Election Counting; ಪ್ರವೇಶಕ್ಕೆ ಮೂರು ಹಂತದಲ್ಲಿ ತಪಾಸಣೆ, ಬಿಗಿ ಭದ್ರತೆ
ಜೂನ್ 4ರ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ
Team Udayavani, Jun 1, 2024, 1:35 AM IST
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸುರತ್ಕಲ್ ಎನ್‌ಐಟಿಕೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಭೂತಪೂರ್ವ ಭದ್ರತೆಯ ನಡುವೆ ಜೂನ್ 4ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಅವರು ಮತ ಎಣಿಕೆ ಪ್ರಕ್ರಿಯೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಎನ್‌ಐಟಿಕೆಯ ಭದ್ರತಾ ಕೊಠಡಿಯಲ್ಲಿ ಇರಿಸಿರುವ ಮತಯಂತ್ರಗಳನ್ನು ಬೆಳಗ್ಗೆ 6ರಿಂದ 7ರ ಅವಧಿಯಲ್ಲಿ ತೆರೆಯಲಾಗುತ್ತದೆ, ಬೆಳಗ್ಗೆ ಆರಂಭದಲ್ಲಿ 8ರಿಂದ ಅಂಚೆ ಮತಗಳ ಎಣಿಕೆ, 8.30ರಿಂದ ಇವಿಎಂ ಮತ ಎಣಿಕೆ ಆರಂಭ. ಎಣಿಕೆ ಕೇಂದ್ರದ ಪರಿಧಿಯಲ್ಲಿ 100 ಮೀ. ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಈ ವಲಯವನ್ನು ಪಾದಚಾರಿ ವಲಯ ಎಂದು ಘೋಷಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಎಣಿಕೆ ಕೇಂದ್ರದ ಕೊಠಡಿಯೊಳಗೆ ಸಿಸಿಟಿವಿ ಕಣ್ಗಾವಲಿರುತ್ತದೆ. ಪ್ರತಿ ಎಣಿಕೆ ಮೇಜಿನ ಸಿಬಂದಿ ಮತ್ತು ಏಜೆಂಟರ ಮಧ್ಯೆ ಸ್ಟೀಲ್ ಪ್ರೇಮ್ ಜಾಲರಿ ಅಳವಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣ ಏಜೆಂಟರು ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಪ್ರವೇಶಿಸಿರಬೇಕು, ಬಳಿಕ ಅವಕಾಶವಿಲ್ಲ ಎಂದು ವಿವರಿಸಿದರು.
ಇವಿಎಂಗಳ ಮತ ಎಣಿಕೆಯು ಪ್ರತಿ ವಿಧಾನಸಭಾ ಕ್ಷೇತ್ರವಾರು ಎಂಟು ಕೊಠಡಿಗಳಲ್ಲಿ ತಲಾ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಿಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ 14,09,653 ಮತ ಚಲಾವಣೆ
ದ.ಕ. ಜಿಲ್ಲೆಯಲ್ಲಿ ಇವಿಎಂಗಳಲ್ಲಿ 14,09,653 ಮತಗಳು ಚಲಾವಣೆಯಾಗಿದ್ದು (ಶೇ 77.56), ಮನೆಯಿಂದಲೇ ಮತದಾನ, ಸೇವಾ ಮತದಾರರು, ತುರ್ತು ಸೇವೆಯಲ್ಲಿರುವವರು ಸೇರಿದಂತೆ ಮತಪತ್ರಗಳ ಮೂಲಕ 8,537 ಮತ ಚಲಾವಣೆಯಾಗಿದೆ. ಸೇವಾ ಮತದಾರ ರಿಗೆ ಒಟ್ಟು 536 ಮತಪತ್ರಗಳನ್ನು ಕಳುಹಿಸಲಾಗಿದ್ದು, ಈವರೆಗೆ 231 ಮತಪತ್ರಗಳು ಸ್ವೀಕೃತವಾಗಿದ್ದು, ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸ್ವೀಕೃತವಾಗುವ ಸೇವಾ ಮತದಾರರ ಮತಪತ್ರಗಳನ್ನು ಸ್ವೀಕರಿಸಲಾಗುತ್ತದೆ ಎಂದರು.
ದೂರು ಸಲ್ಲಿಕೆಗೆ ಅವಕಾಶ
ಭಾರತ ಚುನಾವಣ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಮಾಹಿತಿ ಪಡೆಯಲು ಜೂ. 1ರಿಂದ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಸಾರ್ವಜನಿಕರು ಈ ಸಂಬಂಧ 1950 ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಹಲವು ಸಾಮಗ್ರಿ ನಿಷೇಧ
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಕ್ಯಾಲ್ಕುಲೇಟರ್, ಕತ್ತರಿ, ಚೂರಿ, ಲೈಟರ್, ಬೆಂಕಿಪೊಟ್ಟಣ, ಇಲೆಕ್ಟ್ರಾನಿಕ್ ವಸ್ತುಗಳು, ಶಸ್ತ್ರಾಸ್ತ್ರ, ಸ್ಫೋಟಕಗಳು ನಿಷೇಧಿಸಲ್ಪಟ್ಟಿದ್ದು, ಅಭ್ಯರ್ಥಿಗಳು ಅಥವಾ ಏಜೆಂಟರು ಕೇವಲ ಪೆನ್, ಹಾಳೆ ನೋಟ್‌ಪ್ಯಾಡ್ ಹಾಗೂ 17ಸಿ ಫಾರಂ ಮಾತ್ರವೇ ತಮ್ಮ ಜತೆ ಕೊಂಡೊಯ್ಯಲು ಅವಕಾಶ.
