ಮಂಗಳೂರಿನ ಈ ಚಿಟ್ಟೆ ಪ್ರೇಮಿಗಳಿಗೆ ಗಿರಿ ಶಿಖರಗಳಲ್ಲೇ ಕೆಲಸ !
Team Udayavani, Aug 7, 2017, 6:25 AM IST
ಮಹಾನಗರ: ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡುವುದೇ ಮನಸ್ಸಿಗೆ ಆನಂದ. ನಾವು ಒಂದೆರಡು ವೆರೈಟಿಯ ಚಿಟ್ಟೆಗಳನ್ನು ಕಂಡಾಗಲೇ ಸಂಭ್ರಮಿಸುತ್ತೇವೆ. ಅದರ ಫೋಟೊ ತೆಗೆದು ನಮ್ಮ ಗೆಳೆಯರಿಗೆಲ್ಲಾ ಕಳುಹಿ ಸುತ್ತೇವೆ. ಆದರೆ ಮಂಗಳೂರಿನಲ್ಲೊಬ್ಬ ಚಿಟ್ಟೆಪ್ರೇಮಿ ಬರೋಬ್ಬರಿ 200ಕ್ಕೂ ಅಧಿಕ ಚಿಟ್ಟೆಗಳ ವಿಧಗಳನ್ನು ನೋಡಿ ರುವುದಲ್ಲದೆ ಅದರ ಕುರಿತು ಅಧ್ಯಯನ ಮಾಡಿದ್ದಾರೆ.
ಕುಲಶೇಖರ ನಿವಾಸಿ ಪ್ರದೀಪ್ ನಾಯಕ್ ಅವರೇ ಈ ಚಿಟ್ಟೆಪ್ರೇಮಿ. ಅವರ ಈ ಹವ್ಯಾಸವನ್ನು ಕಂಡು ಬಳ್ಳಾಲ್‌ಬಾಗ್‌ನ ಡಿಸೈನರ್ ಸಂಜಯ್ ಎಚ್. ಆಚಾರ್ಯ ಅವರೂ ಸೇರಿಕೊಂಡರು. ಪ್ರಸ್ತುತ ಇಬ್ಬರಿಗೂ ಚಿಟ್ಟೆಗಳನ್ನು ಹುಡುಕಿಕೊಂಡು ಬೆಟ್ಟಗುಡ್ಡಗಳನ್ನು ಸುತ್ತುವುದೇ ಹವ್ಯಾಸ.ಪದವಿ ಶಿಕ್ಷಣ ಪಡೆದ ಪ್ರದೀಪ್ ಅವರಿಗೆ ಕಂಪ್ಯೂಟರ್ ಸೇಲ್ಸ್ ಆ್ಯಂಡ್ ಸರ್ವೀಸ್‌ನ ಉದ್ಯೋಗ. ಎರಡೂವರೆ ವರ್ಷಗಳಿಂದ ಚಿಟ್ಟೆ ಅಧ್ಯಯನದಲ್ಲಿ ತೊಡಗಿದರು. ಹಾಗಾಗಿ ಯಾವುದೇ ಚಿಟ್ಟೆ ಕಂಡಾಕ್ಷಣ ಅವುಗಳ ವೈಜ್ಞಾನಿಕ ಹೆಸರು ಸಹಿತ ಎಲ್ಲ ವಿವರ ನೀಡುತ್ತಾರೆ.
ದೂರ ದೂರಿಗೆ ಪಯಣ
ಇವರು ಕೇವಲ ತಮ್ಮ ಊರಿನ ಸುತ್ತಮುತ್ತ ಮಾತ್ರ ಚಿಟ್ಟೆಗಳನ್ನು ಹುಡುಕುವುದಿಲ್ಲ. ಚಿಟ್ಟೆಗಳಿಗಾಗಿ ದೂರ ದೂರಿಗೂ ಹೋಗುತ್ತಾರೆ. ತಮ್ಮ ಬಿಡುವಿನ ವೇಳೆಯನ್ನು ವಿನಿಯೋಗಿಸುವುದೇ ಈ ರೀತಿಯಲ್ಲಿ. ಹೆಚ್ಚಾಗಿ ಗಿರಿ ಪ್ರದೇಶಗಳಲ್ಲಿ ಚಿಟ್ಟೆಗಳು ಕಂಡು ಬರುವುದರಿಂದ ಅಂತಹ ಪ್ರದೇಶಕ್ಕೇ ಹೆಚ್ಚಾಗಿ ಇವರ ಪಯಣ.
ಸಾಮಾನ್ಯವಾಗಿ ವಾರಕ್ಕೊಂದು ಬಾರಿ ಯಾವುದಾದರೂ ಬೆಟ್ಟ, ಗುಡ್ಡಕ್ಕೆ ಭೇಟಿ ನೀಡುವುದು ಇದ್ದೇ ಇದೆ. ಕಳೆದ ಬಾರಿ ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದ್ದರು. ಆ.6ರಂದು ವಯನಾಡಿನತ್ತ ಹೊರಟಿ ದ್ದರು. ಚಿಟ್ಟೆಗಳ ಜತೆಗೆ ಹಕ್ಕಿಗಳ ಫೋಟೊ, ನೇಚರ್ ಫೋಟೊಗ್ರಫಿಯೂ ಇವರ ಹವ್ಯಾಸ.
