ಕರಾವಳಿ ಸಂಸ್ಕೃತಿಗೆ ಮನಸೋತು ಹುಲಿವೇಷದಲ್ಲಿ ಕುಣಿದ ಫ್ರಾನ್ಸ್ ಬೆಡಗಿ!
Team Udayavani, Oct 8, 2017, 2:27 PM IST
ಮಹಾನಗರ: ‘ಕರಾವಳಿಯ ಮಂದಿ ವಿಶಾಲಹೃದಯದವರು. ಇಲ್ಲಿನ ಸಂಸ್ಕೃತಿ ನನಗಿಷ್ಟ, ಅದರಲ್ಲೂ ನೀರುದೋಸೆ, ಪುಂಡಿ, ತಿಮರೆ ಚಟ್ನಿ ಅಂದರೆ ಪಂಚಪ್ರಾಣ. ಹುಲಿವೇಷದ ತಾಸೆಯ ಪೆಟ್ಟಿಗೆ ಕುಣಿದರಂತೂ ಮೈ ರೋಮಾಂಚನವೆನಿಸುತ್ತದೆ.’
ನವರಾತ್ರಿ ವೇಳೆ ಸೀರೆಯುಟ್ಟ ವಿದೇಶಿ ಹುಡುಗಿಯೊಬ್ಬಳು ನಗರದ ರಥಬೀದಿಯಲ್ಲಿ ಹುಲಿವೇಷ ತಾಸೆಯ ಪೆಟ್ಟಿಗೆ ಕುಣಿದ ವೀಡಿಯೋ ಒಂದು ಇದೀಗ ಎಲ್ಲ ಕಡೆ ವೈರಲ್ ಆಗಿದ್ದು, ಆ ವಿಡಿಯೋದಲ್ಲಿರುವ ಫ್ರಾನ್ಸ್ ದೇಶದ ಬೆಡಗಿ ಹೇಳಿದ ಮಾತಿದು. ಫ್ರಾನ್ಸ್ ಮೂಲದ ಈಕೆ ಹೆಸರು ನೊಯಮಿ. ಪ್ರಪಂಚ ಪರ್ಯಟನೆ ಅಂದರೆ ಅತೀವ ಆಸಕ್ತಿ. ಈ ರೀತಿ ದೇಶ ಸುತ್ತುತ್ತ ಬಂದಿರುವ ನೊಯಮಿ, ಕಳೆದ ವಾರ ಮಂಗಳೂರು ನಗರಕ್ಕೂ ಆಗಮಿಸಿದ್ದು, ದಸರಾ ಸಂಭ್ರಮಾಚರಣೆಯಲ್ಲಿಯೂ ಭಾಗವಹಿಸಿದ್ದಾರೆ.
ಭಾರತದ ನಾನಾ ರಾಜ್ಯಗಳಿಗೆ ಭೇಟಿ ನೀಡಿದ ಅಲ್ಲಿನ ಸಂಸ್ಕೃತಿ, ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಬಹುದಿನಗಳಿಂದ ಇತ್ತು. ಇದನ್ನು ನೆರವೇರಿಸಿದ್ದು, ಈಕೆಯ ಗೆಳತಿ ಮಂಗಳೂರಿನವರೇ ಆದ ಸಚಿತಾನಂದ ಗೋಪಾಲ್. ನೊಯಮಿ ಅವರು ಸದ್ಯ ಬೆಂಗಳೂರಿನಲ್ಲಿ ಕ್ರಿಯೇಟಿವ್ ಡ್ಯಾನ್ಸ್ ಥೆರಪಿ ಕಲಿಯುತ್ತಿದ್ದಾರೆ. ಕಲಿಕೆಯ ಸಂದರ್ಭದಲ್ಲಿ ಇವರಿಗೆ ಸಚಿತಾ ಅವರ ಪರಿಚಯವಾಗಿದೆ. ಸೆಮಿಸ್ಟರ್ ಮುಗಿದು ರಜಾದ ಮಜಾದಲ್ಲಿದ್ದಾಗ ಮಂಗಳೂರು ದಸರಾ ಹಬ್ಬದ ವೈಶಿಷ್ಟ್ಯಗಳ ಬಗ್ಗೆ ಸಚಿತಾ ಅವರು ನೊಯಮಿ ಅವರಲ್ಲಿ ಹೇಳಿದ್ದರು.
