ತೆಗೆದ ಹೂಳು ಮತ್ತೆ ಕಾಲುವೆಯ ಒಡಲು ಸೇರಿದೆ !
Team Udayavani, Jun 4, 2018, 11:06 AM IST
ಮಹಾನಗರ: ನಗರದ ಬಂದರು, ಪಾಂಡೇಶ್ವರ, ಅತ್ತಾವರ, ಹೊಯಿಗೆ ಬಜಾರ್ ಮೂಲಕ ಸಮುದ್ರ ಸೇರುವ ರಾಜಕಾಲುವೆ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಉಕ್ಕಿ ಹರಿದಿದೆ. ಪರಿಣಾಮವಾಗಿ ಕಾಲುವೆಯ ಎರಡೂ ಬದಿಗಳಲ್ಲಿ ವಾಸಿಸುವವರ ಮನೆಗಳಿಗೆ ನೀರು ನುಗ್ಗಿದೆ.
ಈ ರಾಜ ಕಾಲುವೆಯ ಸದ್ಯದ ಪರಿಸ್ಥತಿ ಏನೆಂದು ನೋಡಲು ಸುದಿನ ರವಿವಾರ ರಿಯಾಲಿಟಿ ಚೆಕ್ ನಡೆಸಿತು. ಪಾಂಡೇಶ್ವರ ಹಾಗೂ ಅತ್ತಾವರ ಕಡೆಗಳಲ್ಲಿ ರಾಜಕಾಲುವೆಯ ಹೂಳೆತ್ತಲಾಗಿದ್ದರೂ ತೆಗೆದ ಹೂಳನ್ನು ಕಾಲವೆಯ ಬದಿಯಲ್ಲೇ ರಾಶಿ ಹಾಕಿರುವುದು ಕಂಡು ಬಂತು. ಮೊನ್ನೆ ಬಂದ ಭಾರೀ ಮಳೆಗೆ ಈ ಹೂಳೇ, ಮತ್ತೆ ರಾಜಕಾಲುವೆಯ ಒಡಲು ತುಂಬಿದೆ. ಕೆಲವೆಡೆ ಕಾಲುವೆಗೆ ಅಡ್ಡಲಾಗಿ ಅತ್ತಿಂದಿತ್ತ, ಇತ್ತಿಂದತ್ತ ದಾಟಲೆಂದು ಹಾಕಿದ ಸಿಮೆಂಟ್ ಸ್ಲ್ಯಾಬ್ ಗಳು ಕಾಲುವೆಯಲ್ಲಿ ಹರಿಯುವ ನೀರಿಗಿಂತ ತುಸು ಮೇಲೆ ಇದೆಯಷ್ಟೆ. ಹೀಗಾಗಿ, ದೊಡ್ಡ ಗಿಡಗಂಟಿಗಳು ನೀರಿನೊಂದಿಗೆ
ಹರಿಯುವಾಗ ಈ ಸಿಮೆಂಟ್ ಸ್ಲ್ಯಾಬ್ ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಅವುಗಳು ನೀರು ಸರಾಗವಾಗಿ ಹರಿಯಲು ತಡೆಯೊಡ್ಡುತ್ತವೆ.
ಬಿದ್ದ ಮರ ತೆರವುಗೊಳಿಸಿಲ್ಲ
ಅತ್ತಾವರ ಕೆಂಎಂಸಿ ಆಸ್ಪತ್ರೆಯ ಹಿಂಭಾಗ ಕಟ್ಟಪುಣಿ ಎಂಬಲ್ಲಿ ಮರವೊಂದು ಮೊನ್ನೆ ಸುರಿದ ಮಳೆಗೆ ರಾಜ ಕಾಲುವೆಯೊಳಗೇ ಬಿದ್ದಿದೆ. ಅದನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಮುಂಗಾರು ಪ್ರಾರಂಭವಾಗಿ ಮಳೆ ಬಿರುಸುಗೊಂಡರೆ ಈ ಮರದ ಕೊಂಬೆ ರೆಂಬೆಗೆ ಇನ್ನಷ್ಟು ಕಸಕಡ್ಡಿ ಸಿಕ್ಕಿಹಾಕಿಕೊಂಡು
ಕಾಲುವೆಯ ಸಹಜ ಹರಿವಿಗೆ ತೊಡಕು ಮಾಡುವುದಂತೂ ಖಂಡಿತ. ಇದೇ ರೀತಿ ಕಾಲುವೆಯುದ್ದಕ್ಕೂ ಮುರಿದು ಬಿದ್ದ ಮರದ ಕೊಂಬೆ ರೆಂಬೆಗಳನ್ನು ಸಾಧ್ಯ ವಾದಷ್ಟು ಶೀಘ್ರವಾಗಿ ತೆರವುಗೊಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ನಿಷ್ಪ್ರಯೋಜಕ ರೈಲ್ವೇ ಕಿರುಸೇತುವೆ
