ಮಂದಾರ ಸಂತ್ರಸ್ತರ ಮರೆತುಬಿಟ್ಟ ಆಡಳಿತ ವ್ಯವಸ್ಥೆ!
ತ್ಯಾಜ್ಯರಾಶಿ ನಿರ್ವಹಣೆಯೂ ಇಲ್ಲ; ಪರಿಹಾರವೂ ಸಿಕ್ಕಿಲ್ಲ
Team Udayavani, Dec 17, 2019, 5:25 AM IST
ಮಹಾನಗರ: ಪಚ್ಚನಾಡಿಯ ತ್ಯಾಜ್ಯರಾಶಿಯು ಜರಿದು ಮಂದಾರಬೈಲು ಪರಿಸರವನ್ನೇ ಆಹುತಿ ಪಡೆದು ತಿಂಗಳು ಐದು ಆಗುತ್ತಿದ್ದರೂ, ಇನ್ನೂ ನಿರ್ವಸಿತರಿಗೆ ಪರಿಹಾರ ಎಂಬುದು ಗಗನಕುಸುಮವಾಗಿದೆ.
ಪ್ರಾರಂಭದಲ್ಲಿ ಭಾರೀ ಆಸಕ್ತಿಯಿಂದ ಸ್ಪಂದಿಸಿದ ಜನಪ್ರತಿನಿಧಿಗಳು ಇದೀಗ ಮಂದಾರದ ಬವಣೆಯನ್ನು ಮರೆತು ಬಿಟ್ಟ ಪರಿಣಾಮ ನಿರ್ವಸಿತರು ಪರಿಹಾರಕ್ಕಾಗಿ ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ತ್ಯಾಜ್ಯ ರಾಶಿಯ ನಿರ್ವಹಣೆ ಆಗಿಲ್ಲ; ಇನ್ನೊಂದೆಡೆ ನಿರ್ವಸಿತರಾಗಿರುವವರಿಗೆ ಪರಿಹಾರವೇ ದಕ್ಕಿಲ್ಲ. ಹೀಗಾಗಿ ಜನಪ್ರತಿನಿಧಿಗಳ, ಅಧಿಕಾರಿಗಳ ಭರವಸೆಯ ಮಾತು ಕಡತದಲ್ಲೇ ಬಾಕಿಯಾಗಿದೆ.
ಪರಿಹಾರ ಇನ್ನೂ ಸಿಕ್ಕಿಲ್ಲ
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪ ಮೊಲಿ, ಹಾಲಿ ಆರೋಗ್ಯ ಸಚಿವ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ಅಗ್ರಗಣ್ಯ ರಾಜಕೀಯ ನೇತಾರರು ಪಚ್ಚನಾಡಿ-ಮಂದಾರದ ತ್ಯಾಜ್ಯ ವ್ಯಾಪಿಸಿದ ಪ್ರದೇಶಕ್ಕೆ ಭೇಟಿ ನೀಡಿದ್ದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.
ಶಾಸಕರಾದ ಯು.ಟಿ. ಖಾದರ್, ಡಾ| ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾೖಕ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಮೊದಿನ್ ಬಾವಾ ಸಹಿತ ಜನಪ್ರತಿನಿಧಿಗಳು ಇಲ್ಲಿಗೆ ಆಗಾಗ್ಗೆ ಭೇಟಿ ನೀಡಿದವರು ಕೂಡ ಈಗ ಮಾತ್ರ ಮೌನವಾಗಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿಯ ಹೊಸ ಆಡಳಿತ ಬಂದಿದ್ದರೂ ಯಾರೂ ಈ ಬಗ್ಗೆ ಗಮನಹರಿಸಿದಂತಿಲ್ಲ.
ವರದಿಯ ಕಡತಗಳು ಮಾತ್ರ ಇಲ್ಲಿವೆ!
ಪರಿಹಾರ ಪ್ಯಾಕೇಜ್‌ಗಾಗಿ ರಾಜ್ಯ ಸರಕಾರದ ತಂಡ ಆಗಮಿಸಿ ವಿವಿಧ ಆಯಾಮಗಳಲ್ಲಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತ/ಸರಕಾರಕ್ಕೆ ವರದಿ ನೀಡಿದೆಯಾದರೂ ಸರಕಾರದಿಂದ ಪರಿಹಾರ ಮಾತ್ರ ದೊರಕಿಲ್ಲ. ಬೇರೆ ಬೇರೆ ರಾಜ್ಯಗಳಿಂದ ತಜ್ಞರ ತಂಡಗಳು ಮಂದಾರಕ್ಕೆ ಆಗಮಿಸಿ ವಿಧ-ವಿಧದ ವರದಿ ನೀಡಿದ್ದು ಬಿಟ್ಟರೆ ಇಲ್ಲಿ ಅನುಷ್ಠಾನವಾಗಿಲ್ಲ. ಪಾಲಿಕೆ ಎಡವಟ್ಟಿನಿಂದ ಘಟನೆ ನಡೆದು ತಿಂಗಳುಗಳೇ ಕ್ರಮಿಸಿದರೂ ಇಲ್ಲಿನವರು ಇನ್ನೂ ಕೂಡ ಪರಿಹಾರಕ್ಕೆ ಆಡಳಿತ ವ್ಯವಸ್ಥೆಯ ಎದುರು ಕೈಚಾಚುವ ಪ್ರಮೇಯ ಎದುರಾಗಿದೆ.
