ಪಣಂಬೂರಿನಲ್ಲಿ ಇಂದಿನಿಂದ ಮೂರು ದಿನ ಬೀಚ್ ಉತ್ಸವ
Team Udayavani, Dec 29, 2017, 9:51 AM IST
ಮಹಾನಗರ: ಕರಾವಳಿ ಉತ್ಸವದ ಅಂಗವಾಗಿ ಬೀಚ್ ಉತ್ಸವ ಡಿ. 29ರಿಂದ 31ರ ವರೆಗೆ ಪಣಂಬೂರು ಬೀಚ್‌ನಲ್ಲಿ ವೈವಿಧ್ಯ ಹಾಗೂ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ವರ್ಷವೂ ಕರಾವಳಿ ಉತ್ಸವದ ಒಂದು ಪ್ರಮುಖ ಅಂಗವಾಗಿ ಬೀಚ್ ಉತ್ಸವ ಆಯೋಜಿಸಲಾಗಿದೆ. 3 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಈಗಾಗಲೇ ಪೂರ್ವ ಸಿದ್ಧತೆ ಗಳನ್ನು ಮಾಡಲಾಗಿದೆ. ಬೀಚ್ ಉತ್ಸವಕ್ಕೆ ಸುಮಾರು 50ರಿಂದ 60 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಬೀಚ್ ಉತ್ಸವ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಡಿ. 29ರಂದು ಬೆಳಗ್ಗೆ 9.30ಕ್ಕೆ ಬೀಚ್ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯದೊಂದಿಗೆ ಬೀಚ್ ಉತ್ಸವ ಆರಂಭಗೊಳ್ಳಲಿದೆ. ಸಂಜೆ 4.30ಕ್ಕೆ ಬೀಚ್ ಉತ್ಸವ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ಡಿಸಿ ಶಶಿಕಾಂತ್ ಸೆಂಥಿಲ್ ಚಾಲನೆ ನೀಡುವರು. 5 ಗಂಟೆಗೆ ಆಹಾರೋತ್ಸವ ಉದ್ಘಾಟನೆಗೊಳ್ಳಲಿದೆ. 6.15ರಿಂದ ಡ್ಯಾನ್ಸ್ ಉತ್ಸವ ಹಾಗೂ ತುಳು ಗೀತೆಗಳ ಗಾಯನ ಫೈನಲ್ ಜರಗಲಿರುವುದು. ಡಿ. 30ರಂದು ಬೆಳಗ್ಗೆ 9.30ಕ್ಕೆ ಬೀಚ್ ವಾಲಿಬಾಲ್ ಹಾಗೂ ತ್ರೋ ಬಾಲ್ ನಡೆಯಲಿದೆ. ಸಂಜೆ 4ರಿಂದ ಸಮರ್ಥ್ ಶೆಣೈ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಜರಗಲಿದೆ. ಸಂಜೆ 5ರಿಂದ ಗಾಯನ ಸಿಂಗಲ್ಸ್ ಹಾಗೂ ಗ್ರೂಪ್ ವಿಭಾಗ ಫೈನಲ್ ನಡೆಯಲಿದೆ.
