ವೆನ್ಲಾಕ್‌ನಲ್ಲಿ ಡಯಾಲಿಸಿಸ್‌ಗೂ ನೀರಿಲ್ಲ!
Team Udayavani, Nov 30, 2017, 12:18 PM IST
ಹಂಪನಕಟ್ಟೆ: ಡಯಾಲಿಸಿಸ್ ಮಾಡಿಸಿಕೊಳ್ಳಲು ನೀರಿಲ್ಲದೆ, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ರೋಗಿಗಳು ಪರದಾಡುತ್ತಿದ್ದು, ಸತತ ಕೋರಿಕೆ ಬಳಿಕ ಬುಧವಾರ ಮಧ್ಯಾಹ್ನದ ವೇಳೆಗೆ ನೀರು ಬಿಡಲಾಗಿದೆ.
ಎರಡು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡು ಡಯಾಲಿಸಿಸ್ ಚಿಕಿತ್ಸೆಗೆ ಬಂದವರಿಗೆ ಮಾತ್ರವಲ್ಲದೆ, ಇತರ ರೋಗಿಗಳಿಗೂ ಸಮಸ್ಯೆಯಾಗಿತ್ತು. ಬೆಳಗ್ಗಿನ ನಿತ್ಯ ಕರ್ಮಗಳಿಗೂ ಅಡಚಣೆಯಾಗಿತ್ತು.
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಬಂದ ರೋಗಿಗಳಿಗೆ ಮಂಗಳವಾರ ಸಂಜೆ 5.30ರಿಂದ ನೀರಿನ ಕೊರತೆ ಉಂಟಾಗಿದೆ. ಡಯಾಲಿಸಿಸ್ ಯಂತ್ರ ಚಾಲನೆಗೊಳ್ಳಲು ನೀರಿಲ್ಲದೆ ಬುಧವಾರ ಸಂಜೆ ತನಕ ಒಟ್ಟು 21 ರೋಗಿಗಳು ಪರದಾಡಿದ್ದಾರೆ. ನೀರು ಪೂರೈಕೆಗಾಗಿ ಸಂಬಂಧಪಟ್ಟವರಲ್ಲಿ ವಿಚಾರಿಸಿದರೆ, ‘ಈಗ ಬರುತ್ತದೆ, ಮತ್ತೆ ಬರುತ್ತದೆ’ ಎಂದು ಸಾಗಹಾಕಿದರೇ ವಿನಾ ನೀರು ಬರಲಿಲ್ಲ. ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಅಂತೂ ನೀರು ಬಿಟ್ಟಿದ್ದಾರೆ ಎಂದು ರೋಗಿಗಳು ವಿವರಿಸಿದರು.
ತತ್‌ಕ್ಷಣ ನೀರು ಪೂರೈಕೆ: ಡಾ| ರಾಜೇಶ್ವರಿ ದೇವಿ
ರೋಗಿಗಳು ನೀರಿನ ಸಮಸ್ಯೆ ಎದುರಿಸುತ್ತಿರುವ ಕುರಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಅವರಲ್ಲಿ ವಿಚಾರಿಸಿದಾಗ, ‘ಪ್ರತಿ ಎರಡು ತಿಂಗಳಿಗೊಮ್ಮೆ ಆಸ್ಪತ್ರೆಯ ನೀರಿನ ಟ್ಯಾಂಕ್ ಅನ್ನು ತೊಳೆಯ ಬೇಕೆಂಬ ನಿಯಮವಿದೆ. ಸರ್ವೇಕ್ಷಣ ತಂಡದವರು ನೀರು ಪರೀಕ್ಷೆ ಮಾಡಿದ್ದು, ಕುಡಿಯಲು ಅಷ್ಟೊಂದು ಪೂರಕವಾಗಿಲ್ಲ ಎಂದು ತಿಳಿಸಿದ್ದರಿಂದ ಟ್ಯಾಂಕ್ ತೊಳೆಯಲಾಗುತ್ತಿದೆ. ಇದರಿಂದ ಮಂಗಳವಾರ ಮತ್ತು ಬುಧವಾರ ಬೆಳಗ್ಗಿನ ಹೊತ್ತು ನೀರಿನ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿದೆ’ ಎಂದು ಹೇಳಿದರು.
ಮೂರು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಆಸ್ಪತ್ರೆ ವಠಾರದಲ್ಲಿದೆ. 12 ಸಿಂಟೆಕ್ಸ್, 3 ಬಾವಿ, 1 ಬೋರ್‌ವೆಲ್ ವ್ಯವಸ್ಥೆ ಇದೆ. ಆದರೆ ರೋಗಿಗಳ ಸಂಬಂಧಿಕರು ಬಟ್ಟೆ ಒಗೆಯುವುದಕ್ಕೆ ಹಾಗೂ ನಿತ್ಯಕರ್ಮಗಳಿಗೆ ಅತಿಯಾಗಿ ನೀರು ಬಳಸಿ ಪೋಲು ಮಾಡುತ್ತಿದ್ದಾರೆ. ಆದರೂ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಸಮಸ್ಯೆಯಾಗಿರುವ ಬಗ್ಗೆ ತತ್‌ಕ್ಷಣ ತಿಳಿದುಕೊಂಡು ಪೂರೈಕೆ ಮಾಡಲಾಗುವುದು ಎಂದು ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.
ರೋಗಿಗಳ ಪಾಡೇನು?
ಕಿಡ್ನಿ ವೈಫಲ್ಯಗೊಂಡ ರೋಗಿಗಳು ವಾರಕ್ಕೆ ಕನಿಷ್ಠ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅಗತ್ಯ. ಸರಕಾರಿ ಆಸ್ಪತ್ರೆಯಾದ್ದರಿಂದ ಇಲ್ಲಿ ಬಡವರು ಉಚಿತವಾಗಿಯೇ ಡಯಾಲಿಸಿಸ್ ಸೌಲಭ್ಯವಿದೆ. ದೂರದ ಊರುಗಳಿಂದಲೂ ರೋಗಿಗಳು ಇಲ್ಲಿಗೆ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಡಯಾಲಿಸಿಸ್ ಯಂತ್ರ ಚಾಲನೆಗೊಳ್ಳಲು ನೀರು ಅಗತ್ಯವಿದ್ದು, ಪೂರೈಕೆ ಆಗದಿದ್ದರೆ ರೋಗಿಗಳ ಪಾಡೇನು ಎಂಬ ಆತಂಕ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.