850 ಪೊಲೀಸ್ ನಿಯೋಜನೆ
ಮತ ಎಣಿಕೆ ದಿನದಂದು ಭದ್ರತಾ ವ್ಯವಸ್ಥೆಗಾಗಿ ಒಟ್ಟು 850 ಮಂದಿ ಪೊಲೀಸ್ ಸಿಬಂದಿ, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದರು.
ಗುರುತಿನ ಚೀಟಿ ಹೊಂದಿರುವವರಿಗೆ ಎಣಿಕೆ ಕೇಂದ್ರಕ್ಕೆ ಮೂರು ಹಂತದ ತಪಾಸಣೆಯ ಮೂಲಕವೇ ಪ್ರವೇಶ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಸಿಎಆರ್ ಹಾಗೂ ಸಿವಿಲ್, ಬಳಿಕ ಕೆಎಸ್‌ಆರ್‌ಪಿ, ಕೊನೆ ಹಂತದಲ್ಲಿ ಅರೆಸೇನಾ ಪಡೆಯವರ ತಪಾಸಣೆ ಇರುತ್ತದೆ. ಮೂವರು ಡಿಸಿಪಿ, 6 ಎಸಿಪಿ, 26 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ.
ಜೂ.4: ರಾತ್ರಿ 12ರ ವರೆಗೆ ವಿಜಯೋತ್ಸವ ನಿಷೇಧ
ಚುನಾವಣ ಫಲಿತಾಂಶದ ದಿನದಂದು ವಿಜಯೋತ್ಸವ ಆಚರಣೆ ಸಂದರ್ಭ ಸಿಡಿಮದ್ದು, ಪಟಾಕಿ ಸಿಡಿಸುವುದನ್ನು ಜೂ. 4ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದ.ಕ. ಜಿಲ್ಲೆಯಾದ್ಯಂತ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಹೆಚ್ಚಿನ ಭದ್ರತೆಯೊಂದಿಗೆ ಸಕಲ ಸಿದ್ಧತೆ
ಮಣಿಪಾಲ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬ್ರಹ್ಮಗಿರಿ ಸೈಂಟ್ ಸಿಸಿಲಿ ವಿದ್ಯಾ ಸಂಸ್ಥೆಯಲ್ಲಿ ಬೆಳಗ್ಗೆ 8ರಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಹೆಚ್ಚಿನ ಭದ್ರತೆಯೊಂದಿಗೆ ಮತ ಎಣಿಕೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ 3 ಹಂತದ ಭದ್ರತೆ ಒದಗಿಸಲಾಗಿದ್ದು, ಸುತ್ತಮುತ್ತಲೂ 100 ಮೀ. ಅಂತರದಲ್ಲಿ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಮತ ಎಣಿಕೆ ಸುತ್ತಲೂ, ಮತ ಎಣಿಕೆ ಕೊಠಡಿಯೊಳಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಇವಿಎಂ ಮತ ಎಣಿಕೆ, ಅಂಚೆ ಮತಪತ್ರ, ಇಟಿಪಿಬಿಎಸ್ ಮತ ಎಣಿಕೆಗಾಗಿ ಅಧಿಕಾರಿ, ಸಿಬಂದಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ 7,853 ಮತ ಚಲಾವಣೆಯಾಗಿದ್ದು, ಇಟಿಪಿಬಿಎಸ್‌ನಲ್ಲಿ 264 ಮತಗಳು ಸ್ವೀಕೃತಗೊಂಡಿವೆ.
ಚುನಾವಣ ಆಯೋಗ ನೀಡಿದ ಅಧಿಕೃತ ಪ್ರವೇಶ ಪತ್ರ ಹೊಂದಿರುವ ಮಾಧ್ಯಮದವರಿಗೆ ಮಾತ್ರ ಮಾಧ್ಯಮ ಕೇಂದ್ರಕ್ಕೆ ಪ್ರವೇಶ ಇರುತ್ತದೆ.
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿರ್ಬಂಧಿಸಲಾಗಿದೆ. ಮತ ಎಣಿಕೆ ಪರಿಶೀಲನೆಗೆ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತೀ ಮೇಜಿಗೆ ತಲಾ ಒಬ್ಬ ಎಣಿಕೆ ಏಜೆಂಟ್ ನೇಮಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಏಜೆಂಟ್ ಪಾಸುಗಳನ್ನು ವಿತರಿಸಲಾಗಿದೆ.
ಬ್ರಹ್ಮಗಿರಿಯಿಂದ ಅಜ್ಜರಕಾಡು ರಸ್ತೆ ಮತ್ತು ಪುರಭವನದಲ್ಲಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಎಣಿಕೆ ಮುಕ್ತಾಯಗೊಂಡ ಅನಂತರ ವಿಜೇತ ಅಭ್ಯರ್ಥಿಗೆ ನಮೂನೆ-22ರಲ್ಲಿ ಪ್ರಮಾಣ ಪತ್ರ ನೀಡಲಾಗುವುದು. ಎಲ್ಲ ಮತಯಂತ್ರಗಳನ್ನು ಚುನಾವಣೆ ವ್ಯಾಜ್ಯದ ಅವಧಿ 45 ದಿನಗಳವರೆಗೆ ಮತಯಂತ್ರ ಸಂರಕ್ಷಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು. ಎಡಿಸಿ ಮಮತಾ ದೇವಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.