ದ.ಕ.ದಲ್ಲಿ ಸೋಂಕು ಪತ್ತೆಯಿಲ್ಲ; ಜನತಾ ಕರ್ಫ್ಯೂಗೆ ಸಿದ್ಧ
Team Udayavani, Mar 22, 2020, 6:15 AM IST
ರವಿವಾರದಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಳಿ ಇತ್ತು.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ರವಿವಾರ ಜನತಾ ಕರ್ಫ್ಯೂ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜಾಗಿದ್ದು, ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಹಾಲು, ಪತ್ರಿಕೆ, ಮೆಡಿಕಲ್, ತುರ್ತು ವೈದ್ಯಕೀಯ ಸೇವೆಗಳು ಲಭ್ಯವಿರಲಿವೆ.ಪ್ರಧಾನಿಯವರ ಜನತಾ ಕರ್ಫ್ಯೂಗೆ ಬೆಂಬಲವಾಗಿ ಪೆಟ್ರೋಲ್ ಬಂಕ್‌ಗಳು ಕಾರ್ಯ ಸ್ಥಗಿತಗೊಳಿಸಲಿದೆ.
ದ.ಕ.-ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ 380 ಪೆಟ್ರೋಲ್ ಬಂಕ್‌ಗಳು ಜನತಾ ಕರ್ಫ್ಯೂಗೆ ಬೆಂಬಲಿಸಲಿದೆ. ಆ್ಯಂಬುಲೆನ್ಸ್, ಹಾಲಿನ ವಾಹನ, ಆಸ್ಪತ್ರೆ, ಪೊಲೀಸರಿಗೆ ಸಂಬಂಧಿಸಿದ ವಾಹನಗಳು ಹಾಗೂ ಕೆಲವರಿಗೆ ಮಾನವೀಯತೆ ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಪೂರೈಸಲಾಗುತ್ತದೆ.
ತುರ್ತು ಸೇವೆ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಕೆಲವು ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪೆಟ್ರೋಲ್ ಬಂಕ್‌ಗಳು ರಾತ್ರಿ 9 ಗಂಟೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ತೆರೆಯಲಿವೆ ಎಂದು ದ.ಕ.-ಉಡುಪಿ ಪೆಟ್ರೋಲಿಯಂ ವರ್ತಕರ ಸಂಘದ ಅಧ್ಯಕ್ಷ ಪಿ. ವಾಮನ ಪೈ ತಿಳಿಸಿದ್ದಾರೆ.ನಗರದ ಬಹುತೇಕ ಹೊಟೇಲ್‌ಗಳಲ್ಲಿ ಶನಿವಾರ ಸಂಜೆಯಿಂದಲೇ ಗ್ರಾಹಕರಿಗೆ ಸೇವೆ ಅಲಭ್ಯವಾಗಿದ್ದು, ಪಾರ್ಸೆಲ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬಸ್ ಬಂದ್
ರವಿವಾರ ಸರ್ವೀಸ್, ಸಿಟಿಬಸ್ ಸೇರಿದಂತೆ ಖಾಸಗಿ ಬಸ್‌ಗಳ ಸೇವೆ ಇರುವುದಿಲ್ಲ ಎಂದು ಬಸ್ ಮಾಲಕರ ಸಂಘ ತಿಳಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಓಡಾಟ ನಡೆಸುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಹಾಲು ಪೂರೈಕೆ ಯಥಾಸ್ಥಿತಿ
ರವಿವಾರ “ಜನತಾ ಕರ್ಫ್ಯೂ’ ಇದ್ದರೂ ಹಾಲಿನ ಪೂರೈಕೆ ಮಾಡಲಾಗುವುದು. ಹಾಲು ಅತ್ಯಾವಶ್ಯಕ ವಸ್ತುಗಳಲ್ಲಿ ಒಂದಾಗಿರುವುದರಿಂದ ಜನರ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುವುದು. ಇತರ ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹಾಲು ಪೂರೈಸಲಾಗುತ್ತದೆ. ರವಿವಾರ ಬೆಳಗ್ಗೆ ಹಾಲು ಪೂರೈಸಲಾಗುವುದು. ಬೇಡಿಕೆ ಇದ್ದರೆ ಮಾತ್ರ ಸಂಜೆ ಪೂರೈಸ ಲಾಗುವುದು ಎಂದು ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಅವರು ತಿಳಿಸಿದ್ದಾರೆ.
