ನವಕರ್ನಾಟಕ ನಿರ್ಮಾಣದತ್ತ ಸದೃಢ ಹೆಜ್ಜೆ: ಸಿದ್ದರಾಮಯ್ಯ
Team Udayavani, Oct 23, 2017, 8:18 AM IST
ಮಂಗಳೂರು: ಕಾಂಗ್ರೆಸ್ ನೇತೃತ್ವದ ಸರಕಾರವು ನವಕರ್ನಾಟಕ ನಿರ್ಮಾಣದತ್ತ ಸದೃಢ ಹೆಜ್ಜೆ ಇಟ್ಟಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆ ಆಶೀರ್ವದಿಸಬೇಕು. ಆ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರವಿವಾರ 252.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪ್ರಣಾಳಿಕೆಯ ಭರವಸೆಗಳ ಹೊರತಾಗಿ ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಅನಿಲಭಾಗ್ಯ, ಮಾತೃಪೂರ್ಣ ಮುಂತಾದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಇನ್ನೂ 300 ಇಂದಿರಾ ಕ್ಯಾಂಟೀನ್‌ಗಳು ಸದ್ಯದಲ್ಲೇ ಆರಂಭವಾಗಲಿವೆ. ಮಂಗಳೂರಿನಲ್ಲಿ ಐದು ಹಾಗೂ ಬಂಟ್ವಾಳದಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದರು.
ಅಭಿವೃದ್ಧಿ ಕಾಂಗ್ರೆಸ್‌ನ ಧ್ಯೇಯ
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ. ಇದೇ ಮಾದರಿ ಅಭಿವೃದ್ಧಿ ಯೋಜನೆಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಗಿವೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಕಾಂಗ್ರೆಸ್‌ನ ಧ್ಯೇಯ. ರಾಜ್ಯದಲ್ಲಿ ರೈತರ ತಲಾ 50,000 ರೂ. ಮನ್ನಾ ಮಾಡಿ ಅವರನ್ನು ಸಾಲದ ಹೊರೆಯಿಂದ ಪಾರು ಮಾಡಿದೆ. ಇದಕ್ಕಾಗಿ ಸರಕಾರ 8,100 ಕೋ.ರೂ. ನೀಡಿದೆ. ಪರಿಶಿಷ್ಟ ಜಾತಿ, ಪಂಗಡದ ಉನ್ನತಿಗಾಗಿ ಶೇ 24.1ರಷ್ಟು ಅನುದಾನ ಮೀಸಲಿರಿಸಿದೆ. ಆ ಮೂಲಕ ಕರ್ನಾಟಕವನ್ನು ಅಭಿವೃದ್ಧಿಯ ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಕೋಮುವಾದವೇ ಅದರ ಮುಖ್ಯ ಅಜೆಂಡಾ. 2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಶೇ. 25ರಷ್ಟನ್ನು ಮಾತ್ರ ಈಡೇರಿಸಿದೆ. ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪ ಈಗ ನಮ್ಮ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದರು.
ರೈ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ
“ಬಂಟ್ವಾಳ ಕ್ಷೇತ್ರದಲ್ಲಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಇಂದು 252 ಕೋ.ರೂ.ಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿದೆ. ಬಂಟ್ವಾಳ ಕ್ಷೇತ್ರದ ಪಾಲಿಗೆ ಇದೊಂದು ಅವಿಸ್ಮರಣೀಯ ದಿನ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾವಿರಾರು ಕೋ.ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ಆಗಿವೆ. ಇದಕ್ಕೆ ಕಾರಣೀಭೂತರಾದ ಕ್ಷೇತ್ರದ ಶಾಸಕ ರಮಾನಾಥ ರೈ ಅವರನ್ನು ಅಭಿನಂದಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಬಂಟ್ವಾಳ ಸಾಕ್ಷಿ: ಡಿಕೆಶಿ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿ. ರಮಾನಾಥ ರೈ ಅವರು ಅರಣ್ಯ ಸಚಿವರಾಗಿ ತನ್ನ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲೇ ಉತ್ತಮವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಗೆ ಬಂಟ್ವಾಳ ಕ್ಷೇತ್ರ ಸಾಕ್ಷಿಯಾಗಿದೆ ಎಂದರು.
811 ಕೋ.ರೂ. ವಿನಿಯೋಗ: ರೈ
ಅಧ್ಯಕ್ಷತೆ ವಹಿಸಿದ್ದ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬಂಟ್ವಾಳ ಕ್ಷೇತ್ರದ ಪಾಲಿಗೆ ಇದೊಂದು ಐತಿಹಾಸಿಕ ದಿನ. ಒಂದೇ ದಿನ ಕ್ಷೇತ್ರದಲ್ಲಿ 148.29 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟನೆಗೊಂಡಿವೆ. ಜತೆಗೆ, ಸುಮಾರು 104.21 ಕೋ.ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿದೆ. ಈ ಮೂಲಕ ಒಟ್ಟು 252.50 ಕೋ.ರೂ. ವೆಚ್ಚದ ಯೋಜನೆಗಳು ಇಲ್ಲಿ ಸಾಕಾರಗೊಂಡಿವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 811 ಕೋ.ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳು ಕ್ಷೇತ್ರದಲ್ಲಿ ಆಗಿವೆ ಎಂದರು.
