ಪಾಳು ಬಿದ್ದಿದ ಮೂರು ಬಂಗಲೆ ಸದ್ಬಳಕೆಗೆ ಪಾಲಿಕೆ ಚಿಂತನೆ
Team Udayavani, Dec 22, 2017, 11:37 AM IST
ಮಣ್ಣಗುಡ್ಡೆ: ಮೇಯರ್ ಅಧಿಕೃತ ನಿವಾಸ ಸಹಿತ ಪಾಳು ಬಿದ್ದಿರುವ ಪಾಲಿಕೆಯ 3ಬಂಗಲೆಗಳನ್ನು ಸದುಪಯೋಗಪಡಿಸಿಕೊಳ್ಳಲು ಪಾಲಿಕೆ ಮುಂದಾಗಿದೆ. ‘ಮೇಯರ್ ಬಂಗಲೆ ಕರೆಂಟ್ ಕಟ್: ಮೆಸ್ಕಾಂನಿಂದ ನೋಟಿಸ್! ಪಾಳು ಬಿದ್ದಿವೆ ಮಹಾನಗರ ಪಾಲಿಕೆಯ ಮೂರು ಬಂಗಲೆ’ ಶೀರ್ಷಿಕೆಯಡಿ ‘ಸುದಿನ’ದಲ್ಲಿ ಬುಧವಾರ ಪ್ರಕಟಗೊಂಡಿದ್ದ ವಿಸ್ತೃತ ವರದಿಗೆ ಸ್ಪಂದಿಸಿರುವ ಮೇಯರ್ ಕವಿತಾ ಸನಿಲ್ ಹಾಗೂ ಪಾಲಿಕೆ ಅಧಿಕಾರಿಗಳು, ಬಂಗಲೆಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಕರೆಸಿ ಮೇಯರ್ ಮಾಹಿತಿ ಪಡೆದುಕೊಂಡಿದ್ದಾರೆ.
ಬಂಗಲೆಗೆ ಸಂಬಂಧಿಸಿದ ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದಕ್ಕೂ ಅಧಿಕಾರಿಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡಿದ್ದು, ಬಿಲ್ ಪಾವತಿ ಯಾಕೆ ವಿಳಂಬವಾಗಿದೆ ಎಂಬ ಬಗ್ಗೆಯೂ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿರುವ ಮೇಯರ್ ಕವಿತಾ ಸನಿಲ್, ‘ನಿರ್ವಹಣೆ ಯಿಲ್ಲದೆ ಪಾಳು ಬಿದ್ದಿರುವ ಮೂರು
ಬಂಗಲೆಯನ್ನು ತತ್‌ಕ್ಷಣ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಪೈಕಿ ಎಂಜಿನಿಯರ್‌ಗಳಿಗೆ ಹಂಚಿಕೆಯಾಗಿರುವ ಎರಡು ಬಂಗಲೆಗಳನ್ನು ಸದ್ಯ ಹಾಸ್ಟೆಲ್ ಗಳಲ್ಲಿ ತಂಗಿರುವ ಪಾಲಿಕೆಯ ಮಹಿಳಾ ಎಂಜಿನಿಯರ್‌ಗಳಿಗೆ ನೀಡುವ ಕುರಿತು ಚಿಂತಿಸಲಾಗುತ್ತಿದೆ. ಮೇಯರ್ ವಾಸವನ್ನು ಬೇರೆಯವರ ವಾಸ್ತವ್ಯಕ್ಕೆ ನೀಡುವುದಕ್ಕೆ ಪಾಲಿಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಮೇಯರ್ ಬಂಗಲೆ ನಿರ್ವಹಣೆ ಬಗ್ಗೆ ಮುತುವರ್ಜಿ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ನನ್ನ ಅವಧಿಯಲ್ಲಿ ಮೇಯರ್ ಬಂಗಲೆ ದುರಸ್ತಿಗೆ ಹಣ ಖರ್ಚು ಮಾಡಿಲ್ಲ. ಈ ಹಿಂದೆ ಪತ್ರಿಕೆಯೊಂದರಲ್ಲಿ ಮೇಯರ್ ಬಂಗಲೆಯ ವಿಚಾರ ಪ್ರಸ್ತಾಪವಾಗಿದ್ದಾಗ, ಶಿಥಿಲಗೊಂಡಿದ್ದ ಅದರ ಬಾಗಿಲುಗಳನ್ನು ದುರಸ್ತಿಪಡಿಸುವ ಕೆಲಸವನ್ನಷ್ಟೇ ಎಂಜಿನಿಯರ್‌ಗಳ ಮೂಲಕ ಮಾಡಿಸಿದ್ದೇನೆಯೇ ಹೊರತು ನವೀಕರಣಕ್ಕೆ ಖರ್ಚು ಮಾಡಿಲ್ಲ. ಮೆಸ್ಕಾಂನಲ್ಲಿ ಪಾಲಿಕೆಯ 9.81 ಕೋಟಿ ರೂ. ಠೇವಣಿ ಇದೆ. ಈ ಬಂಗಲೆಯಲ್ಲಿ ಯಾರೂ ವಾಸವಿಲ್ಲದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಗಮನಕ್ಕೆ ಬಂದಿಲ್ಲ. ಎಲ್ಲ ರೀತಿಯ ಅವ್ಯವಸ್ಥೆ ಸರಿಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ತಿಳಿಸಿದ್ದಾರೆ
ಸ್ವಚ್ಛತೆ ಕಾರ್ಯ ಶುರು
ಪಾಳು ಬಿದ್ದಿರುವ ಮೂರು ಬಂಗಲೆಗಳಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಆವರಣದಲ್ಲಿ ಬೆಳೆದು ನಿಂತಿರುವ ಪೊದೆ-ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.