಬಣ್ಣವಿನ್ನೂ ಬಳಿಯಬೇಕಿದ್ದ ಈ ಮನೆಯ ಗೃಹಪ್ರವೇಶ ಇನ್ನೆರಡು ತಿಂಗಳಲ್ಲಿ ನಡೆಯಬೇಕಿತ್ತು. ವಿದೇಶಕ್ಕೆ ಉದ್ಯೋಗಕ್ಕೆಂದು ಮೂರು ತಿಂಗಳ ಹಿಂದೆ ಹೋಗಿದ್ದ ಪುತ್ರ ಶ್ರೀಜಿತ್ ಶೆಟ್ಟಿ (21) ಅವರ ಅನುಕೂಲವಾಗುವ ದಿನಕ್ಕಾಗಿ ಹುಡುಕಾಟದಲ್ಲಿದ್ದರು. ಎರಡು ಮೂರು ವರ್ಷಗಳಿಂದ ತಮ್ಮ ಪುಟ್ಟ ಜಾಗದಲ್ಲಿ ಕಟ್ಟುತ್ತಿದ್ದ ಕನಸಿನ ಮನೆಯಂಗಳ ಈಗ ಶೆಟ್ಟರ ಧ್ವನಿ ಇಲ್ಲದೆ ಬರಿದು. ರಂಗಸ್ಥಳವೇ ಅನ್ನದ ಬಟ್ಟಲು, ಹೆಜ್ಜೆಗಾರಿಕೆಯೇ ಅನ್ನದ ಅಗಳು, ಮಾತುಗಾರಿಕೆಯೇ ಮೇಲೋಗರವಾಗಿದ್ದ ಅವರಿಗೆ ಯಕ್ಷಗಾನ ಬಿಟ್ಟರೆ ಬೇರೆ ಜೀವನೋಪಾಯ ಇರಲಿಲ್ಲ. ಆದ್ದರಿಂದ 32 ವರ್ಷಗಳ ಯಕ್ಷ ತಿರುಗಾಟದಲ್ಲಿ ದುಡಿದುದರ ಜತೆ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು.
ಮಕ್ಕಳನ್ನು ಓದಿಸಿದ್ದರು. ಮಗ ಉದ್ಯೋಗ ನಿಮಿತ್ತ ಸೌದಿಗೆ ಹೋದ ಕಾರಣ ಹಾಗೂ ಕಾಲು ನೋವಿನಿಂದ ಹೆಜ್ಜೆ ಹಾಕಲು ಕಷ್ಟವಾಗುವ ಕರಣ ಈ ವರ್ಷದಿಂದ ಮೇಳದ ತಿರುಗಾಟಕ್ಕೆ ವಿಶ್ರಾಂತಿ ಬಯಸಿದ್ದರು. ಮಳೆಗಾಲದಲ್ಲಿ ಚಿಕ್ಕಮೇಳದ ತಿರುಗಾಟ ನಡೆಸುತ್ತಿದ್ದಾಗ ವಿಧಿ ತನ್ನ ಕರಾಳ ಹಸ್ತವನ್ನು ಹಣೆಬರಹದ ಮೇಲೆ ಆಡಿಸಿಬಿಟ್ಟಿತು.