ಈ ಹಿಂದಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಈಗಿನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಮನಪಾ ಹಿಂದಿನ ಆಯುಕ್ತ ಮೊಹಮ್ಮದ್ ನಝೀರ್, ಈಗಿನ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಪ್ರಾದೇಶಿಕ ಅಧಿಕಾರಿಗಳು ಸಹಿತ ವಿವಿಧ ಇಲಾಖೆ ಅಧಿಕಾರಿಗಳ ತಂಡ ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತಿದ್ದರೂ, ಪರಿಹಾರ ಮಾತ್ರ ಇಲ್ಲಿನವರಿಗೆ ದೊರಕಿಲ್ಲ ಎಂಬುದು ವಾಸ್ತವ ಸ್ಥಿತಿ.
ಆಗಸ್ಟ್‌ನಲ್ಲಿ ಆಗಿದ್ದೇನು?
ಆ. 1ನೇ ವಾರದಲ್ಲಿ ಭಾರೀ ಮಳೆ ಸಂದರ್ಭ ಪಚ್ಚನಾಡಿಯ ತ್ಯಾಜ್ಯ ನಿಧಾನ ವಾಗಿ ಕುಸಿದು ಸುಮಾರು ಒಂದೂವರೆ ಕಿ.ಮೀ. ದೂರದ ಮಂದಾರ ಪ್ರದೇಶಕ್ಕೆ ಹರಿಯಿತು. ನೋಡ ನೋಡುತ್ತಿದ್ದಂತೆ ಹಚ್ಚ ಹಸಿರಿನ ಪ್ರದೇಶವಾಗಿದ್ದ ಮಂದಾರ ಇಡೀ ಕಸದ ರಾಶಿಯಲ್ಲಿ ಮುಳುಗಿಹೋಯಿತು. ಮಾನವ ನಿರ್ಮಿತ ಈ ದುರಂತದಲ್ಲಿ ಬರೋಬ್ಬರಿ 27 ಕುಟುಂಬಗಳ ನೂರಕ್ಕೂ ಅಧಿಕ ಜನರು ಸಂತ್ರಸ್ತರಾದರು.
ಔಷಧ, ಅಗತ್ಯ ವಸ್ತು ಖರೀದಿಗೆ ಹಣವಿಲ್ಲ!
ಸಂತ್ರಸ್ತರಿಗೆ ಸದ್ಯ ಕರ್ನಾಟಕ ಹೌಸಿಂಗ್ ಬೋರ್ಡ್‌ನ ಸಮುಚ್ಚಯದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ ಆಗಸ್ಟ್‌ನಲ್ಲಿ ಪ್ರತೀ ಕುಟುಂಬಕ್ಕೆ 10,000 ರೂ. ಮಾತ್ರ ನೀಡಲಾಗಿದೆ. ಬಳಿಕ ಪರಿಹಾರವೇ ಇಲ್ಲ. ಆದರೆ ನಿತ್ಯ ಉಪಯೋಗಿ ವಸ್ತುಗಳಿಗೆ, ಔಷಧ, ದಿನನಿತ್ಯದ ಖರ್ಚಿಗೆ ನಿರ್ವಸಿತರು ಸಾವಿರಾರು ರೂ. ವೆಚ್ಚ ಮಾಡಬೇಕಾಗುತ್ತದೆ. ಕೆಲವು ನಿರ್ವಸಿತರ ಮನೆಯಲ್ಲಿ ನಿತ್ಯ ಉದ್ಯೋಗ ಮಾಡುವವರೂ ಇಲ್ಲವಾದ್ದರಿಂದ ದಿನನಿತ್ಯದ ಖರ್ಚಿಗೆ ಪರದಾಡುತ್ತಿದ್ದಾರೆ. ಕೆಲವೊಂದು ಸಂಘ – ಸಂಸ್ಥೆಗಳು ಅಕ್ಕಿ, ಇತರ ದಿನಸಿ ಸಾಮಗ್ರಿ, ಬಟ್ಟೆಬರೆಯನ್ನು ನೆರವಾಗಿ ಕೊಟ್ಟದ್ದು ಬಿಟ್ಟರೆ ಸರಕಾರದ ವತಿಯಿಂದ ಯಾವುದೇ ಪರಿಹಾರದ ಕಿಟ್ ವಿತರಿಸಿಲ್ಲ. ಬೆಳೆ ಪರಿಹಾರ, ಅರಣ್ಯ ಉತ್ಪತ್ತಿ ನಾಶದ ಪರಿಹಾರವೂ ಇಲ್ಲಿ ದೊರಕಿಲ್ಲ. ಸಂತ್ರಸ್ತರಿಗೆ ಯಾವುದೇ ಆದಾಯ, ದುಡಿಮೆ ಇಲ್ಲದ ಕಾರಣ ಅಗತ್ಯ ವಸ್ತುಗಳ ಖರೀದಿಗೆ, ಔಷಧಕ್ಕೆ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಇದು ಗೊತ್ತಿದ್ದೂ ಜನಪ್ರತಿನಿಧಿಗಳು ಮಾತ್ರ ಮೌನವಾಗಿದ್ದಾರೆ ಎನ್ನುವುದು ಸಂತ್ರಸ್ತರ ಅಳಲು.
ಸೂಕ್ತ ಪರಿಹಾರ
ಪಚ್ಚನಾಡಿ ದುರಂತದಿಂದ ನಿರ್ವಸಿತರಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಸಿದ್ಧಪಡಿಸಲಾದ ವರದಿಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿ ಒಪ್ಪಿಗೆ ದೊರೆತ ತತ್‌ಕ್ಷಣದಿಂದಲೇ ಸೂಕ್ತ ಪರಿಹಾರ ನೀಡುವ ಕಾರ್ಯ ನಡೆಯಲಿದೆ.
– ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.