ದಾಹ ತಣಿಸುವ ನಿಂಬೆ ಈ ಬಾರಿಯೂ ತುಟ್ಟಿ
ವಿಪರೀತ ಬೇಡಿಕೆಯಿಂದಾಗಿ ನಿಂಬೆ ಬೆಲೆಯಲ್ಲಿ ಭಾರೀ ಏರಿಕೆ
Team Udayavani, Apr 22, 2019, 6:05 AM IST
ಪುತ್ತೂರು: ಬಿರು ಬೇಸಗೆಯ ದಾಹ ತೀರಿಸಲು ಆರೋಗ್ಯಕರ ಎನಿಸಿಕೊಂಡು ಹೆಚ್ಚು ಬಳಕೆಯಾಗುತ್ತಿದೆ ನಿಂಬೆ ಹಣ್ಣಿನ ಪಾನೀಯ. ಸದ್ಯ ನಿಂಬೆ ಹಣ್ಣಿನ ಬೆಲೆ ಈ ಬಾರಿಯೂ ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದೆ.
ಮಾರುಕಟ್ಟೆಯ ಹಣ್ಣಿನ ಅಂಗಡಿಗಳಲ್ಲಿ ನಿಂಬೆ ಕೆ.ಜಿ.ಯೊಂದರ ಹೋಲ್‌ಸೇಲ್ ದರವೇ 120ರಿಂದ 130 ರೂ. ತನಕ ಇದೆ. ಬಿಡಿಯಾಗಿ 140 -150 ರೂ. ತನಕದ ದರದಲ್ಲಿ ನಿಂಬೆ ಹಣ್ಣಿನ ಮಾರಾಟವಾಗುತ್ತಿದೆ. ಒಂದು ನಿಂಬೆ ಹಣ್ಣಿಗೆ ಗಾತ್ರವನ್ನು ಅವಲಂಬಿಸಿ 5-7 ರೂ. ತನಕ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷವೂ ಇದೇ ದರಕ್ಕೆ ಮಾರಾಟವಾಗಿತ್ತು.
ಬೇಡಿಕೆಯೂ ಹೆಚ್ಚಿದೆ
ಬೇಸಗೆಯಲ್ಲಿ ದಾಹ ತೀರಿಸುವ ಸಲುವಾಗಿ ಇತರ ಎಲ್ಲ ಹಣ್ಣುಗಳಿಗಿಂತಲೂ ನಿಂಬೆ ಹಣ್ಣಿನ ಪಾನೀಯ ಹೆಚ್ಚು ಸೂಕ್ತವಾಗಿದೆ.
ಈ ಕಾರಣದಿಂದ ನಿಂಬೆ ಶರಬತ್ತು, ಲೈಮ್ ಸೋಡಾ, ಇತರ ಪಾನೀಯಗಳಲ್ಲಿ ಸೇರಿಸಲು ನಿಂಬೆ ಹಣ್ಣು ಅಗತ್ಯ. ಜತೆಗೆ ಪದಾರ್ಥಗಳಲ್ಲಿ ಹುಳಿಯ ರೂಪದಲ್ಲೂ ನಿಂಬೆ ಹಣ್ಣನ್ನು ಬಳಸುತ್ತಾರೆ. ಈ ಎಲ್ಲ ಕಾರಣಗಳಿಂದ ನಿಂಬೆ ಹಣ್ಣಿಗೆ ವಿಪರೀತ ಬೇಡಿಕೆಯಿದ್ದು, ಕೆಲವೇ ದಿನಗಳ ಅಂತರದಲ್ಲಿ 50-75 ರೂ. ತನಕದ ಆಸುಪಾಸಿನಲ್ಲಿದ್ದ ಕೆ.ಜಿ. ನಿಂಬೆ ಹಣ್ಣಿನ ಬೆಲೆ ಈಗ 120 ರೂ. ದಾಟಿದೆ.
ತಿಪಟೂರಿನ ನಿಂಬೆ
ಪುತ್ತೂರು ಸಹಿತ ಹಣ್ಣಿನ ಮಾರುಕಟ್ಟೆಗಳಿಗೆ ತಿಪಟೂರಿನಿಂದ ಅಧಿಕ ಪ್ರಮಾಣದಲ್ಲಿ ನಿಂಬೆ ಹಣ್ಣು ಆಮದಾಗುತ್ತದೆ. ಬಿಸಿಲಿನ ಧಗೆಗೆ ಹೆಚ್ಚು ದಿನಗಳ ಕಾಲ ನಿಂಬೆ ಹಣ್ಣನ್ನು ಉಳಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಕೂಡಲೇ ಮಾರಾಟವಾದರೆ ಮಾತ್ರ ಲಾಭವಾಗುತ್ತದೆ ಎನ್ನುವುದು ವ್ಯಾಪಾರಿ ಹನೀಫ್ ಅಭಿಪ್ರಾಯ.
ಸಮಾರಂಭಗಳು ಅಧಿಕ
ಸಾಮಾನ್ಯವಾಗಿ ಬೇಸಗೆಯಲ್ಲಿ ಬೇಡಿಕೆಗೆ ಹೊಂದಿಕೊಂಡು ನಿಂಬೆ ಹಣ್ಣಿನ ಬೆಲೆ ಏರಿಕೆಯಾಗುತ್ತದೆ. ಆದರೆ ಈ ಬಾರಿ ಪೂರ್ಣ ಅವಧಿಗೆ ಮುನ್ನವೇ ಬೆಲೆ ಏರಿಕೆಯಾಗಿದೆ. ಮದುವೆ ಹಾಗೂ ಸಮಾರಂಭಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ನಿಂಬೆ ಹಣ್ಣಿನ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
– ರಾಜೇಶ್ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.