ಪ್ರವಾಸಿಗರು ಹಾಗೂ ಭಕ್ತರು ಒಂದು ವಾರ ಕಾಲ ಕ್ಷೇತ್ರ ದರ್ಶನ
ವನ್ನು ಮುಂದೂಡಬೇಕೆಂದು ಮನವಿ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಜನಜಂಗುಳಿ
ರವಿವಾರದಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ಜನರು ಬಿರುಸಿನ ವ್ಯಾಪಾರದಲ್ಲಿ ತೊಡಗಿರುವ ದೃಶ್ಯ ಕಂಡುಬಂತು. ದಿನಬಳಕೆಯ ವಸ್ತು ಗಳಾದ ತರಕಾರಿ, ಹಣ್ಣುಹಂಪಲು, ಬೇಳೆ-ಕಾಳು ಸೇರಿದಂತೆ ದಿನಸಿ ಖರೀದಿ ಬಿರುಸಿನಿಂದ ಕೂಡಿತ್ತು.
70 ಬಸ್ ಸಂಚಾರ ರದ್ದು
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ -19 ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ಮತ್ತು ಕಾಸರಗೋಡಿ ನಿಂದ ಮಂಗಳೂರಿಗೆ ಆಗಮಿಸುವ ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ಶನಿವಾರದಂದು ರದ್ದುಗೊಳಿಸಲಾಗಿತ್ತು. ಪ್ರತೀ ದಿನ ಸುಮಾರು 70 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ದ.ಕ. ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಾತ್ಕಾಲಿಕವಾಗಿ ಬಸ್ ಸಂಚಾರ ರದ್ದುಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್‌ಗಳ ಟ್ರಿಪ್ ಕಡಿತದ ಕಾರಣ ಸಂಜೆ ವೇಳೆಗೆ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಇದ್ದ ಸೀಮಿತ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂತು.
ಬಾಧಿತ ವ್ಯಕ್ತಿಯಿಂದ ರಕ್ತದಾನ ಶಂಕೆ
ಕೋವಿಡ್ -19 ಪಾಸಿಟಿವ್ ಇರುವ ವ್ಯಕ್ತಿಯೋರ್ವ ಆಸ್ಪತ್ರೆಯೊಂದರಲ್ಲಿ ರಕ್ತದಾನ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೇರಳದ ಮಾಧ್ಯಮಗಳು ಇದನ್ನು ವರದಿ ಮಾಡಿವೆ. ಇನ್ನೊಂದು ಮೂಲಗಳ ಪ್ರಕಾರ ಆತ ಮಂಗಳೂರಿನ ಆಸ್ಪತ್ರೆಗೆ ರಕ್ತ ಪರೀಕ್ಷೆಗಾಗಿ ಬಂದಿದ್ದ ಎಂದೂ ಹೇಳಲಾಗುತ್ತಿದೆ. ಆದರೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್ ಇದನ್ನು ನಿರಾಕರಿಸಿದ್ದು, “ಕೋವಿಡ್ -19 ಸಂಬಂಧಿಸಿ ರಕ್ತ ಪರೀಕ್ಷೆಯನ್ನು ಯಾವುದೇ ಆಸ್ಪತ್ರೆಗಳಲ್ಲಿ ಮಾಡಲಾಗು ವುದಿಲ್ಲ. ಕೋವಿಡ್ -19 ಪಾಸಿಟಿವ್ ಇರುವ ವ್ಯಕ್ತಿ ಮಂಗಳೂರಿಗೆ ಆಗಮಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆತಂಕ ಮೂಡಿಸಿದ ನೈಜೀರಿಯಾ ಪ್ರಜೆ
ನಗರದ ನವಭಾರತ ಸರ್ಕಲ್‌ನಲ್ಲಿ ಶನಿವಾರ ಮಧ್ಯಾಹ್ನ ವೇಳೆ ತಿರುಗಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ನಡೆಯಿತು. ಬಳಿಕ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಪೊಲೀಸರು ಆಗಮಿಸಿ ಆ್ಯಂಬುಲೆನ್ಸ್ ಕರೆಸಿ ಆತನನ್ನು ತಪಾಸಣೆಗೆಂದು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ವೆನ್ಲಾಕ್ ವೈದ್ಯರು ಆತನನ್ನು ತಪಾಸಣೆ ನಡೆಸಿದಾಗ ಯಾವುದೇ ರೋಗ ಲಕ್ಷಣ ಕಂಡು ಬಾರದ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ವೆನ್ಲಾಕ್ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ನೈಜೀರಿಯಾ ಮೂಲದ ವ್ಯಕ್ತಿ ಕಳೆದ ಮೂರು ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದು, ವಿವಿಧೆಡೆ ತಿರುಗಾಡುತ್ತಿದ್ದಾನೆ. ಆತನಲ್ಲಿ ಹಣ, ಉಳಿದುಕೊಳ್ಳಲು ಮನೆ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾನೆ. ಕೆಲವು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದಾನೆ. ಆತನಲ್ಲಿ ಕೋವಿಡ್ -19 ಲಕ್ಷಣ ಇಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.