6.30ಕ್ಕೆ ರಾಗ ಕಾರ್ಯಕ್ರಮದಲ್ಲಿ ಸ್ವಾತಿ ಹಾಗೂ ತಂಡದಿಂದ ಉದಯ ರಾಗ ಜರಗಲಿದೆ. 9.30ಕ್ಕೆ ಸ್ಯಾಂಡ್‌ಆಫ್ ಪೆಡಲಿಂಗ್ ಹಾಗೂ ಸರ್ಫಿಂಗ್ ಕ್ರೀಡೆ, 10.30ಕ್ಕೆ ಮರಳು ಅಕೃತಿಗಳ ರಚನೆ ಸ್ಪರ್ಧೆ ನಡೆಯಲಿದೆ. ಸಂಜೆ 4ರಿಂದ ಸಂಗೀತ ಕಾರ್ಯಕ್ರಮ, 5 ಗಂಟೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯರಿಂದ ಯಕ್ಷಗಾನಾಮೃತ ಜರಗಲಿದೆ. 5.30ಕ್ಕೆ ಕರಾವಳಿ ಉತ್ಸವ ಸಮಾರೋಪ ನಡೆಯಲಿದೆ. 6.30ರಿಂದ ಸರಿಗಾಮಪ ಚಾಂಪಿಯನ್ ಆಫ್ ಚಾಂಪಿಯನ್ಸ್ ವಿಜೇತರಾದ ಅಶ್ವಿನಿ ಶರ್ಮ ತಂಡದಿಂದ ಸಂಗೀತ ರಸಮಂಜರಿ, 9 ಗಂಟೆಯಿಂದ ವಾಸು ದೀಕ್ಷಿತ್ ಹಾಗೂ ತಂಡದಿಂದ ಸ್ವರಾತ್ಮ ಸಂಗೀತ ಕಾರ್ಯಕ್ರಮ ಜರಗಲಿದೆ. ಬೀಚ್ ಉತ್ಸ ವದ ಟೀ ಶರ್ಟ್ ನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.
ನೃತ್ಯ, ಗಾಯನ
ನೃತ್ಯ ಹಾಗೂ ಗಾಯನ ಸ್ಪರ್ಧೆಗೆ ಈಗಾಗಲೇ ನಗರದ ಪುರಭವನದಲ್ಲಿ ಆಡಿಶನ್ ಆಗಿದ್ದು ಅಂತಿಮ ಸುತ್ತಿಗೆ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ 50 ವರ್ಷಕ್ಕಿಂತ ಮೇಲ್ಪಟ್ಟವರ ಗಾಯನ ವಿಭಾಗವನ್ನು ಈ ಬಾರಿ ಆರಂಭಿಸಲಾಗಿದೆ. ಸ್ಥಳೀಯ ತುಳು ಭಾಷಾ ಗಾಯನ ವಿಭಾಗವೂ ಇದೆ. ನೃತ್ಯ ವಿಭಾಗಗದಲ್ಲಿ ವಿಜೇತ ತಂಡಕ್ಕೆ 30,000 ರೂ, ದ್ವಿತೀಯ ಸ್ಥಾನಿ ತಂಡಕ್ಕೆ 20,000 ರೂ. ಹಾಗೂ ತೃತೀಯ ಸ್ಥಾನಿ ತಂಡಕ್ಕೆ 10,000 ರೂ. ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಆಡಿಶನ್‌ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿ ಫೈನಲ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೆ ತಲಾ 6,000 ರೂ. ನಗದು ನೀಡಲಾಗುವುದು . ಇದಲ್ಲದೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾಗುವ ಗಾಯಕರಿಗೆ ಚಲನಚಿತ್ರವೊಂದರಲ್ಲಿ ಹಿನ್ನೆಲೆ ಗಾಯಕರಾಗಿ ಹಾಡುವ ಕೊಡುಗೆಯನ್ನು ನೀಡುವುದಾಗಿ ಚಲನಚಿತ್ರ ನಿರ್ದೇಶಕರೋರ್ವರು ಈಗಾಗಲೇ ತಿಳಿಸಿದ್ದಾರೆ ಎಂದು ಯತೀಶ್ ಬೈಕಂಪಾಡಿ ವಿವರಿಸಿದರು.
ಹೊಸ ವರ್ಷಾಚರಣೆ ಸಂಭ್ರಮ
ಬೀಚ್ ಉತ್ಸವದ ಜತೆಗೆ ಡಿ. 31ರಂದು ಹೊಸ ವರ್ಷಾಚರಣೆ ಸಂಭ್ರಮವನ್ನು ಕುಟುಂಬ ಸಮೇತ ಆಚರಿಸಬಹುದು. ಅಂದು ರಾತ್ರಿ 12.30ರ ವರೆಗೆ ಬೀಚ್ ನಲ್ಲಿರಲು ಅವಕಾಶವಿದೆ ಎಂದವರು ತಿಳಿಸಿದರು.
