ಎನ್‌ಐಟಿಕೆಯನ್ನು ಐಐಟಿ ಮಟ್ಟಕ್ಕೆ ಏರಿಸುವುದೇ ಗುರಿ: ಬಲವೀರ ರೆಡ್ಡಿ
Team Udayavani, Jul 7, 2018, 1:19 PM IST
*ಕೌಶಲ ಅಭಿವೃದ್ಧಿ, ಐಎಎಸ್ ತರಬೇತಿ ಕೇಂದ್ರಕ್ಕೆ ಯೋಜನೆ
*ನೂರು ವಿದ್ಯಾರ್ಥಿಗಳ ತರಬೇತಿ ಕೇಂದ್ರ
ಸುರತ್ಕಲ್: ಇಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದ (ಎನ್‌ಐಟಿಕೆ) ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿ ಡಾ| ಕೆ. ಬಲವೀರ ರೆಡ್ಡಿ ಅವರನ್ನು ರಾಷ್ಟ್ರಪತಿ ನೇಮಕ ಮಾಡಿದ್ದಾರೆ. ಜೂ.28ರಿಂದ ಡಾ| ರೆಡ್ಡಿ ಮೂರು ವರ್ಷ ಈ ಹುದ್ದೆಯಲ್ಲಿರಲಿದ್ದಾರೆ.
ತಮ್ಮ ಯೋಜನೆ, ಕನಸುಗಳನ್ನು “ಉದಯವಾಣಿ’ ಜತೆಗೆ ಹಂಚಿಕೊಂಡ ಅವರು, ಎನ್‌ಐಟಿಕೆಯನ್ನು ಐಐಟಿ ಮಟ್ಟಕ್ಕೇರಿಸುವ ಗುರಿ ಹೊಂದಿದ್ದೇನೆ. ಉಪನ್ಯಾಸ, ಕಲಿಕೆ, ಪ್ರಗತಿ ಪರಿಶೀಲನೆ- ಈ ತ್ರಿವಳಿ ಸೂತ್ರ ಅಳವಡಿಸಿಕೊಂಡು ದೇಶದ ಎನ್‌ಐಟಿಗಳಲ್ಲಿ ಪ್ರಥಮ ಸ್ಥಾನ ಹೊಂದುವಂತೆ ಮಾಡುವ ಯೋಜನೆ ಇದೆ. ಲ್ಯಾಬ್‌ಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದರು.
ಕೌಶಲ ಅಭಿವೃದ್ಧಿಗೆ ವಿಶೇಷ ಕಟ್ಟಡ
ಎನ್‌ಐಟಿಕೆ ವಿದ್ಯಾರ್ಥಿಗಳು ಅಪಾರ ಪ್ರತಿಭಾವಂತರಾಗಿರುತ್ತಾರೆ. ಅವರ ಕೌಶಲ ಅಭಿವೃದ್ಧಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘ ನೂತನ ಕಟ್ಟಡ ನಿರ್ಮಿಸಿ, ಸೌಲಭ್ಯ ಒದಗಿಸಲು ಮುಂದೆ ಬಂದಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಐಎಎಸ್, ಐಪಿಎಸ್, ಐಆರ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲೂ ತರಬೇತಿ ಕೇಂದ್ರ ತೆರೆಯಲಾಗುವುದು ಎಂದಿದ್ದಾರೆ.
ಉದ್ದಿಮೆ ಆರಂಭಕ್ಕೆ ಪ್ರೋತ್ಸಾಹ: ವೃತ್ತಿಪರ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು. ಇದಕ್ಕಾಗಿ ಕನಿಷ್ಠ 100 ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಡಾ| ರೆಡ್ಡಿ ಹೇಳಿದರು.
ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಸಿದ್ಧ
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆದೇಶದಂತೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಎನ್‌ಐಟಿಕೆ ಎಲ್ಲ ಸೌಲಭ್ಯ ಒದಗಿಸಲಿದೆ. ಈ ಹಿಂದೆ ಮೂರು ಬಾರಿ ಪ್ರಯತ್ನಿಸಿದ್ದರೂ ಇದು ಕೈಗೂಡಿರಲಿಲ್ಲ. ಈಗ ಎನ್‌ಐಟಿಕೆ ಕೇಂದ್ರದ ಅಧಿಧೀನದಲ್ಲಿ ಇರುವುದರಿಂದ ಹಣಕಾಸು ವ್ಯವಸ್ಥೆಗಳೂ ಕೇಂದ್ರದ ಅಧಿಧೀನದಲ್ಲೇ ಇರುತ್ತವೆ. ಹೀಗಾಗಿ ಈಗಿರುವ ಸಿಬಿಎಸ್‌ಸಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಕೇಂದ್ರೀಯ ಶಾಲೆಯಾಗಿ ಪರಿವರ್ತಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.
ಯಾರಿವರು ಬಲವೀರ ರೆಡ್ಡಿ?
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ನಿವೃತ್ತ ಉಪಕುಲಪತಿಯಾಗಿದ್ದಾರೆ. ಐಐಟಿ ಖರಗ್‌ಪುರದಲ್ಲಿ ಸ್ನಾತಕೋತ್ತರ ಪದವಿ, ಐಐಟಿ ಮದ್ರಾಸ್‌ನಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಹಿಂದೆ ಎನ್‌ಐಟಿಕೆ ರೀಜನಲ್ ಎಂಜಿನಿಯರಿಂಗ್ ಕಾಲೇಜು ಆಗಿದ್ದಾಗ ಇಲ್ಲಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.