ಸ್ನಾನಘಟ್ಟ ಬಳಿ ವಿಪತ್ತು ನಿರ್ವಹಣೆ ಮುಂಜಾಗ್ರತೆ ಇಲ್ಲ
Team Udayavani, Jun 10, 2018, 11:25 AM IST
ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ನಿರಂತರ ವರ್ಷಧಾರೆ ಆಗುತಿದ್ದು, ಕುಮಾರಧಾರೆಯು ನೆರೆಯಿಂದ ತುಂಬಿ ಹರಿಯುತ್ತಿದೆ. ಇಲ್ಲಿನ ಸ್ನಾನಘಟ್ಟ ಭಾಗಶಃ ಮುಳುಗೇಳುತ್ತಿದ್ದು ಯಾವುದೇ ಮುಂಜಾಗ್ರತೆ ವಹಿಸಿಲ್ಲ. ಭಕ್ತರು ಅಪಾಯದ ಸ್ಥಿತಿಯಲ್ಲಿ ಪುಣ್ಯ ಸ್ನಾನ ನೆರವೇರಿಸುತ್ತಿರುವುದು ಕಂಡುಬರುತ್ತಿದೆ.
ಶುಕ್ರವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪುಣ್ಯನದಿ ಕುಮಾರ ಧಾರವು ತನ್ನ ಹರಿವನ್ನು ಹೆಚ್ಚಿಸಿಕೊಂಡು ತುಂಬಿ ಹರಿಯುತ್ತಿದೆ, ಅಪಾರ ಪ್ರಮಾಣದ ಭಕ್ತರು ಇಲ್ಲಿ ಸ್ನಾನ ಘಟ್ಟ ಬಳಿ ತಿರ್ಥ ಸ್ನಾನಕ್ಕೆ ನೆರವೇರಿಸಲೆಂದು ತೆರಳಿ ನದಿಗೆ ಇಳಿದು ಸ್ಥಾನ ಪೂರೈಸುತ್ತಿದ್ದಾರೆ. ಈ ವೇಳೆ ಅವರು ಅಪಾಯಕ್ಕೆ ಒಳಗಾಗುವ ಭೀತಿ ಇದೆ.
ಕುಮಾರಧಾರ ಸ್ನಾನ ಘಟ್ಟ ಬಳಿ ಯಾವುದೇ ವಿಪತ್ತು ನಿರ್ವಹಣೆಗೆ ಕ್ರಮಗಳನ್ನು ಸಂಬಂಧಿಸಿದ ಇಲಾಖೆ ಕೈಗೊಂಡಿಲ್ಲ. ಸ್ನಾನ ಘಟ್ಟದ ಬಳಿ ದೇಗುಲದ ಬೆರಳೆಣಿಕೆಯ ಮಹಿಳಾ ಭದ್ರತಾ ಸಿಬಂದಿ ಹೊರತುಪಡಿಸಿ ಇನ್ಯಾವುದೆ ಸಿಬಂದಿಯನ್ನು ಯೋಜಿಸಿಲ್ಲ. ಪೊಲೀಸ್ ಸಿಬಂದಿ, ಗೃಹ ರಕ್ಷಕದಳದ ಸಿಬಂದಿ ಇಲ್ಲಿಗೆ ನಿಯೋಜಿಸಲಾಗಿಲ್ಲ. ನೆರೆ ಸಂಭವಿಸಿದ ವೇಳೆಗೆ ಕೈಗೊಳ್ಳಬಹುದಾದ ಇ ಪೂರ್ವ ವ್ಯವಸ್ಥೆಗಳು ಕಾಣಿಸುತಿಲ್ಲ.