ಆಹಾರೋತ್ಸವ
ಬೀಚ್ ಉತ್ಸವದಲ್ಲಿ ಆಹಾರೋತ್ಸವ ಇರುತ್ತದೆ. ಆಹಾರೋತ್ಸವವದಲ್ಲಿ ಕರಾವಳಿಯ ವೈವಿಧ್ಯಮಯ ಖಾದ್ಯಗಳು ಸೇರಿದಂತೆ ವಿವಿಧ ಖಾದ್ಯಗಳು ಲಭ್ಯವಿದೆ. ಸ್ಥಳೀಯ ಸಾಂಪ್ರಾದಾಯಿಕ ಖಾದ್ಯಗಳನ್ನು ಪ್ರೋತ್ಸಾಹಿಸುವ ಮತ್ತು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಲಭ್ಯವಾಗಬೇಕು ಉದ್ದೇಶ ದಿಂದ ಸ್ಥಳೀಯ ಖಾದ್ಯಗಳ ಮಳಿಗೆಗಳನ್ನು ಅಳವಡಿಸುವರರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು
ವಿವರಿಸಿದರು.
ವ್ಯಾಪಕ ಬಂದೋಬಸ್ತು
ಬೀಚ್ ಉತ್ಸವದ ಸಂದರ್ಭವ್ಯಾಪಕ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗುತ್ತದೆ. ಸುಮಾರು 200 ಮಂದಿ ಪೊಲೀಸರನ್ನು ಪಣಂಬೂರು ಬೀಚ್ ಉತ್ಸವ ಪ್ರದೇಶದಲ್ಲಿ ನಿಯೋಜಿಸಲಾಗುವುದು. ಪೊಲೀಸ್ ಔಟ್‌ಪೋಸ್ಟ್ ಕಾರ್ಯಾಚರಿಸಲಿದೆ. ಅಲ್ಲಲ್ಲಿ ಸಿಸಿ ಕೆಮೆರಾಗಳನ್ನು ಅಳವಡಿಸಲಾಗುವುದು ಎಂದು ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಅವರು ವಿವರಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಶ್ರೀಕಾಂತ ರಾವ್, ಸದಸ್ಯರಾದ ಎ.ಟಿ. ಜಯಪ್ಪ, ಸುರೇಶ್ ಗೋಷ್ಠಿ ಉಪಸ್ಥಿತರಿದ್ದರು.
ರಾತ್ರಿ 8.30 ಬಳಿಕ ಪ್ರವೇಶವಿಲ್ಲ
ಬೀಚ್ ಉತ್ಸವ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ. 31ರಂದು ರಾತ್ರಿ 12.30ರ ವರೆಗೆ ಬೀಚ್
ನಲ್ಲಿ ಇರಲು ಅವಕಾಶವಿದೆ. ಆದರೆ ಸಾರ್ವಜನಿಕರು ರಾತ್ರಿ 8.30ರೊಳಗೆ ಬೀಚ್‌ನೊಳಗೆ ಇರಬೇಕು. ಅನಂತರ ಬೀಚ್‌ನೊಳಗೆ ಬರಲು ಅವಕಾಶವಿರುವುದಿಲ್ಲ. ಕುಟುಂಬ ಸಮೇತರಾಗಿ ರಾತ್ರಿ ಬೀಚ್ ಉತ್ಸವ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಅನುವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯತೀಶ್ ಬೈಕಂಪಾಡಿ ವಿವರಿಸಿದರು.
ಸಾಮೂಹಿಕ ಯೋಗ
ಡಿ. 31ರಂದು ಬೆಳಗ್ಗ 5ರಿಂದ ಯೋಗ ಹಾಗೂ ರಾಗ ಕಾರ್ಯಕ್ರಮ ನೆರವೇರಲಿದೆ. ಇದರಲ್ಲಿ ಶ್ರೀ ಪತಾಂಜಲಿ ಯೋಗದ ಮಂಗಳೂರು ವಲಯ ಸಮಿತಿಯ ಆಶ್ರಯದಲ್ಲಿ ಸುಮಾರು 1,200 ಮಂದಿ ಪಣಂಬೂರು ಬೀಚ್‌ನಲ್ಲಿ ಸಾಮೂಹಿಕವಾಗಿ ಯೋಗ ಮಾಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.