‘ತೆಂಗಿನಕಾಯಿ ಖರೀದಿಗೆ ಕ್ಯಾಂಪ್ಕೋದಿಂದ ಚಿಂತನೆ’
Team Udayavani, May 17, 2018, 1:12 PM IST
ಬೆಳ್ತಂಗಡಿ: ಕ್ಯಾಂಪ್ಕೋದಿಂದ ಅಡಿಕೆ, ಕೋಕೋ, ಕಾಳುಮೆಣಸು ಇತ್ಯಾದಿಗಳನ್ನು ಖರೀದಿಸಲಾಗುತ್ತಿದೆ. ಇದೀಗ ಕೃಷಿಕರಿಗೆ ಉಪಯೋಗವಾಗಲು ತೆಂಗಿನಕಾಯಿ ಖರೀದಿಸಿ ಸಂಸ್ಕರಣೆ ಮಾಡಲು ಕ್ಯಾಂಪ್ಕೋ ಚಿಂತನೆ ನಡೆಸಿದೆ. ಇದರಿಂದ ಕೃಷಿಕರಿಗೆ ಸಹಾಯಕವಾಗಲಿದೆ. ಅಡಿಕೆ ಜತೆಗೆ ಜೇನು ವ್ಯವಸಾಯಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು ಕ್ಯಾಂಪ್ಕೋ ನಿ., ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಡಿಕೆ ಕೃಷಿಯಲ್ಲಿ ಹೆಚ್ಚುವರಿ ಉತ್ಪಾದನೆ ಹಾಗೂ ಜೇನು ಸಾಕಣೆ ಪರಿಚಯ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಲವೆಡೆ ಜೇನು ತೆಗೆಯಲು ಅವೈಜ್ಞಾನಿಕ ರೀತಿ ಅನುಸರಿಸುತ್ತಿರುವುದರಿಂದ ಜೇನು ಕುಟುಂಬಗಳ ಸಂತತಿ ಅಳಿಯುತ್ತಿದೆ. ಜೇನು ತೆಗೆಯುವ ವೇಳೆ ಬೆಂಕಿ ಹಾಕುತ್ತಿರುವುದರಿಂದ ಹುಳುಗಳಿಗೆ ಅಪಾಯ ಎದುರಾಗಿದೆ. ಅಡಿಕೆ ಬೆಳೆಗಾರರು ಮನಸ್ಸು ಮಾಡಿದರೆ ಜೇನು ಸಂತತಿ ಉಳಿವು ಸಾಧ್ಯ. ಉತ್ತಮ ಲಾಭವನ್ನೂ ಪಡೆಯಬಹುದು. ಇದಕ್ಕಾಗಿ ತಜ್ಞರಿಂದ ತಾಂತ್ರಿಕ ಮಾಹಿತಿ ಪಡೆಯಬೇಕು. ಜನತೆ ಜೇನು ಬಳಕೆ ಮರೆತಿಲ್ಲ. ಪಟ್ಟಣದಿಂದ ಜೇನು ಖರೀದಿಸಿ ಬಳಸುತ್ತಿದ್ದಾರೆ ಎಂದರು.
ತಾಜಾ ಜೇನು ಪರೀಕ್ಷೆ ವಿಧಾನ
ಜೇನನ್ನು ಗಾಜಿನ ಪಾತ್ರೆಗೆ ಹಾಕಿದರೆ ನೀರು ಮಿಶ್ರಣವಾಗಿದ್ದರೆ ನೀರು ಮೇಲಿನ ಭಾಗದಲ್ಲಿ, ಜೇನು ಕೆಳಗಿರುತ್ತದೆ. ಜೇನು ನೀರಿನ ಜತೆ ಬೆರೆಯುವುದಿಲ್ಲ. ಪೇಪರಿನ ಮೇಲೆ ತಾಜಾ ಜೇನು ಹಾಕಿದರೆ ಪೇಪರ್ ಒದ್ದೆಯಾಗುವುದಿಲ್ಲ. ಬೆಂಕಿ ಕಡ್ಡಿಯನ್ನು ಜೇನಿಗೆ ಸವರಿ ಹೊತ್ತಿಸಲು ಯತ್ನಿಸಿದರೆ ತಾಜಾ ಜೇನಾಗಿದ್ದರೆ ಉರಿಯುತ್ತದೆ, ನೀರು ಮಿಶ್ರಿತವಾಗಿದ್ದರೆ ಉರಿಯುವುದಿಲ್ಲ. ತಾಜಾ ಜೇನು ತಿಂದಾಗ ಗಂಟಲಿನಲ್ಲಿ ಕೆರೆತ ಬಂದಂತೆ ಅನಿಸುತ್ತದೆ ಎಂದು ಜಿ.ಪಿ. ಶ್ಯಾಮ್ ಭಟ್ ಹೇಳಿದರು.
ಅನ್ನವನ್ನು ಗೌರವಿಸಿ
ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ದುಡ್ಡಿದ್ದರೂ ಅನ್ನದ ಬೆಲೆ ಪ್ರತಿಯೊಬ್ಬರೂ ತಿಳಿಯಬೇಕು. ಬೀಜದಿಂದ ಆರಂಭವಾಗಿ, ನೇಜಿಯಾಗಿ, ಭತ್ತವಾಗಿ, ಅಕ್ಕಿಯಾಗಿ, ಕೊನೆಗೆ ತಟ್ಟೆಯವರೆಗೆ ಬರಲು ಇರುವ ಶ್ರಮ ಅಪಾರ. ಆದ್ದರಿಂದ ಆಹಾರವನ್ನು ಪೋಲು ಮಾಡುವ ಮುನ್ನ ಚಿಂತನೆ ಮಾಡಬೇಕಾಗಿದೆ.
– ಡಾ| ಬಿ. ಯಶೋವರ್ಮ
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.