ಯೋಗಾಭ್ಯಾಸಿಗಳಿಗೆ ಉದ್ದೇಶ ಸ್ಪಷ್ಟವಿರಬೇಕು
Team Udayavani, Jul 4, 2019, 9:44 AM IST
ಕಡಬ: ಯೋಗಾಭ್ಯಾಸಕ್ಕೆ ವಯಸ್ಸು, ಜಾತಿ, ಮತ, ಪಂಥಗಳ ತೊಡಕಿಲ್ಲ. ಯುವಕರು, ವೃದ್ಧರು, ಅತಿವೃದ್ಧರು, ವ್ಯಾಧಿಪೀಡಿತರು, ದುರ್ಬಲರು -ಹೀಗೆ ಯಾರು ಬೇಕಾದರೂ ಯೋಗಾಭ್ಯಾಸ ಮಾಡಬಹುದು. ಆದರೆ ನಿರ್ದಿಷ್ಟ ಆಸನಗಳಿಗೆ ಮಾತ್ರ ಕೆಲವು ನಿಬಂಧನೆಗಳಿವೆ. ಉದಾಹರಣೆಗೆ, ಹೃದಯ ಸಂಬಂಧಿ ತೊಂದರೆಗಳಿರುವವರು ಸರ್ವಾಂಗಾಸನ ಮಾಡುವುದು, ಮಹಿಳೆಯರು ಮಯೂರಾಸನ ಮಾಡುವುದಕ್ಕೆ ನಿಷೇಧವಿದೆ.
ಯೋಗಾಭ್ಯಾಸಿಗಳಿಗೆ ಯೋಗ ಮಾಡುವ ಉದ್ದೇಶ ಸ್ಪಷ್ಟವಿರಬೇಕು. ದೇಹದಾಡ್ಯಕ್ಕೆ ಎಂದಾದರೆ ಆಸನಗಳನ್ನು ಹೆಚ್ಚು ಮಾಡುವುದು ಒಳಿತು. ಉತ್ತಮ ಆರೋಗ್ಯಕ್ಕೆ ಎಂದಾದರೆ ಆಸನ, ಪ್ರಾಣಾಯಾಮ, ಧ್ಯಾನ ಇವುಗಳನ್ನು ಸಮತೋಲನದಲ್ಲಿ ಅಭ್ಯಸಿಸುವುದು ಉತ್ತಮ. ಯಾವುದೇ ವ್ಯಾಧಿಯಿಂದ ಬಳಲುತ್ತಿದ್ದರೆ ಆರೋಗ್ಯ ಸುಧಾರಿಸುವವರೆಗೆ ಯೋಗ ಗುರುಗಳು ಸೂಚಿಸಿದ ಆಸನಗಳನ್ನು ಮಾತ್ರ ಮಾಡಬಹುದು.
“ಯೋಗಃ ಕರ್ಮಸು ಕೌಶಲಂ’ ಎನ್ನುವ ಮಾತಿದೆ. ಅಂದರೆ ಯೋಗ ಎನ್ನುವುದು ಒಂದು ಜೀವನ ಪದ್ಧತಿ. ನಾವು ಮಾಡುವ ಕೆಲಸವನ್ನು ಉತ್ಕೃಷ್ಟವಾಗಿ ಮಾಡಲು ಯೋಗ ಎನ್ನುವುದು ಪೂರಕವಾದ ಜೀವನ ಕಲೆಯಾಗಿದೆ. ಯಾವುದೋ ಒಂದು ರೋಗಕ್ಕೆ ಪರಿಹಾರ ಎಂಬಂತೆ ಯೋಗಾಭ್ಯಾಸಕ್ಕೆ ತೊಡಬೇಕಿಲ್ಲ. ಯೋಗಾಭ್ಯಾಸ ಎನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ ಎನ್ನುವಂತೆ ನಮ್ಮ ದಿನಚರಿಯಲ್ಲಿ ಅಳವಡಿಸಿ ಕೊಳ್ಳಬಹುದು. ಸಂತುಲಿತ ಜೀವನಕ್ಕೆ ಯೋಗ ಸಹಕಾರಿ.
ದಿನನಿತ್ಯದ ಜೀವನದಲ್ಲಿನ ಒತ್ತಡ ನಿರ್ವಹಣೆಗೆ, ಉತ್ತಮ ಕಾರ್ಯಕ್ಷಮತೆಗೆ ಯೋಗವು ಪೂರಕ. ಯಾರದೋ ಒತ್ತಾಯಕ್ಕೆ ಒಂದೆರಡು ದಿನ ಯೋಗಾಭ್ಯಾಸ ಮಾಡಿ ಪ್ರಯೋಜನ ನಿರೀಕ್ಷೆ ಮಾಡುವುದು ತರವಲ್ಲ.
