ಬಿಸಿಲ ಬೇಗೆ: ಅಡಿಕೆ ತೋಟಕ್ಕೆ ನೀರಿಲ್ಲ
Team Udayavani, Feb 19, 2018, 11:48 AM IST
ಸುಳ್ಯ : ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆ ಏರಿಕೆಯಾಗುತ್ತಿದ್ದು ಬಹುತೇಕ ಬಾವಿ, ಕೆರೆಯ ನೀರು ಇಳಿಮುಖವಾಗುತ್ತಿದೆ. ತಾಲೂಕಿನ ಪ್ರಮುಖ ಅಡಿಕೆ ಕೃಷಿಗೆ ಈ ತಿಂಗಳಲ್ಲೇ ನೀರಿನ ಕೊರತೆ ಕಾಡುವ ಆತಂಕ ಹುಟ್ಟಿಸಿದೆ.
ಹಳದಿರೋಗ, ಬೇರು ಹುಳ ರೋಗ, ಆನೆಕಾಟ ಇತ್ಯಾದಿಗಳಿಂದ ತತ್ತರಿಸಿರುವ ತಾಲೂಕಿನ ಅಡಿಕೆ ಬೆಳೆಗಾರರಿಗೆ ಸುಡು ಬಿಸಿಲು ಮತ್ತಷ್ಟು ಆತಂಕ ಸೃಷ್ಟಿಸಿದೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ಅತಂತ್ರ ಸ್ಥಿತಿಯಲ್ಲಿರುವ ಕೃಷಿಕರಿಗೆ ಈಗ ನೀರೂ ಕಡಿಮೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಡಿಕೆಯೇ ಆಧಾರ
ರಬ್ಬರ್ ಧಾರಣೆ ಪಾತಾಳಕ್ಕೆ ಇಳಿದ ಪರಿಣಾಮ, ಅಡಿಕೆಯನ್ನೇ ಜನ ನಂಬಿಕೊಂಡಿದ್ದಾರೆ. ಬೇಸಗೆಯಲ್ಲಿ ಅಡಿಕೆಗೆ ನೀರು ಅತ್ಯಗತ್ಯ. ಬೇರಿಂದ ಕೊಂಬೆ ತನಕವು ಹಸುರಾಗಿದ್ದರೆ ಮಾತ್ರ ಅದರಿಂದ ಫಸಲು ನಿರೀಕ್ಷಿಸಬಹುದು. ಫಸಲು ನೀಡುವ ಅಡಿಕೆ ಮರಕ್ಕೆ ದಿನಕ್ಕೆ 18ರಿಂದ 20 ಲೀ. ನೀರು ಬೇಕು. ಅವೆಲ್ಲವೂ ಕೆರೆ, ಬಾವಿ, ಹೊಳೆ ಅಥವಾ ಕೊಳವೆಬಾವಿ ಮೂಲಕ ಭರಿಸಬೇಕು. ಆ ನೀರಿನ ಮೂಲಗಳೇ ಬತ್ತುತ್ತಿರುವುದರಿಂದ ಮಾರ್ಚ್ ಬಳಿಕ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.
ಈ ಬಾರಿ ಉಷ್ಣಾಂಶ ಅಧಿಕವಾಗಿದೆ. ಮಧ್ಯಾಹ್ನ 12ರಿಂದ 4 ಗಂಟೆಯ ತನಕ ಸುಡು ಬಿಸಿಲು ಇದೆ. ಫೆಬ್ರವರಿಯಲ್ಲಿ 30 ಡಿ.ಸೆ. ನಿಂದ 33 ಡಿ. ಸೆ. ಒಳಗೆ ಇರುತ್ತಿದ್ದ ಉಷ್ಣಾಂಶ ಈ ವರ್ಷ 37 ಡಿ. ಸೆ. ಗಡಿ ದಾಟಿದೆ. ಹವಾಮಾನ ಇಲಾಖೆ ಪ್ರಕಾರ ಶಿವರಾತ್ರಿ ಬಳಿಕ ಬಿಸಿಲು ಹೆಚ್ಚಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ
ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿದೆ. ಮಧ್ಯರಾತ್ರಿ ತ್ರಿಫೇಸ್ ವಿದ್ಯುತ್ ನೀಡುವ ಕಾರಣ, ಕೆರೆ, ಹೊಳೆಗಳಿಂದ ನೀರು ಬಳಸುವ ಕೃಷಿಕರಿಗೆ ಈ ಹೊತ್ತಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ ಬದಲು ಬೆಳಗ್ಗಿನ ಹೊತ್ತಲ್ಲಿ ತ್ರಿಫೇಸ್ ವಿದ್ಯುತ್ ನೀಡಬೇಕು ಎಂಬ ಕೃಷಿಕರ ಬೇಡಿಕೆ ಈಡೇರಿಲ್ಲ.
ಫಸಲು ನಷ್ಟ ಭೀತಿ
ತಾಲೂಕಿನ ಒಟ್ಟು ಅಡಿಕೆ ಬೆಳೆಯುವ ಪ್ರದೇಶ 28,096 ಎಕ್ರೆ. ತೋಟಗಾರಿಕಾ ಇಲಾಖೆಯ ಪ್ರಕಾರ ಹೆಕ್ಟೇರಿಗೆ 20 ಕಿಂಟ್ವಾಲ್ ಅಡಿಕೆ ಸಿಕ್ಕಿದರೆ, ಒಟ್ಟು ಹೆಕ್ಟೇರಿಗೆ 5,61,920 ಕಿಂಟ್ವಾಲ್ ದೊರೆಯುತ್ತದೆ. ಕೆಲ ವರ್ಷಗಳಿಂದ ನೀರಿನ ಕೊರತೆಯಿಂದ ಅಡಿಕೆ ಇಳುವರಿ ಕುಸಿತವಾಗುತ್ತಿದೆ. ಬಿಸಿಲಿನ ತೀವ್ರತೆ ಇದೇ ರೀತಿ ಮುಂದುವರಿದರೆ, ಹೊಸ ಹಿಂಗಾರ ಕರಟಿ ಫಸಲು ನಷ್ಟವಾಗುವುದು ನಿಶ್ಚಿತ ಅನ್ನುತ್ತಾರೆ ಬೆಳೆಗಾರರು.
ಒಂದು ತಿಂಗಳು ಸಮಸ್ಯೆಯಿಲ್ಲ
ಸದ್ಯಕ್ಕೆ ಇನ್ನು ಒಂದು ತಿಂಗಳು ಸಮಸ್ಯೆ ಕಾಡದು. ಆದರೆ ಅನಂತರ ಬಿಸಿಲಿನ ಪ್ರಖರತೆ ತೀವ್ರವಾದಷ್ಟು ನೀರಿನ ಕೊರತೆ ಹೆಚ್ಚಬಹುದು. ಈ ಬಗ್ಗೆ ಯೋಚಿಸಬೇಕಿದೆ.
– ಎಂ.ಡಿ. ವಿಜಯ ಕುಮಾರ್
ಸಂಚಾಲಕರು, ಅಖಿಲ ಭಾರತ ಅಡಿಕೆ
ಬೆಳೆಗಾರರ ಸಂಘ, ಸುಳ್ಯ ಘಟಕ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.