ಪಾಂಡೇಶ್ವರ ಶಿವನಗರದ ಮುಂದಕ್ಕೆ ಅತ್ತಾವರದತ್ತ ಸಾಗುವ ರಾಜಕಾಲುವೆಯ ಹಾದಿಯಲ್ಲಿ ರೈಲ್ವೇ ಇಲಾಖೆಗೆ ಸೇರಿದ ಕಿರುಸೇತುವೆಯೊಂದಿದೆ. ಅದರ ಮೇಲೆ ರೈಲ್ವೇ ಸಿಗ್ನಲ್‌ಗಾಗಿ ಅಳವಡಿಸಿದ ಪೈಪ್ ಗಳೂ ಇವೆ. ಈ ಕಿರುಸೇತುವೆ ತೀರಾ ತಗ್ಗಿನಲ್ಲಿ ಇರುವುದರಿಂದ ಕಾಲುವೆಯಲ್ಲಿ ಹರಿಯುವ ಕಸಕಡ್ಡಿಗಳು ಈ ಸೇತುವೆಯ ತಳಭಾಗದಲ್ಲಿ ಸಿಕ್ಕಿಹಾಕಿ ಕೊಂಡು ಸುತ್ತು ಮುತ್ತೆಲ್ಲ ನೀರುಕ್ಕಿ ಹರಿಯುವಂತೆ ಮಾಡಿದೆ. ಮಳೆ ಅವಾಂತರದ ಮರು ದಿನವೇ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಜನಪ್ರತಿ ನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ನಿಷ್ಪ್ರಯೋಜಕ ಸೇತುವೆಯನ್ನು ತೆರವುಗೊಳಿಸುವುದಾಗಿ
ಆಶ್ವಾಸನೆ ನೀಡಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ. ಸ್ಥಳೀಯ ಮಹಾನಗರಪಾಲಿಕೆ ಸದಸ್ಯ ದಿವಾಕರ್ ಈ ಕುರಿತು ಸುದಿನದ ಜತೆ ಮಾತನಾಡಿ, ‘ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ದೂರು ನೀಡಲಾಗಿದ್ದು, ಸದ್ಯದಲ್ಲೇ ರೈಲ್ವೇ ಅಧಿಕಾರಿಗಳ ಸಭೆ ಕರೆದು ಕಿರುಸೇತುವೆ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ’ ಎಂದರು.
ಹೂಳೆತ್ತಿರುವುದು ಸರಿಯಾಗಿಲ್ಲ
ಈ ರಾಜಕಾಲುವೆ ತುಂಬಿ ಹರಿದು ಸುತ್ತಮುತ್ತೆಲ್ಲ ಜಲಾವೃತಗೊಳ್ಳಲು ಕಾರಣವಾಗಿರುವ ಮತ್ತೊಂದು ಅಂಶವೆಂದರೆ ಸಮರ್ಪಕವಾಗಿ ಹೂಳೆತ್ತದಿರುವುದು. ಮುನ್ನೆಚ್ಚರಿಕೆಯ ಕ್ರಮವಾಗಿ ತಿಂಗಳ ಮೊದಲೇ ಕಾಲುವೆಯ ಹೂಳೆತ್ತುವ ಕಾರ್ಯವನ್ನು ನಗರಪಾಲಿಕೆ ನಿರ್ವಹಿಸಿದೆ. ಆದರೆ, ಹೆಚ್ಚು ಆಳದಿಂದ ಹೂಳೆತ್ತಲಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ‘ಮೊನ್ನೆ ಬಂದ ಮಳೆಗೆ ದೇವರ ದಯೆಯಿಂದ ಕೊಚ್ಚಿ ಹೋಗದೆ ಬದು ಕುಳಿದಿದ್ದೇವೆ. ಇನ್ನಾದರೂ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿ ಮಳೆಗಾಲದ ಮಟ್ಟಿಗಾದರೂ ನಮಗೊಂದು ಆಶ್ರಯ ಕಲ್ಪಿಸಿ’ ಎಂದು ಕಣ್ಣೇರ್ಗರೆಯತ್ತಾ ಅಲವತ್ತು ಕೊಳ್ಳುತ್ತಿದ್ದಾರೆ ಅತ್ತಾವರ ಕಟ್ಟಪುಣಿಯ ನಿವಾಸಿ ಪುಷ್ಪ.
ಕಾಲುವೆಯ ಎರಡೂ ಬದಿ ತಡೆಗೋಡೆ ಆವಶ್ಯಕ
ರಾಜಕಾಲುವೆ ಹರಿಯುವ ಇಕ್ಕೆಲಗಳ ಎತ್ತರ ಒಂದೇ ತೆರನಾಗಿರದೆ ಒಂದು ಬದಿ ಎತ್ತರ ಹಾಗೂ ಮತ್ತೊಂದು ಬದಿ ತಗ್ಗಿನಲ್ಲಿದೆ. ಈ ಕಾರಣದಿಂದ ತಗ್ಗಿನಲ್ಲಿ ವಾಸವಾಗಿರುವ ನಿವಾಸಿಗಳು ಮಳೆ ಬಂದಾಗ ತಮ್ಮ ವಾಸಸ್ಥಳ ಮುಳುಗುವ ಭೀತಿಯನ್ನು ಎದುರಿಸು ತ್ತಿದ್ದಾರೆ. ಹೀಗಾಗಿ ಕಾಲುವೆಯ ಎರಡೂ ಬದಿ ತಡೆಗೋಡೆ ನಿರ್ಮಿಸಿ ನೀರು ಉಕ್ಕಿ ಹರಿಯ ದಂತೆ ಮಾಡಿದರೆ ಉತ್ತಮ ಎಂದು ಹೇಳುತ್ತಾರೆ ಪಾಂಡೇಶ್ವರ ನಿವಾಸಿ ಶ್ರೀನಿವಾಸ್ ಹಾಗೂ ಅತ್ತಾವರ ನಿವಾಸಿ ವಿಠ್ಠಲ್ ಕುಮಾರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.