‘ಕರಾವಳಿಯ ಸಂಸ್ಕೃತಿಯ ಬಗ್ಗೆ ನನಗೂ ತಿಳಿಯಬೇಕು. ನಾನು ಕೂಡ ದಸರಾ ಹಬ್ಬಕ್ಕೆ ಮಂಗಳೂರಿಗೆ ಬರುತ್ತೇನೆ’ ಎನ್ನುತ್ತ ಬಂದಿದ್ದ ಅವರು ಹುಲಿವೇಷ ಕಲಾವಿದರ ಹೆಜ್ಜೆಗೆ ತಕ್ಕಂತೆ ಕುಣಿದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ವಿಶೇಷ.
ವೈರಲ್ ಆಯ್ತು ವೀಡಿಯೋ
ನೊಯಮಿ ಅವರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ ಸಹಿತ ಅನೇಕ ದೇವಾಲಯಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೆಂಕಟರಮಣ ದೇವಾಲಯದಲ್ಲಿ ಹುಲಿವೇಷದ ತಾಸೆಯ ಪೆಟ್ಟಿಗೆ ಹುಲಿವೇಷಗಳ ಜತೆ ಕುಣಿದರು. ಈ ವೀಡಿಯೋ ಸದ್ಯ ವೈರಲ್ ಆಗಿದ್ದು, ಇದಕ್ಕೆ ಕಾರಣ ಇಲ್ಲಿನ ಜನತೆಯ ಪ್ರೀತಿ ಎನ್ನುತ್ತಾರೆ ನೊಯನಿ. ಭಾರತ ದೇಶದ ಒಂದೊಂದು ಸಂಸ್ಕೃತಿಯ ಅನುಭವವನ್ನು ಆಯಾ ರಾಜ್ಯದಲ್ಲಿ ಕಳೆಯಬೇಕು ಎಂಬ ಆಸೆ ಹೊತ್ತಿರುವ ಇವರು, ಕೇರಳಕ್ಕೆ ತೆರಳಿ ಓಣಂ ಆಚರಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಕೊಯಮತ್ತೂರಿಗೆ ತೆರಳಲಿದ್ದಾರೆ. ಕಲಿಕೆಯಲ್ಲಿ ಇನ್ನು ಒಂದು ಸೆಮಿಸ್ಟರ್ ಬಾಕಿ ಇದ್ದು, ವಿದ್ಯಾಭ್ಯಾಸದ ಬಳಿಕ ತನ್ನೂರಿಗೆ ತೆರಳುವ ಮೊದಲು ಭಾರತದ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಇವರದು.
ನಾನು ಪುಣ್ಯ ಮಾಡಿದ್ದೆ
ಮಂಗಳೂರಿಗೆ ಆಗಮಿಸಲು ನಾನು ಪುಣ್ಯ ಮಾಡಿದ್ದೇನೆ. ಸ್ನೇಹಿತೆ ಸಚಿತಾ ಅವರು ಕರೆದ ಕಾರಣ ದಸರಾದಲ್ಲಿ ಪಾಲ್ಗೊಂಡೆ. ಒಂದು ವೇಳೆ ಆಗಮಿಸದಿದ್ದರೆ, ನೆನಪಿನಲ್ಲುಳಿಯುವ ಸಮಯವನ್ನು ಕಳೆದುಕೊಳ್ಳುತ್ತಿದೆ. ಮಂಗಳೂರಿಗರು ನನಗೆ ಅತೀವ ಪ್ರೀತಿ ತೋರಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆಯನ್ನು ಕಲಿಯುತ್ತಿದ್ದೇನೆ.
ನೊಯಮಿ, ಫ್ರಾನ್ಸ್ ಪ್ರಜೆ
ನವೀನ್ ಭಟ್ ಇಳಂತಿಲ