ತೊಕ್ಕೊಟ್ಟು ಜಂಕ್ಷನ್: ಈ ಬಾರಿಯೂ ಕೃತಕ ನೆರೆ ಭೀತಿ
Team Udayavani, Jun 4, 2019, 6:00 AM IST
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪೂರ್ಣಗೊಳ್ಳದ ಹೆದ್ದಾರಿ ಕಾಮಗಾರಿ ಹಾಗೂ ಚರಂಡಿ ಅವ್ಯವಸ್ಥೆ.
ಉಳ್ಳಾಲ: ಪ್ರತಿ ಬಾರಿಯೂ ಮಳೆಗಾಲದಲ್ಲಿ ಅತೀ ಹೆಚ್ಚು ಸಮಸ್ಯೆ ಎದುರಿಸುವ ಪ್ರದೇಶ ತೊಕ್ಕೊಟ್ಟು ಜಂಕ್ಷನ್. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಈ ಬಾರಿಯೂ ಅವ್ಯವಸ್ಥೆ ಮುಂದುವರಿಯಲಿದೆ.
ತೊಕ್ಕೊಟು ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ಕೃತಕ ನೆರೆ ಆರಭವಾಗಿದೆ. ಕಳೆದ ಬಾರಿ ವಾಹನ ಚಾಲಕರು, ಪಾದಚಾರಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಈ ಬಾರಿ ಭಾಗಶಃ ಚರಡಿ ಕಾಮಗಾರಿ ಆಗಿದ್ದರೂ ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ನಡೆದ ಅವಾಂತರದಿಂದಾಗಿ ಮತ್ತೆ ಈ ಬಾರಿಯೂ ರಸ್ತೆಯಲ್ಲೇ ಮಳೆ ನೀರು ಹರಿದು ಕೃತಕ ನೆರೆಯಾಗುವ ಭೀತಿ ಎದುರಾಗಿದೆ. ತೊಕ್ಕೊಟ್ಟು ಜಂಕ್ಷನ್ ಅತ್ಯಂತ ಜವುಗು ಪ್ರದೇಶದಲ್ಲಿರುವುದ ರಿಂದ ತೊಕ್ಕೊಟ್ಟು, ಚೆಂಬುಗುಡ್ಡೆ, ಭಟ್ನಗರ ಸಹಿತ ಎತ್ತರದ ಪ್ರದೇಶಗಳ ನೀರು ಜಂಕ್ಷನ್‌ಗೆ ಹರಿಯುತ್ತದೆ.
ಕಳೆದ ಬಾರಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹಲವಾರು ಅಂಗಡಿಗಳು ನೆರೆಯಲ್ಲಿ ಮುಳುಗಿ ಸ್ಥಳೀಯ ವರ್ತಕರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು. ಘಟನೆಯ ಬಳಿಕ ಎಚ್ಚೆತ್ತ ನಗರಸಭೆ ಚರಂಡಿ ನಿರ್ಮಿಸಲಾಗಿತ್ತು. ಆದರೆ ಹೆದ್ದಾರಿ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ.
ಚರಂಡಿಗೆ ಮಣ್ಣು
ತೊಕ್ಕೊಟ್ಟು ಜಂಕ್ಷನ್‌ನಿಂದ ತಲಪಾಡಿ ಕಡೆಗೆ ಸಾಗುವ ಹೆದ್ದಾರಿಯ ತೊಕ್ಕೊಟ್ಟು ಓವರ್ ಬ್ರಿಡ್ಜ್, ಭಟ್ನಗರದ ಕಡೆಯಿಂದ ಹರಿಯುವ ನೀರು ಈ ಬಾರಿ ರಸ್ತೆಯಲ್ಲೇ ಹರಿಯುವಂತಾಗಿದೆ. ಇಲ್ಲಿ ನಿರ್ಮಿಸಿರುವ ಚರಂಡಿ ಅವೈ ಜ್ಞಾನಿಕವಾಗಿದ್ದರಿಂದ ವಾಹನಗಳು ಸಂಚರಿಸಿ ಚರಂಡಿಯ ಸ್ಲಾಬ್ ತುಂಡಾಗಿದೆ. ಅಲ್ಲದೇ ಇತ್ತೀಚೆಗೆ ಚರಂಡಿ ಮೇಲೆ ಏರಿದ್ದ ಮರದ ಲಾರಿ ಮಗುಚಿಬಿದ್ದು ಓರ್ವ ಮೃತಪಟ್ಟ ಅನಂತರ ಇದನ್ನು ಮಣ್ಣು ಹಾಕಿ ಶಾಶ್ವತವಾಗಿ ಮುಚ್ಚಲಾಗಿದೆ.
