ಮರ, ವಿದ್ಯುತ್ ಕಂಬ ಧರಾಶಾಯಿ; ಜನಜೀವನ ಅಸ್ತವ್ಯಸ್ತ
Team Udayavani, Aug 15, 2018, 10:18 AM IST
ಮಹಾನಗರ: ಕೆಲವು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮಂಗಳವಾರವೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಮುಂಜಾನೆಯಿಂದಲೇ ಸುರಿದ ಭಾರಿ ಮಳೆಯಿಂದ ನಗರ ಕೆಲವು ತಗ್ಗುಪ್ರದೇಶಗಳು ಜಾಲಾವೃತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಗಾಳಿ ಮಳೆಗೆ ಕೆಲವು ಭಾಗಗಳಲ್ಲಿ ಮರ, ವಿದ್ಯುತ್ ಕಂಬ ಧರಾಶಾಯಿಯಾಗಿದೆ.
ಮಳೆ ಅಬ್ಬರ ಹೆಚ್ಚಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ ಮಂಗಳವಾರವೂ ಪದವಿ ಕಾಲೇಜು ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಸಮುದ್ರದ ಬದಿ ಯಾರೂ ಹೋಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು.
ತಾತ್ಕಾಲಿಕ ಗುಡಿಸಲಿಗೆ ನೀರು
ಮೇರಿಹಿಲ್ ವಿಕಾಸ್ ಕಾಲೇಜು ಬಳಿಯ ತಗ್ಗುಪ್ರದೇಶಗಳಲ್ಲಿ ನೀರು ತುಂಬಿ ಆ ಪ್ರದೇಶದ ಜನರಿಗೆ ಸಂಕಷ್ಟ ಎದುರಾಯಿತು. ಹೊಗೆ ಬಜಾರ್ ಶಾಲೆಯ ಹಿಂಭಾಗದ ಓಣಿಗಳಲ್ಲಿದ್ದ ಮೀನುಗಾರರ ತಾತ್ಕಾಲಿಕ ಗುಡಿಸಲಿಗೆ ನೀರು ನುಗ್ಗಿ ಸಮಸ್ಯೆಯಾಯಿತು.
ಮನೆ ಮೇಲೆ ಮರ, ನಷ್ಟ
ಕೋಡಿಕಲ್ ಜೋಕಟ್ಟೆ 11ನೇ ಬಿ ಅಡ್ಡರಸ್ತೆಯ ಕೃಷ್ಣ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದ ಅಪಾರ ನಷ್ಟ ಸಂಭವಿಸಿದೆ. ಮೇಯರ್ ಭಾಸ್ಕರ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಆಯುಕ್ತ ಮೊಹಮ್ಮದ್ ನಝೀರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದೇ ರಸ್ತೆಯಲ್ಲಿನ 6 ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ವ್ಯತ್ಯಯವಾಗಿದೆ.
ಇನ್ನೆರಡು ದಿನ ಭಾರಿ ಮಳೆ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೆರಡು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಮೀನು ಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಟ್ರಾಫಿಕ್ ಜಾಮ್
ಮಧ್ಯಾಹ್ನ ದ ವೇಳೆ ಜಿಟಿಪಿಟಿ ಮಳೆಗೆ ನಂತೂರು, ಪಂಪ್ ವೆಲ್, ಪಿವಿಎಸ್ ಬಳಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು. ಈ ನಡುವೆ ನಗರದ ಕೆಲವು ಭಾಗಗಳಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದುದರಿಂದಲೂ ವಾಹನ ಸವಾರರಿಗೆ ಸಮಸ್ಯೆಯಾಯಿತು. ಕುಲಶೇಖರ ಸೇರಿದಂತೆ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.