ಮೇಳಗಳ ತಿರುಗಾಟ
ನಾವೂರಿನ ಪೆಲತ್ತಕಟ್ಟೆಯಲ್ಲಿ ಕೃಷ್ಣ ಶೆಟ್ಟಿ – ಲಕ್ಷ್ಮೀ ಶೆಡ್ತಿ ದಂಪತಿಯ ಮೂವರು ಮಕ್ಕಳ ಪೈಕಿ ಹಿರಿಯವನಾಗಿ ಜನಿಸಿದ ಗಂಗಾಧರ ಅವರ ಸಹೋದರ ಲಕ್ಷ್ಮಣ ಗೇರುಕಟ್ಟೆ ಸನಿಹ ಇದ್ದಾರೆ. ಸಹೋದರಿ ನಿಧನ ಹೊಂದಿದ್ದಾರೆ. ನಾವೂರು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದೆಡೆಗೆ ಆಕರ್ಷಿತರಾಗಿ ಧರ್ಮಸ್ಥಳ ಯಕ್ಷಗಾನ ಲಲಿತಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನದ ನಾಟ್ಯ ಕಲಿತರು. ತನ್ನ ಸೋದರ ಸಂಬಂಧಿ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಅವರ ಒತ್ತಾಸೆಯಿಂದ ಮೇಳದ ತಿರುಗಾಟ ಆರಂಭಿಸಿದರು.ಕದ್ರಿ (3), ಬಪ್ಪನಾಡು (3), ಅರುವ (2), ಕುಂಬ್ಳೆ (3), ಕುಂಟಾರು (1), ಮಂಗಳಾದೇವಿ (4), ಬಾಚಕೆರೆ (ಅತಿಥಿ ಕಲಾವಿದರಾಗಿ) ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಅನೇಕ ವರ್ಷಗಳಿಂದ ಬಪ್ಪನಾಡು ಮೇಳದ ತಿರುಗಾಟದಲ್ಲಿದ್ದರು.
ವೇಷಗಳು
ಮೂಲತಃ ಪುಂಡುವೇಷಧಾರಿಯಾಗಿದ್ದ ಶೆಟ್ಟರು, ಅಭಿಮನ್ಯು, ಕುಶ, ಬಭುವಾಹನ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧಿ ಗಳಿಸಿದ್ದರು. ಅಯ್ಯಪ್ಪ, ದೇವೇಂದ್ರ, ಅರ್ಜುನ, ಕರ್ಣ, ಹಂಸಧ್ವಜ, ದಾರಿಕಾಸುರ, ವಿಷ್ಣು, ಮಧು ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ತುಳು ಯಕ್ಷಗಾನ ರಂಗದಲ್ಲಿ ಪೆರುಮಳೆ ಬಲ್ಲಾಳ, ಮಲ್ಲಯ್ಯ ಬುದ್ಧಿವಂತ, ಕಾಂತಬಾರೆ, ಶಂಕರಾಳ್ವ, ಕೋಟಿ, ದೇವು ಪೂಂಜ ಪಾತ್ರಗಳನ್ನು ಶೆಟ್ಟರು ಭಾವಪ್ರಧಾನವಾಗಿ, ಮನೋಜ್ಞವಾಗಿ ನಿರ್ವಹಿಸುವುದರಲ್ಲಿ ನಿಷ್ಣಾತರಾಗಿದ್ದರು ಎಂದು ಮೂಡಬಿದಿರೆಯ ಯಕ್ಷಗಾನ ಕಲಾವಿದ ಸಂಘಟಕ ಎಂ. ಶಾಂತಾರಾಮ ಕುಡ್ವ ತಿಳಿಸಿದ್ದಾರೆ.
ಪಾತ್ರಗಳನ್ನು ನಿರ್ವಹಿಸುವ ಮೊದಲು ಸಹ ಕಲಾವಿದರೊಂದಿಗೆ ಸಮಾಲೋಚಿಸಿ, ಪಾತ್ರಗಳು ಪ್ರಸಂಗಕರ್ತರ ಆಶಯಕ್ಕನುಗುಣವಾಗಿ ಪ್ರಸ್ತುತ ಗೊಳ್ಳಬೇಕೆಂಬ ಮನೋಧರ್ಮ ಹೊಂದಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಶೆಟ್ಟರು ಅಪರೂಪದ ಕಲಾವಿದರಾಗಿದ್ದರು ಎಂದು ಶೆಟ್ಟರೊಂದಿಗೆ ತಿರುಗಾಟ ನಡೆಸಿದ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಹೇಳಿದ್ದಾರೆ. ಅವರಿಗೆ ಒಡಿಯೂರು, ನಾವೂರು, ಬಂಟ್ವಾಳ, ಮಂಗಳೂರು ಮೊದಲಾದೆಡೆ ಸಮ್ಮಾನಗಳಾಗಿದ್ದವು. ಅವರ ಪುತ್ರ ವಿದೇಶದಿಂದ ಆಗಮಿಸಬೇಕಾದ ಕಾರಣ ಮಂಗಳವಾರ ಅಂತ್ಯ ಸಂಸ್ಕಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.