ಸೇನೆ ಸೇರಲು ಸಂಪತ್ತೂ ಬೇಕಿಲ್ಲ,ಶಿಫಾರಸೂ ಅಗತ್ಯವಿಲ್ಲ !
Team Udayavani, Jan 30, 2018, 2:36 PM IST
ಬೆಳ್ತಂಗಡಿ: ‘ಸಂಪತ್ತಾಗಲಿ, ಶಿಫಾರಸ್ಸಾಗಲಿ ಸೇನೆಗೆ ಸೇರಲು ಬೇಕಿಲ್ಲ. ಅದಕ್ಕೆ ಬೇಕಿರುವುದು ಕೇವಲ ಸ್ಫೂರ್ತಿ ಮತ್ತು ದೇಶ ಸೇವೆ ಮಾಡಬೇಕೆಂಬ ಹಂಬಲವಷ್ಟೇ. ನನಗಿದ್ದದ್ದು ಇವೆರಡೇ. ಇಂದು ಸೈನಿಕನೆಂಬ ಕೀರ್ತಿ ತಂದುಕೊಟ್ಟಿದೆ’- ಹೀಗೆ ಮಾತು ಆರಂಭಿಸುವವರು ಯೋಗೀಶ್ ಕುಮಾರ್.
ಮನೆಯಲ್ಲಿ ಬಡತನ. ಪ್ರೌಢಶಾಲೆಗೆ ಹೋಗುವು ದಾದರೂ ಬಹಳ ದೂರ ಹೋಗಬೇಕಿತ್ತು. ವೇಣೂರಿಗೆ ಹೈಸ್ಕೂಲಿಗೆಂದು ಬಂದರು. ಆಗಲೇ ದೇಶ ಸೇವೆಯ ಹಂಬಲ ಮನೆ ಮಾಡಿತ್ತು. ನೂರೆಂಟು ಯೋಚನೆ ಇದ್ದರೂ ದೇಶ ಸೇವೆಯ ಆಲೋಚನೆ ಬದಿಗೆ ಸರಿಯಲಿಲ್ಲ. ಕೊನೆಗೂ ತಮ್ಮ ಕನಸನ್ನು ದಕ್ಕಿಸಿಕೊಂಡರು ಅವರು. ‘ದೇಶ ಸೇವೆ ಮಾಡಬೇಕೆಂಬ ಹಂಬಲವೊಂದೇ ಇಂದು ತಾನು ಸೈನಿಕರಾಗಿರಲು ಕಾರಣ’ ಎನ್ನುವ ಯೋಗೀಶ್ ಎಸೆಸೆಲ್ಸಿ ಮುಗಿಸಿದ ಕೂಡಲೇ ಹೊರಟದ್ದು ದೇಶ ಸೇವೆಗೆ. ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ಪಾಡ್ಯಾರು ಮನೆ ನಿವಾಸಿ ಯೋಗೀಶ್ ಕುಮಾರ್ (30) 2004ರಲ್ಲಿ ಭೂಸೇನೆಗೆ ಸೇರಿದವರು.