ಈಗಾಗಲೇ ಮಡಿಕೇರಿ, ಚಿಕ್ಕಮಗಳೂರು, ಬಿಸಿಲೆ, ಮಲ್ಲಳ್ಳಿ, ಸೋಮವಾರಪೇಟೆ, ವಿರಾಜಪೇಟೆ, ಗೋಣಿ ಕೊಪ್ಪ, ಆಗುಂಬೆ, ಹೆಬ್ರಿ, ಶೃಂಗೇರಿ, ಕುದುರೆಮುಖ, ಹೊರನಾಡು, ಚಾರ್ಮಾಡಿ-ಹೀಗೆ ಕರ್ನಾಟಕ ಬಹುತೇಕ ಗಿರಿ ಶಿಖರಗಳಲ್ಲಿ ಚಿಟ್ಟೆಗಳ ಹುಡುಕಾಟ ನಡೆಸಿದ್ದಾರೆ.
ತರಹೇವಾರಿ ಚಿಟ್ಟೆಗಳು
ಇವರು ಗುರುತಿಸಿರುವ ಪ್ರಮುಖ ಚಿಟ್ಟೆಗಳೆಂದರೆ ಇಂಡಿ ಯನ್ ಜೆಸೆಬೆಲ್, ಕ್ರಿಮ್ಸನ್ ರೋಸ್, ಒರಿಯೆಂಟಲ್ ಕಾಮನ್ ಸೆರುಲೀನ್, ಸಹ್ಯಾದ್ರಿ ರಾಸ್ಟಿಕ್, ಗ್ರೇಟ್ ಎಗ್‌ಪ್ಲೆç, ಮಲಬಾರ್ ಆತುಮನ್ ಲೀಫ್, ದಕಾನ್ ಟೈಲ್ಡ್ ಜೇ, ಸಹ್ಯಾದ್ರಿ ಚಕಲೇಟ್ ಅಲ್ಬಟ್ರಸ್, ಗೈಂಟ್ ರೆಡಿಯೆ, ಬ್ಯಾಂಡೆಡ್ ಜಡಿ, ಕಾಮನ್ ಲಿಯೊಪರ್ಡ್, ಡಾರ್ಕ್ ಬುÉ ಟೈಗರ್, ಟವ್ನಿ ಕಾಸ್ಟರ್, ಕಾಮನ್ ಮೈಮ್, ಲೈಮ್ ಸ್ವಾಲೊಟೈಲ್, ಬ್ಯಾಂಡೆಡ್ ಬುÉ ಬಾಟಲ್, ಹೆಡ್ಜ್ ಬುÉ.
400 ವೆರೈಟಿ ಚಿಟ್ಟೆಗಳು!
ದಕ್ಷಿಣ ಭಾರತದಲ್ಲಿ ಸುಮಾರು 400 ವೆರೈಟಿಯ ಚಿಟ್ಟೆಗಳಿರಬಹುದು ಎನ್ನಲಾಗುತ್ತದೆ. ಸಾಮಾನ್ಯ ವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 150 ಬಗೆಯ ಚಿಟ್ಟೆಗಳಿವೆಯಂತೆ. ಈ ಜಿಲ್ಲೆಗಳಲ್ಲಿ ಕಂಡುಬರುವ ಚಿಟ್ಟೆಗಳು ಸಾಮಾನ್ಯ ವಾಗಿದ್ದು, ಕೆಲವೊಂದು ಚಿಟ್ಟೆಗಳು ದ.ಕ.ದಲ್ಲಿ ಅಪರೂಪವಾಗಿದ್ದರೆ, ಚಿಕ್ಕಮಗಳೂರಿನಲ್ಲಿ ಸಾಮಾನ್ಯವಾಗಿರುತ್ತದೆ ಎನ್ನುತ್ತಾರೆ ಪ್ರದೀಪ್.
ಫೋಟೊ ತೆಗೆದು ಅಧ್ಯಯನ
ಎರಡೂವರೆ ವರ್ಷಕ್ಕೆ ಮೊದಲು ನನ್ನ ಬೆಂಗಳೂರಿನ ಸ್ನೇಹಿತನೊಬ್ಬ ಚಿಟ್ಟೆ ಹುಚ್ಚನ್ನು ಹಿಡಿಸಿದ. ಈಗ ಅದೇ ಹವ್ಯಾಸವಾಗಿದೆ. ಪ್ರತಿ ಬಾರಿಯೂ ಬೇರೆ ಬೇರೆ ಊರುಗಳಿಗೆ ತೆರಳಿ ಚಿಟ್ಟೆಗಳ ಫೋಟೊ ತೆಗೆದು ಅದರ ಕುರಿತು ಅಧ್ಯಯನ ನಡೆಸುತ್ತೇವೆ. ಈಗಾಗಲೇ 200ಕ್ಕೂ ಅಧಿಕ ವಿವಿಧ ಚಿಟ್ಟೆಗಳನ್ನು ಗುರುತಿಸಿದ್ದೇನೆ.
-ಪ್ರದೀಪ್ ನಾಯಕ್, ಚಿಟ್ಟೆಪ್ರೇಮಿ
ಫೋಟೊಗ್ರಫಿ ಕಾರ್ಯ
ನಾನು ಒಂದು ವರ್ಷದಿಂದ ಇದರಲ್ಲಿ ತೊಡಗಿದ್ದೇನೆ. ಪ್ರದೀಪ್ ಅವರ ಚಿಟ್ಟೆ ಪ್ರೇಮಕ್ಕೆ ಸೋತು ಜತೆಗೂಡಿದ್ದೇನೆ. ಚಿಟ್ಟೆಗಳ ಫೋಟೊ ತೆಗೆಯುವ ಕಾರ್ಯವನ್ನು ನಾನು ಮಾಡುತ್ತೇನೆ. ಇದರ ಜತೆಗೆ ಪಕ್ಷಿಗಳ ಫೋಟೊ, ನೇಚರ್ ಫೋಟೊವನ್ನೂ ತೆಗೆಯುತ್ತೇವೆ.
-ಸಂಜಯ್ ಎಚ್.ಆಚಾರ್ಯ, ಡಿಸೈನರ್
– ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.