ಜೀವ ರಕ್ಷಕ ಪ್ರವಾಸಿ ಪೊಲೀಸರಿಗೇ ರಕ್ಷಣೆಯಿಲ್ಲ!
Team Udayavani, Jul 28, 2017, 10:55 AM IST
ರೊಟೇಶನ್ ಪದ್ಧತಿಯಿಂದಾಗಿ 472 ಪ್ರವಾಸಿ ಪೊಲೀಸರು ಅತಂತ್ರ ಸ್ಥಿತಿಯಲ್ಲಿ
ಮಂಗಳೂರು: ಒಂದೆಡೆ, ಕರಾವಳಿ ಭಾಗದ ಬೀಚ್‌ಗಳಲ್ಲಿ ಪ್ರವಾಸಿಗರು ಸಮುದ್ರದ ಅಲೆಗಳೊಂದಿಗೆ ಕೊಚ್ಚಿ ಹೋಗುವ ಘಟನೆಗಳು ಮರುಕಳುಹಿಸುತ್ತಿದ್ದರೆ, ಮತ್ತೂಂದೆಡೆ ಪ್ರವಾಸಿಗರ ಜೀವ ರಕ್ಷಣೆಗೆ ಸಮುದ್ರ ತೀರದಲ್ಲಿ ಕಾವಲು ಕಾಯುತ್ತಿರುವ ಪ್ರವಾಸಿ ಪೊಲೀಸರ ನೌಕರಿಗೆ ಕತ್ತರಿ ಬೀಳುವ ಆತಂಕ ಎದುರಾಗಿದೆ. ರಾಜ್ಯ ಸರಕಾರದ ಪ್ರವಾಸಿ ಮಿತ್ರ ಯೋಜನೆಯಡಿ ನೇಮಕಗೊಂಡಿರುವ ಸುಮಾರು 472 ಮಂದಿ ಪ್ರವಾಸಿ ಪೊಲೀಸರು ಈಗ ರೊಟೇಶನ್ ವ್ಯವಸ್ಥೆ ಜಾರಿ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದಾರೆ. ಈ ರೀತಿಯ ರೊಟೇಶನ್ ವ್ಯವಸ್ಥೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಪ್ರವಾಸಿ ಮಿತ್ರ ಯೋಜನೆ ಮೂಲಕ ಗೃಹ ರಕ್ಷಕದ ದಳದ ಸದಸ್ಯರಿಗೆ ವಿಶೇಷ ತರಬೇತಿ ನೀಡಿ ಪ್ರವಾಸಿ ಪೊಲೀಸರನ್ನಾಗಿ ನೇಮಕ ಮಾಡಿತ್ತು. ಅದರಂತೆ ಕರಾವಳಿ ಭಾಗದ ಬೀಚ್‌ಗಳು ಸಹಿತ ರಾಜ್ಯದ ಪ್ರತಿ ಪ್ರವಾಸಿ ತಾಣಗಳಲ್ಲಿ ಸದ್ಯ 400ಕ್ಕೂ ಅಧಿಕ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಸರಕಾರ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಿಂದೆ ನೇಮಕಗೊಂಡ ಪ್ರವಾಸಿ ಪೊಲೀಸರನ್ನು ರೊಟೇಶನ್ ಮಾದರಿಯಲ್ಲಿ ಗೃಹರಕ್ಷಕ ದಳದ ಸೇವೆಗಳಿಗೆ ಬಳಸಿಕೊಳ್ಳುವುದರಿಂದ ಬೀಚ್‌ಗಳಲ್ಲಿ ಜೀವ ಹಾನಿಯ ಘಟನೆಗಳು ಮರುಕಳಿಸುತ್ತಿವೆ. ರೊಟೇಶನ್ ಪದ್ಧತಿಯಲ್ಲಿ ಬಂದ ಹೊಸ ಪ್ರವಾಸಿ ಪೊಲೀಸರು ಸಮರ್ಪಕವಾಗಿ ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಪ್ರವಾಸಿಗರ ರಕ್ಷಣೆಗೆ ಈಗ ಯಾರೂ ಇಲ್ಲವಾಗಿದೆ.
472 ಮಂದಿಯ ನೇಮಕ!
ರಾಜ್ಯದ ಅಂದಿನ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆಯವರ ಕಲ್ಪನೆಯಂತೆ 2015ರಲ್ಲಿ ರಾಜ್ಯಾದ್ಯಂತ 472 ಮಂದಿ ಗೃಹರಕ್ಷಕ ದಳದ ಸದಸ್ಯರನ್ನು 3 ಕೋ.ರೂ. ವೆಚ್ಚಗೈದು ವಿಶೇಷ ತರಬೇತಿಗೊಳಿಸಿ ನೇಮಿಸಲಾಗಿತ್ತು. ಅದರಂತೆ ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 10ರಿಂದ 30 ಮಂದಿ ಪ್ರವಾಸಿ ಪೊಲೀಸರು ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಗೃಹರಕ್ಷಕ ದಳವನ್ನು ಬಿಟ್ಟು ಪ್ರವಾಸೋದ್ಯಮ ಇಲಾಖೆಗೆ ಕರ್ತವ್ಯಕ್ಕೆ ಸೇರುವ ಸಂದರ್ಭದಲ್ಲಿ ನಿಮ್ಮನ್ನು ಮತ್ತೆ ಗೃಹರಕ್ಷಕ ದಳಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದ್ದರು.
