ಸಿಬಂದಿ ಇಲ್ಲದೆ ಸಂಪಾಜೆ ಆರೋಗ್ಯ ಕೇಂದ್ರ ಮುಚ್ಚುವ ಭೀತಿ
Team Udayavani, Mar 2, 2018, 12:39 PM IST
ಬೆಳ್ಳಾರೆ : ಸುಳ್ಯ ತಾಲೂಕಿನ ಗಡಿ ಭಾಗದಲ್ಲಿರುವ ಕೊಡಗು ಜಿಲ್ಲೆಯ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗ ವೈದ್ಯರು ಹಾಗೂ 20 ಸಿಬಂದಿ ಹುದ್ದೆಗಳು ಖಾಲಿ ಬಿದ್ದಿರುವ ಪರಿಣಾಮ, ಪ್ರಾಥಮಿಕ ಆರೋಗ್ಯ ಮುಚ್ಚುವ ಭೀತಿ ಎದುರಿಸುತ್ತಿದೆ.
ಬಿಜೆಪಿ ಸರಕಾರವಿದ್ದಾಗ ಆರೋಗ್ಯ ಬಂಧು ಯೋಜನೆಯಲ್ಲಿ ಆರೋಗ್ಯ ಕೇಂದ್ರವನ್ನು ನಿರ್ವಹಣೆ ಮಾಡಲು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನವರಿಗೆ ನೀಡಲಾಗಿತ್ತು. ಈ ಅವಧಿಯಲ್ಲಿ ಸಾಕಷ್ಟು ಸಿಬಂದಿ ಇದ್ದರು. ಆರೋಗ್ಯ ಕೇಂದ್ರದ ನಿರ್ವಹಣೆಯೂ ಚೆನ್ನಾಗಿತ್ತು. ಆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಆರೋಗ್ಯ ಬಂಧು ಯೋಜನೆಯನ್ನು ಹಿಂಪಡೆದ ಕಾರಣ ಇಲ್ಲಿ ವೈದ್ಯರು ಹಾಗೂ ಇತರ ಸಿಬಂದಿ ಕೊರತೆ ಎದುರಾಗಿದೆ.
ಮೂರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ. ಹೀಗಾಗಿ, ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಇಲ್ಲವೇ ಸುಳ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಸಂಪಾಜೆ, ಚೆಂಬು, ಪೆರಾಜೆ, ಮದನಾಡು, ಗಾಳಿಬೀಡು, ಬೆಟ್ಟತ್ತೂರು ಗ್ರಾಮಗಳು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಕ್ಷೇತ್ರ ಕಾರ್ಯಾಚರಣೆ ನಡೆಸಲು ಈ ಭಾಗಗಳಿಗೆ ಕಿರಿಯ ಆರೋಗ್ಯ ಸಹಾಯಕಿಯರು ಇಲ್ಲ.
ಸಮಸ್ಯೆಗೊಳಗಾದ ಗರ್ಭಿಣಿ
ರಾತ್ರಿ ವೇಳೆಯಲ್ಲಿ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗುತ್ತಿದೆ. ವಾರದ ಹಿಂದೆ ಗರ್ಭಿಣಿಯೊಬ್ಬರು ರಾತ್ರಿ ಹೆರಿಗೆ ನೋವಿನಿಂದ ಇಲ್ಲಿಗೆ ಬಂದಾಗ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಮಸ್ಯೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ. ಪಂ.ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆಯನ್ನೂ ಮಾಡಲಾಗಿತ್ತು.
ಈ ಕೇಂದ್ರಕ್ಕೆ ಒಬ್ಬರು ಆರೋಗ್ಯ ವೈದ್ಯಾಧಿಕಾರಿ, 11 ಎ.ಎನ್.ಎಂ., ಮೂವರು ಪುರುಷ ಆರೋಗ್ಯ ಸಹಾಯಕರು, ಐದು ಡಿ ಗ್ರೂಪ್ ಹುದ್ದೆ, ತಲಾ ಒಬ್ಬರು ಲ್ಯಾಬ್ ಟೆಕ್ನಿಷಿಯನ್ ಹಾಗೂ ಕಚೇರಿ ಸಿಬಂದಿ ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ ಮೂವರು ಡಿ ದರ್ಜೆ ನೌಕರರು ಹಾಗೂ ಒಬ್ಬರು ಲ್ಯಾಬ್ ಟೆಕ್ನಿಶಿಯನ್ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರು ಹಿರಿಯ ಆರೋಗ್ಯ ಸಹಾಯಕಿ, ಇನ್ನೊಬ್ಬರು ಕಿರಿಯ ಆರೋಗ್ಯ ಸಹಾಯಕಿ ಖಾಯಂ ಆಗಿದ್ದಾರೆ.
ಒಂದು ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಇದರಲ್ಲೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದರೂ ಸಿಬಂದಿಯಿಲ್ಲದೆ ಆರೋಗ್ಯ ಕೇಂದ್ರ ಬಿಕೋ ಎನ್ನುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪ್ರತಿಭಟಿಸುವ ಅಗತ್ಯವಿದೆ
ರಾಜ್ಯ ಸರಕಾರ ಕೋಟಿಗಟ್ಟಲೆ ಹಣವನ್ನು ಯಾವ್ಯಾವುದೋ ವಿಷಯಕ್ಕೆ ವ್ಯರ್ಥ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ವೈದ್ಯರ ನೇಮಕಾತಿ ನಡೆದಿಲ್ಲ. ಜನರು ಪ್ರತಿಭಟಿಸುವ ಅಗತ್ಯ ಇದೆ.
– ತಿರುಮಲ,
ಸ್ಥಳೀಯರು
ರಸ್ತೆ ತಡೆ ಮಾಡುತ್ತೇವೆ
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರೋಗ್ಯ ಬಂಧು ಯೋಜನೆಯಲ್ಲಿ ಸುಳ್ಯದ ಕೆವಿಜಿ ಮಡಿಕಲ್ ಕಾಲೇಜಿನವರು ನಿರ್ವಹಣೆ ಮಾಡುತ್ತಿದ್ದರು. ಈಗ ಅವರ ಅವಧಿ ಕೊನೆಗೊಂಡಿದೆ. ಇದೀಗ ನಿರ್ವಣೆ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ಪಡೆದುಕೊಂಡಿದೆ. ಇಲ್ಲಿ 22 ಹುದ್ದೆಗಳ ಪೈಕಿ 20 ಹುದ್ದೆಗಳು ಖಾಲಿ ಬಿದ್ದಿವೆ. ಪರಿಸ್ಥಿತಿ ಮುಂದುವರಿದರೆ ಸಂಪಾಜೆ ರಾಜ್ಯ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು.
– ಬಾಲಚಂದ್ರ ಕಳಗಿ,
ಸಂಪಾಜೆ ಗ್ರಾ.ಪಂ. ಅಧ್ಯಕ್ಷರು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.