ವಿವಿಧೆಡೆ ಸೇವೆ
ಪಂಜಾಬ್‌ನ ಅಂಬಾಲ, ಬಿಹಾರ, ಗಯಾ, ಲೇಹ್, ಬೆಂಗಳೂರು, ಜಮ್ಮು ವಿನ ರಜೌರಿ, ರಾಜಸ್ಥಾನದ ಜೋಧ್‌ಪುರ, ಪೂನಾದಲ್ಲಿ ಸೇವೆ ಸಲ್ಲಿಸಿ ಈಗ ಅಸ್ಸಾಂನ ಮಿಸಾಪುರಿಯಲ್ಲಿ ಕರ್ತವ್ಯನಿರತರಾಗಿದ್ದಾರೆ. ಸೇನೆ ಯಲ್ಲಿದ್ದುಕೊಂಡು ಮುಕ್ತ ವಿವಿಯಲ್ಲಿ ಪದವಿ ಪಡೆದರು. ತಂದೆಯೂ ಕೂಲಿ ಕೆಲಸ, ಮನೆಯಲ್ಲಿ ಯಾರೂ ಸೇನೆಯಲ್ಲಿ ಸೇರಿದವರು ಇರಲಿಲ್ಲ. ಹಾಗೆಂದು ಅವುಗಳ್ಯಾವುದೂ ನನ್ನನ್ನು ತಡೆಯಲಿಲ್ಲ. ದೇಶ ಸೇವೆ ಮಾಡಬೇಕೆಂಬ ಮನಸ್ಸು ಎಳೆಯ ಪ್ರಾಯದಿಂದಲೂ ಇತ್ತು. ಆದ್ದರಿಂದ ಸೇನೆಗೆ ಸೇರಲು ನಿರ್ಧರಿಸಿದೆ. ನಿಜವಾಗಲೂ ಸೇನೆ ಸೇರಲು ಭಯ ಬೇಕಿಲ್ಲ ; ಬದಲಿಗೆ ದೇಶಭಕ್ತಿ ಸಾಕು’ ಎಂಬುದು ಯೋಗೀಶ್ ಅವರ ಮಾತು.
ಕುಟುಂಬಕ್ಕೆ ಸೂರಿಲ್ಲ
ಕಳೆದ ವರ್ಷವಷ್ಟೇ ವಿವಾಹಿತರಾದ ಯೋಗೀಶ್ ಅವರಿಗೆ ಇಬ್ಬರು ಸಹೋದರರು. ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. 1985ರಿಂದ ಇವರು ಇದೇ ಜಾಗದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಸರಕಾರ 94ಸಿ, ಅಕ್ರಮ-ಸಕ್ರಮ ಎಂದು ಎಲ್ಲರಿಗೂ ಭೂಮಿ ಕೊಡುತ್ತದೆ. ದೇಶ ಕಾಯುವ ಸೈನಿಕ ಯೋಗೀಶ ಅವರ ಕುಟುಂಬಕ್ಕೆ ಸ್ವಂತ ಭೂಮಿ ಇಲ್ಲದ ಕಾರಣ, ಯಾವುದೇ ಸಾಲ ಸೌಲಭ್ಯ, ಅನುದಾನ ದೊರೆಯುತ್ತಿಲ್ಲ. ಪರಿಣಾಮ ಇಂದಿಗೂ ಯೋಗೀಶರ ಕುಟುಂಬ ಸಿಮೆಂಟ್ ಶೀಟ್‌ನ ಮಾಡಿನ ಮನೆಯಲ್ಲಿದೆ. ಅತ್ತ ಕಾಶ್ಮೀರದ ಚಳಿಯಲ್ಲಿ ಮುದ್ದೆಯಾಗುತ್ತಾ ದೇಶವನ್ನು ಕಾಯುತ್ತಿರುವ ಸೈನಿಕನ ಮನೆ ಮಂದಿಗೂ ಸುಭದ್ರ ಸೂರು ದೊರಕಲಿ ಎಂಬುದು ಜನಾಗ್ರಹ.