“ಬಂಟ್ವಾಳದ ಜನತೆ ನನ್ನನ್ನು ಬೆಂಬಲಿಸಿ ಬೆಳೆಸಿದ್ದಾರೆ. ಕ್ಷೇತ್ರದ ಜನರ ಋಣ ನನ್ನ ಮೇಲಿದ್ದು ಇದನ್ನು ತೀರಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇನೆ ಎಂದರು.
ಸಚಿವರಾದ ಡಾ| ಎಚ್.ಸಿ. ಮಹದೇವಪ್ಪ, ಆರ್. ರೋಶನ್ ಬೇಗ್, ಟಿ.ಬಿ. ಜಯಚಂದ್ರ, ಯು.ಟಿ. ಖಾದರ್, ಈಶ್ವರ ಬಿ. ಖಂಡ್ರೆ, ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಅಭಯಚಂದ್ರ, ಜೆ.ಆರ್. ಲೋಬೊ, ಕೆ. ಶಕುಂತಾಳ ಶೆಟ್ಟಿ, ಮೊದೀನ್ ಬಾವಾ, ಗೋಪಾಲ ಪೂಜಾರಿ, ಮೇಯರ್ ಕವಿತಾ ಸನಿಲ್ ಅತಿಥಿಗಳಾಗಿದ್ದರು. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ| ಕೃಪಾ ಅಮರ್ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬಂಟ್ವಾಳ ಪುರಸಭೆಯ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ಪದ್ಮಶೇಖರ ಜೈನ್, ಪ್ರಕಾಶ್ ಶೆಟ್ಟಿ ತುಂಬೆ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಸಿ. ನಾಯಕ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಬಿ.ಎಂ. ಅಬ್ಟಾಸ್ ಆಲಿ, ಬಂಟ್ವಾಳ ಸದಾಶಿವ ಬಂಗೇರ, ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಸದಸ್ಯ ಪಿಯೂಸ್ ರೊಡ್ರಿಗಸ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಜಿಲ್ಲಾ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.
ಚಾಲನೆ ಪಡೆದ ಯೋಜನೆಗಳು
ಬಂಟ್ವಾಳ ಪುರಸಭೆ: 52.79 ಕೋ.ರೂ. ವೆಚ್ಚದ ಸಮಗ್ರ ನೀರು ಸರಬರಾಜು ಯೋಜನೆ
ಬಿ.ಸಿ.ರೋಡಿನಲ್ಲಿ 10.07 ಕೋ.ರೂ. ವೆಚ್ಚದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ಬಿ.ಸಿ. ರೋಡಿನಲ್ಲಿ 5.16 ಕೋ.ರೂ. ವೆಚ್ಚದಲ್ಲಿ ಮೆಸ್ಕಾಂ ಕಟ್ಟಡ
10 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಬಂಟ್ವಾಳ ಮಿನಿವಿಧಾನಸೌಧ
25.82 ಕೋ.ರೂ. ವೆಚ್ಚದ ಕನ್ಯಾನ, ಕರೋಪಾಡಿ, ಕೊಳ್ನಾಡು ವಿಟ್ಲಪಟ್ನೂರು ಗ್ರಾಮಗಳ 79 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ
3 ಕೋ.ರೂ. ವೆಚ್ಚದಲ್ಲಿ ಬಂಟ್ವಾಳದಲ್ಲಿ ನಿರ್ಮಾಣ ವಾದ ನೂತನ ನಿರೀಕ್ಷಣಾ ಮಂದಿರ
34.95 ಕೋ.ರೂ. ವೆಚ್ಚದಲ್ಲಿ ಸಂಗಬೆಟ್ಟು, ಕುಕ್ಕಿಪಾಡಿ, ಚೆನ್ನೈತ್ತೋಡಿ, ರಾಯಿ, ಅರಳ, ಪಂಜಿಕಲ್ಲು, ಅಮಾrಡಿ, ಕಳ್ಳಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
6.15 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿದ ಬಂಟ್ವಾಳ ಸರಕಾರಿ ಆಸ್ಪತ್ರೆ ಹಾಗೂ ನೂತನ ಕಟ್ಟಡ
