ಭೂಗತ ಪಾತಕಿ ಕಲಿ ಯೋಗೀಶನ ಕೈವಾಡ; ಇಬ್ಬರು ಸಹಚರರ ಬಂಧನ
Team Udayavani, Dec 29, 2017, 11:51 AM IST
ಮಂಗಳೂರು: ಕಾರ್ ಸ್ಟ್ರೀಟ್‌ನಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್ ಸ್ಯಾರೀಸ್ ಅಂಗಡಿ, ಕಿನ್ನಿಗೋಳಿಯ ಶ್ರೀ ರಾಜಶ್ರೀ ಜುವೆಲರ್ ಮಳಿಗೆ ಹಾಗೂ ಮೂಲ್ಕಿಯ ಗುತ್ತಿಗೆದಾರ ನಾಗರಾಜ್ ಮನೆ ಮೇಲೆ ಇತ್ತೀಚೆಗೆ ನಡೆದಿರುವ ಪ್ರತ್ಯೇಕ ಮೂರು ಶೂಟೌಟ್ ಪ್ರಕರಣಗಳ ಹಿಂದೆ ಭೂಗತ ಪಾತಕಿ ಕಲಿ ಯೋಗೀಶನ ಕೈವಾಡವಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದ್ದು, ಮೂರು ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಆತನ ಇಬ್ಬರು ಸಹಚರರನ್ನು ಗುರುವಾರ ಬಂಧಿಸಿದ್ದಾರೆ.
ಮೂಲ್ಕಿಯ ಚಿತ್ರಾಪು ವಿಠೊಬಾ ಮಂದಿರದ ಬಳಿಯ ನಿವಾಸಿ ಮನೋಜ್ ಕುಂದರ್ ಯಾನೆ ಮಂಜು (35) ಹಾಗೂ ಪಕ್ಷಿಕೆರೆ ಅತ್ತೂರು ಕಾಪಿಕಾಡ್‌ನ ಚಂದ್ರಶೇಖರ ಯಾನೆ ಟಿಕ್ಕಿ ಅಣ್ಣು (32) ಬಂಧಿತರು. ಆ ಮೂಲಕ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಹಫ್ತಾ ವಸೂಲಿಗೆ ಭೂಗತ ಪಾತಕಿಗಳ ನಂಟು ಹೊಂದಿರುವ ಮಹತ್ವದ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳಿಂದ ಶೂಟೌಟ್‌ಗೆ ಬಳಸಿರುವ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದು ಗುಂಡು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಡಿ. 7ರ ರಾತ್ರಿ ಸುಮಾರು 8 ಗಂಟೆಗೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಶ್ರೀ ರಾಜಶ್ರೀ ಜುವೆಲ್ಲರ್ ಮಳಿಗೆಯಲ್ಲಿ ಇಬ್ಬರು ಮುಸುಕುಧಾರಿಗಳು ಶೂಟೌಟ್ ನಡೆಸಿ ಪರಾರಿಯಾಗಿದ್ದರು. ಮರುದಿನ ಮಂಗಳೂರಿನ ಕಾರ್‌ಸ್ಟ್ರೀಟ್‌ನ ಎಂ. ಸಂಜೀವ ಶೆಟ್ಟಿ ಬಟ್ಟೆ ಮಳಿಗೆ ಯಲ್ಲಿ ರಾತ್ರಿ ಸುಮಾರು 8 ಗಂಟೆಗೆ ಕೆಲಸಗಾರ ಮಹಾಲಿಂಗ ನಾಯ್ಕ ಅವರ ಕಾಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಏಕಾಏಕಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿ ಪರಾರಿ ಯಾಗಿದ್ದರು. ಡಿ. 23ರಂದು ಇದೇ ಮಾದರಿಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಮೂಲ್ಕಿಯ ಉದ್ಯಮಿ ನಾಗರಾಜ್ ಮನೆಯ ಕಿಟಕಿ ಹಾಗೂ ಪಾರ್ಕಿಂಗ್ ಮಾಡಿದ್ದ ಬೆಲೆ ಬಾಳುವ ಕಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು.
