ನ್ಯಾಯಸಮ್ಮತ, ಮುಕ್ತ ಚುನಾವಣೆಗೆ ಅತೀವ ಪ್ರಾಮುಖ್ಯ
Team Udayavani, Apr 4, 2018, 2:00 PM IST
ಮಂಗಳೂರು: ರಾಜ್ಯದಲ್ಲಿ ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಸಂಬಂಧ ದಕ್ಷಿಣ ಕನ್ನಡದಲ್ಲಿಯೂ ಜಿಲ್ಲಾಡಳಿತದಿಂದ ಅಗತ್ಯ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ. ಮೂರ್‍ನಾಲ್ಕು ತಿಂಗಳ ಹಿಂದೆಯಷ್ಟೇ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದಿರುವ ಶಶಿಕಾಂತ ಸೆಂಥಿಲ್ ಒಬ್ಬ ದಕ್ಷ ಹಾಗೂ ಖಡಕ್ ಅಧಿಕಾರಿ.
ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷ ಮತದಾನ ನಡೆಯುವುದಕ್ಕೆ ಬೇಕಾದ ಎಲ್ಲ ರೀತಿಯ ಅನುಕೂಲ ವಾತಾವರಣವನ್ನು ನಿರ್ಮಿಸುವುದಕ್ಕೆ ಖುದ್ದು ಜಿಲ್ಲಾಧಿಕಾರಿಯೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಇವಿಎಂ ಯಂತ್ರಗಳ ಸಜ್ಜುಗೊಳಿಸುವಿಕೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇವಿಎಂಗಳ ಪರಿಶೀಲನೆ, ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಅಧಿಕಾರಿಗಳು ಸ್ವತಃ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹ ಮುಂತಾದ ಕಾರ್ಯಕ್ರಮಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ. ‘ಸ್ವೀಪ್’ ಕಾರ್ಯಕ್ರಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮತದಾರ ಜಾಗೃತಿಯನ್ನು ನಡೆಸುವ ಮೂಲಕ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಮತದಾನ ಆಗಬೇಕು ಎಂಬುದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರ ಆಶಯವಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಸಂಬಂಧ ನಡೆಯುತ್ತಿರುವ ಸಿದ್ಧತೆಗಳ ಕುರಿತು ಸೆಂಥಿಲ್ ಅವರು ‘ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಗರಿಷ್ಠ ಮತದಾನ ನಮ್ಮ ಗುರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ಮತದಾನ ನಮ್ಮ ಗುರಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿದೆ. ಇದಕ್ಕೆ ಪೂರಕವಾಗಿ ‘ಸ್ವೀಪ್’ ಮೂಲಕ ಮತದಾರರಿಗೆ ಮಾಹಿತಿ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.’ಬನ್ನಿ ಮತದಾನ ಕೇಂದ್ರ’ಕ್ಕೆ ಎಂಬ ಅಭಿಯಾನ ಆರಂಭಿಸಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳನ್ನು ಹಾಗೂ ಮತದಾನದಿಂದ ದೂರವುಳಿದಿದ್ದ ಮತದಾರರನ್ನು ಗುರಿಯಾಗಿಸಿಕೊಂಡು ಅಂಥ ಕಡೆಗಳಲ್ಲಿ ಹೆಚ್ಚು ಗಮನಹರಿಸಲಾಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾಕರಲ್ಲೂ ಜಾಗೃತಿ ಮೂಡಿಸಲಾಗಿದೆ. ಯುವ ಮತದಾರರಿಗೆ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ವಿವರಿಸಿ ಅವರನ್ನು ಮತದಾನಕ್ಕೆ ಪ್ರೇರೇಪಿಸುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆದಿದೆ. ಕಾಲೇಜುಗಳಲ್ಲಿ ಕ್ಯಾಂಪಸ್ ರಾಯಭಾರಿಗಳನ್ನು ನೇಮಕ ಮಾಡಿ ವಿದ್ಯಾರ್ಥಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ಬೂತ್ ಮಟ್ಟದಲ್ಲಿ ಅಧಿಕಾರಿಗಳು ಅರಿವು ಕಾರ್ಯಕ್ರಮ ಕೈಗೊಂಡಿದ್ದಾರೆ.
ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಕ್ರಮ
ನಮ್ಮ ಜಿಲ್ಲೆಯಲ್ಲಿ ಚುನಾವಣೆಗೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಈಗಾಗಲೇ ಇವಿಎಂಗಳನ್ನು ಸಿದ್ಧಪಡಿಸಲಾಗಿದೆ. ಇವಿಎಂಗಳನ್ನು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಲಾಗಿದೆ. ಇದಕ್ಕಾಗಿ ಆವಶ್ಯಕ ಸಿಬಂದಿಯನ್ನು ಕೂಡ ಗುರುತಿಸಲಾಗಿದೆ. ದಕ್ಷಿಣ ಕನ್ನಡದಂಥ ಜಿಲ್ಲೆಯ ಜನರಲ್ಲಿ ಕಾನೂನಿನ ಸ್ವೀಕೃತಿ ಜಾಸ್ತಿ ಇದೆ. ಆದುದರಿಂದ ನಮ್ಮ ಕೆಲಸ ಸುಲಭ. ಈ ಬಾರಿಯ ಮತದಾನದಲ್ಲಿ ಇವಿಎಂ ಜತೆ ವಿವಿ ಪ್ಯಾಟ್ ಯಂತ್ರಗಳಿರುತ್ತವೆ. ಇದರ ಮೂಲಕ ಮತದಾರ ತನ್ನ ಮತ ಸರಿಯಾಗಿ ಚಲಾವಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ.
ಮತದಾನ ಮಾಡಿದ ಬಳಿಕ ವಿವರಗಳುಳ್ಳ ಚೀಟಿ ಯಂತ್ರದಿಂದ ಹೊರಬಂದು ಮತದಾರರಿಗೆ ಕಾಣಿಸಿಕೊಂಡು 7 ಸೆಕೆಂಡ್ ಬಳಿಕ ಅದರದ್ದೇ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ. ಇದನ್ನು ಮತದಾರ ವೀಕ್ಷಿಸಬಹುದು. ಚುನಾವಣೆ ಯಶಸ್ವಿಯಾಗಿ ನಡೆದಿದೆ ಎಂಬುದಕ್ಕಿಂತಲೂ ಯಾವುದೇ ತಪ್ಪುಗಳಾಗದೆ ನ್ಯಾಯ ಸಮ್ಮತ ಹಾಗೂ ಮುಕ್ತವಾಗಿ ನಡೆಯುವುದು ಅತ್ಯಂತ ಪ್ರಾಮುಖ್ಯ. ಸೋತ ಅಭ್ಯರ್ಥಿಗಳು ಕೂಡ ಚುನಾವಣೆ ನ್ಯಾಯಸಮ್ಮತ ಮತ್ತು ಮುಕ್ತವಾಗಿ ನಡೆದಿದೆ ಎಂದು ಶ್ಲಾ ಸುವಂತೆ ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಎಂಬುದು ನಮ್ಮ ಆಶಯ.
ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿ
ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆ ಕುರಿತಂತೆ ಬಹಳ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಚುನಾವಣೆ ಘೋಷಣೆಯಾದ ಬಳಿಕ ನಾವು ಅಂದರೆ, ಚುನಾವಣೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಿಬಂದಿ ಎಲ್ಲ ರಾಜಕೀಯ ಪಕ್ಷಗಳನ್ನು ಒಂದೇ ತಟ್ಟೆಯಲ್ಲಿಟ್ಟು ನೋಡುತ್ತೇವೆ.
ಅಕ್ರಮ ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ
ಚುನಾವಣೆ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ. ಇದು ನಮ್ಮ ರಾಜ್ಯ ಅಥವಾ ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಇದಕ್ಕೆ ಅಡ್ಡಿಪಡಿಸಲು ಯಾರಾದರೂ ಪ್ರಯತ್ನಿಸಿದರೆ ಅವರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಠಿನ ಕ್ರಮ ಎಂಬುದು ಅಕ್ರಮ ಎಸಗುವ ಒಬ್ಬರ ವಿರುದ್ಧ ತೆಗೆದುಕೊಳ್ಳುವ ಶಿಸ್ತುಕ್ರಮ; ಎಲ್ಲರಿಗೂ ಪಾಠವಾಗುವಂತೆ ಇರಬೇಕು ಮತ್ತು ಇರುತ್ತದೆ.
ಮತದಾರ ಜಾಗೃತಿ: ನಗರ ಪ್ರದೇಶಕ್ಕೂ ಹೆಚ್ಚು ಗಮನ
ಈ ಹಿಂದಿನ ಚುನಾವಣೆಗಳ ಮತದಾನಗಳ ಅಂಕಿ- ಅಂಶಗಳನ್ನು ನೋಡಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರದೇಶದಲ್ಲೂ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈಗಾಗಲೇ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ನಗರದಲ್ಲಿ ಅಲ್ಲಲ್ಲಿ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಜಿಂಗಲ್ಸ್ ಬಿಡುಗಡೆ ಮಾಡಲಾಗಿದೆ, ಮತದಾನ ಅರಿವಿನ ಯಕ್ಷಗಾನ ಹಾಡು ಹೊರತರಲಾಗಿದೆ. ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿಗಳನ್ನು ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳ ಮೂಲಕವೂ ಜಾಸ್ತಿ ಕಡೆ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಈ ಬಾರಿ ಜಿಲ್ಲೆಯ ನಗರ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುತ್ತದೆ ಎನ್ನುವ ಆಶಾವಾದವನ್ನು ನಾವು ಹೊಂದಿದ್ದೇವೆ.
ಕೇಶವ ಕುಂದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.