ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಚಾಲನೆ
Team Udayavani, Dec 24, 2017, 9:54 AM IST
ಪಡುಪಣಂಬೂರು: ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಶನಿವಾರ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥಿಸಿ, ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.
ಕಂಬಳ ಕರೆಯಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿರುವ ಬಪ್ಪನಾಡು ಬಡುಗುಹಿತ್ಲುವಿನ ದಿ| ಕಾಂತು ಪೂಜಾರಿ ಅವರ ಮನೆತನದ ಕಂಬಳದ ಕೋಣಗಳು ಕರೆಯಲ್ಲಿ ಇಳಿಯಲು ಸೂಚನೆ ನೀಡಿದರು. ಮೂಲ್ಕಿ ಅರಮನೆಯ ಗದ್ದುಗೆಯಲ್ಲಿ ಒಂಭತ್ತು ಮಾಗಣೆಯ ಕಂಬಳದ ರಾಜ ಮರ್ಯಾದೆಯ ಗೌರವ ಪಡೆದುಕೊಂಡು ಕಂಬಳಕ್ಕೆ ಧರ್ಮಚಾವಡಿಯಲ್ಲಿ ಚಾಲನೆ ನೀಡಲು ಸಮಿತಿಗೆ ಆದೇಶಿಸಿದರು.
ಎರುಬಂಟ ದೈವಗಳ ಜತೆಗೆ ಅರಮನೆಯ ಕೋಣಗಳನ್ನು ಡೋಲು, ತಾಸೆ, ಚಂಡೆಯ ನಿನಾದದೊಂದಿಗೆ ಅರಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಕಂಬಳದ ಗದ್ದೆಗೆ ತೆರಳಿ ಜೋಡುಕರೆಯಲ್ಲಿ ತೆಂಗಿನಕಾಯಿ, ಹಾಲು ಅಭಿಷೇಕವನ್ನು ನಡೆಸಿ, ಹಿಂಗಾರದೊಂದಿಗೆ ಕಂಬಳಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಪ್ರತಿ ಕಂಬಳದ ಯಜಮಾನರಿಗೆ ಕಂಬಳ ಸಮಿತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು. ಸುಮಾರು 100ಕ್ಕೂ ಹೆಚ್ಚು ಜೋಡಿ ಕೋಣಗಳು ಕನೆ ಹಲಗೆ, ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದವು. ಒಟ್ಟು 7.5 ಪವನ್ ಚಿನ್ನದ ಪದಕಗಳು ಬಹುಮಾನವಾಗಿ ಸಮಿತಿಯು ವಿಜೇತರಿಗೆ ನೀಡಲಿದೆ.
ಅತ್ತೂರು ವೆಂಕಟರಾಜ ಉಡುಪ, ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ, ಅರಮನೆಯ ಎಂ. ಗೌತಮ್ ಜೈನ್, ಜಿನರಾಜ್ ಜೈನ್, ಆಶಾಲತಾ, ವರ್ಷ, ರಕ್ಷಾ , ಪವತ್ರೇಜ್, ಬಂಕಿ ನಾಯ್ಕರು, ಪಡುಬಿದ್ರಿ ಬೀಡು ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳ್, ಕುಳೂರು ಬೀಡು ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಕಿಲ್ಪಾಡಿ ಭಂಡಸಾಲೆ ಶೇಖರ್ ಶೆಟ್ಟಿ, ಉದಯ ಶೆಟ್ಟಿ ಶಿಮಂತೂರು, ರಂಗನಾಥ ಶೆಟ್ಟಿ, ಮೋಹನ್‌ದಾಸ್, ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಪ್ರಕಾಶ್ ಎನ್. ಶೆಟ್ಟಿ, ಚಂದ್ರಶೇಖರ ನಾನಿಲ್, ಮಿಥುನ್ ರೈ, ಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ ಕಾಪು, ಸಮಿತಿಯ ಪಂಜಗುತ್ತ ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್.ಅರವಿಂದ ಪೂಂಜಾ, ರಾಮಚಂದ್ರ ನಾಯ್ಕ, ನವೀನ್ ಶೆಟ್ಟಿ ಎಡ್ಮೆಮಾರ್, ಚಂದ್ರಶೇಖರ್ ಜಿ. ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಶಶೀಂದ್ರ ಎಂ. ಸಾಲ್ಯಾನ್, ಸುಂದರ್ ದೇವಾಡಿಗ, ದಿನೇಶ್ ಶೆಟ್ಟಿ, ದಿನೇಶ್ ಸುವರ್ಣ, ಶುಭ್ರತ್ ದೇವಾಡಿಗ, ಉಮೇಶ್ ಪೂಜಾರಿ, ಹರ್ಷಿತ್ ಡಿ. ಸಾಲ್ಯಾನ್, ನವೀನ್‌ಕುಮಾರ್ ಬಾಂದಕೆರೆ, ಕಿರಣ್ ಹೊಗೆಗುಡ್ಡೆ, ರಂಜಿತ್ ಪುತ್ರನ್, ಕೆ. ವಿಜಯಕುಮಾರ್ ಶೆಟ್ಟಿ, ಮನ್ಸೂರ್ ಎಚ್., ಧರ್ಮಾನಂದ ಶೆಟ್ಟಿಗಾರ್, ಸಾಹುಲ್ ಹಮೀದ್ ಕದಿಕೆ ಮತ್ತಿತರರು ಮೊದಲಾದವರು ಉಪಸ್ಥಿತರಿದ್ದರು.
ಬಪ್ಪನಾಡು ಕಾಂತು ಪೂಜಾರಿ ಮನೆತನದಿಂದ…
ಬಪ್ಪನಾಡು ಬಡಗುಹಿತ್ಲು ಮನೆತನ ದಿ| ಕಾಂತು ಪೂಜಾರಿ ಮನೆತನದ ಕೋಣಗಳಿಗೆ ವಿಶೇಷ ಗೌರವ ಮೂಲ್ಕಿ ಸೀಮೆ ಅರಸು ಕಂಬಳಕ್ಕಿದೆ. ಬಪ್ಪನಾಡು ಶೇಖರ ಕೋಟ್ಯಾನ್ ಮನೆಯಿಂದ ಹೊರಟು, ಧೂಮಾವತಿ ಪಂಜುರ್ಲಿ ದೈವಸ್ಥಾನದಲ್ಲಿ ಪ್ರಾರ್ಥಿಸಿ, ಕಾಂತು ಪೂಜಾರಿಯವರ ಮನೆಯ ದೈವಗಳಲ್ಲಿ ಅಪ್ಪಣೆ ಕೇಳಿಕೊಂಡು, ಗ್ರಾಮದ ಕೋರ್ದಬ್ಬು ಹಾಗೂ ನಾಗದೇವರಲ್ಲಿ ಪ್ರಾರ್ಥಿಸಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿಕೊಂಡು ಪಡುಪಣಂಬೂರಿನ ಪೂವಪ್ಪ ಪೂಜಾರಿಯವರ ಮನೆಯಲ್ಲಿ ಆಶ್ರಯ ಪಡೆದುಕೊಂಡು ಮೂಲ್ಕಿ ಸೀಮೆಯ ಅರಮನೆಗೆ ಬಂದು ಅಲ್ಲಿಂದ ಅರಸರ ಸೂಚನೆಯಂತೆ ಕಂಬಳದ ಕರೆಯಲ್ಲಿ ಜೋಡಿ ಕೋಣಗಳನ್ನು ಓಡಿಸಿದ ಅನಂತರವೇ ಉಳಿದ ಕೋಣಗಳು ಕರೆಗೆ ಇಳಿಯುವ ಸಂಪ್ರದಾಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.