ತುಂಡು ಭೂಮಿ ಇಲ್ಲ
ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ ಮಿಲಿಟರಿ ಕೋಟಾದಡಿ ಸರಕಾರ ಒಂದಷ್ಟು ಜಮೀನು ನೀಡುತ್ತದೆ. ಅದರಂತೆ ಸೇನೆಯಲ್ಲಿ ಸೇವೆ ಸಲ್ಲಿಸಿ ಯೋಗೀಶ ಅವರು ಮಿಲಿಟರಿ ಕೋಟಾದಲ್ಲಿ ಜಮೀನು ಮಂಜೂರಾತಿ ಬಗ್ಗೆ 2007 ಫೆ. 5ರಲ್ಲಿ ಮನವಿ ಸಲ್ಲಿಸಿದರು. ಮನವಿಯಲ್ಲಿ ವೇಣೂರು ಹೋಬಳಿಯ ಮೂಡುಕೋಡಿ ಗ್ರಾಮದ ಒರ್ದೇಲು ಎಂಬಲ್ಲಿನ ಸರ್ವೆ ನಂ. 108ರಲ್ಲಿ 4.24 ಎಕರೆ ಸರಕಾರಿ ಜಾಗ ಇದ್ದು ಕೇವಲ 1.3 ಎಕರೆ ಜಾಗವನ್ನು ಕೋರಿದ್ದರು. ಆದರೆ ಕಂದಾಯ ಇಲಾಖೆ ಒಂದೊಂದೇ ನೆಪ ಹೇಳಿತು. ಮಿಲಿಟರಿ ಅಧಿಕಾರಿಗಳು 2012 ಎ. 12ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಉದಯವಾಣಿ ಈ ಬಗ್ಗೆ ವರದಿ ಮಾಡಿದಾಗ 2014ರಲ್ಲಿ ಪುತ್ತೂರು ಸಹಾಯಕ ಕಮಿಷನರ್ ಆಗಿದ್ದ ಎಚ್.ಕೆ. ಕೃಷ್ಣಮೂರ್ತಿ ಅವರು ಭೂ ಮಂಜೂರಾತಿಗೆ ಪ್ರಯತ್ನಪಟ್ಟಿದ್ದರು. ಆದರೆ ಅವರು ವರ್ಗವಾಗುತ್ತಲೇ ಕಡತ ಮರೆಗೆ ಸರಿದಿದೆ. ಇನ್ನೂ ಭೂ ಮಂಜೂರಾತಿ ಆಗಿಲ್ಲ. ಹಾಗಾಗಿ ಸೈನಿಕನ ಕುಟುಂಬವೊಂದು ಮನೆ ಕಟ್ಟಿಕೊಳ್ಳುವ ಕನಸು ಇನ್ನೂ ಈಡೇರಿಲ್ಲ. ಎಲ್ಲ ಜನಪ್ರತಿನಿಧಿಗಳ ಬಳಿಯೂ ಮಾಡಿದ ಮನವಿಗೆ ಕವಡೆ ಕಿಮ್ಮತ್ತು ದೊರೆಯಲಿಲ್ಲ.
ಸಮಸ್ಯೆ ಕುಮ್ಕಿ ಭೂಮಿ
ಮಂಜೂರಾತಿಗೆ ದ.ಕ. ಜಿಲ್ಲೆಯಲ್ಲಿ ಕುಮ್ಕಿ ಮಾಲಕರ ಒಪ್ಪಿಗೆ ಹಾಗೂ ಜಿಲ್ಲಾಧಿಕಾರಿಯವರ ಅನುಮತಿ ಬೇಕು. ಈ ಸೈನಿಕನ ಮನೆ ಸಮೀಪ ಇರುವವರಿಗೆ ಕೃಷಿ ಭೂಮಿ ಇದ್ದು ಅವರ ಕುಮ್ಕಿಯ ಬಾಬತ್ತು ಎಂದು ಇವರಿಗೆ ಸರಕಾರಿ ಜಾಗವಾದರೂ ಮಂಜೂರಾತಿ ಲಭಿಸಲಿಲ್ಲ ಎಂಬುದೇ ಅವರ ಕೊರಗು.
– ಲಕ್ಷ್ಮೀ ಮಚ್ಚಿನ
►ಯೋಧ ನಮನ 1►ಕ್ಯಾಪ್ಟನ್ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: http://bit.ly/2noe3RR
►ಯೋಧ ನಮನ 2► ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!: http://bit.ly/2ByAZCW
►ಯೋಧ ನಮನ 3►30ನೇ ವಯಸ್ಸಿಗೇ ಉಳಿದವರಿಗೆ ಸ್ಫೂರ್ತಿಯಾದ!: http://bit.ly/2E0zx1y
►ಯೋಧ ನಮನ 4►ನೌಕಾಪಡೆ ಜಾಹೀರಾತು ಬದುಕು ತಿರುಗಿಸಿತು!: http://bit.ly/2DWurT
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.