ದ. ಕ.: ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖ
Team Udayavani, Dec 1, 2018, 10:53 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ವರ್ಷಗಳ ಅಂಕಿ ಅಂಶವನ್ನು ಅವಲೋಕಿಸಿದರೆ ಎಚ್‌ಐವಿ ಸೋಂಕುಪೀಡಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.
ಡಿ. 1ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, 2007ರಲ್ಲಿ ಜಿಲ್ಲೆಯಲ್ಲಿ 1,245 ಮಂದಿಯಲ್ಲಿ, 2017ರಲ್ಲಿ 56,029 ಮಂದಿಯಲ್ಲಿ 595 ಜನರಲ್ಲಿ ಸೋಂಕು ಕಂಡುಬಂದಿತ್ತು. 2011ರಲ್ಲಿ 82 ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದ್ದರೆ, 2017ರಲ್ಲಿ 13 ಗರ್ಭಿಣಿಯರಲ್ಲಿ ಸೋಂಕು ಕಂಡುಬಂದಿತ್ತು. 2006ರಿಂದ 2018 ಅಕ್ಟೋಬರ್ ವರೆಗೆ 1,909 ಪುರುಷರು ಹಾಗೂ 1,716 ಮಹಿಳೆಯರು ಹಾಗೂ 336 ಮಕ್ಕಳು ಸೇರಿ ಒಟ್ಟು 4,051 ಎಚ್‌ಐವಿ ಸೋಂಕಿತರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್‌ಐವಿ/ಏಡ್ಸ್ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಒಟ್ಟು 11 ವರ್ಷಗಳ ಅಂಕಿ ಅಂಶವನ್ನು ಪರಿಗಣಿಸಿದರೆ ಎಚ್‌ಐವಿ ಸೋಂಕಿತ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದು ವಿವರಿಸಿದರು.
ಹೊರ ರಾಜ್ಯದವರು ಹೆಚ್ಚು
2018ರ ಜನವರಿಯಿಂದ ಅಕ್ಟೋಬರ್ ವರೆಗೆ ಪರೀಕ್ಷೆಗೊಳಪಟ್ಟ 54,145 ಮಂದಿಯಲ್ಲಿ 290 ಪುರುಷರು ಹಾಗೂ 172 ಮಹಿಳೆಯರು ಸೇರಿ ಒಟ್ಟು 462 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ 14 ವರ್ಷಕ್ಕಿಂತ ಕೆಳಗಿನ ನಾಲ್ವರು ಮಕ್ಕಳು, 15ರಿಂದ 49 ವರ್ಷದೊಳಗಿನ 357 ಹಾಗೂ 49 ವರ್ಷಕ್ಕೆ ಮೇಲ್ಪಟ್ಟ 101 ಮಂದಿ ಇದ್ದಾರೆ. ಮಂಗಳೂರು ತಾಲೂಕಿನಲ್ಲಿ 138, ಬಂಟ್ವಾಳ – 42, ಬೆಳ್ತಂಗಡಿ -36, ಪುತ್ತೂರು-27, ಸುಳ್ಯ- 25 ಹಾಗೂ ಹೊರ ಜಿಲ್ಲೆಗಳು ಹಾಗೂ ಹೊರರಾಜ್ಯದ 194 ಮಂದಿ ಸೇರಿದ್ದಾರೆ. 10 ಮಂದಿ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವಿವರಿಸಿದರು.
ಜಿಲ್ಲಾಮಟ್ಟದ ಏಡ್ಸ್ ದಿನಾಚರಣೆ
ಜಿಲ್ಲಾ ಮಟ್ಟದ ಏಡ್ಸ್ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ ಡಿ. 1ರಂದು ಆಯೋಜಿಸಲಾಗಿದೆ. ನಗರದ ಕುಡುಪು ತೇಜಸ್ವಿನಿ ಕಾಲೇಜು ಆಫ್ ನರ್ಸಿಂಗ್‌ನ ಸಮೀಕ್ಷಾ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಮುನ್ನ ವಾಮಂಜೂರು ವೃತ್ತದಿಂದ ತೇಜಸ್ವಿನಿ ಕಾಲೇಜಿನವರೆಗೆ ಜನಜಾಗೃತಿ ಜಾಥಾ ನಡೆಯಲಿದೆ ಎಂದು ಡಾ| ರಾಮಕೃಷ್ಣ ರಾವ್ ಅವರು ತಿಳಿಸಿದರು.
“ನಿಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ’ ಎಂಬ ಧ್ಯೇಯವಾಕ್ಯದಡಿ ಈ ಬಾರಿಯ ವಿಶ್ವ ಏಡ್ಸ್ ದಿನಾಚರಣೆ ನಡೆಯುತ್ತಿದೆ. ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಸೋಂಕುಪೀಡಿತರು ಎಂದು ಕಂಡುಬಂದವರಿಗೆ ಆಪ್ತ ಸಮಾಲೋಚನೆ ನಡೆಸಿ ಎಆರ್‌ಟಿ ಚಿಕಿತ್ಸೆಗಾಗಿ ಕಳುಹಿಸಲಾಗುವುದು. ಈ ಚಿಕಿತ್ಸೆ ಉಚಿತ ಎಂದರು.
ವಿಶೇಷ ಕಾರ್ಯಕ್ರಮ
ಜಿಲ್ಲೆಯಲ್ಲಿ 2018-19ರಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಹಿತಿ ಶಿಕ್ಷಣ ಕಾರ್ಯಕ್ರಮದಡಿ ಡಿ. 1ರಿಂದ ಜಿಲ್ಲೆಯಾದ್ಯಂತ ಎಚ್‌ಐವಿ/ಏಡ್ಸ್ ಜನಜಾಗೃತಿ, 93 ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಸ್ಥಾಪನೆ ಮತ್ತು ಆಯ್ದ 200 ಪ್ರೌಢಶಾಲೆ ಹಾಗೂ 32 ಪ.ಪೂ. ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಬದ್ರುದ್ದೀನ್ ಎಂ.ಎನ್. ಉಪಸ್ಥಿತರಿದ್ದರು.
ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದದಂತೆ ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ರಕ್ತದಿಂದ ಅಥವಾ ಸಿರಿಂಜ್‌ನಿಂದ ಎಚ್‌ಐವಿ ಸೋಂಕು ಹರಡಿದ ಪ್ರಕರಣಗಳು ವರದಿಯಾಗಿಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕವೇರ್ಪಟ್ಟಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಕಂಡುಬಂದರೆ ಎಆರ್‌ಟಿ ಸೆಂಟರ್‌ಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುತ್ತದೆ. ಮಂಗಳೂರಿನಲ್ಲಿ ವೆನಾÉಕ್ ಆಸ್ಪತ್ರೆ, ಅತ್ತಾವರ ಕೆಎಂಸಿಯಲ್ಲಿ ಎಆರ್‌ಟಿ ಕೇಂದ್ರಗಳಿವೆ. ಇದಲ್ಲದೆ 11 ಕಡೆ ಲಿಂಕ್ ಎಆರ್‌ಟಿ ಕೇಂದ್ರಗಳಿವೆ ಎಂದು ಡಾ| ರಾಮಕೃಷ್ಣ ರಾವ್ ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.