“ಈ ಮೂರೂ ಶೂಟೌಟ್‌ಗಳನ್ನು ನಾನೇ ಮಾಡಿಸಿದ್ದೇನೆ. ಹಣಕ್ಕಾಗಿ ಬೇಡಿಕೆ ಇಟ್ಟಾಗ ನಿರಾಕರಿಸಿದಕ್ಕೆ ಈ ಮೂಲಕ ಎಚ್ಚರಿಸಿದ್ದೇನೆ’ ಎಂದು ಕಲಿ ಯೋಗೀಶ್ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಈ ಮೂರು ಪ್ರಕರಣದ ಹಿಂದೆ ಭೂಗತ ಪಾತಕಿಗಳ ಕೈವಾಡವಿರುವ ಅನುಮಾನದ ಮೇರೆಗೆ ಪ್ರಕರಣವನ್ನು ಭೇದಿಸುವುದಕ್ಕೆ ವಿಶೇಷ ಪೊಲೀಸರ ತನಿಖಾ ತಂಡಗಳನ್ನು ರಚಿಸಿದ್ದರು.
ಕಠಿಣ ಸವಾಲು; ಶೀಘ್ರದಲ್ಲಿ ಪತ್ತೆ
ಪ್ರಕರಣಗಳ ಬಗ್ಗೆ ವಿವರಣೆ ನೀಡಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಈ ಪ್ರಕರಣಗಳು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಸಾಮಾನ್ಯ ವಾಗಿ ಇಂಥಹ ಪ್ರಕರಣಗಳನ್ನು ಭೇದಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಸಿಸಿಬಿ ಪೊಲೀಸರು ಕಠಿಣವಾಗಿದ್ದ ಈ ಮೂರು ಪ್ರಕರಣ ಗಳನ್ನು ಅತಿ ಶೀಘ್ರ ಪತ್ತೆ ಮಾಡಿದ್ದಾರೆ. ಮೂರು ಶೂಟೌಟ್ ಪ್ರಕರಣಗಳಲ್ಲಿ ನೇರ ಭಾಗಿಯಾ ಗಿರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮತ್ತಷ್ಟು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಪೊಲೀಸ್ ವಶಕ್ಕೆ ಪಡೆದು ಕೊಳ್ಳುವ ಸಾಧ್ಯತೆಯಿದೆ.
ಪೊಲೀಸ್ ತಂಡಕ್ಕೆ ಬಹುಮಾನ
ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕ ಶಾಂತಾರಾಮ್ ನೇತೃತ್ವದ ತಂಡ ಹೊಸದಾಗಿ ರಚನೆಯಾಗಿದ್ದು, ಈ ಶೂಟೌಟ್ ಪ್ರಕರಣಗಳು ಈ ತಂಡ ಪತ್ತೆ ಮಾಡಿರುವ ಮಹತ್ವದ ಪ್ರಕರಣವಾಗಿದೆ. ಮೂರು ಪ್ರಕರಣಗಳನ್ನು ಅತಿಶೀಘ್ರ ಪತ್ತೆ ಮಾಡಿರುವ ಪೊಲೀಸರ ಕಾರ್ಯವನ್ನು ಡಿಜಿಪಿ ಹಾಗೂ ಎಡಿಜಿಪಿ ಶ್ಲಾಘಿಸಿದ್ದು, ಈ ತಂಡಕ್ಕೆ ಪೊಲೀಸ್ ಇಲಾಖೆ ಕಡೆಯಿಂದ ವಿಶೇಷ ಬಹುಮಾನ ನೀಡಲಾಗುವುದು. ಪಿಎಸ್‌ಐ ಶ್ಯಾಮ್ ಸುಂದರ್, ಎಎಸ್ ಐ ಹರೀಶ್ ಹಾಗೂ ಸಿಬಂದಿಗಳಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಟಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ’ಸೋಜಾ, ತೇಜಕುಮಾರ್ ಹಾಗೂ ರಿತೇಶ್ ಅವರು ಈ ಪ್ರಕರಣ ಭೇದಿಸಿದ ತಂಡದಲ್ಲಿದ್ದು, ಸಹಕರಿಸಿದ್ದರು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿದ್ದರು.