ಇವರಿಗೆ ಸಚಿವರಿಂದಲೇ ಪ್ರವಾಸಿ ತಾಣದಲ್ಲಿ ಖಾಯಮಾತಿಯ ಭರವಸೆ ಸಿಕ್ಕಿದ ಕಾರಣ ಒಪ್ಪಿಕೊಂಡು ಬಂದಿದ್ದರು. ಅದರಂತೆ ಇವರಿಗೆ ಪ್ರವಾಸೋದ್ಯಮ ಇಲಾಖೆಯ ಲೋಗೊ ಸಹಿತ ಸಮವಸ್ತ್ರ ನೀಡಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಪ್ರಸ್ತುತ ರೊಟೇಶನ್ ಪದ್ಧತಿ ಯನ್ವಯ 3 ತಿಂಗಳು ಕೆಲಸ ಮಾಡಿದ ಬಳಿಕ ಅವರು ಮತ್ತೆ ಗೃಹರಕ್ಷಕ ದಳದವರು ಕರೆಸಿಕೊಳ್ಳುತ್ತಾರೆ. ಅವರ ಕೆಲಸ ಇಲ್ಲದೇ ಇದ್ದರೆ ಇವರು 3 ತಿಂಗಳು ಮನೆಯಲ್ಲೇ ಕುಳಿತುಕೊಳ್ಳಬೇಕಾಗಿದೆ.
3 ತಿಂಗಳ ಅವಧಿ!
ಪ್ರಸ್ತುತ ಹೊಸ ಪ್ರವಾಸಿ ಪೊಲೀಸರನ್ನು ನೇಮಿಸುವ ಸಂದರ್ಭದಲ್ಲಿ 3 ತಿಂಗಳ ಅವಧಿಗೆ ಮಾತ್ರ ನೇಮಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ 2015ರಲ್ಲಿ 472 ಮಂದಿಯ ಆದೇಶದಲ್ಲಿ ಅಂತಹ ಯಾವುದೇ ಅವಧಿಯನ್ನು ನಿಗದಿ ಪಡಿಸಲಾಗಿರಲಿಲ್ಲ. ಹೀಗಾಗಿ ಅವರು ಇದ್ದ ಕೆಲಸವನ್ನೂ ಬಿಟ್ಟು ಇದಕ್ಕೆ ಸೇರ್ಪಡೆಗೊಂಡಿದ್ದರು. ಈಗ ಪ್ರವಾಸಿ ಪೊಲೀಸರು ಅತಂತ್ರ ಸ್ಥಿತಿಯಲ್ಲಿದ್ದಾರೆ.
3 ತಿಂಗಳು ಪ್ರವಾಸಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಿದರೆ, 3 ತಿಂಗಳು ಗೃಹರಕ್ಷಕ ದಳದಲ್ಲಿ ಕೆಲಸ ಮಾಡಬೇಕಿದೆ. ಆದರೆ ಗೃಹರಕ್ಷಕದಲ್ಲಿ ಕೆಲಸ ಇಲ್ಲದೇ ಇದ್ದರೆ ಮನೆಯಲ್ಲಿರಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯು ಇವರನ್ನು ತಮ್ಮಲ್ಲಿಯೇ ಖಾಯಂಗೊಳಿಸಲು ಸಿದ್ಧವಿದ್ದರೂ ಗೃಹರಕ್ಷಕ ದಳದವರು ಅವರನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸಿ ಪೊಲೀಸರನ್ನು ಗೃಹರಕ್ಷಕ ದಳದವರು ಮತ್ತೆ ಸೇರಿಸಿಕೊಂಡರೆ ಉಳಿದ ಜಿಲ್ಲೆಗಳಲ್ಲಿ 3 ತಿಂಗಳು ಪ್ರವಾಸಿ ಪೊಲೀಸರಿಗೆ ಗೃಹರಕ್ಷಕ ದಳದ ಕೆಲಸವೂ ಇಲ್ಲದಾಗಿದೆ. ಗೃಹರಕ್ಷಕ ದಳಕ್ಕೆ ಹೋದಾಗ ನೀವು ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಪರೇಡ್‌ಗಳಲ್ಲಿ ಭಾಗವಹಿಸಿಲ್ಲ. ಹೀಗಾಗಿ ನಿಮ್ಮನ್ನು ಮತ್ತೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂಬ ಆರೋಪವಿದೆ.
ನಮ್ಮ ಬದುಕು ಅತಂತ್ರ
ಪ್ರವಾಸೋದ್ಯಮ ಇಲಾಖೆಯಲ್ಲೇ ಪ್ರವಾಸಿ ಪೊಲೀಸರಾಗಿ ಖಾಯಂಗೊಳ್ಳುವ ಹಿನ್ನೆಲೆಯಲ್ಲಿ ಇದ್ದ ಕೆಲಸವನ್ನೂ ಬಿಟ್ಟು ಬಂದಿದ್ದೇವೆ. ಆದರೆ ಇದಕ್ಕೆ ಗೃಹರಕ್ಷಕ ದಳದವರು ಒಪ್ಪುತ್ತಿಲ್ಲ. 3 ತಿಂಗಳು ಎಲ್ಲೂ ಕೆಲಸವಿರುವುದಿಲ್ಲ. ಹೀಗಾಗಿ ನಮ್ಮ ಬದುಕು ಅತಂತ್ರವಾಗಿದೆ. ನಾವು ಕರಾವಳಿ ಬೀಚ್‌ಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಲವರ ಜೀವ ರಕ್ಷಣೆಯನ್ನೂ ಮಾಡಿದ್ದೇವೆ.
– ನರಸಿಂಹಮೂರ್ತಿ ದಾವಣಗೆರೆ, ರಾಜ್ಯಾಧ್ಯಕ್ಷರು, ಪ್ರವಾಸಿಮಿತ್ರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.