ಕೇಂದ್ರ ಸರಕಾರದಿಂದ ಜನರ ನಿರೀಕ್ಷೆ ಹುಸಿ: ಸುನಿಲ್ ಕುಮಾರ್
Team Udayavani, Mar 28, 2017, 12:53 PM IST
ಸ್ಟೇಟ್‌ಬ್ಯಾಂಕ್: ಗ್ಯಾಸ್ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಹಾಗೂ ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿ ಸಿಪಿಐಎಂ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕೇಂದ್ರ ಸರಕಾರ ಜನರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸುವುದರೊಂದಿಗೆ ಹೆಚ್ಚು ಅಗತ್ಯವಾಗಿದ್ದ ಗ್ಯಾಸ್ ಬೆಲೆಯನ್ನೂ ಏರಿಸಿ ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗುತ್ತಿದ್ದರೂ, ಕೇಂದ್ರ ಸರಕಾರವು ಎರಡೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಂದಿನಿಂದ ಅವುಗಳ ದರವನ್ನು ಹೆಚ್ಚಿಸುತ್ತಲೇ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಅಡುಗೆ ಗ್ಯಾಸ್ ಸಿಲಿಂಡರ್ ಒಂದಕ್ಕೆ 430 ರೂ. ಇದ್ದುದು ಈಗ 798 ರೂ.ಗೆ ಏರಿಕೆ
ಯಾಗಿದೆ. ಎಲ್ಲ ಆಹಾರ ವಸ್ತುಗಳ ಬೆಲೆಯೂ ಈ ಅವಧಿಯಲ್ಲಿ ಶೇ. 40ರಿಂದ 100ರ ವರೆಗೂ ಏರಿದೆ ಎಂದರು.
ಜನರ ನಂಬಿಕೆ ಬುಡಮೇಲು ಹಿಂದಿನ ಯುಪಿಎ ಸರಕಾರಗಳ ವೈಫಲ್ಯಗಳ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತಂದಿರುವ ಜನತೆಯ ನಂಬಿಕೆ ಈಗ ಬುಡಮೇಲಾಗಿದೆ. ಪಡಿತರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿ, ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗದ ಬಡವರನ್ನು ಸಬ್ಸಿಡಿ ಆಹಾರ ಧಾನ್ಯ ಪಡೆಯುವುದರಿಂದ ವಂಚಿತಗೊಳಿಸಿದೆ. ಪಡಿತರ ಆಹಾರ ಒದಗಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದ್ದರೂ, ರಾಜ್ಯ ಸರಕಾರಕ್ಕೂ ಈ ಜವಾಬ್ದಾರಿಯಲ್ಲಿ ಪಾಲಿದೆ. ಪಡಿತರ ವ್ಯವಸ್ಥೆ ಈಗ ಸಂಪೂರ್ಣ ಕೆಟ್ಟು ಹೋಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಕೊರೆತ ಉಂಟಾಗಿದ್ದು, ಜಿಲ್ಲೆಯಲ್ಲೂ ಅಂಥ ಭೀತಿ ಎದುರಾಗಿದೆ. ಅದರ ವಿರುದ್ಧ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಆದರೆ, ರಾಜ್ಯ ಸರಕಾರವಾಗಲೀ, ಜಿಲ್ಲಾಡಳಿತ ವಾಗಲೀ ಯಾವುದೇ ಸಿದ್ಧತೆ ಮಾಡಿ ಕೊಳ್ಳದೆ ಬೇಜವಾಬ್ದಾರಿ ವರ್ತನೆ ತೋರಿಸುತ್ತಿವೆ. ಆದ್ದರಿಂದ ಬೆಲೆ ಏರಿಕೆಯನ್ನು ತಡೆದು, ಪಡಿತರ ಅವ್ಯವಸ್ಥೆ ಸರಿಪಡಿಸುವುದ ಲ್ಲದೇ, ಸರಿಯಾದ ರೀತಿಯಲ್ಲಿ ಕುಡಿ ಯುವ ಪೂರೈಕೆ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ, ಮಂಗಳೂರು ನಗರ ಮುಖಂಡರಾದ ಸಂತೋಷ್ ಶಕ್ತಿನಗರ, ಭಾರತಿ ಬೋಳಾರ್, ಮಹಮ್ಮದ್ ಸಾದಿಕ್, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.