ಕಾಯಕಲ್ಪಕ್ಕೆ ಕಾಯುತ್ತಿದೆ ಕಡಬದ ಪರಿವೀಕ್ಷಣ ಮಂದಿರ
Team Udayavani, Jan 8, 2018, 4:48 PM IST
ಕಡಬ: ಸುಮಾರು 8 ದಶಕಗಳ ಇತಿಹಾಸವನ್ನು ಹೊಂದಿರುವ ಕಡಬದ ಈ ಪರಿವೀಕ್ಷಣ ಮಂದಿರ ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಯಿಂದಾಗಿ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲಗೊಂಡಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪರಿವೀಕ್ಷಣ ಮಂದಿರ ಹಲವು ವರ್ಷಗಳಿಂದ ಜನ ಸಂಪರ್ಕವಿಲ್ಲದೆ ಅನಾಥವಾಗಿದೆ. ಸಮುದಾಯ ಆಸ್ಪತ್ರೆಯ ಆವರಣದಲ್ಲಿರುವ ಈ ಕಟ್ಟಡ ಆರಂಭದಲ್ಲಿ ವೈದ್ಯಾಧಿಕಾರಿಗಳ ವಸತಿಗೃಹವಾಗಿತ್ತು. ಪುತ್ತೂರು ಬಿಡಿಒ ಕಚೇರಿ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿತ್ತು. ಅನಂತರ 2 ಕೊಠಡಿಗಳನ್ನು ಸೇರಿಸಿ ಪುನಶ್ಚೇತನಗೊಳಿಸಿ ಈ ಕಟ್ಟಡ ವನ್ನು ಪರಿವೀಕ್ಷಣ ಮಂದಿರವಾಗಿ ಪರಿವರ್ತಿಸಲಾಗಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ತಾ.ಪಂ. ಹಾಗೂ ಗ್ರಾ.ಪಂ. ಆಡಳಿತ ಇದರ ನಿರ್ವಹಣೆಯ ಹೊಣೆ ಹೊತ್ತು ಕೊಂಡಿತಾದರೂ ಪ್ರಸ್ತುತ ಈ ಕಟ್ಟಡವನ್ನು ಯಾರೂ ಕೇಳುವವರಿಲ್ಲದಂತಾಗಿದೆ. ಇದೀಗ ಕಡಬವನ್ನು ತಾಲೂಕು ಕೇಂದ್ರವಾಗಿ ಸರಕಾರ ಗುರುತಿಸಿರುವುದರಿಂದ ಪ್ರವಾಸಿ ಮಂದಿರವನ್ನು ದುರಸ್ತಿಗೊಳಿಸಿ ಉಪಯೋಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಆಸಕ್ತಿ ವಹಿಸುವ ಅಗತ್ಯವಿದೆ.
ಪಾಳುಬಿದ್ದು ಭೂತ ಬಂಗಲೆ
ಪಾಳುಬಿದ್ದಿರುವ ಈ ಕಟ್ಟಡ ಈಗ ಸಾಕ್ಷಾತ್ ಭೂತ ಬಂಗಲೆಯಂತೆ ಕಂಡು ಬರುತ್ತಿದೆ. ಆವರಣ ಗೋಡೆ ಇಲ್ಲದೇ
ಇರುವ ಈ ಪ್ರದೇಶವನ್ನು ಸಾರ್ವಜನಿಕರು ತಮ್ಮ ದೇಹ ಬಾಧೆ ತೀರಿಸಿ ಕೊಳ್ಳಲು ಉಪಯೋಗಿಸುತ್ತಿದ್ದು, ಶೌಚಾಲಯವಾಗಿ ಮಾರ್ಪಟ್ಟಿದೆ. ಗಬ್ಬು ನಾರುತ್ತಿರುವ ಹಾಸಿಗೆಗಳು, ಕಮಟು ವಾಸನೆ ಬೀರುವ ಸೋಫಾಗಳು, ಅಸಹ್ಯ ಉಂಟುಮಾಡುವ ಶೌಚಾಲಯಗಳು, ಎಲ್ಲೆಂದರಲ್ಲಿ ಕಟ್ಟಿಕೊಂಡಿರುವ ಜೇಡರ ಬಲೆ, ಬಿರುಕು ಬಿಟ್ಟಿರುವ ಗೋಡೆಗಳು, ವಿದ್ಯುತ್ ಸಂಪರ್ಕವಿಲ್ಲದೆ ಸ್ತಬ್ಧಗೊಂಡಿರುವ ವಿದ್ಯುತ್ ಉಪಕರಣಗಳು, ಕುಸಿದುಬಿದ್ದಿರುವ ಆವರಣ ಗೋಡೆ ಇಲ್ಲಿನ ದುಃಸ್ಥಿತಿಗೆ ಸಾಕ್ಷ್ಯ ನುಡಿಯುತ್ತಿವೆ.