ದಿನದಲ್ಲಿ ಕನಿಷ್ಠ 10 ನಿಮಿಷದಿಂದ 1 ಗಂಟೆಯವರೆಗೆ ಯೋಗವನ್ನು ಕನಿಷ್ಠ 21 ದಿನ ಅಭ್ಯಸಿಸಿದರೆ ನಮ್ಮಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಧನಾತ್ಮಕ ಬದಲಾವಣೆ ಕಂಡುಕೊಳ್ಳಬಹುದು. ಕಾರ್ಯಕ್ಷಮತೆ ಹೆಚ್ಚುವುದನ್ನು ಗಮನಿಸಬಹುದು.
ಯೋಗ್ಯಾಭ್ಯಾಸಕ್ಕೆ ಸಸ್ಯಾಹಾರ ಅಥವಾ ಮಾಂಸಾಹಾರ ಎನ್ನುವ ಭೇದವಿಲ್ಲ. ಮಾಂಸಾಹಾರ ತ್ಯಜಿಸಬೇಕೆಂದಿಲ್ಲ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಒಂದು ಲೋಟ ನೀರು ಕುಡಿದು ಯೋಗಾಭ್ಯಾಸ ಮಾಡಬೇಕು. ಆಹಾರ ಸೇವಿಸಿದ ಅನಂತರ 4 ಗಂಟೆ ಯೋಗಾಭ್ಯಾಸ ಬೇಡ. ಪ್ರಾಣಾಯಾಮ ಮಾಡಬೇಕೆಂದಿದ್ದಲ್ಲಿ ಆಹಾರ ಸೇವನೆ ಬಳಿಕ 6 ಗಂಟೆ ಕಳೆದು ಮಾಡಬಹುದು. ಶರೀರ, ಮನಸ್ಸು, ಉಸಿರಾಟ ಇವುಗಳಿಗೆ ನೇರವಾದ ಸಂಬಂಧವಿದೆ. ಮನಸ್ಸಿಗೆ ನೋವಾದರೆ ಶರೀರವು ಕೃಶವಾಗುತ್ತದೆ. ಮನಸ್ಸಿನ ಭಾವನೆಗಳು ಏರು ಪೇರಾದರೆ ಉಸಿರಾಟದ ವೇಗ ಹೆಚ್ಚುತ್ತದೆ. ಅದೇ ರೀತಿ ಶರೀರಕ್ಕೆ ಸೇವಿಸುವ ಆಹಾರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಆದಷ್ಟು ಸಾತ್ವಿಕ ಆಹಾರ ಸೇವನೆ ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಪೂರಕ.
ಸತೀಶ್ ಭಟ್ ರಾಮಕುಂಜ
21 ವರ್ಷಗಳ ಕಾಲ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸತೀಶ್ ಭಟ್ ಅವರು 5 ವರ್ಷಗಳಿಂದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ವತಿಯಿಂದ ಶಿಕ್ಷಕರಿಗೆ ನಡೆದ ಯೋಗ ತರಗತಿಗಳಲ್ಲಿ 1992ರಿಂದ ಪ್ರತಿವರ್ಷ ತರಬೇತಿ ಪ್ರ ಶಿಕ್ಷಣವನ್ನು ಪಡೆದಿದ್ದಾರೆ. ಬೆಂಗಳೂರಿನ ಪಟ್ಟಾಭಿರಾಮ್ ಅವರಿಂದ ಯೋಗ, ಪ್ರಾಣಾಯಾಮ ತರಬೇತಿ ಪಡೆದ ಅನುಭವಿ. 1997ನೇ ಜಿಲ್ಲಾ ಮಟ್ಟದ ಯೋಗ ಸಮ್ಮೇಳನದಲ್ಲಿ ಕಾರ್ಯದರ್ಶಿಯಾಗಿ ಯಶಸ್ವಿ ಸಂಘಟಕರೆನ್ನುವ ಹೆಸರು ಪಡೆದಿರುವ ಇವರು, 2017ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಜೇಸಿಯಲ್ಲಿ ತರಬೇತುದಾರರಾಗಿ ಸಾವಿರಾರು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.