2014ರ ಅನಂತರದ ಮೊದಲ ಪ್ರಕರಣ
ದ.ಕ. ಜಿಲ್ಲೆಯಲ್ಲಿ 2014ರ ಅನಂತರ ಭೂಗತ ಪಾತಕಿಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಲ್ಲಿವರೆಗೆ ಯಾವುದೇ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಭೂಗತ ಪಾತಕಿಗಳ ಹಫ್ತಾ ವಸೂಲಿ ಸಂಬಂಧ ಪೊಲೀಸರಿಗೆ ಹಲವು ಕಡೆಗಳಿಂದ ಸಣ್ಣ-ಪುಟ್ಟ ದೂರುಗಳು ಬಂದಿದ್ದು, ಪೊಲೀಸರು ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಆದರೆ ಭೂಗತ ಪಾತಕಿಗಳು ಜಿಲ್ಲೆಯಲ್ಲಿ ಹೊಂದಿರುವ ಯಾವುದೇ ನೇರ ಸಂಪರ್ಕ ಹಾಗೂ ಸ್ಥಳೀಯರನ್ನು ಬಳಸಿಕೊಂಡು ಹಫ್ತಾ ವಸೂಲಿ ಅಥವಾ ಈ ರೀತಿ ಉದ್ಯಮಿಗಳನ್ನು ಬೆದರಿಸಿ ಶೂಟೌಟ್ ನಡೆಸಿರುವುದಕ್ಕೆ ಇಲ್ಲಿವರೆಗೆ ಮಹತ್ವದ ಸುಳಿವು ಅಥವಾ ಸಾಕ್ಷ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರರನ್ನು ಬಂಧಿಸಿರುವುದು 2014ರ ಅನಂತರದ ಮೊದಲ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೊಲೀಸರು ಕೂಡ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಭೂಗತ ಪಾತಕಿಗಳ ನಂಟು ಯಾವ ರೀತಿ ಕಾರ್ಯಾಚರಣೆ ನಡೆಸುತ್ತಿದೆ ಹಾಗೂ ಎಷ್ಟು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಲಾಗಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇದೀಗ ಬಯಲುಗೊಂಡಿರುವ ಈ ಪ್ರಕರಣ ಮಹತ್ವದ ಸುಳಿವು ಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಆರೋಪಿ ಸೇನೆಯಲ್ಲಿದ್ದವನು