ಬಂಟ್ವಾಳದ ನೇತ್ರಾವತಿ ತೀರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಸ್ಯೋದ್ಯಾನಕ್ಕೆ ಶಿಲಾನ್ಯಾಸ
ಅಜಿಲಮೊಗರು-ಕಡೇಶ್ವಾಲ್ಯ: 31 ಕೋ.ರೂ. ವೆಚ್ಚದಲ್ಲಿ ಸೌಹಾರ್ದ ಸೇತುವೆ ಯೋಜನೆ
ನರಿಕೊಂಬು, ಬಾಳ್ತಿಲ, ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರು ಒದಗಿಸುವ 16.97 ಕೋ.ರೂ. ಯೋಜನೆ
ಸರಪಾಡಿ, ನಾವೂರು ಬಡಗಕಜೆಕಾರು, ಕಾವಳಪಡೂರು ಕಾವಳಮೂಡೂರು, ಪಿಲಾತ ಬೆಟ್ಟು, ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 97 ಪ್ರದೇಶಗಳಿಗೆ ನೀರು ಒದಗಿಸುವ 29.93 ಕೋ.ರೂ. ಯೋಜನೆ
ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮಟ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 51 ಜನವಸತಿ ಪ್ರದೇಶಗಳಿಗೆ 16.46 ಕೋ.ರೂ. ಕುಡಿಯುವ ನೀರಿನ ಯೋಜನೆ
ಅರಳಗ್ರಾಮ ಮೂಲರಪಟ್ಣದಲ್ಲಿ 4.85 ಕೋ.ರೂ. ವೆಚ್ಚದ ಕಿಂಡಿ ಅಣೆಕಟ್ಟು ಯೋಜನೆ
5 ಕೋ.ರೂ. ವೆಚ್ಚದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣ
ಕಾರ್ಯಕ್ರಮದ ವೈಶಿಷ್ಟ್ಯಗಳು
ಸಮಾರಂಭಕ್ಕೆ ಹರಿದುಬಂದ ಜನಸಾಗರ, ಮಿನಿ ವಿಧಾನಸೌಧ ಉದ್ಘಾಟನೆ ವೇಳೆ ಕಾರ್ಯಕರ್ತರ ನೂಕುನುಗ್ಗಲು, ಬಾಗಿಲು ಮುರಿತ, ಲಾಠಿ ಬೀಸಿ ಕಾರ್ಯಕರ್ತರನ್ನು ನಿಯಂತ್ರಿಸಿದ ಪೊಲೀಸರು, ಉದ್ಘಾಟನೆ ತಾಣಕ್ಕೆ ಹೋಗಲಾರದೆ ಹೊರಗುಳಿದ ಸಚಿವ ಡಿಕೆಶಿ, ಪ್ರಮೋದ್ ಮಧ್ವರಾಜ್, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ
ಬಿ.ಸಿ.ರೋಡಿನ ಕೈಕಂಬದಿಂದ ವರ್ಣರಂಜಿತ ಮೆರವಣಿಗೆಯಲ್ಲಿ ಸಾಗಿಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು
ಮಿನಿಬಸ್‌ನಲ್ಲಿ ಸಚಿವರ ಜತೆ ತೆರಳಿ ವಿವಿಧ ಉದ್ಘಾಟನೆಗಳನ್ನು ನೆರೆವೇರಿಸಿದ ಮುಖ್ಯಮಂತ್ರಿ
ಸುಮಾರು 15,000 ಮಂದಿಗೆ ಭೋಜನ ವ್ಯವಸ್ಥೆ
ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ
ರೈ ಆದರ್ಶ ರಾಜಕಾರಣಿ: ಸಿದ್ದರಾಮಯ್ಯ
ರಮಾನಾಥ ರೈ ಅವರು ದೀರ್ಘಕಾಲದಿಂದ ಸಾಮಾಜಿಕ ಜೀವನದಲ್ಲಿ ಇದ್ದಾರೆ. ಎಲ್ಲ ಧರ್ಮ, ಜಾತಿ, ಭಾಷೆಯವರನ್ನು ಸಮಾನವಾಗಿ ಕಾಣುವ ಸಜ್ಜನ ಮತ್ತು ಜಾತ್ಯತೀತ ಮನೋಭಾವದ ವ್ಯಕ್ತಿ. ಅವರು ಎಂದೂ ಕೋಮುವಾದದ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡುವವರಲ್ಲ. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೈ ಅವರು ಶುದ್ಧಹಸ್ತದ ರಾಜಕಾರಣ ಮಾಡುತ್ತಾ ಬಂದಿರುವ ಓರ್ವ ಆದರ್ಶ ರಾಜಕಾರಣಿ ಎಂದರೆ ಅತಿಶಯೋಕ್ತಿಯಾಗಲಾರದು. ಅವರು ಇನ್ನಷ್ಟು ವರ್ಷಗಳ ಕಾಲ ಶಾಸಕರಾಗಿ ಮುಂದುವರಿಯಲೂ ಕ್ಷೇತ್ರದ ಜನತೆ ಅವರ ಜತೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.