ಸೇವಾ ಮನೋಭಾವ ಎಲ್ಲರಲ್ಲೂ ಬೆಳೆಯಲಿ
Team Udayavani, Apr 2, 2018, 4:04 PM IST
ಬದುಕು ಸುಂದರವಾಗಿರಬೇಕು ಎಂದು ಎಲ್ಲರೂ ಬಯಸುತ್ತೇವೆ. ಆದರೆ ಎಲ್ಲರ ಬದುಕು ಸುಂದರವಾಗಿರಲು ಸಾಧ್ಯವಿಲ್ಲ. ಎಷ್ಟೇ ಕಷ್ಟಗಳು ಬಂದರು ಅದನ್ನು ಖುಷಿ ಖುಷಿಯಿಂದ ಸ್ವೀಕರಿಸುತ್ತಿರುವ ಅದೇಷ್ಟೋ ಮಂದಿ ನಮ್ಮ ನಡುವೆಯೇ ಇರುತ್ತಾರೆ. ಅಂಥವರು ಸಹಾಯ ಬೇಡಿ ನಮ್ಮ ಬಳಿ ಬಂದರೂ ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಕಷ್ಟವೇ ದೊಡ್ಡದೆಂದುಕೊಂಡು ಕಣ್ಣೀರು ಹಾಕುತ್ತಿರುತ್ತೇವೆ.
ಅಪಘಾತವೊಂದರಲ್ಲಿ ಕಣ್ಣನ್ನು ಕಳೆದುಕೊಂಡ ಮಗಳ ಪಾಲಿಗೆ ನೇತ್ರದಾನ ಮಾಡುವವರಿದ್ದರೆ ಆಕೆಯ ಬದುಕು ಬೆಳಕಾಗುತ್ತದೆ ಎಂದು ತಿಳಿದ ತಂದೆಯೊಬ್ಬರು ಆಸ್ಪತ್ರೆಯಲ್ಲಿ ಮೃತ ಪಟ್ಟ ವ್ಯಕ್ತಿಗಳ ಕಣ್ಣು ನೀಡುವಂತೆ ಅವರ ಕುಟುಂಬ ಸದಸ್ಯರಲ್ಲಿ ಬೇಡುತ್ತಿದ್ದ. ಆದರೆ ಯಾರೂ ಅವರಿಗೆ ಕಣ್ಣು ನೀಡಲು ಮುಂದಾಗಲಿಲ್ಲ. ಸಿನೆಮಾವೊಂದರಲ್ಲಿ ಕಂಡ ಈ ದೃಶ್ಯವನ್ನು ನೋಡಿ, ನಾವು ಮಾಡುತ್ತಿರುವುದು ಅದನ್ನೇ ಅಲ್ವಾ ಎಂದೆನಿಸಿತು. ನಮ್ಮಿಂದ ಸಹಾಯ ಮಾಡಲು ಅವ ಕಾಶವಿದೆ, ಇದರಿಂದ ಇನ್ನೊಂದು ಜೀವಕ್ಕೆ ಹೊಸ ಬದುಕು ಸಿಗುತ್ತದೆ ಎಂದಾದರೆ ಯಾಕೆ ನಾವು ಇನ್ನೊಬ್ಬರಿಗೆ ಸಹಾಯ ಮಾಡುವುದಿಲ್ಲ ಎಂಬ ಪ್ರಶ್ನೆ ಕಾಡತೊಡಗಿತು.
ಕಣ್ಣೆದುರೇ ಅಪಘಾತ ನಡೆದರೂ ಅವರ ರಕ್ಷಣೆಗೆ ಧಾವಿಸುವ ಬದಲು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದರಲ್ಲೇ ಬ್ಯುಸಿಯಾಗುತ್ತೇವೆ, ವೃದ್ಧರು ರಸ್ತೆ ದಾಟು ತಿರುವಾಗ ಅವರನ್ನು ಹೆದರಿಸಲು ವೇಗವಾಗಿ ವಾಹನ ಓಡಿಸುತ್ತೇವೆ. ಇಂತಹ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ನಡೆದರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನಾವು ಮೌನವಹಿಸುತ್ತೇವೆ.
ಇತ್ತೀಚಿನ ದಿನಗಳಲ್ಲಿ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಅನೇಕವಿರಬಹುದು. ನಾಳೆ ನಮ್ಮ ಜೀವನ ಹೇಗಿರುತ್ತದೆ ಎಂಬುದನ್ನು ಯಾರೂ ಅರಿತಿಲ್ಲ. ಇವತ್ತು ಸಹಾಯ ಬೇಡುವ ಜೀವದ ಜಾಗದಲ್ಲಿ ನಾಳೆ ನಾನಿದ್ದರೆ ಎಂಬ ಅಲ್ಪ ಯೋಚನೆ ಬಂದರೂ ಸಾಕು ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಎಲ್ಲರಲ್ಲೂ ಬೆಳೆಯಲು ಸಾಧ್ಯವಿದೆ.
ವಿಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.