ಮುಳುಗಿದ ಸ್ನಾನಘಟ್ಟ
ಸ್ನಾನಘಟ್ಟವು ಭಾಗಶಃ ಮುಳುಗಿದೆ. ನೀರಿನ ಹರಿವು ಹೆಚ್ಚಳದಿಂದಾಗಿ ದಡದಲ್ಲಿಯೇ ತೀರ್ಥ ಸ್ನಾನ ಮಾಡಬೇಕು. ಭಕ್ತರಿಗೆ ನದಿಯ ಆಳದ ಅರಿವಿಲ್ಲ ಹೀಗಾಗಿ ಸ್ನಾನಕ್ಕೆ ಇಳಿಯುವ ಪ್ರಯತ್ನ ನಡೆಸುತ್ತಿರುವ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ. ಭಕ್ತರು ಯಾರು ಕೂಡಾ ನದಿಗೆ ಇಳಿಯಬಾರದು ಎಂದು ದಡದಲ್ಲಿರುವ ಒಂದಿಬ್ಬರು ಸಿಬಂದಿ ಭಕ್ತರಿಗೆ ಮನವರಿಕೆ ಮಾಡುವ ಪ್ರಯತ್ನವೂ ಫಲಿಸುತ್ತಿಲ್ಲ.
ಪ್ರತಿ ಬಾರಿ ಮಳೆಗಾಲ ಸಂದರ್ಭ ಇಲ್ಲಿ ತುರ್ತು ವಿಪತ್ತು ನಿರ್ವಹಣೆಗೆ ಗೃಹರಕ್ಷಕ ದಳದ ಸಿಬಂದಿಯನ್ನು ದೇಗುಲದ ವತಿಯಿಂದ ಹಾಗೂ ಪೊಲೀಸ್ ಇಲಾಖೆ ಕಡೆಯಿಂದ ಹೆಚ್ಚುವರಿಯಾಗಿ ಒದಗಿಸಲಾಗುತ್ತಿತ್ತು. ಈ ಬಾರಿ ಮಳೆ ವ್ಯಾಪಕ ಸುರಿಯುತ್ತಿದ್ದು, ನದಿ ನೆರೆಯಿಂದ ತುಂಬಿ ಹರಿಯುತ್ತಿದ್ದರೂ ವಿಶೇಷ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿಲ್ಲ.
ಈ ಹಿಂದಿನ ವರ್ಷಗಳಲ್ಲಿ ಪ್ರತಿ ಬಾರಿ ಮಳೆಗಾಲದ ಅವಧಿಯಲ್ಲಿ ಸ್ನಾನ ಘಟ್ಟ ಬಳಿ ಪುಣ್ಯ ಸ್ನಾನಕ್ಕೆ ಇಳಿಯುವ ಸಂದರ್ಭ ನದಿ ಹರಿವಿನ ನೀರಿನ ಸೆಳೆತಕ್ಕೆ ಸಿಲುಕಿ ಭಕ್ತರು ನೀರು ಪಾಲಾದ ಘಟನೆಗಳು ಸಂಭವಿಸಿವೆ.
ಮುಳುಗೇಳುವ ಸೇತುವೆಗೆ ಮುಕ್ತಿ
ಈ ಹಿಂದಿನ ವರ್ಷಗಳಲ್ಲಿ ಪ್ರತಿ ಮಳೆಗಾಲದಲ್ಲಿ ಕುಮಾರಧಾರಾ ಸೇತುವೆ ನೆರೆಗೆ ಮಳುಗೇಳುತ್ತಿತ್ತು. ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಸ್ಥಳಿಯರು ಸಂಕಷ್ಟ ಅನುಭವಿಸುತ್ತಿದ್ದರು. ನೀರಿನಿಂದ ಮುಳುಗಡೆ ಆಗುವ ಸೇತುವೆ ಮೇಲೆ ಸಂಚರಿಸದಂತೆ ದಡದ ಎರಡು ಬದಿ ಗೃಹರಕ್ಷಕ ದಳದ ಸಿಬಂದಿಯನ್ನು ನಿಯೋಜಿಸಿ ಕಾವಲು ಕಾಯುತ್ತಿದ್ದರು. ಈ ವರ್ಷ ಸೇತುವೆ ಮೇಲ್ದರ್ಜೆಗೇರಿದೆ. ಹೀಗಾಗಿ ಸೇತುವೆ ಮುಳುಗೇಳುವ ಸಮಸ್ಯೆಯಿಲ್ಲ. ಭಕ್ತರು, ಪ್ರಯಾಣಿಕರು, ಸಿಬಂದಿ ರಸ್ತೆ ಬದಿ ಕಾಯುವ ಸನ್ನಿವೇಶ ಉಂಟಾಗುತ್ತಿಲ್ಲ. ಹೀಗಾಗಿ ಈ ಬಾರಿ ಮುಳುಗೇಳುವ ಸೇತುವೆಗೆ ಮುಕ್ತಿ ದೊರಕಿದೆ.