ತಾಂತ್ರಿಕ ಅಡಚಣೆ
ಶಿಥಿಲಗೊಂಡಿರುವ ಗೋಡೆ ಹಾಗೂ ಛಾವಣಿಯನ್ನು ದುರಸ್ತಿಗೊಳಿಸಿ ಕಟ್ಟಡದ ಆವರಣವನ್ನು ಶುಚಿಗೊಳಿಸಿ ನೀರು ನಿಲ್ಲದಂತೆ ಮಣ್ಣು ಹಾಕಿ ಎತ್ತರಿಸುವ ಕಾರ್ಯಕ್ಕೆ ಮುಂದಾಗಿದ್ದೆವು. ದುರಸ್ತಿಯ ಕುರಿತು ಅಂದಾಜುಪಟ್ಟಿ ತಯಾರಿಸಲು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪರಿಶೀಲನೆಯನ್ನೂ ನಡೆಸಿದ್ದರು. ಆದರೆ ಕಟ್ಟಡ ಇರುವ ಜಮೀನಿನ ವಿಚಾರದಲ್ಲಿ ತಾಂತ್ರಿಕ ಅಡಚಣೆಗಳಿರುವುದರಿಂದ ದುರಸ್ತಿ ಕಾರ್ಯದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.
– ಪಿ.ಪಿ. ವರ್ಗೀಸ್,
ಜಿ.ಪಂ. ಸದಸ್ಯರು, ಕಡಬ ಕ್ಷೇತ್ರ
ಕಾಯಕಲ್ಪಕ್ಕೆ ಪ್ರಯತ್ನ
ಕಟ್ಟಡ ಇರುವ ಜಾಗವನ್ನು ಪರಿವೀಕ್ಷಣ ಮಂದಿರದ ಹೆಸರಿಗೆ ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ಬರೆದುಕೊಳ್ಳಲಾಗಿದೆ. ಕಂದಾಯ ಅಧಿಕಾರಿಗಳು ಕಾರ್ಯತತ್ಪರರಾಗಿದ್ದು, ಪರಿವೀಕ್ಷಣ ಮಂದಿರದ ಹೆಸರಿಗೆ
ಜಾಗದ ಪಹಣಿ ಪತ್ರ ದೊರೆಯಲಿದೆ. ಬಳಿಕ ಸರಕಾರಿ ಅನುದಾನ ಪಡೆದು ನೂತನ ಕಟ್ಟಡ ನಿರ್ಮಿಸುವುದೋ
ಅಥವಾ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಉಪಯೋಗಕ್ಕೆ ಸಿದ್ಧಪಡಿಸುವುದೋ ಎಂದು ತೀರ್ಮಾನಿಸಲಾಗುವುದು. ಕಡಬವು ತಾಲೂಕು ಕೇಂದ್ರವಾಗುತ್ತಿರುವುದರಿಂದ ಕಡಬ ಪೇಟೆಯ ಹೃದಯಭಾಗದಲ್ಲಿರುವ ಸದ್ರಿ ಪರಿವೀಕ್ಷಣ ಮಂದಿರಕ್ಕೆ ಕಾಯಕಲ್ಪ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
– ಚೆನ್ನಪ್ಪ ಗೌಡ ಕಜೆಮೂಲೆ,
ಕಡಬ ಗ್ರಾ.ಪಂ. ಪಿಡಿಒ
ನಾಗರಾಜ್ ಎನ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.