ಆರೋಪಿ ಮನೋಜ್ ಕುಂದರ್ ಈ ಹಿಂದೆ ಭಾರತೀಯ ಸೇನೆಯಲ್ಲಿ ಸೇರಿದ್ದು, ಅಲ್ಲಿ ಒಂದು ವರ್ಷ ಕೆಲಸ ನಿರ್ವಹಿಸಿ, ಆರೋಗ್ಯ ಸಮಸ್ಯೆಯಿಂದಾಗಿ ಹುದ್ದೆಗೆ ರಾಜೀನಾಮೆ ಕೊಟ್ಟು ವಾಪಸ್ ಬಂದಿದ್ದ. ಸೇನೆಯಲ್ಲಿ ತರಬೇತಿ ಪಡೆದಿದ್ದ ಕಾರಣ ಆತನಿಗೆ ಶೂಟ್ ಮಾಡುವುದರ ಬಗ್ಗೆ ಸಾಕಷ್ಟು ತಿಳುವಳಿಕೆ ಹಾಗೂ ಅನುಭವವಿತ್ತು. ಪ್ರಸ್ತುತ ಆತ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಕಳೆದ ಒಂದೂವರೆ ವರ್ಷದಿಂದ ಭೂಗತ ಪಾತಕಿ ಕಲಿ ಯೋಗೀಶನ ಜತೆ ಸಂಪರ್ಕ ಹೊಂದಿದ್ದು, ದ.ಕ. ಹಾಗೂ ಉಡುಪಿ ಜಿಲ್ಲೆಗಳ ಉದ್ಯಮಿಗಳು ಹಾಗೂ ಶ್ರೀಮಂತರ ಬಗ್ಗೆ ಮಾಹಿತಿ ಹಾಗೂ ಅವರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ರವಾನಿಸುತ್ತಿದ್ದ. ಅನಂತರದಲ್ಲಿ ಈತ ನೀಡುತ್ತಿದ್ದ ಮಾಹಿತಿ ಆಧರಿಸಿ ಭೂಗತ ಪಾತಕಿ ಕಲಿ ಯೋಗೀಶ, ಕೆಲವು ಉದ್ಯಮಿಗಳಿಗೆ ಕರೆ ಮಾಡಿ ಹಫ್ತಾ ನೀಡುವಂತೆ ಒತ್ತಾಯಿಸುತ್ತಿದ್ದ. ಹಣ ನೀಡಲು ನಿರಾಕರಿಸುವವರಿಗೆ ಬೆದರಿಕೆ ಹಾಕಿ ಈ ಮಾದರಿಯಲ್ಲಿ ಶೂಟೌಟ್ ಮಾಡುವುದಕ್ಕೆ ಈತನ ಮೂಲಕ ಸಂಚು ರೂಪಿಸುತ್ತಿದ್ದ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಆಯುಕ್ತರು ವಿವರಿಸಿದರು. ಮತ್ತೂಬ್ಬ ಆರೋಪಿ ಚಂದ್ರಶೇಖರ ಕೂಲಿ ಕೆಲಸ ಮಾಡಿಕೊಂಡಿದ್ದು, ಮೊದಲ ಆರೋಪಿ ಮನೋಜ್ ಜತೆ ಸೇರಿಕೊಂಡು ಕಲಿ ಯೋಗೀಶ ಹೇಳಿದ್ದಂತೆ ಸಂಚು ರೂಪಿಸಿ ಹಫ್ತಾ ವಸೂಲಿಗೆ ನೆರವಾಗುತ್ತಿದ್ದ.
ಕಲಿ ಯೋಗೀಶ ಎಲ್ಲಿದ್ದಾನೆ?
ಪಾತಕಿ ಕಲಿ ಯೋಗೀಶ ಈಗ ಎಲ್ಲಿದ್ದಾನೆ ಎಂಬುದು ಸ್ಪಷ್ಟವಾಗಿ ಪೊಲೀಸರಿಗೂ ಗೊತ್ತಾಗುತ್ತಿಲ್ಲ. ಆದರೆ ಆತ ಬ್ಯಾಂಕಾಕ್ ಅಥವಾ ಮೊರಕ್ಕೋದಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದೆ. ಕಲಿ ಯೋಗೀಶ ಸಹಿತ ಇನ್ನು ಕೆಲವು ಮಂದಿ ಭೂಗತ ಪಾತಕಿಗಳ ಮೇಲೆ ಮಂಗಳೂರು ಪೊಲೀಸರು ಜಾರಿ ಮಾಡಿರುವ ರೆಡ್ ಕಾರ್ನರ್ ನೋಟಿಸ್ ಈಗಲೂ ಚಾಲ್ತಿಯಲ್ಲಿದೆ. 2017ರಲ್ಲಿ ರೆಡ್ ಕಾರ್ನರ್ ನೋಟಿಸ್ ಅನ್ನು ನವೀಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.