ಚರಂಡಿಯೂ ಸಮರ್ಪಕವಾಗಿಲ್ಲ
ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪರಿಸರದ ಗ್ರಾಮೀಣ ಹಳ್ಳಕೊಳ್ಳಗಳು ಮುಂಗಾರಿನ ಅಬ್ಬರಕ್ಕೆ ತುಂಬಿ ಹರಿಯುತ್ತದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಪರಿಸರದ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಹರಿಯುವ ನದಿ ದಾಟದಂತೆ ಮುಂಜಾಗ್ರತೆ ಕ್ರಮದ ಆವಶ್ಯಕತೆಯೂ ಇದೆ. ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿದು ಮತ್ತಷ್ಟು ಬವಣೆ ಪಡುವಂತಾಗಿದೆ.
ಎಚ್ಚರಿಕೆ ಅಗತ್ಯ
ಭಕ್ತರು ನದಿಗೆ ಇಳಿಯದಂತೆ ಎಚ್ಚರಿಕೆ ಹಾಗೂ ಸೂಚನೆ ನೀಡುವುದಕ್ಕೆ ಇಲ್ಲಿ ಸಿಬಂದಿಗಳ ನೇಮಕವಾಗಿಲ್ಲ. ಕಂಬಕ್ಕೆ ಕಟ್ಟಿದ ಹಗ್ಗವನ್ನು ಹೊಳೆಗೆ ತೇಲಿ ಬಿಡಲಾಗಿದ್ದು ಉಳಿದಂತೆ ಟ್ಯೂಬ್ ಒಂದನ್ನು ತಂದಿರಿಸಲಾಗಿದೆ. ಅದರ ನಿರ್ವಹಣೆಗೆ ಸೂಕ್ತ ತರಬೇತಿ ಪಡೆದ ಸಿಬಂದಿ ನಿಯೋಜಿಸಿಲ್ಲ. ಮುಂಗಾರು ಮುಂಜಾಗ್ರತೆ ಕ್ರಮವಾಗಿ ಇಲ್ಲಿಗೆ ಹೆಚ್ಚುವರಿ ವಿಪತ್ತು ನಿರ್ವಹಣೆ ಸಿಬಂದಿ ಇದುವರೆಗೆ ಒದಗಿಸಿಲ್ಲ. ಸ್ನಾನಘಟ್ಟ ಬಳಿ ನದಿಗೆ ಇಳಿಯದಂತೆ ಎಚ್ಚರಿಕೆ ಫಲಕ ಕೂಡ ಅಳವಡಿಸಿಲ್ಲ. ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸೂಚಿಸಿದ್ದೇನೆ
ಸ್ನಾನ ಘಟ್ಟ ಬಳಿ ಮುಂಜಾಗ್ರತ ಕ್ರಮ ವಹಿಸದೆ ಇರುವುದರ ಗಮನಕ್ಕೆ ತಂದ ಬಳಿಕ ಈ ಕುರಿತು ಪೋಲಿಸ್ ಠಾಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
– ಕುಂಞಮ್ಮ ತಹಶೀಲ್ದಾರ್ ಸುಳ್ಯತಾ| ಕಚೇರಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.