ಘಟನೆ ನಡೆದು 6 ತಿಂಗಳುಗಳೇ ಕಳೆದರೂ ಚರಂಡಿಗೆ ತುಂಬಿಸಿದ್ದ ಮಣ್ಣು ತೆಗೆಯುವ ಅಥವಾ ಚರಂಡಿ ಪುನಃ ನಿರ್ಮಾಣ ಕಾರ್ಯ ಇನ್ನೂ ಆರಂಭಿಸಿಲ್ಲ. ಮೇಲ್ಸೇತುವೆ ಕಾಮಗಾರಿ ಮುಗಿದ ಕೂಡಲೇ ಮಳೆಗಾಲದ ವೇಳೆ ಹೆದ್ದಾರಿಯಲ್ಲಿ ಸಮಸ್ಯೆ ಯಾಗುವ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿ ಮಾಡಲಾಗುವುದು. ವಾರದೊಳಗೆ ತೊಕ್ಕೊಟ್ಟು ಜಂಕ್ಷನ್‌ನಿಂದ ಭಟ್ನಗರದವರೆಗಿನ ಚರಂಡಿಯ ಮಣ್ಣು ಹೂಳೆತ್ತಲಾಗುವುದು ಎನ್ನುತ್ತಾರೆ ಗುತ್ತಿಗೆ ವಹಿಸಿರುವ ಸಂಸ್ಥೆಯ ಮುಖ್ಯ ಯೋಜನಾಧಿಕಾರಿ ಶಂಕರ್.
ಡಾಮರು ಕಾಮಗಾರಿ ಅಗತ್ಯ
ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದರೊಂದಿಗೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನೊಂಂದೆಡೆ ಕಲ್ಲಾಪು ಕಡೆಯಿಂದ ತೊಕ್ಕೊಟ್ಟು ಕಡೆ ಆಗಮಿಸು ಹೆದ್ದಾರಿಯಲ್ಲಿ ಮಳೆ ನೀರು ಹರಿದು ಡಾಮರು ಕಿತ್ತು ಹೋಗುವ ಸಾಧ್ಯತೆ ಇರುವುದರಿಂದ ಈ ರಸ್ತೆಯನ್ನು ಕೂಡಲೇ ಸುಸಜ್ಜಿತವಾಗಿ ಮರು ಡಾಮರು, ಚರಂಡಿ ಕಾಮಗಾರಿ ನಡೆಸುವ ಅಗತ್ಯವಿದೆ.
ಎಚ್ಚೆತ್ತುಕೊಳ್ಳದ ಇಲಾಖೆ
ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಇಲ್ಲಿ ಪಾದಚಾರಿಗಳು, ವಾಹನ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಅಪಘಾತಗಳು ಸಂಭವಿಸಿದ್ದು, ಇಲಾಖೆ ಮಾತ್ರ ಎಚ್ಚೆತ್ತಿಲ್ಲ.
- ಮಹಮ್ಮದ್ ಅಬ್ಬುಸಾಲಿ, ಸ್ಥಳೀಯ ವ್ಯಾಪಾರಿ
ಸಂಚಾರ ಅಪಾಯಕಾರಿ
ಒಂದೆಡೆ ಅವೈಜ್ಞಾನಿಕ ಚರಂಡಿ ನಿರ್ಮಾಣ, ಇನ್ನೊಂದೆಡೆ ಸರಿಯಾದ ವ್ಯವಸ್ಥೆ ಇಲ್ಲದೆ ಜನರೂ ಈ ಭಾಗದಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಮಳೆಗಾಲದಲ್ಲಂತೂ ಇಲ್ಲಿ ರಸ್ತೆ ಬದಿಯಲ್ಲಿ ಸಂಚರಿಸುವುದೇ ಅಪಾಯಕಾರಿ. ಈ ಬಾರಿ ಚರಂಡಿಗೆ ಮಣ್ಣು ತುಂಬಿಸಿರುವುದರಿಂದ ಸಮಸ್ಯೆ ಉಲ್ಬಣವಾಗಲಿದೆ.
- ವಿಶ್ವನಾಥ್ ಕೆ., ಸ್ಥಳೀಯ ನಿವಾಸಿ
ಸಮಸ್ಯೆ ಪರಿಹಾರಕ್ಕೆ ಕ್ರಮ
ಮೇಲ್ಸೇ ತುವೆ ಕಾಮಗಾರಿ ಪೂರ್ಣಗೊಂಡ ತತ್ ಕ್ಷಣ ಸರ್ವಿಸ್ ರಸ್ತೆ, ಜಂಕ್ಷನ್‌ನಲ್ಲಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗುವುದು. ಮಳೆಗಾಲದಲ್ಲಿ ಎದರಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
– ನಳಿನ್ ಕುಮಾರ್ ಕಟೀಲು, ಸಂಸದ
ವಸಂತ್ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.